×
Ad

ಪ್ರಜ್ವಲ್ ರೇವಣ್ಣ ಗೌಡ ದುರಂತ ಯುವನಾಯಕರಿಗೆ ಪಾಠವಾಗಲಿ

Update: 2025-08-02 07:16 IST

PC: x.com/Shalu89475251

ರಾಜ್ಯದಲ್ಲಿ ಒಂದೆಡೆ ಸಂಘಪರಿವಾರದ ಜೊತೆಗೆ ಜೆಡಿಎಸ್ ನಡೆಸಿದ ಅನೈತಿಕ ಮೈತ್ರಿ ಚರ್ಚೆಯಲ್ಲಿರುವಾಗಲೇ, ಜೆಡಿಎಸ್‌ನ ಯುವ ಮುಖಂಡ ಪ್ರಜ್ವಲ್ ರೇವಣ್ಣ ಗೌಡನ ಲೈಂಗಿಕ ಹಗರಣ ರಾಷ್ಟ್ರಮಟ್ಟದಲ್ಲಿ ತೆರೆದುಕೊಂಡಿತು. ಕೋಮುವಾದಿ ಶಕ್ತಿಗಳ ಜೊತೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆಸಿದ ಅನೈತಿಕ ರಾಜಕಾರಣಕ್ಕೆ ಹೋಲಿಸಿದರೆ ಯುವ ನಾಯಕ ಪ್ರಜ್ವಲ್‌ನ ಅನೈತಿಕ ಕೃತ್ಯಗಳು ಏನೇನೂ ಅಲ್ಲ. ಆದರೆ ಕುಮಾರಸ್ವಾಮಿಯವರು ಕೇಂದ್ರದಲ್ಲಿ ಮಂತ್ರಿಯಾದರು, ಪ್ರಜ್ವಲ್ ಜೈಲು ಸೇರಿದನು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ನ್ನು ದೋಷಿ ಎಂದು ತೀರ್ಮಾನಿಸಿ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣ ಶನಿವಾರ ಪ್ರಕಟವಾಗಲಿದೆ. ಕೆಲ ಸಮಯದಿಂದ ತಣ್ಣಗಾಗಿದ್ದ ಪ್ರಜ್ವಲ್ ಲೈಂಗಿಕ ಹಗರಣ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ರಾಷ್ಟ್ರಮಟ್ಟದಲ್ಲಿ ನಾಯಕನಾಗಿ ಬೆಳೆಯುವ ಎಲ್ಲ ಅರ್ಹತೆಯಿದ್ದ ಯುವ ಮುಖಂಡನೊಬ್ಬ ಕುಟುಂಬ, ಜಾತಿ, ಹಣ ಇತ್ಯಾದಿಗಳ ಬಲದ ಮದದಿಂದ ಹೇಗೆ ತನ್ನ ಜೊತೆಗೆ ಇಡೀ ಪಕ್ಷವನ್ನೇ ದುರಂತದ ಕಡೆಗೆ ಸಾಗಿಸಿದ ಎನ್ನುವುದು ಈ ನಾಡಿನ ಇನ್ನುಳಿದ ಪ್ರಬಲ ರಾಜಕೀಯ ಕುಟುಂಬಗಳಿಗೆ ಪಾಠವಾಗಬೇಕಾಗಿದೆ.

ಪ್ರಜ್ವಲ್ ರೇವಣ್ಣನ ಜೊತೆಗೆ ಜೆಡಿಎಸ್ ಪಕ್ಷ ಮತ್ತು ದೇವೇಗೌಡರ ಕುಟುಂಬ ಅಂತರವನ್ನು ಕಾಪಾಡಲು ಪ್ರಯತ್ನಿಸುತ್ತಾ ಬಂದಿದೆಯಾದರೂ ಅದರಲ್ಲಿ ಯಶಸ್ವಿಯಾಗಿಲ್ಲ. ದೇವೇಗೌಡರ ಕುಟುಂಬವನ್ನು ಹೊರಗಿಟ್ಟು ಪ್ರಜ್ವಲ್ ಪ್ರಕರಣವನ್ನು ನೋಡಲು ಸಾಧ್ಯವೇ ಇಲ್ಲ. ಲೋಕಸಭಾ ಚುನಾವಣೆಗೆ ಪೂರ್ವದಲ್ಲೇ ಪ್ರಜ್ವಲ್‌ನ ಅನೈತಿಕ ಕೆಲಸಗಳ ಬಗ್ಗೆ ವದಂತಿಗಳು ಹರಡಿದ್ದವು. ಕುಟುಂಬಕ್ಕೆ ಆ ಬಗ್ಗೆ ಅರಿವೂ ಇತ್ತು. ಇಷ್ಟಾದರೂ, ಲೋಕಸಭೆಯಲ್ಲಿ ಜೆಡಿಎಸ್‌ನಿಂದ ಪ್ರಜ್ವಲ್‌ಗೆ ಟಿಕೆಟ್ ನೀಡಲಾಯಿತು. ವಿಪರ್ಯಾಸವೆಂದರೆ, ಬಿಜೆಪಿಯು ಜೆಡಿಎಸ್ ಜೊತೆಗೆ ಕೈ ಜೋಡಿಸಿದ್ದು ಮಾತ್ರವಲ್ಲ, ಪ್ರಜ್ವಲ್‌ನ ಮತಯಾಚನೆಯ ರ್ಯಾಲಿಯಲ್ಲಿ ಬಿಜೆಪಿಯ ರಾಷ್ಟ್ರಮಟ್ಟದ ನಾಯಕರು ಭಾಗವಹಿಸಿದರು. ಚುನಾವಣೆ ನಡೆದ ಬೆನ್ನಿಗೇ ಪ್ರಜ್ವಲ್ ಹಗರಣದಲ್ಲಿ ಪಾಲುಗೊಂಡ ಪೆನ್‌ಡ್ರೈವ್‌ಗಳು ಬಹಿರಂಗಗೊಂಡವು. ಇದು ರಾಷ್ಟ್ರಮಟ್ಟದಲ್ಲಿ ಸಂಚಲವನ್ನೇ ಸೃಷ್ಟಿಸಿತ್ತು. ಪ್ರಜ್ವಲ್ ಒಂದೆರಡು ಮಹಿಳೆಯರನ್ನಲ್ಲ ಲೆಕ್ಕವಿಲ್ಲದಷ್ಟು ಮಹಿಳೆಯರನ್ನು ಶೋಷಣೆ ಮಾಡಿರುವ ವಿವರಗಳು ಪೆನ್‌ಡ್ರೈವ್‌ನಲ್ಲಿದ್ದವು. ತನ್ನ ಬಂಧನವಾಗುವುದು ಖಚಿತ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಆತ ವಿದೇಶದಲ್ಲಿ ತಲೆಮರೆಸಿಕೊಂಡನು. ಮೋದಿ ನೇತೃತ್ವದ ಕೇಂದ್ರ ಸರಕಾರ ಆತನನ್ನು ಸುಲಭದಲ್ಲಿ ವಿದೇಶಕ್ಕೆ ಪರಾರಿಯಾಗಲು ಅವಕಾಶ ನೀಡಿತು. ಪ್ರಜ್ವಲ್ ಗೌಡ ಲೈಂಗಿಕ ಹಗರಣ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದ್ದರೂ ಈ ಬಗ್ಗೆ ಪ್ರಧಾನಿ ಮೋದಿ ಮೌನ ಮುರಿದಿರಲಿಲ್ಲ.

ಪ್ರಜ್ವಲ್ ಮಾತ್ರವಲ್ಲ, ಆತನ ತಂದೆ ರೇವಣ್ಣ ಅವರ ಹೆಸರು ಕೂಡ ಲೈಂಗಿಕ ಹಗರಣದಲ್ಲಿ ಕೇಳಿ ಬಂದಿತ್ತು. ದೇವೇಗೌಡರ ನಿವಾಸದಲ್ಲೇ ಅವರ ಬಂಧನವೂ ಆಗಿತ್ತು. ಈ ಸಂದರ್ಭದಲ್ಲಿ ‘ಲೈಂಗಿಕ ಹಗರಣದಲ್ಲಿ ದೇವೇಗೌಡರ ಕುಟುಂಬವನ್ನು ಎಳೆದು ತರಬೇಡಿ’ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಧ್ಯಮಗಳಿಗೆ ಸೂಚನೆ ನೀಡಿದ್ದರು. ಆದರೆ, ಪ್ರಜ್ವಲ್‌ನ ಚುನಾವಣಾ ಪ್ರಚಾರದಲ್ಲಿ ದೇವೇಗೌಡರು ಸೇರಿದಂತೆ ಜೆಡಿಎಸ್‌ನ ಹಿರಿಯ ಮುಖಂಡರು ಭಾಗವಹಿಸಿದ್ದರು. ‘ಪ್ರಜ್ವಲ್‌ಗೆ ನಾನೇ ಆದರ್ಶ’ ಎಂದು ಸ್ವತಃ ದೇವೇಗೌಡರೇ ಹೇಳಿಕೊಂಡಿದ್ದರು. ಪ್ರಜ್ವಲ್ ಅವರ ರಕ್ಷಣೆಗೆ ದೇವೇಗೌಡರ ಕುಟುಂಬ ಗರಿಷ್ಠ ಪ್ರಯತ್ನವನ್ನು ಮಾಡಿತ್ತು. ಹೀಗಿರುವಾಗ, ದೇವೇಗೌಡರ ಕುಟುಂಬವನ್ನು ಹೊರಗಿಟ್ಟು ಪ್ರಜ್ವಲ್‌ನ ಹಗರಣವನ್ನು ನೋಡುವುದಾದರೂ ಹೇಗೆ? ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ಗೆ ಕೊನೆಯಲ್ಲಿ ದೇವೇಗೌಡರೇ ಪತ್ರ ಬರೆದು ಕರೆಸಿಕೊಂಡರು. ಲೈಂಗಿಕ ಹಗರಣಗಳನ್ನು ತೆರೆದಿಟ್ಟ ಪೆನ್‌ಡ್ರೈವ್ ಸೋರಿಕೆಗಾಗಿ ಕುಮಾರಸ್ವಾಮಿಯವರು ಕಾಂಗ್ರೆಸ್ ಪಕ್ಷದ ಕೆಲವು ನಾಯಕರನ್ನು ಹೊಣೆ ಮಾಡುವ ಪ್ರಯತ್ನವನ್ನೂ ಮಾಡಿದರು. ಆದರೆ, ಅದೊಂದು ವಿಫಲ ಪ್ರಯತ್ನವಾಗಿತ್ತು.

ಈ ಹಿಂದೆಯೂ ವಿವಿಧ ರಾಜಕೀಯ ನಾಯಕರ ಅಶ್ಲೀಲ ಸಿ.ಡಿ.ಗಳು ರಾಜ್ಯದಲ್ಲಿ ಸುದ್ದಿ ಮಾಡಿದ್ದವು. ಆದರೆ ಅವುಗಳ ಹಿಂದೆ ರಾಜಕೀಯ ಸಂಚುಗಳಿದ್ದವು. ರಾಜಕೀಯ ನಾಯಕರ ಖಾಸಗಿ ಕೋಣೆಯ ಸಂಗತಿಗಳನ್ನು ಗುಟ್ಟಾಗಿ ಚಿತ್ರಿಸಿ ‘ಬ್ಲ್ಯಾಕ್‌ಮೇಲ್’ ಮಾಡುವುದು ಅದರ ಹಿಂದಿನ ಉದ್ದೇಶಗಳಾಗಿದ್ದವು. ಒಬ್ಬ ರಾಜಕಾರಣಿ ಅನೈತಿಕ ಸಂಬಂಧವನ್ನು ಇಟ್ಟುಕೊಳ್ಳುವುದು ಎಷ್ಟು ಸರಿ? ಎನ್ನುವುದು ಚರ್ಚೆಯ ವಿಷಯ. ಆದರೆ ಖಾಸಗಿ ಕೋಣೆಯೊಳಗೆ ಒಪ್ಪಿತ ಅನೈತಿಕ ಲೈಂಗಿಕ ಸಂಬಂಧವನ್ನು ಗುಟ್ಟಾಗಿ ಚಿತ್ರೀಕರಿಸಿ ಅವರನ್ನು ಬ್ಲ್ಯಾಕ್‌ಮೇಲ್ ಮಾಡುವುದು ಕೂಡ ಅಪರಾಧವೇ ಆಗಿದೆ. ಆದರೆ ಪ್ರಜ್ವಲ್ ಪ್ರಕರಣ ಭಿನ್ನವಾದದ್ದು ಮಾತ್ರವಲ್ಲ, ಆಘಾತಕಾರಿಯಾದದ್ದು. ಇಲ್ಲಿ ನಡೆದಿರುವುದು ಒಪ್ಪಿತ ಲೈಂಗಿಕ ಕ್ರಿಯೆಗಳಲ್ಲ. ಬದಲಿಗೆ ಅತ್ಯಾಚಾರ ಎನ್ನುವುದು ಮೊದಲ ಆರೋಪ. ಎರಡನೆಯದು, ಈ ಲೈಂಗಿಕ ಅಕ್ರಮಗಳನ್ನು ಸೆರೆ ಹಿಡಿದಿರುವುದು ಯಾರೋ ವಿರೋಧ ಪಕ್ಷದ ನಾಯಕರ ಜನರಲ್ಲ. ಸ್ವತಃ ಪ್ರಜ್ವಲ್‌ನೇ ಮಹಿಳೆಯರ ಅಶ್ಲೀಲ ದೃಶ್ಯಗಳನ್ನು ಸೆರೆ ಹಿಡಿದು ತನ್ನ ಮೊಬೈಲ್‌ನಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ. ತನ್ನ ಕೆಲಸದಾಳುಗಳ ಜೊತೆಗೆ, ಪಕ್ಷದ ಕಾರ್ಯಕರ್ತೆಯರ ಜೊತೆಗೂ ಅತ್ಯಂತ ಕೀಳಾಗಿ ವರ್ತಿಸಿದ ದೃಶ್ಯಗಳು ಆತನ ಮೊಬೈಲ್‌ನಲ್ಲಿದ್ದವು. ಜೊತೆಗೆ ಅದನ್ನು ಆತ ಪೆನ್‌ಡ್ರೈವ್‌ನಲ್ಲಿ ತೆಗೆದಿಟ್ಟುಕೊಂಡಿದ್ದ. ಈ ಪೆನ್‌ಡ್ರೈವ್‌ಗಳನ್ನು ಮುಂದಿಟ್ಟು ಮಹಿಳೆಯರನ್ನು ಬ್ಲ್ಯಾಕಮೇಲ್ ಮಾಡಿರುವ ಸಾಧ್ಯತೆಗಳೂ ಇವೆ. ಆತನ ಕೃತ್ಯದಲ್ಲಿ ಒಬ್ಬ ಸೈಕೋಪಾತ್‌ನ ಲಕ್ಷಣಗಳಿದ್ದವು. ತನ್ನ ನೀಚ ಕೃತ್ಯಗಳನ್ನು ಕುಟುಂಬ ಬಲ, ಜಾತಿ, ಹಣ ಬಲಗಳಿಂದ ಆತ ದಕ್ಕಿಸಿಕೊಂಡಿದ್ದ. ಆದುದರಿಂದ, ಪ್ರಜ್ವಲ್ ಲೈಂಗಿಕ ಅಕ್ರಮಗಳು ಬಯಲುಗೊಂಡಿರುವುದಕ್ಕಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇತರ ಪಕ್ಷಗಳ ನಾಯಕರ ಕಡೆಗೆ ಬೆರಳು ತೋರಿಸುವಂತಿಲ್ಲ. ಸ್ವತಃ ಪ್ರಜ್ವಲ್ ತನ್ನ ಗೋರಿಯನ್ನು ತಾನೇ ತೋಡಿಕೊಂಡಿದ್ದ.

ಇದೀಗ ಪ್ರಜ್ವಲ್ ತಾನು ಮಾಡಿದ ಕರ್ಮಕ್ಕೆ ಶಿಕ್ಷೆ ಅನುಭವಿಸುವ ಹಂತದಲ್ಲಿದ್ದಾನೆ. ಇನ್ನೂ ಕೆಲವು ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಪ್ರಜ್ವಲ್‌ನ ದುರಂತ ವೈಯಕ್ತಿಕವಾದುದಲ್ಲ. ಅದು ಒಂದು ರಾಜಕೀಯ ಪಕ್ಷದ ದುರಂತವೂ ಹೌದು. ಪ್ರಾದೇಶಿಕ ಪಕ್ಷವಾಗಿ ಕಾಂಗ್ರೆಸ್-ಬಿಜೆಪಿಗೆ ಪರ್ಯಾಯವಾಗಬಹುದಾಗಿದ್ದ ಜೆಡಿಎಸ್‌ನ್ನು ತನ್ನ ಅಧಿಕಾರ ಲಾಲಸೆಗೆ ಬಿಜೆಪಿ, ಸಂಘಪರಿವಾರದ ಜೊತೆಗೆ ಹಂಚಿಕೊಂಡವರು ಕುಮಾರಸ್ವಾಮಿ. ಕರಾವಳಿಗೆ ಸೀಮಿತವಾಗಿದ್ದ ಕೋಮುದ್ವೇಷ ರಾಜಕಾರಣವನ್ನು ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ಹರಡುವುದಕ್ಕೆ ಕಾರಣವಾದರು. ಪ್ರಜ್ವಲ್‌ನ ದುರಂತಕ್ಕೆ ಕಾರಣವಾದದ್ದು ಅನೈತಿಕ ರಾಜಕಾರಣವಾದರೆ, ರಾಜ್ಯದಲ್ಲಿ ಜೆಡಿಎಸ್ ದುರಂತಕ್ಕೂ ಅನೈತಿಕ ರಾಜಕಾರಣವೇ ಕಾರಣವಾಯಿತು. ಆದರೆ ಅದರ ಸ್ವರೂಪ ಮಾತ್ರ ಬೇರೆ ಬಗೆಯದ್ದು. ಪ್ರಜ್ವಲ್-ಕುಮಾರಸ್ವಾಮಿ ಒಂದೇ ನಾಣ್ಯದ ಎರಡು ಮುಖಗಳು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News