×
Ad

ರೆಕ್ಕೆ ಹರಿದ ಪುಷ್ಪಕ ವಿಮಾನ

Update: 2025-06-14 07:53 IST

PC: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತದಲ್ಲಿ ಹೆಚ್ಚುತ್ತಿರುವ ರಸ್ತೆ ಅವಘಡಗಳ ಬಗ್ಗೆ ವಿಶ್ವಸಂಸ್ಥೆಯೂ ಕಳವಳ ವ್ಯಕ್ತಪಡಿಸಿದೆ. ಈ ದೇಶದಲ್ಲಿ ಪ್ರತಿ ದಿನ ರಸ್ತೆ ಅಪಘಾತಗಳಿಂದ 400ಕ್ಕೂ ಅಧಿಕ ಸಾವುಗಳು ಸಂಭವಿಸುತ್ತವೆ. ವಿಶ್ವದಲ್ಲೇ ಅತಿ ಹೆಚ್ಚು ರಸ್ತೆ ಅವಘಡಗಳು ಸಂಭವಿಸುವ ದೇಶವಾಗಿ ಭಾರತ ಕುಖ್ಯಾತಿಯನ್ನು ಪಡೆದಿದೆ. ಈ ಬಗ್ಗೆ ಕೇಂದ್ರ ಸರಕಾರವೂ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದು, ಇತ್ತೀಚೆಗಷ್ಟೇ ರಸ್ತೆ ಅವಘಡಗಳಲ್ಲಿ ಗಾಯಗೊಂಡವರಿಗೆ ಉಚಿತ ಚಿಕಿತ್ಸೆಯನ್ನು ನೀಡುವ ಯೋಜನೆಗೆ ಚಾಲನೆಯನ್ನು ನೀಡಿದೆ. ರಸ್ತೆ ಅವಘಡಗಳನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಂಡರೂ, ಸಾರಿಗೆ ಇಲಾಖೆಯೊಳಗಿನ ಭ್ರಷ್ಟ ವ್ಯವಸ್ಥೆಯನ್ನು ನಿಯಂತ್ರಿಸಲು ಎಲ್ಲಿಯವರೆಗೆ ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಈ ಅವಘಡಗಳನ್ನು ತಡೆಯುವುದು ಕಷ್ಟ ಎಂದು ಅಧ್ಯಯನ ಹೇಳುತ್ತದೆ. ಭ್ರಷ್ಟಾಚಾರದ ಕೂಪವಾಗಿರುವ ಈ ಇಲಾಖೆಗಳು, ರಸ್ತೆಯಲ್ಲಿ ಓಡಿಸಲು ಅಯೋಗ್ಯವಾಗಿರುವ ವಾಹನಗಳಿಗೂ ಪರವಾನಿಗೆ ನೀಡಲು ಹಿಂಜರಿಯುವುದಿಲ್ಲ. ಅನರ್ಹ ಚಾಲಕರೂ ಇಲ್ಲಿ ಸುಲಭವಾಗಿ ಲೈಸನ್ಸ್‌ಗಳನ್ನು ಪಡೆದುಕೊಳ್ಳುತ್ತಾರೆ. ಘನವಾಹನಗಳನ್ನು ಓಡಿಸುವ ಸಂದರ್ಭದಲ್ಲಿ ಮದ್ಯ ಸೇವಿಸುವುದು ಕಡ್ಡಾಯ ಎನ್ನುವಂತಹ ಸ್ಥಿತಿ ಈ ದೇಶದಲ್ಲಿದೆ. ದೇಶಾದ್ಯಂತ ಘನವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯಗೊಳಿಸಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಗ್ರಾಮೀಣ ರಸ್ತೆಗಳ ಸ್ಥಿತಿಯಂತೂ ದಯನೀಯವಾಗಿದೆ. ಹೀಗಿರುವಾಗ ಇಲ್ಲಿ ಯಾವುದೇ ಅವಘಡಗಳು ಸಂಭವಿಸದೇ ಇದ್ದರೆ ಅದು ಅಚ್ಚರಿಯ ವಿಷಯವಾಗುತ್ತದೆ.

ಆದರೆ ಇತ್ತೀಚಿನ ದಿನಗಳಲ್ಲಿ ವಿಮಾನಯಾನವೂ ಕೂಡ ರಸ್ತೆ ಅವಘಡಗಳೊಂದಿಗೆ ಪೈಪೋಟಿಗಿಳಿಯುತ್ತಿದೆಯೋ ಎನ್ನುವ ಆತಂಕ ಜನರಲ್ಲಿ ಶುರುವಾಗಿದೆ. ದೇಶದ ಇತಿಹಾಸದಲ್ಲೇ ಅತಿ ದೊಡ್ಡ ವಿಮಾನ ಅವಘಡಗಳಲ್ಲಿ ಒಂದು ಎಂದು ಗುರುತಿಸಲ್ಪಡುವ ಗುರುವಾರ ಅಹ್ಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ಪತನವು ಭಾರತವನ್ನು ತಲ್ಲಣಗೊಳಿಸಿದೆ. ಪಹಲ್ಗಾಮ್ ಉಗ್ರರ ದಾಳಿಯಿಂದ ಸಂಭವಿಸಿದ ಸಾವು ನೋವು, ಇದಾದ ಬಳಿಕ ಆಪರೇಷನ್ ಸಿಂಧೂರ ಕಾರ್ಯಾಚರಣೆ ಇವೆಲ್ಲದರಿಂದ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದ ಭಾರತಕ್ಕೆ ಈ ಅವಘಡ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪಹಲ್ಗಾಮ್ ಉಗ್ರರ ದಾಳಿಯನ್ನು ಪಾಕಿಸ್ತಾನದ ತಲೆಗೆ ಕಟ್ಟಿ ನುಣುಚಿಕೊಂಡಿರುವ ಕೇಂದ್ರ ಸರಕಾರ, ಇದೀಗ ಅಹ್ಮದಾಬಾದ್ ಏರ್ ಇಂಡಿಯಾ ದುರಂತವನ್ನು ದೈವದ ತಲೆಗೆ ಕಟ್ಟಿ ನುಣುಚಿಕೊಳ್ಳಲು ಮುಂದಾಗಿದೆ. ‘‘ಇಂತಹ ಅಪಘಾತಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’’ ಎಂದು ಗೃಹ ಸಚಿವರು ಹೇಳಿಕೆ ನೀಡುವ ಮೂಲಕ, ಕೇಂದ್ರ ಸರಕಾರ ಇದರ ನೈತಿಕ ಹೊಣೆಯನ್ನು ಹೊರಲು ಸಿದ್ಧವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ನಾಗರಿಕ ವಿಮಾನ ಯಾನ ಖಾತೆ ಸಚಿವಾಲಯವಂತೂ ನಿರುದ್ಯೋಗಿಯಾಗಿದೆ. ಯಾವುದೇ ವಿಮಾನ ಸಂಸ್ಥೆಗಳನ್ನು ಈ ಸಚಿವಾಲಯ ಹೊಂದಿಲ್ಲ. ಬಹುತೇಕ ವಿಮಾನ ನಿಲ್ದಾಣಗಳು ಖಾಸಗೀಕರಣಗೊಂಡಿವೆ. ಅದಾನಿ, ಟಾಟಾಗಳಿಂದ ನಮ್ಮ ವಿಮಾನಗಳೆಲ್ಲ ತ್ರೇತಾಯುಗದ ‘ಪುಷ್ಪಕ ವಿಮಾನ’ವಾಗಿ ಬದಲಾಗುತ್ತದೆ ಎನ್ನುವ ನಂಬಿಕೆಯನ್ನು ಕೇಂದ್ರ ಸರಕಾರ ಬಿತ್ತಿತ್ತು. ಆದರೆ ಪುಷ್ಪಕವಿಮಾನ ರೆಕ್ಕೆ ಹರಿದು ಬಿದ್ದಿದೆ. ಪ್ರಯಾಣಿಕರ ಯೋಗಕ್ಷೇಮ, ಭದ್ರತಾ ಕಾರ್ಯಾಚರಣೆಯ ಬಗ್ಗೆ ಗಮನ ನೀಡುವುದು ನಾಗರಿಕ ವಿಮಾನ ಖಾತೆ ಸಚಿವಾಲಯದ ಹೊಣೆಗಾರಿಕೆಯಾದರೂ, ಅವಘಡಕ್ಕೆ ಸಂಬಂಧಿಸಿ ಈವರೆಗೆ ತುಟಿ ಬಿಚ್ಚಿಲ್ಲ. ಅಪಘಾತ ತಡೆಯಲು ಸಾಧ್ಯವಿಲ್ಲ ಎಂದ ಮೇಲೆ ಸಚಿವರ ರಾಜೀನಾಮೆ ದೂರದ ಮಾತು.

ಭಾರತಕ್ಕೆ ವಿಮಾನ ಅಪಘಾತ ಹೊಸತೇನೂ ಅಲ್ಲ. 10ಕ್ಕೂ ಅಧಿಕ ಪ್ರಮುಖ ಅಪಘಾತಗಳಿಗೆ ಭಾರತ ಸಾಕ್ಷಿಯಾಗಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ವಿಮಾನ ಅವಘಡದಿಂದಾಗಿ 2,300ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ರಸ್ತೆ ಅವಘಡಗಳಿಗೆ ಹೋಲಿಸಿದರೆ ಇದು ತೀರಾ ಸಣ್ಣ ಸಂಖ್ಯೆ ಎಂದು ವಿಶ್ಲೇಷಿಸಬಹುದಾದರೂ, ವಿಮಾನ ಅವಘಡಗಳನ್ನು ರಸ್ತೆಗಳ ಅವಘಡಗಳ ಜೊತೆಗೆ ಸಮೀಕರಿಸುವುದೇ ತಪ್ಪಾಗುತ್ತದೆ. ವಿಮಾನ ಅಪಘಾತಗಳು ಸಂಭವಿಸಿದ್ದೇ ಆದರೆ ಅಲ್ಲಿ ಬದುಕುಳಿಯುವ ಸಂಭಾವ್ಯಗಳೇ ಇಲ್ಲ. ಆದುದರಿಂದ, ವಿಮಾನ ಅಪಘಾತಗಳು ಸಂಭವಿಸದಂತೆ ಶೇ.100ರಷ್ಟು ಮುಂಜಾಗ್ರತೆಯನ್ನು ತೆಗೆದುಕೊಳ್ಳುವುದು ಸಂಬಂಧ ಪಟ್ಟ ಇಲಾಖೆಗಳ ಹೊಣೆಗಾರಿಕೆಯಾಗಿದೆ. ವಿಮಾನದಲ್ಲಿ ಪ್ರಯಾಣಿಸುವವರು ಶ್ರೀಮಂತರು ಎನ್ನುವ ಕಾರಣಕ್ಕಾಗಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಇದಲ್ಲ. ಅದರಾಚೆಗೂ ಈ ಅಪಘಾತಗಳು ಆರ್ಥಿಕ, ಸಾಮಾಜಿಕ ದುಷ್ಪರಿಣಾಮಗಳನ್ನು ಬೀರುತ್ತದೆೆ. ಅಂತರ್‌ರಾಷ್ಟ್ರೀಯ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತದೆ. ದೇಶದ ವರ್ಚಸ್ಸು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಣ್ಣುಪಾಲಾಗುತ್ತದೆ. ಆದುದರಿಂದ, ಕನಿಷ್ಠ ವಿದೇಶಗಳ ಕಣ್ಣಿಗೆ ಮಣ್ಣೆರಚುವುದಕ್ಕಾದರೂ ಘಟನೆಯ ಕುರಿತಂತೆ ಸರಕಾರ ಗಂಭೀರ ಕ್ರಮ ತೆಗೆದುಕೊಂಡಂತೆ ನಟಿಸಬೇಕಾಗುತ್ತದೆ. ಆ ಕಾರಣಕ್ಕಾದರೂ ನಾಗರಿಕ ವಿಮಾನಯಾನ ಖಾತೆಯ ಸಚಿವರು ರಾಜೀನಾಮೆಯನ್ನು ನೀಡಬೇಕಾಗಿತ್ತು. ಖಾಸಗೀಕರಣಗೊಳ್ಳುವ ಮೂಲಕ ವಿಮಾನ ಪ್ರಯಾಣಗಳು ಇನ್ನಷ್ಟು ಆರಾಮದಾಯಕವಾಗುತ್ತವೆೆ, ಪ್ರಯಾಣ ಅಗ್ಗವಾಗುತ್ತವೆ ಎಂಬಿತ್ಯಾದಿಯಾಗಿ ಸರಕಾರ ದೇಶವನ್ನು ನಂಬಿಸಿತ್ತು. ಆ ನಂಬಿಕೆಗಳೆಲ್ಲ ಹುಸಿಯಾಗುತ್ತಿವೆ. ಅದಾನಿ ನಿರ್ವಹಿಸುವ ವಿಮಾನ ನಿಲ್ದಾಣಗಳ ಛಾವಣಿಗಳು ದೊಡ್ಡ ಮಳೆ ಬಂದರೆ ಕುಸಿದು ಬಿದ್ದು ಸುದ್ದಿಯಾಗುತ್ತವೆ. ಖಾಸಗಿ ವಿಮಾನ ಸಂಸ್ಥೆಗಳಲ್ಲಿ ವಿಮಾನ ಸಿಬ್ಬಂದಿ ದುರ್ವರ್ತನೆಗಳಿಗಾಗಿ ಕುಖ್ಯಾತರಾಗುತ್ತಿದ್ದಾರೆ. ಆಪತ್ಕಾಲದಲ್ಲಿ ದೇಶದ ನೆರವಿಗೆ ಧಾವಿಸಬೇಕಾದ ಖಾಸಗಿ ವಿಮಾನಗಳು ಸಂದರ್ಭದ ಲಾಭ ಪಡೆದು, ದುಬಾರಿ ಶುಲ್ಕಗಳನ್ನು ವಿಧಿಸಿ ತಮ್ಮ ಜೇಬು ತುಂಬಿಸಿಕೊಳ್ಳುತ್ತವೆ.

ಸ್ವಾತಂತ್ರ್ಯೋತ್ತರದಲ್ಲಿ ನಡೆದ ಹೆಚ್ಚಿನ ವಾಣಿಜ್ಯ ವಿಮಾನ ಅಪಘಾತಗಳಲ್ಲಿ ಪೈಲಟ್ ದೋಷಗಳು ಎದ್ದು ಕಂಡಿವೆ. ಪೈಲಟ್ ತೆಗೆದುಕೊಂಡ ನಿರ್ಧಾರ ಮತ್ತು ಕ್ರಮಗಳು ವಿಮಾನಗಳನ್ನು ಅವಘಡಕ್ಕೆ ತಳ್ಳಿವೆ ಎನ್ನುವುದನ್ನು ಅಧ್ಯಯನ ಹೇಳುತ್ತದೆ. 1991ರಿಂದ 2000ದವರೆಗೆ ಏಳು ಮಾರಕ ಅಪಘಾತಗಳು ಸಂಭವಿಸಿವೆ. 2001ರಿಂದ 2010ರಲ್ಲಿ ಒಂದು ಅಪಘಾತವಷ್ಟೇ ನಡೆದಿದ್ದು, 2011ರಿಂದ 2020ರಲ್ಲೂ ವಿಮಾನ ಅಪಘಾತಗಳಿಗೆ ಸಂಬಂಧಿಸಿ ಸುರಕ್ಷಿತ ಅವಧಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ, ವಿಮಾನ ಯಾನಗಳ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿರುವುದು ಗಮನಾರ್ಹವಾಗಿದೆ. ಸಿಬ್ಬಂದಿಯ ದುರ್ವರ್ತನೆ, ಆಗಾಗ ವಿಮಾನಗಳಲ್ಲಿ ತೊಂದರೆಗಳು ಕಾಣಿಸಿಕೊಂಡು ತುರ್ತು ಭೂಸ್ಪರ್ಶಗೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಅಹ್ಮದಾಬಾದ್‌ನಲ್ಲಿ ಪತನಗೊಂಡ ವಿಮಾನದ ಬಗ್ಗೆಯೂ ಹಿಂದಿನ ಪ್ರಯಾಣಿಕರು ತಮ್ಮ ಅಸಮಾಧಾನಗಳನ್ನು ವ್ಯಕ್ತಪಡಿಸಿದ್ದಾರೆ. ವಿಮಾನ ತಾಂತ್ರಿಕವಾಗಿ ಸುರಕ್ಷಿತವಾಗಿರಲಿಲ್ಲ ಎನ್ನುವ ಅನುಮಾನವನ್ನು ಹಂಚಿಕೊಂಡಿದ್ದಾರೆ. ವಿಮಾನ ತಂತ್ರಜ್ಞ ಅಭಿರಾಜ್ ಸಿಂಗ್ ಎಂಬವರು ಈಗಾಗಲೇ ಭಾರತದ ವಿಮಾನಗಳ ಕಳಪೆ ನಿರ್ವಹಣೆಯ ಬಗ್ಗೆ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ದೀರ್ಘಾವಧಿ ಕೆಲಸ, ಕಡಿಮೆ ವೇತನ, ಕಳಪೆ ನಿರ್ವಹಣೆ ಈ ಕ್ಷೇತ್ರದ ದೊಡ್ಡ ಸಮಸ್ಯೆಯಾಗಿದೆ. ಭಾರತ ಮತ್ತು ದುಬೈನಲ್ಲಿ ವಿಮಾನ ನಿರ್ವಹಣೆಯ ಕುರಿತಂತೆ ರಾತ್ರಿ-ಹಗಲಿನಷ್ಟು ವ್ಯತ್ಯಾಸವಿದೆ ಎನ್ನುವ ಅಂಶವನ್ನು ಅವರು ಹೇಳಿಕೊಂಡಿದ್ದಾರೆ. ಖಾಸಗೀಕರಣ ವಿಮಾನ ಉದ್ಯಮವನ್ನು ಸುಧಾರಣೆಗೊಳಿಸಿಲ್ಲ. ಬದಲಿಗೆ ನಷ್ಟವಾಗದಂತೆ ಉದ್ಯಮವನ್ನು ಸರಿದೂಗಿಸುವ ಪ್ರಯತ್ನದಲ್ಲಿ ಉದ್ಯಮಿಗಳು, ಪ್ರಯಾಣಿಕರ ಜೀವವನ್ನು ಅಪಾಯಕ್ಕೆ ಒಡ್ಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. 2025ರ ಮಾರ್ಚ್ ವೇಳೆಗೆ ಭಾರತದ ವಾಣಿಜ್ಯ ವಿಮಾನಗಳ ಶೇ. 16ರಷ್ಟು ಅಂದರೆ 133 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. 2024ರಲ್ಲಿ ದೋಷಪೂರಿತ ಇಂಜಿನ್‌ಗಳಿಂದಾಗಿ ಗೋ ಏರ್‌ಲೈನ್ಸ್ ಅರ್ಧದಷ್ಟು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ. ದೋಷಪೂರಿತ ಇಂಜಿನ್‌ಗಳು ಭಾರತದ ವಿಮಾನ ಉದ್ಯಮಕ್ಕೆ ಭಾರೀ ನಷ್ಟವನ್ನುಂಟು ಮಾಡುತ್ತಿದೆ ಎನ್ನುವುದನ್ನು ನೀತಿ ಆಯೋಗದ ವರದಿಯು ಈಗಾಗಲೇ ಬಹಿರಂಗಪಡಿಸಿದೆ.

ಈ ಹಿನ್ನೆಲೆಯಲ್ಲಿ, ಅಹ್ಮದಾಬಾದ್ ಅಪಘಾತವನ್ನು ತಡೆಯಲು ಸಾಧ್ಯವಿತ್ತೇ, ಸಾಧ್ಯವಿರಲಿಲ್ಲವೇ ಎನ್ನುವುದರ ತೀರ್ಮಾವನ್ನು ಗೃಹ ಸಚಿವ ಅಮಿತ್ ಶಾ ಮಾಡಬಾರದು. ತನಿಖೆಯ ಬಳಿಕವೇ ಈ ಬಗ್ಗೆ ತೀರ್ಮಾನಕ್ಕೆ ಬರಬೇಕು. ಈ ದುರಂತದ ಹಿಂದಿರುವ ಕಾರಣಗಳನ್ನು ಪತ್ತೆ ಹಚ್ಚುವುದರಿಂದ, ಇಂತಹ ಇನ್ನಷ್ಟು ದುರಂತಗಳನ್ನು ತಡೆಯಲು ಸಾಧ್ಯವಾಗುತ್ತದೆ. ಭಾರತದ ಆರ್ಥಿಕತೆ ಕುಸಿದುಕೂತಿರುವ ಈ ದಿನಗಳಲ್ಲಿ, ವಿಮಾನ ಉದ್ಯಮ ನಷ್ಟದ ದಿಕ್ಕಿನಲ್ಲಿದೆ ಎನ್ನುವ ಆತಂಕಗಳೂ ವ್ಯಕ್ತವಾಗುತ್ತಿವೆ. ಈ ಆತಂಕಗಳು ಒತ್ತಡಗಳಾಗಿ ಇನ್ನಷ್ಟು ಅವಘಡಗಳನ್ನು ಸೃಷ್ಟಿಸದಂತೆ ನೋಡಿಕೊಳ್ಳುವುದು ನಾಗರಿಕ ವಿಮಾನಯಾನ ಸಚಿವಾಲಯದ ಹೊಣೆಗಾರಿಕೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News