ಮರು ಸಮೀಕ್ಷೆ ಯಶಸ್ವಿಯಾಗಲಿ
ಸೆಪ್ಟೆಂಬರ್ 22ರಿಂದ ಮತ್ತೆ ಹೊಸದಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವ ಬಗ್ಗೆ ಸರಕಾರ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಿದೆ. ಈ ಮೂಲಕ, ಸುಮಾರು 160 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಡೆಸಿದ ಕಾಂತರಾಜ್ ವರದಿಯು ಅಧಿಕೃತವಾಗಿ ಕಸದ ಬುಟ್ಟಿಗೆ ಸೇರುವುದು ಖಚಿತವಾಗಿದೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಮರು ಸಮೀಕ್ಷೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆಯನ್ನು ನೀಡಿದ್ದಾರೆ. ಈ ಸಮೀಕ್ಷೆ ದೇಶದಲ್ಲೇ ಒಂದು ಮಾದರಿ ಸಮೀಕ್ಷೆಯಾಗಬೇಕು ಎಂದು ಅವರು ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಈ ಹಿಂದಿನ ಸಮೀಕ್ಷೆ ಮಾದರಿಯಾಗಿರಲಿಲ್ಲವೆ? ಒಂದು ವೇಳೆ ಅದರಲ್ಲಿ ತಪ್ಪುಗಳು ನಡೆದಿದ್ದರೆ ಏನೇನು ತಪ್ಪುಗಳು ನಡೆದಿವೆ? ಇತ್ಯಾದಿಗಳ ಬಗ್ಗೆ ಸಭೆಯಲ್ಲಿ ಆತ್ಮಾವಲೋಕನ ನಡೆಸುವುದು ಅತ್ಯಗತ್ಯವಾಗಿತ್ತು. ಯಾಕೆಂದರೆ, ಈ ಹಿಂದೆ ಜಾತಿಗಣತಿಗೆ ಆದೇಶ ನೀಡಿದಾಗಲೂ ಅದು ದೇಶಕ್ಕೆ ಮಾದರಿ ಸಮೀಕ್ಷೆ ಯಾಗಲಿದೆ ಎಂದೇ ಭಾವಿಸಲಾಗಿತ್ತು. ದೇಶದಲ್ಲೇ ಮೊತ್ತ ಮೊದಲ ಬಾರಿಗೆ ನಡೆಯುವ ಜಾತಿ ಸಮೀಕ್ಷೆಯಾಗಿದ್ದುದರಿಂದ ಅದರ ಬಗ್ಗೆ ಬಹಳಷ್ಟು ನಿರೀಕ್ಷೆಯನ್ನು ಇಡಲಾಗಿತ್ತು. ಈ ಸಮೀಕ್ಷೆ ಪೂರ್ತಿಯಾಗಿ ವರದಿಯನ್ನು ಸ್ವೀಕರಿಸಿ ಜಾರಿಗೊಳಿಸಿದರೆ ಅದನ್ನು ಇತರ ರಾಜ್ಯಗಳು ಮಾದರಿಯಾಗಿಸಿಕೊಳ್ಳಲಿದೆ ಎಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರೇ ಹೇಳಿಕೊಂಡಿದ್ದರು. ಇದೀಗ ಆ ಭರವಸೆ ಹುಸಿಯಾಗಿದೆ. ಜಾತಿ ಸಮೀಕ್ಷೆಗೆ ಇಳಿದ ಮೊತ್ತ ಮೊದಲ ರಾಜ್ಯ ಕರ್ನಾಟಕ ಆಗಿದ್ದರೂ, ಆ ಬಳಿಕ ಸಮೀಕ್ಷೆ ನಡೆಸಿದ ಬಿಹಾರ, ತೆಲಂಗಾಣ ರಾಜ್ಯಗಳು ವರದಿಯನ್ನು ಮಂಡಿಸುವಲ್ಲಿ ಯಶಸ್ವಿಯಾಯಿತು. ಕರ್ನಾಟಕ ಸರಕಾರ ಅದನ್ನು ಸ್ವೀಕರಿಸುವುದಕ್ಕೇ ಮೀನಾಮೇಷ ಎಣಿಸತೊಡಗಿತು. ಹಾಗೆ ಹಿಂಜರಿಯುವುದಕ್ಕೆ ಕಾರಣ ಸಮೀಕ್ಷೆ ಸರಿಯಿಲ್ಲ ಎನ್ನುವುದಾಗಿರಲಿಲ್ಲ. ಸಮೀಕ್ಷೆಯನ್ನು ಸ್ವೀಕರಿಸಿದರೆ ಬಲಾಡ್ಯ ಜಾತಿಗಳು ಸರಕಾರದ ವಿರುದ್ಧ ಅಸಮಾಧಾನಗೊಳ್ಳಬಹುದು ಎನ್ನುವ ಭಯವಾಗಿತ್ತು. 'ಸಮೀಕ್ಷೆ ಸರಿಯಿಲ್ಲ ' ಎನ್ನುವ ಬಲಿಷ್ಟ ಜಾತಿಗಳ ಮುಖಂಡರ ಆರೋಪ ಒಂದು ನೆಪ ಮಾತ್ರವಾಗಿತ್ತು. ಅವರೆಲ್ಲರೂ ಜಾತಿಗಣತಿಯನ್ನೇ ಆಳದಲ್ಲಿ ವಿರೋಧಿಸುತ್ತಿದ್ದರು. ಇದೀಗ ಸರಕಾರವೇ 'ಸಮೀಕ್ಷೆ ಸರಿಯಿಲ್ಲ' ಎನ್ನುವುದನ್ನು ಒಪ್ಪಿಕೊಂಡಿದೆ. ಮಾತ್ರವಲ್ಲ, ಹೊಸದಾಗಿ ಮಾದರಿ ಸಮೀಕ್ಷೆ ನಡೆಸುವುದಾಗಿ ಭರವಸೆ ನೀಡಿದೆ. ಇದು ಎಷ್ಟರಮಟ್ಟಿಗೆ ಈಡೇರುತ್ತದೆ ಎನ್ನುವುದನ್ನು ಕಾದು ನೋಡಬೇಕು.
ಮುಖ್ಯವಾಗಿ ಈ ಹಿಂದಿನ ಸಮೀಕ್ಷೆಯಲ್ಲಿರುವ ಲೋಪದೋಷಗಳೇನು ಎನ್ನುವುದನ್ನು ಸರಕಾರ ಇನ್ನೂ ವಿವರಿಸಿಲ್ಲ. ವಿರೋಧ ಪಕ್ಷಗಳ ನಾಯಕರ ವಿರೋಧಕ್ಕೆ ತಲೆ ಬಾಗಿ ಮರು ಸಮೀಕ್ಷೆಯನ್ನು ಅದು ಘೋಷಿಸಿದೆ. ನಿಜಕ್ಕೂ ಅಂಕಿಅ ಂಶಗಳಲ್ಲಿ ತಪ್ಪುಗಳಿವೆಯೋ? ಇದ್ದರೆ ಏನೇನು? ಆ ತಪ್ಪುಗಳು ಯಾಕೆ ಸಂಭವಿಸಿತು? ಎನ್ನುವ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳಲು ಯಶಸ್ವಿಯಾದಾಗ ಮಾತ್ರ, ಈ ಮರು ಸಮೀಕ್ಷೆ ಯಶಸ್ವಿಯಾಗಲು ಸಾಧ್ಯ. ಇಲ್ಲವಾದರೆ, ನಾಳೆ ಹೊರಬೀಳುವ ಹೊಸ ಸಮೀಕ್ಷೆಗೂ ಭಿನ್ನಮತಗಳು ವ್ಯಕ್ತವಾಗಬಹುದು. ಆಗಲೂ ಸಮೀಕ್ಷೆಯಲ್ಲಿ ಲೋಪಗಳಿವೆ, ಈ ಸಮೀಕ್ಷೆಯನ್ನು ಒಪ್ಪುವುದಿಲ್ಲ ಎಂದು ಕೆಲವು ಜಾತಿಗಳು ಹಟ ಹಿಡಿಯಬಹುದು. ಆಗ ಸರಕಾರ ಏನು ಮಾಡುತ್ತದೆ? ಅವರನ್ನು ಸಂತೃಪ್ತಿ ಪಡಿಸಲು ಇನ್ನೊಂದು ಹೊಸ ಸಮೀಕ್ಷೆಯನ್ನು ಮಾಡುತ್ತದೆಯೆ? ಈ ಸಮೀಕ್ಷೆಯ ಪ್ರಹಸನ ಹೀಗೆ ಎಲ್ಲಿಯವರೆಗೆ ಮುಂದುವರಿಯಬಹುದು? ಬಿಹಾರದಲ್ಲಿ ಜಾತಿ ಗಣತಿ ಸಮೀಕ್ಷೆಯನ್ನು ಅಲ್ಲಿನ ಸರಕಾರ ತನ್ನ ಹೆಗ್ಗಳಿಕೆಯಾಗಿ ಬಿಂಬಿಸಿಕೊಂಡಿತು ಮಾತ್ರವಲ್ಲ, ಜೆಡಿಯು ಜೊತೆಗೆ ಮೈತ್ರಿ ಮಾಡಿಕೊಂಡ ಕಾರಣಕ್ಕೆ ಬಿಜೆಪಿಯೂ ಅನಿವಾರ್ಯವಾಗಿ ಜಾತಿಗಣತಿಯ ಬಗ್ಗೆ ಮೃದು ನೀತಿಯನ್ನು ಅನುಸರಿಸಿತು. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಒಳಗೊಳಗೇ ಸಮೀಕ್ಷೆಯ ಬಗ್ಗೆ ಕೀಳರಿಮೆಯನ್ನು ಹೊಂದಿದ್ದರು. ಮುಖ್ಯವಾಗಿ ಕಾಂಗ್ರೆಸ್‌ನೊಳಗಿರುವ ಲಿಂಗಾಯತ ಮತ್ತು ಒಕ್ಕಲಿಗ ನಾಯಕರಿಗೇ ಜಾತಿಗಣತಿಯ ಬಗ್ಗೆ ಆಕ್ಷೇಪಗಳಿದ್ದವು. ಬಿಜೆಪಿ ಮತ್ತು ಆರೆಸ್ಸೆಸ್ ಈ ಜಾತಿ ನಾಯಕರನ್ನು ಬಳಸಿಕೊಂಡೇ ಜಾತಿಗಣತಿ ವರದಿ ಮಂಡನೆಯಾಗದಂತೆ ನೋಡಿಕೊಂಡವು.
ಮೂಲಭೂತ ಸೌಕರ್ಯಗಳನ್ನು, ಸಂಪನ್ಮೂಲಗಳನ್ನು ಒದಗಿಸಿಕೊಡುವುದರಿಂದಷ್ಟೇ ಕರ್ನಾಟಕದಲ್ಲಿ ಸಮೀಕ್ಷೆಯನ್ನು ಯಶಸ್ವಿಗೊಳಿಸಲು ಸಾಧ್ಯವಿಲ್ಲ. ಈ ಸಮೀಕ್ಷೆ ಯಾಕೆ ನಡೆಯುತ್ತಿದೆ ಮತ್ತು ಇದರ ಲಾಭಗಳೇನು ಎನ್ನುವುದು ಎಲ್ಲ ಜಾತಿಗಳಿಗೆ ಮನವರಿಕೆ ಮಾಡಿಕೊಡುವ, ಜಾತಿಗಣತಿಯ ಬಗ್ಗೆ ಅರಿವು, ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಸರಕಾರ ಮೊದಲು ಮಾಡಬೇಕು. ಮೊತ್ತ ಮೊದಲು ತಮ್ಮದೇ ಪಕ್ಷದೊಳಗಿರುವ ವಿವಿಧ ಜಾತಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಜಾತಿ ಗಣತಿ ಯಾವುದೇ ಧರ್ಮವನ್ನು ಅಥವಾ ಜಾತಿಗಳನ್ನು ಒಡೆಯುವುದಿಲ್ಲ, ಬದಲಿಗೆ ದುರ್ಬಲ ಜಾತಿಗಳಿಗೆ ಸವಲತ್ತುಗಳು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಿಸಲು ಸಹಾಯ ಮಾಡುತ್ತದೆ ಎನ್ನುವುದನ್ನು ಅವರಿಗೆ ಅರ್ಥ ಮಾಡಿಸಬೇಕು. ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರು ಜಾತಿ ಗಣತಿಯ ಬಗ್ಗೆ ಹೇಳಿಕೊಟ್ಟದ್ದನ್ನು ನಂಬಿ ಮೇಲ್‌ಜಾತಿಯ ಕೆಲವು ಕಾಂಗ್ರೆಸ್ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರನ್ನು ಜಾತಿ ಗಣತಿ ಕುರಿತಂತೆ ಸಾಕ್ಷರರನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಕುರಿತಂತೆ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಅಲ್ಲಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಜಾತಿ ಸಮೀಕ್ಷೆ ಅಂತಿಮವಾಗಿ ಹೇಗೆ ಕರ್ನಾಟಕದ ಒಟ್ಟು ಅಭಿವೃದ್ಧಿಯಲ್ಲಿ ತಮ್ಮ ಪಾತ್ರವಹಿಸುತ್ತದೆ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಇಲ್ಲದೇ ಇದ್ದರೆ, ಸಮೀಕ್ಷೆ ಯಶಸ್ವಿಯಾಗಿ ನಡೆದರೂ, ಅದನ್ನು ಮಂಡಿಸಲು ಸರಕಾರಕ್ಕೆ ಸಾಧ್ಯವಾಗದು.
ಇದೇ ಸಂದರ್ಭದಲ್ಲಿ ಒಳಮೀಸಲಾತಿಗೆ ಸಂಬಂಧಿಸಿದ ವರದಿಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕವೂ ಬೇರೆ ಬೇರೆ ಕಾರಣಗಳಿಗಾಗಿ ಒಳ ಮೀಸಲಾತಿ ಜಾರಿಯು ಮುಂದಕ್ಕೆ ಹೋಗುತ್ತಿದೆ. ಜಾತಿ ಗಣತಿಯ ಜೊತೆ ಜೊತೆಗೇ ಒಳ ಮೀಸಲಾತಿಗೆ ಸಂಬಂಧಿಸಿದ ಸಮೀಕ್ಷೆಯೂ ಶೀಘ್ರದಲ್ಲಿ ಪೂರ್ತಿಗೊಂಡು, ಅರ್ಹ ತಳಸ್ತರದ ಜಾತಿಗಳಿಗೆ ನ್ಯಾಯ ಸಿಗುವಂತಾಗಬೇಕು. ಕೋತಿ ಬೆಣ್ಣೆ ತಿಂದು ಮೇಕೆಯ ಮೂತಿಗೆ ಒರೆಸುವ ತಂತ್ರ ಇನ್ನಾದರೂ ನಿಲ್ಲಬೇಕು. ಜಾತಿ ಸಮೀಕ್ಷೆ ಮಂಡನೆಯಾದ ಬಳಿಕ ಅದರ ಆಧಾರದಲ್ಲಿ ಅಭಿವೃದ್ಧಿಗೆ ಕಾರ್ಯಕ್ರಮ ಹಾಕಿಕೊಳ್ಳುವುದು ಸರಕಾರದ ಮುಂದಿರುವ ಇನ್ನೊಂದು ಸವಾಲು. ಈ ಸವಾಲನ್ನು ಕೈಗೆತ್ತಿಕೊಳ್ಳುವ ಧೈರ್ಯ ತೋರಿಸದೇ ಇದ್ದರೆ, ಜಾತಿ ಗಣತಿ ವರದಿಯಿಂದ ನಾಡಿಗೆ ಯಾವ ಲಾಭವು ಇಲ್ಲ. ಈಗಾಗಲೇ ಹತ್ತು ಹಲವು ವರದಿಗಳ ಸಾಲಿಗೆ ಇದು ಇನ್ನೊಂದು ಸೇರ್ಪಡೆಯಷ್ಟೇ ಆಗಿ ಬಿಡಬಹುದು.