×
Ad

ತರಕಾರಿ ಕತ್ತರಿಸುವ ಚಾಕುವಿನಲ್ಲೇ ನಡೆಸಿದ ಶಸ್ತ್ರಚಿಕಿತ್ಸೆ?

Update: 2025-07-24 08:45 IST

PC: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಉಪರಾಷ್ಟ್ರಪತಿ ಜಗದೀಪ್ ಧನ್ಕಕರ್ ಅವರ ಅನಿರೀಕ್ಷಿತ ರಾಜೀನಾಮೆ ದೇಶದ ಸಾಂವಿಧಾನಿಕ ಘನತೆಗೆ ಸಂಬಂಧಿಸಿದ ಚರ್ಚೆಯನ್ನು ಇನ್ನಷ್ಟು ತೀವ್ರಗೊಳಿಸಿದೆ. ಧನ್ಕರ್‌ರನ್ನು ನಡೆಸಿಕೊಂಡ ರೀತಿ, ಉಪರಾಷ್ಟ್ರಪತಿ ಸ್ಥಾನದ ಘನತೆಗೆ ಚ್ಯುತಿ ತಂದಿದೆ ಎಂದು ವಿರೋಧ ಪಕ್ಷದ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ, ಸ್ವತಃ ಧನ್ಕರ್ ಅವರು ಉಪರಾಷ್ಟ್ರಪತಿ ಸ್ಥಾನದ ಘನತೆಗೆ ತಕ್ಕುದಾಗಿ ವರ್ತಿಸಿದ್ದರೆ? ಎನ್ನುವ ಪ್ರಶ್ನೆಗೆ ಯಾವುದೇ ಉತ್ತರಗಳಿಲ್ಲ. ಧನ್ಕರ್ ಅವರು ‘ತಾವೇ ಬಿತ್ತಿದ್ದನ್ನು ಕೊಯ್ದುಕೊಂಡಿದ್ದಾರೆ’ ಎನ್ನುವುದು ಹೆಚ್ಚು ಸೂಕ್ತವಾಗಿದೆ. ಕಳೆದ ವರ್ಷ ಇದೇ ಉಪರಾಷ್ಟ್ರತಿಯವರು ಉತ್ತರ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯ ನಾಥ್ ಅವರನ್ನು ಹಾಡಿ ಹೊಗಳಿದ್ದರು ‘‘ಹತ್ತು ವರ್ಷದ ಹಿಂದೆ ಭಾರತ ಹೀಗೆ ಇದ್ದಿರಲಿಲ್ಲ’’ ಎಂದು ಮೋದಿ ಆಡಳಿತವನ್ನು ಬಣ್ಣಿಸಿದ್ದರು. ಕನಿಷ್ಠ ಒಂದು ಗೌರವಯುತವಾದ ವಿದಾಯವನ್ನು ನೀಡದೆ ಉಪರಾಷ್ಟ್ರಪತಿಯೊಬ್ಬರನ್ನು ಅಧಿಕಾರಾವಧಿಗೆ ಮುನ್ನವೇ ಮನೆಗೆ ಕಳುಹಿಸುವ ವಿದ್ಯಮಾನ ಹತ್ತು ವರ್ಷಗಳ ಹಿಂದೆ ನಿಜಕ್ಕೂ ಇದ್ದಿರಲಿಲ್ಲ.

ಹಾಗೆ ನೋಡಿದರೆ, ಉಪರಾಷ್ಟ್ರಪತಿಯಂತಹ ಉನ್ನತ ಸ್ಥಾನವನ್ನು ವಹಿಸಿದ್ದ ಹಿರಿಯ ನಾಯಕರು, ಅತಿ ವಾಚಾಳಿಯಾಗಿ ಸಂವಿಧಾನದ ಘನತೆಗೆ ಧಕ್ಕೆ ತರುವಂತೆ ಹತ್ತು ವರ್ಷಗಳ ಹಿಂದೆ ಯಾರೂ ವರ್ತಿಸಿರಲಿಲ್ಲ. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಸ್ಥಾನಗಳ ಘನತೆ, ಗೌರವಗಳಿಗೆ ಧಕ್ಕೆ ತರುವಂತೆ ಪ್ರಧಾನಿಗಳು ಎಂದೂ ನಡೆದುಕೊಂಡಿರಲಿಲ್ಲ. ಧನ್‌ಕರ್ ಅವರು ಹಾಡಿಹೊಗಳಿದ ಈ ಹತ್ತು ವರ್ಷಗಳಲ್ಲಿ ರಾಷ್ಟ್ರಪತಿಯೊಂದಿಗೆ ಪ್ರಧಾನಿ ವರ್ತಿಸಿದ ರೀತಿ ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯುವಂತೆ ಇರಲಿಲ್ಲ. ನೂತನ ಸಂಸತ್ ಅಧಿವೇಶನದ ಉದ್ಘಾಟನೆಯ ಸಂದರ್ಭದಲ್ಲಿ ರಾಷ್ಟ್ರಪತಿಯನ್ನು ಹೊರಗಿಡಲಾಗಿತ್ತು. ತಮ್ಮ ರಾಜಕೀಯ ದುರುದ್ದೇಶಗಳಿಗೆ ರಾಷ್ಟ್ರಪತಿ ಸ್ಥಾನವನ್ನು ಸರಕಾರ ಯಾವ ಸಂಕೋಚವೂ ಇಲ್ಲದೆ ಬಳಸಿಕೊಂಡಿತು. ಧನ್ಕರ್ ಅವರು ಪಶ್ಚಿಮಬಂಗಾಳದ ರಾಜ್ಯಪಾಲರಾಗಿರುವಾಗ ‘ರಾಜಭವನವನ್ನು ಆರೆಸ್ಸೆಸ್ ಕಚೇರಿಯನ್ನಾಗಿಸಿದ್ದಾರೆ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಂದ ಟೀಕೆಗೆ ಒಳಗಾಗಿದ್ದರು ಮತ್ತು ಉಪರಾಷ್ಟ್ರಪತಿ ಸ್ಥಾನಕ್ಕೆ ಅದುವೇ ಅರ್ಹತೆಯಾಗಿತ್ತು. ಕನಿಷ್ಠ ಉಪರಾಷ್ಟ್ರಪತಿ ಸ್ಥಾನಕ್ಕೇರಿದ ಬಳಿಕವಾದರೂ ಧನ್ಕರ್ ಅದರ ಸ್ವಂತಿಕೆಯನ್ನು ಎತ್ತಿ ಹಿಡಿಯುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಇತ್ತೀಚಿನ ಅವರ ನಡವಳಿಕೆ ಅತ್ಯಂತ ನಿರಾಶಾದಾಯಕವಾಗಿತ್ತು. ಆರೆಸ್ಸೆಸ್ ಜೊತೆಗೆ ಬಹಿರಂಗವಾಗಿ ಗುರುತಿಸಿಕೊಂಡದ್ದು ಮಾತ್ರವಲ್ಲ, ನ್ಯಾಯಾಂಗದ ಜೊತೆಗೆ ಅವರು ಬಹಿರಂಗವಾಗಿ ಗುದ್ದಾಟಕ್ಕಿಳಿದರು. ಆದುದರಿಂದಲೇ, ದಯನೀಯ ಸ್ಥಿತಿಯಲ್ಲಿ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ ಧನ್ಕರ್ ನಿರ್ಗಮಿಸುತ್ತಿರುವಾಗ, ಅವರ ಬಗ್ಗೆ ಯಾರೂ ಅನುಕಂಪವನ್ನು ವ್ಯಕ್ತಪಡಿಸುತ್ತಿಲ್ಲ. ಧನ್ಕರ್ ಅವರ ರಾಜೀನಾಮೆಗೆ ಕಾಂಗ್ರೆಸ್ ಪಕ್ಷ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಸ್ಪಷ್ಟ. ಬಹುಶಃ ಉಪರಾಷ್ಟ್ರಪತಿಯೊಬ್ಬರನ್ನು ಈ ರೀತಿಯಲ್ಲಿ ನಡೆಸಿಕೊಳ್ಳುವುದು ಎಷ್ಟು ಸರಿ ಎನ್ನುವ ನಿಟ್ಟಿನಲ್ಲಿ ವಿರೋಧ ಪಕ್ಷಗಳ ಕಳವಳ ಸಮರ್ಥನೀಯವಾಗಿದೆ. ಆದರೆ ದನ್ಕರ್ ಸ್ಪೀಕರ್ ಆಗಿ ಪ್ರತಿಪಕ್ಷಗಳನ್ನು ಹೇಗೆ ನಡೆಸಿಕೊಂಡಿದ್ದರು ಎನ್ನುವುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುವುದು ಅತ್ಯಗತ್ಯವಾಗಿದೆ.

ರಾಜ್ಯ ಸಭೆ ಸ್ಪೀಕರ್ ಆಗಿ ಜಗದೀಪ್ ಧನ್ಕರ್ ಅವರು ಪಕ್ಷಪಾತ ಮಾಡುತ್ತಿದ್ದಾರೆ ಎಂದು ಇದೇ ಪ್ರತಿಪಕ್ಷಗಳು ಕಳೆದ ಡಿಸೆಂಬರ್‌ನಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದವು. ಸ್ಪೀಕರ್ ಸ್ಥಾನವನ್ನು ರಾಜಕೀಯ ದುರುದ್ದೇಶಗಳಿಗೆ ಬಳಸಿಕೊಂಡ ಧನ್ಕರ್, ವಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದ್ದರು. ಈ ಸಂದರ್ಭದಲ್ಲಿ ವಿಪಕ್ಷದ ನಿರ್ಧಾರವನ್ನು ವ್ಯಂಗ್ಯ ಮಾಡಿದ್ದ ಧನ್ಕರ್ ‘ಪ್ರತಿಪಕ್ಷಗಳು ತರಕಾರಿ ಕತ್ತರಿಸುವ ಚಾಕುವಿನಲ್ಲಿ ಬೈಪಾಸ್ ಶಸ್ತ್ರಚಿಕಿತ್ಸೆಗೆ ಪ್ರಯತ್ನಿಸುತ್ತಿವೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ‘ವಿಪಕ್ಷ ಹಿಡಿದಿರುವ ಚಾಕು ತರಕಾರಿ ಕತ್ತರಿಸುವುದಕ್ಕೂ ಅಯೋಗ್ಯವಾಗಿತ್ತು. ಅದು ತುಕ್ಕು ಹಿಡಿದಿತ್ತು. ಅಲ್ಲಿ ಆತುರ ಮಾತ್ರವಿತ್ತು. ಪ್ರಜಾಸತ್ತಾತ್ಮಕ ವಿಕಸನಕ್ಕೆ ವಿರುದ್ಧವಾಗಿತ್ತು’’ ಎಂದು ಅವರು ನಿರ್ಣಯವನ್ನು ವ್ಯಾಖ್ಯಾನಿಸಿದ್ದರು. ಅಂದು ವಿಪಕ್ಷಗಳಿಂದ ವಿಫಲವಾದ ಶಸ್ತ್ರಚಿಕಿತ್ಸೆಯನ್ನು ಇದೀಗ ಸರಕಾರವೇ ಪೂರ್ತಿ ಮಾಡಿದಂತಿದೆ ಮತ್ತು ಈ ಶಸ್ತ್ರಚಿಕಿತ್ಸೆಗೆ ತರಕಾರಿ ಕತ್ತರಿಸುವ ಚಾಕುವನ್ನೇ ಬಳಸಿರುವುದು ವಿಪರ್ಯಾಸವೇ ಸರಿ. ಒಂದು ರೀತಿಯಲ್ಲಿ ಅವರ ವ್ಯಂಗ್ಯ ಅವರನ್ನೇ ಇರಿದಿದೆ. ಮತ್ತು ತನ್ನದೇ ಮೆಚ್ಚಿನ ನಾಯಕರು ತನಗೆ ಮಾಡಿದ ಈ ಶಸ್ತ್ರ ಚಿಕಿತ್ಸೆಯ ಬಗ್ಗೆ ಈವರೆಗೆ ಯಾವುದೇ ವಿವರಣೆ ನೀಡಿಲ್ಲ.

ಧನ್ಕರ್ ಆರೋಗ್ಯ ಸಮಸ್ಯೆಯನ್ನು ಮುಂದಿಟ್ಟುಕೊಂಡು ತನ್ನ ರಾಜೀನಾಮೆಯನ್ನು ನೀಡಿದ್ದಾರಾದರೂ, ಅವರ ಜೊತೆಗೆ ಸರಕಾರ ವರ್ತಿಸಿದ ರೀತಿ ಬೇರೇನೋ ಇದೆ ಎನ್ನುವುದನ್ನು ಸಾರಿ ಹೇಳುತ್ತಿದೆ. ಯಾವುದೇ ಮುನ್ಸೂಚನೆಯಿಲ್ಲದೆಯೇ ಅವರಿಂದ ಏಕಾಏಕಿ ರಾಜೀನಾಮೆ ಕೊಡಿಸಲಾಗಿದೆ ಮಾತ್ರವಲ್ಲ, ಅವರ ನಿವಾಸವನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ. ಒಬ್ಬ ಉಪರಾಷ್ಟ್ರಪತಿಯ ನಿವೃತ್ತಿ ಸಂದರ್ಭದಲ್ಲಿ ಪಾಲಿಸಬೇಕಾದ ಯಾವುದೇ ಶಿಷ್ಟಾಚಾರಗಳನ್ನು ಸರಕಾರ ಪಾಲಿಸಿಲ್ಲ. ಒಂದು ರೀತಿಯಲ್ಲಿ ಇದು ಸೇಡಿನ ಕ್ರಮವಾಗಿದೆ. ಒಟ್ಟು ಸಾಂವಿಧಾನಿಕ ವ್ಯವಸ್ಥೆಯ ಆರೋಗ್ಯವೇ ಕೆಟ್ಟು ಹೋಗಿರುವ ಸಂಕೇತವಿದು. ಕೇಂದ್ರ ಸರಕಾರದ ಮೂಗಿನ ನೇರಕ್ಕೆ ವರ್ತಿಸದ ಕಾರಣದಿಂದ ಅವರಿಂದ ರಾಜೀನಾಮೆ ಪಡೆಯಲಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಆರೆಸ್ಸೆಸ್ ಮತ್ತು ಮೋದಿ ನಡುವಿನ ತಿಕ್ಕಾಟ ಅಂತಿಮವಾಗಿ ಧನ್ಕರ್‌ರನ್ನು ಬಲಿ ಪಡೆದಿದೆ ಎನ್ನುವ ಊಹಾಪೋಹಗಳೂ ಇವೆ. ಇಷ್ಟಕ್ಕೂ ಧನ್ಕರ್ ಕಳೆದುಕೊಂಡದ್ದೇನೂ ಇಲ್ಲ. ಧನ್ಕರ್ ರಾಜ್ಯಪಾಲರ ಸ್ಥಾನವನ್ನು ನಿರ್ವಹಿಸಲು ಅಯೋಗ್ಯರು ಎಂದು ತೃಣಮೂಲ ಕಾಂಗ್ರೆಸ್ ಹೋರಾಟ ನಡೆಸುತ್ತಿರುವಾಗ, ಅವರಿಗೆ ಅನಿರೀಕ್ಷಿತವಾಗಿ ಸಿಕ್ಕಿದ ಹುದ್ದೆ ಉಪರಾಷ್ಟ್ರಪತಿ ಸ್ಥಾನ. ಇರುವಷ್ಟು ಸಮಯ ಅದಕ್ಕೆ ಅವರು ನ್ಯಾಯ ನೀಡಿದ್ದು ಅಷ್ಟರಲ್ಲೇ ಇದೆ. ಈ ಸ್ಥಾನವನ್ನು ನಿರ್ವಹಿಸಬಲ್ಲ ಹೊಸ ಅಭ್ಯರ್ಥಿ ಯಾರು ಎನ್ನುವುದು ಇದೀಗ ದೇಶದ ಮುಂದಿರುವ ಪ್ರಶ್ನೆ. ನಿತೀಶ್‌ಕುಮಾರ್, ಶಶಿತರೂರ್‌ರಂತಹ ಬಿಜೆಪಿಯೇತರ ನಾಯಕರ ಹೆಸರು ಮುಂಚೂಣಿಯಲ್ಲಿರುವುದು ಕುತೂಹಲಕ್ಕೆ ಕಾರಣವಾಗಿದೆ. ಹಿಂದೆಲ್ಲ ಉಪರಾಷ್ಟ್ರಪತಿ ಸ್ಥಾನ ರಾಷ್ಟ್ರಪತಿ ಸ್ಥಾನವನ್ನೇರಲು ಇರುವ ಒಂದು ಪ್ರಮುಖ ಮೆಟ್ಟಿಲಾಗಿತ್ತು. ಹಲವು ಉಪರಾಷ್ಟ್ರಪತಿಗಳು ಬಳಿಕ ರಾಷ್ಟ್ರಪತಿಗಳಾಗಿ ಗುರುತಿಸಿಕೊಂಡಿದ್ದರು. ಈ ಹಿಂದಿನ ಅನುಭವ ರಾಷ್ಟ್ರಪತಿ ಸ್ಥಾನವನ್ನು ನಿಭಾಯಿಸಲು ಅವರಿಗೆ ಶಕ್ತಿಯನ್ನು ನೀಡುತ್ತಿತ್ತು. ಹಾಮಿದ್ ಅನ್ಸಾರಿಯಂತಹ ಹಿರಿಯ ವಿದ್ವಾಂಸರು ಉಪ ರಾಷ್ಟ್ರಪತಿ ಸ್ಥಾನದ ಘನತೆಯನ್ನು ಹೆಚ್ಚಿಸಿದ್ದರು. ಕಳೆದುಕೊಂಡ ಆ ಸ್ಥಾನದ ಘನತೆಯನ್ನು ಮತ್ತೆ ತುಂಬ ಬಲ್ಲ ನಾಯಕರೊಬ್ಬರನ್ನು ಸರಕಾರ ಆಯ್ಕೆ ಮಾಡಲಿ ಎನ್ನುವುದೇ ಸದ್ಯಕ್ಕೆ ದೇಶದ ಹಂಬಲವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News