ಯಾವುದೇ ಉಗ್ರವಾದದ ವಿರುದ್ಧ ಮೃದು ನಿಲುವು ಸಲ್ಲ
ಸಾಂದರ್ಭಿಕ ಚಿತ್ರ | PC : PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಇತ್ತೀಚೆಗೆ ಕರ್ನಾಟಕದಲ್ಲಿ ಸುಮಾರು ಆರು ನಕ್ಸಲೀಯರು ಶಸ್ತ್ರಾಸ್ತ್ರ ಕೆಳಗಿಟ್ಟು, ಮುಖ್ಯವಾಹಿನಿಗೆ ಕಾಲಿಟ್ಟರು. ಇದೇ ಹೊತ್ತಿಗೆ ಛತ್ತೀಸ್ ಗಡದಲ್ಲಿ 31 ನಕ್ಸಲೀಯರು ಭದ್ರತಾ ಪಡೆಗಳ ಜೊತೆಗಿನ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ. ಛತ್ತೀಸ್ ಗಡದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಎಂಟು ಮಾವೋವಾದಿಗಳು ಮೃತಪಟ್ಟ ಒಂದು ವಾರದ ಬಳಿಕ ಈ ಕಾರ್ಯಾಚರಣೆ ನಡೆದಿದೆ. ಇದರ ಬೆನ್ನಿಗೇ ಗೃಹ ಸಚಿವ ಅಮಿತ್ ಶಾ ಅವರು ‘‘2026ರ ವೇಳೆಗೆ ನಕ್ಸಲ್ ಚಳವಳಿ ಅಂತ್ಯವಾಗಲಿದೆ. ನಕ್ಸಲ್ ಪಿಡುಗಿನಿಂದಾಗಿ ದೇಶದ ಯಾವುದೇ ಪ್ರಜೆಯ ಪ್ರಾಣ ಹಾನಿಯಾಗದಂತೆ ನೋಡಿಕೊಳ್ಳಲಾಗುವುದು’’ ಎಂದು ದೇಶದ ಜನತೆಗೆ ಭರವಸೆಯನ್ನು ನೀಡಿದ್ದಾರೆ. ‘‘ಭಾರತವನ್ನು ಮಾವೋವಾದಿಗಳಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಯು ಛತ್ತೀಸ್‌ಗಡದ ಬಿಜಾಪುರದಲ್ಲಿ ಬಹುದೊಡ್ಡ ಯಶಸ್ಸನ್ನು ಕಂಡಿದೆ’’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. 2010ಕ್ಕೆ ಹೋಲಿಸಿದರೆ 2024ರ ವೇಳೆ ಛತ್ತೀಸ್‌ಗಡದಲ್ಲಿ ನಕ್ಸಲ್ ಹಿಂಸೆ ಘಟನೆಗಳು ಶೇ. 47ಕ್ಕೆ ಇಳಿಕೆಯಾಗಿದೆ. ಇದೇ ವೇಳೆ ನಕ್ಸಲ್ ಹಿಂಸಾಚಾರದಿಂದ ನಾಗರಿಕರು ಮತ್ತು ಭದ್ರತಾ ಪಡೆ ಸಿಬ್ಬಂದಿ ಸಾವನ್ನಪ್ಪಿದ ಪ್ರಮಾಣ ಶೇ. 64ಕ್ಕೆ ಇಳಿಕೆಯಾಗಿದೆ ಎಂದು ಸರಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್, 2010ರಲ್ಲಿ 499 ನಕ್ಸಲ್ ಹಿಂಸಾಚಾರದ ಪ್ರಕರಣಗಳು ವರದಿಯಾಗಿದ್ದರೆ, 2024ರಲ್ಲಿ 267 ಪ್ರಕರಣಗಳು ವರದಿಯಾಗಿವೆ. 2010ರಲ್ಲಿ 343 ಮಂದಿ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರು ಮೃತಪಟ್ಟಿದ್ದರೆ 2024ರಲ್ಲಿ 122ಮಂದಿ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಹೆಚ್ಚುತ್ತಿರುವ ನಕ್ಸಲರ ಹತ್ಯೆ ದೇಶದಲ್ಲಿ ಉಗ್ರವಾದ ಇಳಿಮುಖವಾಗುತ್ತಿರುವುದರ ಸಂಕೇತ ಎಂದು ಸರಕಾರ ಹೇಳಿಕೊಳ್ಳುತ್ತಿದೆ.
ನಕ್ಸಲ್ ಹೆಸರಿನಲ್ಲಿ ಹಿಂಸಾಚಾರ ಇಳಿಕೆಯಾಗುತ್ತಿರುವುದು ದೇಶದ ಪಾಲಿಗೆ ಒಳ್ಳೆಯ ವಿಷಯವೇ ಆಗಿದೆ. ಆದರೆ, ದೇಶದಲ್ಲಿ ನಕ್ಸಲ್ ಉಗ್ರವಾದ ಯಾಕೆ ಹುಟ್ಟಿದೆ ಎನ್ನುವ ಪ್ರಶ್ನೆಯನ್ನು ಮುಚ್ಚಿಟ್ಟು, ನಕ್ಸಲೀಯರನ್ನು ಭದ್ರತಾ ಪಡೆಗಳ ಮೂಲಕ ಕೊಂದು ಹಾಕುವುದರಿಂದ ಸಮಸ್ಯೆಯನ್ನು ಇಲ್ಲವಾಗಿಸಲು ಸಾಧ್ಯವೆ? ದಕ್ಷಿಣ ಭಾರತದ ಆಂಧ್ರ, ತೆಲಂಗಾಣದಲ್ಲಿ ಭೂಮಾಲಕರ ದೌರ್ಜನ್ಯಗಳಿಗೆ ಪ್ರತಿಕ್ರಿಯೆಯಾಗಿ ನಕ್ಸಲ್ ವಾದ ಹುಟ್ಟಿಕೊಂಡಿತು. ಈ ಪ್ರತಿಕ್ರಿಯೆಯನ್ನು ದಮನಿಸುವಂತೆಯೇ ಭೂಮಾಲಕರ ದೌರ್ಜನ್ಯಗಳಿಗೆ ಕಡಿವಾಣ ಹಾಕುವುದು ಕೂಡ ನಕ್ಸಲ್ ಉಗ್ರವಾದವನ್ನು ತಡೆಯುವ ಇನ್ನೊಂದು ಮಾರ್ಗವಾಗಿದೆ. ಛತ್ತೀಸ್‌ಗಡ ಸೇರಿದಂತೆ ಈಶಾನ್ಯ ಭಾರತದಲ್ಲಿ ಅರಣ್ಯ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಸರಕಾರದ ಪ್ರಕ್ರಿಯೆಗಳು ಹಿಂಸೆಯ ರೂಪ ಪಡೆದಾಗ ಪ್ರತಿಹಿಂಸೆ ಹುಟ್ಟಿಕೊಂಡಿತು. ಗಣಿಗಾರಿಕೆ ನಡೆಸುವ ಉದ್ದೇಶದಿಂದ ಬೃಹತ್ ಅರಣ್ಯ ಪ್ರದೇಶವನ್ನು ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸುವ ಸಂದರ್ಭದಲ್ಲಿ ತಲೆ ತಲಾಂತರದಿಂದ ಅರಣ್ಯಭಾಗದಲ್ಲಿ ಬದುಕು ಕಟ್ಟಿಕೊಡಿಂದ್ದ ಆದಿವಾಸಿಗಳು ಶಸ್ತ್ರಾಸ್ತ್ರ ಹಿಡಿಯುವುದು ಅನಿವಾರ್ಯವಾಯಿತು. ನಕ್ಸಲ್ ಚಳವಳಿಯಲ್ಲಿ ಧುಮುಕಿದ ಹೆಚ್ಚಿನ ಯುವಕರು ಹಿಂದುಳಿದ, ದಲಿತ ವರ್ಗಕ್ಕೆ ಸೇರಿದವರಾಗಿದ್ದಾರೆ. ಸೇನೆಯ ಮೂಲಕ ಸರಕಾರ ಕೊಂದು ಹಾಕುತ್ತಾ ಬಂದದ್ದು ನಮ್ಮದೇ ಬಡ ವರ್ಗಕ್ಕೆ ಸೇರಿದ ಯುವ ಸಮೂಹವನ್ನು. ಆದುದರಿಂದ, ನಕ್ಸಲ್ ಎನ್‌ಕೌಂಟರ್ ಹೆಸರಿನಲ್ಲಿ ತಾನು ಕೊಂದು ಹಾಕಿದ ನಕ್ಸಲೀಯರ ಬಗ್ಗೆ ಸರಕಾರ ಹೆಮ್ಮೆ ಪಡುವಂತಹದ್ದೇನೂ ಇಲ್ಲ. ನಕ್ಸಲ್ ಉಗ್ರವಾದಿ ಚಳವಳಿಗೆ ಸೇರುವಂತಹ ಅನಿವಾರ್ಯತೆಯನ್ನು ಅವರಿಗೆ ಸೃಷ್ಟಿಸಿದ್ದೇ ಸರಕಾರ. ಅಸಮಾನತೆ, ಅನ್ಯಾಯ, ಭದ್ರತಾ ಪಡೆಗಳ ದಮನಗಳನ್ನು ಪ್ರತಿರೋಧಿಸಿ ಅನಿವಾರ್ಯವಾಗಿ ಅವರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡರು. ಆದುದರಿಂದ ನಕ್ಸಲ್ ಹೆಸರಿನಲ್ಲಿ ನಡೆದ ಹಿಂಸಾಚಾರದಲ್ಲಿ ಸರಕಾರದ ಪಾಲೂ ಇದೆ.
ದೇಶದಲ್ಲಿ ನಕ್ಸಲ್ ಚಳವಳಿಯನ್ನು ದಮನಿಸಲಾಗಿದೆ ಎನ್ನುವುದರ ಅರ್ಥ, ಆದಿವಾಸಿಗಳ ಮೇಲೆ, ಹಿಂದುಳಿದ ವರ್ಗಗಳ ಜನರ ಮೇಲೆ ನಡೆಯುವ ದಬ್ಬಾಳಿಕೆ ಇಳಿಕೆಯಾಗಿದೆ ಎಂದಲ್ಲ. ಅದರ ವಿರುದ್ಧದ ಹಿಂಸಾ ರೂಪದ ಪ್ರತಿರೋಧಗಳನ್ನು ಮಟ್ಟ ಹಾಕಲಾಗಿದೆ ಎಂದಷ್ಟೇ ಸರಕಾರ ಹೇಳುತ್ತಿದೆ. ಇದೇ ಸಂದರ್ಭದಲ್ಲಿ ದೇಶದಲ್ಲಿ ಆದಿವಾಸಿಗಳು, ಬುಡಕಟ್ಟು ಸಮುದಾಯಗಳು, ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಿವೆ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಕಾಡಿನೊಳಗಿರುವ ಉಗ್ರವಾದಿಗಳ ಹಿಂಸಾಚಾರದಲ್ಲಿ ಇಳಿಕೆಯಾಗಿದೆಯಾದರೂ ನಾಡಿನಲ್ಲಿ ಹಿಂದುತ್ವದ ಹೆಸರಿನಲ್ಲಿ, ಗೋವಿನ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ಜಾತಿ ಹೆಸರಿನಲ್ಲಿ ಹಿಂಸಾಚಾರ ನಡೆಸುವವರ ಸಂಖ್ಯೆ ಹೆಚ್ಚಳವಾಗಿದೆ ಎನ್ನುವುದು ಗೃಹಸಚಿವರ ಗಮನಕ್ಕೆ ಬಂದಿಲ್ಲದೇ ಇರುವುದು ವಿಪರ್ಯಾಸವಾಗಿದೆ. ಶಸ್ತ್ರಾಸ್ತ್ರ ಕೈಗೆತ್ತಿಕೊಂಡ ನಕ್ಸಲೀಯ ಉಗ್ರವಾದಿಗಳನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು. ಆದರೆ ನಾಡಿನೊಳಗೆ ನಾಗರಿಕರ ವೇಷದಲ್ಲಿದ್ದುಕೊಂಡೇ ಹಿಂಸಾಚಾರ ನಡೆಸುತ್ತಿರುವ ಹಲಬಗೆಯ ಉಗ್ರವಾದಿಗಳನ್ನು ರಾಜಕೀಯ ನಾಯಕರೇ ಪೋಷಿಸುತ್ತಿದ್ದಾರೆ. ನಕ್ಸಲರು ಬಡವರ, ಆದಿವಾಸಿಗಳ, ದಲಿತರ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದರೆ, ಈ ನಾಡಿನೊಳಗಿರುವ ನಾಗರಿಕ ವೇಷದ ಉಗ್ರವಾದಿಗಳು ಗೋವುಗಳು, ಸಂಸ್ಕೃತಿ ಎಂದು ಹೇಳುತ್ತಾ ಹಿಂಸಾಚಾರ ನಡೆಸುತ್ತಿದ್ದಾರೆ. ದೇಶದಲ್ಲಿ ಗುಂಪುಥಳಿತ ಹಿಂಸಾಚಾರಗಳು ಹೆಚ್ಚುತ್ತಿವೆ. ಈ ಬಗ್ಗೆ ಸುಪ್ರೀಂಕೋರ್ಟ್ ಕೂಡ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದೆ. ನಾಡಿನೊಳಗೇ ಉಗ್ರವಾದಿಗಳಿಗೆ ಹಾಲೆರೆಯುತ್ತಾ ಕಾಡಿನೊಳಗಿರುವ ಉಗ್ರರನ್ನು ದಮನಿಸುತ್ತಿದ್ದೇವೆೆ ಎನ್ನುವುದು ಸರಕಾರ ಉಗ್ರವಾದದ ಕುರಿತಂತೆ ತಳೆದಿರುವ ದ್ವಂದ್ವವೇ ಸರಿ..
ಜನವರಿ 30ರಂದು ಗಾಂಧಿಯನ್ನು ಕೊಂದು ಹಾಕಿದ ದಿನ. ದೇಶ ಈ ದಿನವನ್ನು ‘ಹುತಾತ್ಮರ ದಿನ’ವಾಗಿ ಆಚರಿಸುತ್ತಿದೆ. ಆದರೆ ಕೆಲವು ಗುಂಪುಗಳು ಆ ದಿನವನ್ನು ಇಂದಿಗೂ ಬಹಿರಂಗವಾಗಿಯೇ ಸಂಭ್ರಮಿಸುತ್ತಿವೆ. ಗಾಂಧಿಯ ಕೊಲೆಯನ್ನು ಬಹಿರಂಗವಾಗಿಯೇ ಸಮರ್ಥಿಸುತ್ತಿವೆ. ಗಾಂಧಿಯ ಕೊಲೆಯನ್ನು ಬಹಿರಂಗವಾಗಿ ಸಮರ್ಥಿಸುವ ಇವರೆಲ್ಲರೂ ದೇಶದ್ರೋಹಿಗಳಷ್ಟೇ ಅಲ್ಲ, ಉಗ್ರವಾದಿಗಳು ಕೂಡ. ಸರಕಾರ ಈವರೆಗೆ ಇವರ ಮೇಲೆ ಯಾವುದೇ ಮೊಕದ್ದಮೆಗಳನ್ನು ದಾಖಲಿಸಿಲ್ಲ. ಒಂದೆಡೆ ಗೋಡ್ಸೆವಾದಿಗಳಿಗೆ ಸರಕಾರ ಕುಮ್ಮಕ್ಕು ನೀಡುತ್ತಿದೆ. ಸನಾತನ ಸಂಸ್ಥೆಯಂತಹ ಹಿಂಸೆಯನ್ನು ಪ್ರೋತ್ಸಾಹಿಸುವ ಸಂಘಟನೆಗಳನ್ನು ಮೌನವಾಗಿ ಸಹಿಸುತ್ತದೆ. ಗೌರಿ ಲಂಕೇಶ್, ಪನ್ಸಾರೆಯಂತಹ ಚಿಂತಕರನ್ನು ಈ ನಾಡಿನೊಳಗಿರುವ ಉಗ್ರವಾದಿಗಳೇ ಕೊಂದು ಹಾಕಿದರು. ಇವರು ಸಂವಿಧಾನಕ್ಕೆ ಪರ್ಯಾಯವಾಗಿ ಹೊಸ ಸಂವಿಧಾನವನ್ನು ಬರೆಯುವ ಸಾಹಸವನ್ನು ಮಾಡುತ್ತಿದ್ದಾರೆ. ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ಮಾತನಾಡುತ್ತಿದ್ದಾರೆ. ನಿಜಕ್ಕೂ ಇಂದು ಇವರಿಂದ ದೇಶದ ಆಂತರಿಕ ಭದ್ರತೆ ಅಪಾಯದಲ್ಲಿದೆ. ಆದರೆ ಸರಕಾರದ ಗಮನಕ್ಕೆ ಇದು ಬಂದಿಲ್ಲ ಎನ್ನುವುದು ವಿಪರ್ಯಾಸವಾಗಿದೆ. ದೇಶದಲ್ಲಿ ಗೋಡ್ಸೆವಾದಿಗಳು ಹೆಚ್ಚಾಗುತ್ತಿದ್ದಂತೆಯೇ, ಅತ್ತ ಪಂಜಾಬ್‌ನಲ್ಲೂ ಪ್ರತ್ಯೇಕತಾವಾದ ಚಿಗುರುತ್ತಿದೆ. ಕಾಶ್ಮೀರದಲ್ಲಿ ಉಗ್ರವಾದವನ್ನು ದಮನಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಸೇನಾ ಪಡೆಗಳು ನಾಗರಿಕರ ಮೇಲೆ ನಡೆಸುತ್ತಿರುವ ಹಿಂಸೆ ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗುತ್ತಿವೆ. ಕಾಡಿಗೆ ಸೀಮಿತವಾಗಿದ್ದ ಹಿಂಸಾವಾದ, ಉಗ್ರವಾದ ಇಂದು ನಾಡಿನಾದ್ಯಂತ ಬೇರೆ ಬೇರೆ ರೂಪಗಳಲ್ಲಿ ವೇಗವಾಗಿ ಹರಡುತ್ತಿದೆ. ಸರಕಾರ ಇದರ ಬಗ್ಗೆಯೂ ಹೇಳಿಕೆಯನ್ನು ನೀಡಬೇಕಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಜಾತಿ ಹಿಂಸೆ, ಹಿಂದುತ್ವವಾದಿ ಹಿಂಸಾಚಾರಗಳು ಯಾವುದೇ ಉಗ್ರವಾದಕ್ಕಿಂತ ಕಡಿಮೆಯಿಲ್ಲ ಎನ್ನುವುದನ್ನು ಒಪ್ಪಿಕೊಂಡಾಗಷ್ಟೇ ಸರಕಾರದ ನಕ್ಸಲ್ ಉಗ್ರವಾದಿಗಳ ವಿರುದ್ಧ ದ ಕಾರ್ಯಾಚರಣೆಗೆ ಅರ್ಥ ಬರುತ್ತದೆ. ಅಹಿಂಸೆಯ ತಳಹದಿಯಲ್ಲಿ ಪ್ರಜಾಸತ್ತಾತ್ಮಕ ಭಾರತವನ್ನು ಕಟ್ಟಲು ಆಗ ಮಾತ್ರ ಸಾಧ್ಯ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28