ಇದು ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿ ಕ್ರಮ
PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ವಿಶ್ವವಿದ್ಯಾನಿಲಯಗಳ ಧನ ಸಹಾಯ ಆಯೋಗ (ಯುಜಿಸಿ) ಇತ್ತೀಚೆಗೆ ಸಾರ್ವಜನಿಕರಿಂದ ಸಲಹೆ, ಸೂಚನೆ ಪಡೆಯಲು ಬಿಡುಗಡೆ ಮಾಡಿರುವ ಕರಡು ನಿಯಮಾವಳಿಗಳಿಗೆ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿವೆ. ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಹಿಮಾಚಲ ಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳ ಉನ್ನತ ಶಿಕ್ಷಣ ಸಚಿವರು ಈಚೆಗೆ ಬೆಂಗಳೂರಿನಲ್ಲಿ ಸಭೆ ನಡೆಸಿ ಯುಜಿಸಿ ನಿಯಮಾವಳಿಗಳನ್ನು ತಾವು ಏಕೆ ವಿರೋಧಿಸುತ್ತೇವೆ ಎಂಬ ಬಗ್ಗೆ 15 ಅಂಶಗಳ ಗೊತ್ತುವಳಿಗಳನ್ನು ಅಂಗೀಕರಿಸಿದ್ದಾರೆ. ಈ ಸಭೆಯಲ್ಲಿ ಭಾಗವಹಿಸಲಾಗದ ಇತರ ಕೆಲವು ರಾಜ್ಯ ಸರಕಾರಗಳು ಕೂಡ ಯುಜಿಸಿ ನಿಯಮಾವಳಿಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿವೆ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯವರ ನೇತೃತ್ವದ ಸರಕಾರ ನೇಮಕ ಮಾಡಿದ ಸಮಿತಿ ಕೂಡ ಈ ನಿಯಮಾವಳಿಗಳಿಗೆ ವಿರೋಧ ವ್ಯಕ್ತಪಡಿಸಿದೆ. ‘ಇಂಡಿಯಾ’ ಒಕ್ಕೂಟದ ರಾಜಕೀಯ ಪಕ್ಷಗಳು ಮಾತ್ರವಲ್ಲದೆ ಬಿಜು ಪಟ್ನಾಯಕ್ ನೇತೃತ್ವದ ಜನತಾ ದಳವೂ ಈ ನಿಯಮಾವಳಿಗಳ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಹೀಗಾಗಿ ಇದಕ್ಕೆ ವ್ಯಾಪಕ ವಿರೋಧ ಬರುತ್ತಿದೆ.
ವಾಸ್ತವವಾಗಿ ರಾಜ್ಯಗಳು ರೂಪಿಸಿದ ಕಾಯ್ದೆಗಳ ಅಡಿಯಲ್ಲಿ ವಿಶ್ವವಿದ್ಯಾನಿಲಯಗಳು ಅಸ್ತಿತ್ವದಲ್ಲಿ ಬಂದಿವೆ. ರಾಜ್ಯ ಸರಕಾರಗಳು ನೀಡುವ ಅನುದಾನದಿಂದ ಇವು ಕಾರ್ಯ ನಿರ್ವಹಿಸುತ್ತವೆ. ಸಂವಿಧಾನದ ಪ್ರಕಾರ ಶಿಕ್ಷಣ ಕ್ಷೇತ್ರ ರಾಜ್ಯ ಹಾಗೂ ಕೇಂದ್ರಗಳ ಸಮವರ್ತಿ ಪಟ್ಟಿಯಲ್ಲಿವೆ. ಹೀಗಾಗಿ ವಿಶ್ವವಿದ್ಯಾನಿಲಯಗಳನ್ನು ನಿಯಂತ್ರಿಸುವ ಅಧಿಕಾರ ವಿಶ್ವವಿದ್ಯಾನಿಲಯಗಳ ಧನ ಸಹಾಯ ಆಯೋಗ(ಯುಜಿಸಿ)ಕ್ಕೆ ಇಲ್ಲ. ಆದ್ದರಿಂದ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯ ಸರಕಾರಗಳು ಸಹಜವಾಗಿ ವಿರೋಧ ವ್ಯಕ್ತಪಡಿಸಿವೆ. ಕಾರಣ ಇತ್ತೀಚೆಗೆ ಕುಲಪತಿಗಳನ್ನು ನೇಮಕ ಮಾಡುವ ಪ್ರಶ್ನೆ ವಿವಾದಾತ್ಮಕವಾಗಿದೆ. ವಿಶ್ವವಿದ್ಯಾನಿಲಯಗಳ ಕುಲಾಧಿಪತಿಗಳಾಗಿ ಕೆಲವು ರಾಜ್ಯಪಾಲರು ಉಂಟು ಮಾಡಿರುವ ವಿವಾದಗಳು ಸಂಘರ್ಷಕ್ಕೆ ಆಸ್ಪದ ಮಾಡಿಕೊಟ್ಟಿವೆ.
ವಿಶ್ವವಿದ್ಯಾನಿಲಯಗಳ ಧನ ಸಹಾಯ ಆಯೋಗದ ಹೊಸ ನಿಯಮಾವಳಿಗಳ ಪ್ರಕಾರ ಈವರೆಗೆ ರಾಜ್ಯ ಸರಕಾರಗಳ ಬಳಿ ಇದ್ದ ಕುಲಪತಿಗಳ ನೇಮಕದ ಅಧಿಕಾರವನ್ನು ಕಿತ್ತುಕೊಂಡು ರಾಜ್ಯಪಾಲರಿಗೆ ನೀಡಲಾಗಿದೆ. ಇದು ಪರೋಕ್ಷವಾಗಿ ಕೇಂದ್ರ ಸರಕಾರ ರಾಜ್ಯಪಾಲರ ಮೂಲಕ ವಿಶ್ವವಿದ್ಯಾನಿಲಯಗಳ ನೇಮಕ ಪ್ರಕ್ರಿಯೆಯಲ್ಲಿ ಭಾರೀ ಬದಲಾವಣೆ ಮಾಡಲು ಅವಕಾಶ ಮಾಡಿಕೊಡುತ್ತದೆ. ಈ ನಿಯಮಾವಳಿಗಳು ಜಾರಿಗೆ ಬಂದರೆ ವಿಶ್ವವಿದ್ಯಾನಿಲಯಗಳ ಆಡಳಿತ ಕೇಂದ್ರದ ಕೈವಶವಾಗುತ್ತದೆ.ಆದರೆ ಸದರಿ ವಿಶ್ವವಿದ್ಯಾನಿಲಯಗಳಿಗೆ ರಾಜ್ಯ ಸರಕಾರದ ಖಜಾನೆಯಿಂದ ಅನುದಾನ ಮಂಜೂರು ಮಾಡಲಾಗುತ್ತದೆ. ಈ ವಿಶ್ವವಿದ್ಯಾನಿಲಯಗಳಿಗೆ ಮೂಲ ಭೂತ ಸೌಕರ್ಯಗಳನ್ನು ಒದಗಿಸುವುದು ರಾಜ್ಯ ಸರಕಾರಗಳ ಹೊಣೆಗಾರಿಕೆಯಾಗಿದೆ. ಹೀಗಿರುವಾಗ ಇಂತಹ ವಿಶ್ವವಿದ್ಯಾನಿಲಯಗಳ ಆಡಳಿತವನ್ನು ಕೇಂದ್ರ ಸರಕಾರಕ್ಕೆ ವಹಿಸುವ ನಿಯಮಾವಳಿಗಳನ್ನು ರೂಪಿಸಿರುವುದು ಸರಿಯಲ್ಲ.
ಈ ವರೆಗೆ ಇದ್ದ ನಿಯಮಾವಳಿಗಳ ಪ್ರಕಾರ ಯಾವುದೇ ವಿಶ್ವವಿದ್ಯಾನಿಲಯದ ಕುಲಪತಿಯಾಗಬೇಕೆಂದರೆ ಅಂಥವರು ಕಡ್ಡಾಯವಾಗಿ ಮೊದಲು ಬೋಧಕರಾಗಿರಬೇಕು. ಆದರೆ ಯುಜಿಸಿ ಈಗ ಮಾಡಿರುವ ಬದಲಾವಣೆ ಪ್ರಕಾರ ವಿಶ್ವವಿದ್ಯಾನಿಲಯಗಳ ಬೋಧಕ ಸಿಬ್ಬಂದಿಯ ಜೊತೆಗೆ ಶೈಕ್ಷಣಿಕ ಕ್ಷೇತ್ರದ ಹೊರಗೆ ಇರುವ ಹಲವಾರು ಕ್ಷೇತ್ರಗಳ ಪರಿಣಿತರಿಗೆ ಕುಲಪತಿಯಾಗುವ ಅವಕಾಶ ಒದಗಿಸಲಾಗಿದೆ. ಇದರಿಂದ ಕೇಂದ್ರದ ಆಡಳಿತ ಪಕ್ಷದ ನಿಲುವು ಮತ್ತು ಸಿದ್ಧಾಂತಗಳಿಗೆ ಬದ್ಧರಾಗಿರುವವರನ್ನು ‘ಪರಿಣಿತರ’ ಹೆಸರಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ತುಂಬುವ ಮಸಲತ್ತನ್ನು ನಡೆಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿಯೇ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದ ಹೊಸ ನಿಯಮಾವಳಿಗಳ ಬಗ್ಗೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ವಿಶ್ವವಿದ್ಯಾನಿಲಯಗಳ ಕುಲಪತಿಗಳಾಗಲು ಯಾರು ಅರ್ಹರು ಎಂದು ನಿಯಮಾವಳಿಯಲ್ಲಿ ತಿಳಿಸಲಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ ಹತ್ತು ವರ್ಷಗಳ ಬೋಧನಾ ಅನುಭವವಿರುವವರು ಅಥವಾ ಸಂಶೋಧನೆ, ಶೈಕ್ಷಣಿಕ ಆಡಳಿತ ಸಂಸ್ಥೆಗಳಲ್ಲಿ ಅಥವಾ ಕೈಗಾರಿಕೆ, ಸಾರ್ವಜನಿಕ ಆಡಳಿತ ಹಾಗೂ ಸರಕಾರಿ ಒಡೆತನದ ಸಂಸ್ಥೆಗಳಲ್ಲಿ ಮತ್ತು ಗಮನಾರ್ಹ ಸಾಧನೆಯನ್ನು ಮಾಡಿದ ಹಿರಿಯ ಶ್ರೇಣಿಯ ಸಿಬ್ಬಂದಿ ಕುಲಪತಿಯಾಗಲು ಅರ್ಹರು ಎಂದು ಕರಡು ನಿಯಮಾವಳಿಗಳಲ್ಲಿ ಹೇಳಲಾಗಿದೆ. ಇದಲ್ಲದೆ ಕುಲಪತಿಗಳ ಶೋಧನಾ ಸಮಿತಿಯು ಪ್ರತಿಭಾ ಶೋಧ ಹಾಗೂ ನಾಮ ನಿರ್ದೇಶನದ ಮೂಲಕವೂ ಕುಲಪತಿಗಳನ್ನು ಆಯ್ಕೆ ಮಾಡಬಹುದಾಗಿದೆ.
ಈವರೆಗೆ ಕುಲಪತಿಯ ಆಯ್ಕೆಗಾಗಿ ರಾಜ್ಯ ಸರಕಾರಗಳು ಮೂವರಿಂದ ಐವರು ತಜ್ಞರನ್ನೊಳಗೊಂಡ ಶೋಧನಾ ಸಮಿತಿಯನ್ನು ರಚಿಸುತ್ತಿತ್ತು. ಆದರೆ ಹೊಸ ಕರಡು ನಿಯಮಾವಳಿಗಳ ಪ್ರಕಾರ ಮೂವರು ತಜ್ಞ ಶೋಧನಾ ಸಮಿತಿಯನ್ನು ರಚಿಸುವ ಅಧಿಕಾರವನ್ನು ರಾಜ್ಯ ಸರಕಾರಗಳಿಂದ ಕಿತ್ತು ಕೊಂಡು ಕುಲಾಧಿಪತಿಗೆ ಅಂದರೆ ರಾಜ್ಯಪಾಲರಿಗೆ ನೀಡಲಾಗಿದೆ.
ಯುಜಿಸಿಯ ಕರಡು ನಿಯಮಾವಳಿಗಳನ್ನು ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ತೀವ್ರವಾಗಿ ವಿರೋಧಿಸಿ ಇದು ಉಭಯ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ ಎಂದು ಹೇಳಿವೆ. ಯುಜಿಸಿಯ ಈ ಕರಡು ನಿಯಮಾವಳಿಗಳು ರಾಜ್ಯಗಳು ಹಾಗೂ ಕೇಂದ್ರದ ನಡುವೆ ಹೊಸ ಸಂಘರ್ಷಕ್ಕೆ ನಾಂದಿ ಹಾಡಿದರೆ ಅಚ್ಚರಿ ಪಡಬೇಕಾಗಿಲ್ಲ. ಯಾವುದಾದರೂ ಉನ್ನತ ಶಿಕ್ಷಣ ಸಂಸ್ಥೆ ಯುಜಿಸಿಯ ನಿಯಮಾವಳಿಗಳನ್ನು ಉಲ್ಲಂಘಿಸಿದರೆ ಅಂಥ ಸಂಸ್ಥೆಗಳ ಮೇಲೆ ಉಗ್ರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅಂಥ ಸಂಸ್ಥೆ ಗಳು ಯುಜಿಸಿ ಯೋಜನೆಗಳಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹಾಗೂ ಪದವಿ ನೀಡುವುದಕ್ಕೆ ನಿರ್ಬಂಧ, ಆನ್ ಲೈನ್ ಶಿಕ್ಷಣಕ್ಕೆ ನಿಷೇಧ ಹೀಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.ಇದು ನಿಜಕ್ಕೂ ಅತ್ಯಂತ ದಮನಕಾರಿ ಕ್ರಮವಾಗಿದೆ.
ವಿಶ್ವವಿದ್ಯಾನಿಲಯಗಳ ಧನ ಸಹಾಯ ಆಯೋಗದ ಕರಡು ನಿಯಮಾವಳಿಗಳು ಸಂವಿಧಾನ ವ್ಯಾಖ್ಯಾನಿಸಿರುವ ಒಕ್ಕೂಟ ವ್ಯವಸ್ಥೆಯ ಮೂಲ ಸ್ವರೂಪಕ್ಕೆ ಧಕ್ಕೆ ತರುತ್ತವೆ ಎಂಬುದು ವಿರೋಧ ಪಕ್ಷಗಳು ಮಾತ್ರವಲ್ಲ ಶೈಕ್ಷಣಿಕ ಕ್ಷೇತ್ರದ ಪರಿಣಿತರ ಅಭಿಪ್ರಾಯವಾಗಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯಗಳಿಗೂ ಸಾಂವಿಧಾನಾತ್ಮಕ ಹಕ್ಕುಗಳಿವೆ. ರಾಜ್ಯಗಳಿರುವ ಸಂವಿಧಾನಿಕ ಹಕ್ಕುಗಳನ್ನು ದಮನ ಮಾಡುವುದು ಸರಿಯಲ್ಲ. ರಾಜ್ಯಗಳ ಅಧಿಕಾರವನ್ನು ಯಾವುದೇ ಕಾರಣಕ್ಕೂ ಮೊಟಕು ಮಾಡಬಾರದು. ಯುಜಿಸಿ ಯಾವುದೇ ನಿಯಮಾವಳಿಗಳನ್ನು ಏಕಪಕ್ಷೀಯವಾಗಿ ಹೇರುವುದು ನಿಜಕ್ಕೂ ಆಕ್ಷೇಪಾರ್ಹವಾಗಿದೆ. ರಾಜ್ಯ ಸರಕಾರಗಳು ಮಾತ್ರವಲ್ಲ ಜನರು ಕೂಡ ಇದರ ಬಗ್ಗೆ ಪ್ರತಿರೋಧ ವ್ಯಕ್ತಪಡಿಸಬೇಕಾಗಿದೆ. ಇದು ಅನಿವಾರ್ಯ ಕೂಡ.