ಹಸೀನಾ: ಭಾರತದ ಮುಜುಗರ
PC: x.com/CNN
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಶೇಕ್ ಹಸೀನಾ ಅವರಿಗೆ ಬಾಂಗ್ಲಾ ಅಂತರ್‌ರಾಷ್ಟ್ರೀಯ ಅಪರಾಧಗಳ ನ್ಯಾಯ ಮಂಡಳಿಯು ಸೋಮವಾರ ಮರಣದಂಡನೆ ವಿಧಿಸಿದೆ. ಭಾರತದ ಪಾಲಿಗೆ ಶೇಕ್ ಹಸೀನಾ ಇದೀಗ ನುಂಗಲೂ, ಉಗುಳಲೂ ಆಗದ ಅಂತರ್‌ರಾಷ್ಟ್ರೀಯ ಬಿಸಿ ತುಪ್ಪವಾಗಿದ್ದಾರೆ. ತೀರ್ಪು ಪ್ರಕಟಗೊಂಡಿರುವ ಬೆನ್ನಿಗೇ ಹಸೀನಾ ಮತ್ತು ಮಾಜಿ ಗೃಹ ಸಚಿವ ಅಸದುಝಮಾನ್ ಖಾನ್ ಕಮಲ್‌ರನ್ನು ಭಾರತದಿಂದ ಹಸ್ತಾಂತರಗೊಳಿಸುವಲ್ಲಿ ಇಂಟರ್‌ಪೋಲ್ ನೆರವು ಪಡೆಯಲು ಬಾಂಗ್ಲಾ ಸರಕಾರ ಮುಂದಾಗಿದೆ. ಬಾಂಗ್ಲಾ ದೇಶದಲ್ಲಿ ಕಳೆದ ವರ್ಷ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಹತ್ತಿಕ್ಕುವ ಮೂಲಕ ಅಂದಿನ ಪ್ರಧಾನಿ ಹಸೀನಾ ಮಾನವತೆಯ ವಿರುದ್ಧ ಅಪರಾಧ ಎಸಗಿದ್ದಾರೆ ಎಂದು ನ್ಯಾಯಾಲಯ ಆರೋಪಿಸಿದೆ. ಹಸೀನಾ ವಿರುದ್ಧ ನೀಡಿದ ತೀರ್ಪಿಗೆ ವಿಶ್ವದ ಹಲವು ದೇಶಗಳು, ಹಲವು ಸಂಘಟನೆಗಳು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿವೆ. ವಿಶ್ವಸಂಸ್ಥೆಯು ಅಡ್ಡಗೋಡೆಯ ಮೇಲೆ ದೀಪವಿಟ್ಟಿದೆ. ಸಂತ್ರಸ್ತರಿಗೆ ನ್ಯಾಯವನ್ನು ನೀಡುವ ತೀರ್ಪು ಇದಾಗಿದ್ದರೂ, ವಿಚಾರಣೆ ನ್ಯಾಯೋಚಿತವಾಗಿಲ್ಲ ಎಂದು ವಿಶ್ವಸಂಸ್ಥೆಯು ಹೇಳುತ್ತಿದೆ. ಹಿಂಸಾತ್ಮಕ ದಮನದ ಸಂತ್ರಸ್ತರಿಗೆ ಇದು ಪ್ರಮುಖ ಕ್ಷಣವಾಗಿದ್ದರೂ, ಆರೋಪಿಯ ಗೈರು ಹಾಜರಿಯಲ್ಲಿ ನಡೆದಿರುವ ವಿಚಾರಣೆ ವಿಶ್ವಾಸಾರ್ಹತೆಯನ್ನು ಹೊಂದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಇದೇ ಸಂದರ್ಭದಲ್ಲಿ ಅಂತರ್‌ರಾಷ್ಟ್ರೀಯ ಆ್ಯಮ್ನೆಸ್ಟಿ ಈ ತೀರ್ಪನ್ನು ಖಂಡಿಸಿದೆ. ಇಲ್ಲಿ ಹಸೀನಾ ಅವರನ್ನು ನಿರಪರಾಧಿಯೆಂದು ಆ್ಯಮ್ನೆಸ್ಟಿ ಪ್ರತಿಪಾದಿಸಿಲ್ಲ. ಆದರೆ, ವಿಚಾರಣೆಯು ನ್ಯಾಯೋಚಿತವಾಗಿಲ್ಲದ ಕಾರಣದಿಂದಾಗಿ ಈ ಮರಣದಂಡನೆ ಸಂತ್ರಸ್ತರಿಗೆ ನ್ಯಾಯವನ್ನು ನೀಡಲಾರದು ಎಂದು ಅದು ಅಭಿಪ್ರಾಯಪಟ್ಟಿದೆ. ಇದೇ ಸಂದರ್ಭದಲ್ಲಿ ಚೀನಾವು ಪ್ರತಿಕ್ರಿಯಿಸುವುದಕ್ಕೆ ನಿರಾಕರಿಸಿದೆ. ಮಾತ್ರವಲ್ಲ, ಇದು ಬಾಂಗ್ಲಾದ ಆಂತರಿಕ ವಿಷಯ ಎಂದು ಜಾರಿಗೊಂಡಿದೆ. ಪರೋಕ್ಷವಾಗಿ ಅದರ ಹೇಳಿಕೆ ಭಾರತವನ್ನು ಗುರಿಯಾಗಿಸಿಕೊಂಡಿದೆ. ಹಸೀನಾಗೆ ಆಶ್ರಯ ನೀಡಿರುವ ಭಾರತವು ಬಾಂಗ್ಲಾದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಿದೆ ಎನ್ನುವ ಆರೋಪ ಇದರಲ್ಲಿದೆ. ಪಾಶ್ಚಿಮಾತ್ಯ ದೇಶಗಳು ಈ ಪ್ರಕರಣದಲ್ಲಿ ತಮ್ಮ ಮೌನವನ್ನು ಕಾಪಾಡಿಕೊಂಡಿವೆ. ‘ಮೌನ ಸಮ್ಮತಿಯ ಲಕ್ಷಣ’ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.
ಬಾಂಗ್ಲಾದಲ್ಲಿ ವಿದ್ಯಾರ್ಥಿ ಹೋರಾಟ ಹಿಂಸಾಚಾರ ರೂಪ ಪಡೆದು ಹಸೀನಾ ಪಲಾಯನ ಮಾಡುವ ಸನ್ನಿವೇಶ ನಿರ್ಮಾಣವಾದಾಗ ಅಮೆರಿಕ, ಬ್ರಿಟನ್‌ನಂತಹ ದೇಶಗಳು ಹಸೀನಾಗೆ ಆಶ್ರಯ ನೀಡಲು ನಿರಾಕರಿಸಿದ್ದವು. ಅಷ್ಟೇ ಅಲ್ಲ, ಅಲ್ಲಿನ ಬಂಡಾಯವನ್ನು ಪರೋಕ್ಷವಾಗಿ ಬೆಂಬಲಿಸಿದ್ದವು. ಇಂತಹ ಸಂದರ್ಭದಲ್ಲಿ ಭಾರತವು ಹಸೀನಾಗೆ ಆಶ್ರಯ ನೀಡಿರುವುದು ಸಾಕಷ್ಟು ಟೀಕೆಗಳಿಗೆ ಕಾರಣವಾಗಿದ್ದವು. ನೆರೆಯ ದೇಶವಾಗಿರುವ ಬಾಂಗ್ಲಾದ ಜೊತೆಗಿನ ಸಂಬಂಧದ ಮೇಲೆ ಇದು ತೀವ್ರ ಪರಿಣಾಮಗಳನ್ನು ಬೀರುವ ಸಾಧ್ಯತೆಗಳ ಬಗ್ಗೆ ಹಲವರು ತಮ್ಮ ಆತಂಕಗಳನ್ನು ವ್ಯಕ್ತಪಡಿಸಿದ್ದರು. ಮುಂದೆಯೂ ಭಾರತ ಹಸೀನಾ ಕುರಿತಂತೆ ತನ್ನ ನಿಲುವಿಗೆ ಬದ್ಧವಾಗಲಿದೆಯೇ? ಎನ್ನುವುದನ್ನು ಕಾದು ನೋಡಬೇಕು. ಯಾಕೆಂದರೆ, ಅಂತರ್‌ರಾಷ್ಟ್ರೀಯ ವಿದ್ಯಮಾನಗಳಿಗೆ ಸಂಬಂಧಿಸಿ ಒಂದು ಸ್ಪಷ್ಟವಾದ, ದೂರದೃಷ್ಟಿಯುಳ್ಳ ವಿದೇಶಾಂಗ ನೀತಿಯನ್ನು ಭಾರತ ಇತ್ತೀಚಿನ ದಿನಗಳಲ್ಲಿ ಅನುಸರಿಸುತ್ತಿಲ್ಲ. ಅಮೆರಿಕ ಒತ್ತಡ ಹಾಕಿದಾಕ್ಷಣ ಹೇಗೆ ರಶ್ಯದ ಜೊತೆಗಿನ ವ್ಯಾಪಾರ ಸಂಬಂಧದಿಂದ ಭಾರತ ಹಿಂದೆ ಸರಿಯಿತು ಎನ್ನುವುದನ್ನು ನಾವು ಕಂಡಿದ್ದೇವೆ. ಅಮೆರಿಕದಂತಹ ದೇಶಗಳು ಒತ್ತಡ ಹಾಕಿದರೆ ಭಾರತವು ಹಸೀನಾ ಕುರಿತ ನಿಲುವಿನಿಂದ ಹಿಂದೆ ಸರಿಯುವ ಸಾಧ್ಯತೆಗಳೇ ಹೆಚ್ಚು. ತನಗೆ ಮರಣದಂಡನೆ ನೀಡಿದ ಅಂತರ್‌ರಾಷ್ಟ್ರೀಯ ನ್ಯಾಯಾಲಯದ ವಿಶ್ವಾಸಾರ್ಹತೆಯನ್ನು ಹಸೀನಾ ಈಗಾಗಲೇ ಪ್ರಶ್ನಿಸಿದ್ದಾರೆ. ಆದರೆ ಅದೇ ನ್ಯಾಯಾಲಯವನ್ನು ಬಳಸಿಕೊಂಡು ಹಸೀನಾ ಅವರು ಹಲವು ರಾಜಕೀಯ ನಾಯಕರನ್ನು ನೇಣಿಗೇರಿಸಿದ್ದರು ಎನ್ನುವುದು ವಾಸ್ತವವಾಗಿದೆ.
ಈ ಹಿಂದೆ, 1959ರಲ್ಲಿ ಚೀನಾವು ಟಿಬೆಟನ್ನು ಆಕ್ರಮಿಸಿಕೊಂಡಾಗ ಭಾರತಕ್ಕೆ ಒಂದು ಸ್ಪಷ್ಟ ವಿದೇಶಾಂಗ ನೀತಿಯಿತ್ತು. ಪ್ರಧಾನಿ ಜವಾಹರಲಾಲ್ ನೆಹರೂ ಅವರ ನೇತೃತ್ವದ ಭಾರತವು ದಲಾಯಿಲಾಮ ಮತ್ತು ಅವರ ಅನುಯಾಯಿಗಳಿಗೆ ಆಶ್ರಯವನ್ನು ನೀಡಿತು ಮಾತ್ರವಲ್ಲ, ಇದೊಂದು ಮಾನವೀಯ ವಿಷಯ ಎನ್ನುವುದನ್ನು ಜಗತ್ತಿಗೆ ಮನವರಿಕೆ ಮಾಡಲು ಅಂದಿನ ಭಾರತ ಬಹುತೇಕ ಯಶಸ್ವಿಯಾಗಿತ್ತು. ಭಾರತದ ನಿಲುವನ್ನು ವಿಶ್ವ ಬಹುಮತದಿಂದ ಬೆಂಬಲಿಸಿತು. ಇದರಿಂದ ಭಾರತದ ವರ್ಚಸ್ಸು ವಿಶ್ವ ಮಟ್ಟದಲ್ಲಿ ಹೆಚ್ಚಿತು. ಆದರೆ ಚೀನಾ ಮತ್ತು ಭಾರತದ ನಡುವಿನ ಸಂಬಂಧ ತೀವ್ರ ಹದಗೆಟ್ಟಿತು. ತನ್ನ ನಿಲುವಿಗಾಗಿ ಭಾರತ ಗಡಿಭಾಗದಲ್ಲಿ ಸಾಕಷ್ಟು ಬೆಲೆತೆತ್ತಿದೆಯಾದರೂ ಇಂದಿಗೂ ತನ್ನ ನಿಲುವಿಗೆ ಬದ್ಧವಾಗಿದೆ. ಆದರೆ ಹಸೀನಾ ಪ್ರಕರಣವು ದಲಾಯಿಲಾಮ ಅವರಿಗಿಂತ ಭಿನ್ನವಾದುದು. ಅಲ್ಲಿ ಮಾನವೀಯ ವಿಷಯ ಮುನ್ನೆಲೆಗೆ ಬಂದಿದ್ದರೆ, ಇಲ್ಲಿ ಹಸೀನಾ ಹತ್ಯಾಕಾಂಡಗಳ ಆರೋಪ ಹೊತ್ತುಕೊಂಡಿದ್ದಾರೆ. ಹಸೀನಾ ಅವರಿಗೆ ಆಶ್ರಯ ಮತ್ತು ರಕ್ಷಣೆ ನೀಡುವ ಮೂಲಕ ಅವರು ಬಾಂಗ್ಲಾದಲ್ಲಿ ಎಸಗಿದ ಅಪರಾಧಗಳ ಕಳಂಕವನ್ನು ಭಾರತವೂ ಮೈಮೇಲೆ ಎಳೆದುಕೊಂಡಂತಾಗುತ್ತದೆ. ಕಾಶ್ಮೀರದಲ್ಲಿ ನಾಗರಿಕರ ಮೇಲೆ ನಡೆಯುವ ಹಿಂಸಾಚಾರಗಳ ಬಗ್ಗೆ ಇತರ ದೇಶಗಳು ಮಾತನಾಡುವುದನ್ನು ಭಾರತ ಇಷ್ಟ ಪಡುವುದಿಲ್ಲ. ಹೀಗಿರುವಾಗ, ತನ್ನ ದೇಶದಲ್ಲಿ ನಾಗರಿಕರ ಹತ್ಯೆಗೈದ ಆರೋಪಗಳನ್ನು ಹೊತ್ತ ರಾಜಕೀಯ ಕೈದಿಗಳಿಗೆ ಭಾರತ ಆಶ್ರಯ ಕೊಟ್ಟಿರುವುದನ್ನು ಬಾಂಗ್ಲಾ ಸಹಿಸಬೇಕು ಎಂದು ನಿರೀಕ್ಷಿಸುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಎದುರಾಗುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಪಶ್ಚಿಮಬಂಗಾಳ, ಅಸ್ಸಾಮಿನಲ್ಲಿ ಹಲವು ದಶಕಗಳಿಂದ ವಾಸ ಮಾಡುತ್ತಿರುವ ಕಾರ್ಮಿಕರನ್ನು ‘ಬಾಂಗ್ಲಾ ವಲಸಿಗರು’ ಎಂದು ಆರೋಪಿಸಿ ಅವರನ್ನು ಭಾರತ ದಿಗ್ಬಂಧನದಲ್ಲಿಟ್ಟಿದೆ. ಸಾವಿರಾರು ಜನರ ಪೌರತ್ವವನ್ನೇ ಭಾರತ ಸರಕಾರ ಶಂಕಿಸುತ್ತಿದೆ. ಅವರ ಮೇಲೆ ಅಮಾನವೀಯವಾಗಿ ದೌರ್ಜನ್ಯಗಳನ್ನು ಎಸಗುತ್ತಿರುವ ಆರೋಪಗಳಿವೆ. ಅವರನ್ನು ಬಾಂಗ್ಲಾಕ್ಕೆ ಮರಳಿ ಕಳುಹಿಸುವ ಬಗ್ಗೆ ಎಚ್ಚರಿಕೆಗಳನ್ನು ನೀಡುತ್ತಲೇ ಇದೆ. ಶ್ರೀಸಾಮಾನ್ಯರನ್ನು ಬಾಂಗ್ಲಾವಲಸಿಗರೆಂದು ಅನುಮಾನಿಸಿ ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಭಾರತ ಸರಕಾರ, ಹತ್ಯಾಕಾಂಡ ಆರೋಪವನ್ನು ಹೊತ್ತ ಬಾಂಗ್ಲಾದ ರಾಜಕೀಯ ಕೈದಿಗಳಿಗೆ ತೋರಿಸುತ್ತಿರುವ ಪ್ರೀತಿಯ ಹಿಂದೆ ಮಾನವೀಯ ಕಾರಣಗಳಿವೆ ಎಂಬ ಭಾರತದ ಸಮರ್ಥನೆಯನ್ನು ವಿಶ್ವ ನಂಬುವುದಕ್ಕೆ ಸಾಧ್ಯವೆ? ತನ್ನ ನಾಗರಿಕರ ಮೇಲೆ ಅನ್ಯಾಯಗಳನ್ನು ಎಸಗುವ ಆರೋಪಗಳು ಭಾರತ ಸರಕಾರದ ಮೇಲೆಯೂ ಇದೆ. ಭಾರತದ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ವಿಶ್ವಸಂಸ್ಥೆಯೂ ಸೇರಿದಂತೆ ಹಲವು ಸಂಘಟನೆಗಳು, ದೇಶಗಳು ಕಳವಳ ವ್ಯಕ್ತಪಡಿಸುತ್ತಾ ಬಂದಿವೆ. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ರಾಜಕೀಯ ಪ್ರೇರಿತ ಎನ್ನುವ ಆರೋಪಗಳಿವೆ. ಇವೆಲ್ಲದರ ನಡುವೆ ಬಾಂಗ್ಲಾದ ಹಿಂಸಾಚಾರದ ಕಳಂಕವನ್ನೂ ಭಾರತ ತನ್ನ ಮೈಮೇಲೆ ಎಳೆದುಕೊಳ್ಳುವ ಅನಿವಾರ್ಯತೆ ಇದೆಯೆ? ಎನ್ನುವ ಪ್ರಶ್ನೆಗೆ ಭಾರತ ಉತ್ತರ ಕಂಡುಕೊಳ್ಳಲೇ ಬೇಕಾದ ಅನಿವಾರ್ಯತೆಯನ್ನು ಇದೀಗ ಎದುರಿಸುತ್ತಿದೆ.