ಮನುಷ್ಯನ ಸ್ವಾರ್ಥ, ಕ್ರೌರ್ಯಕ್ಕೆ ಕನ್ನಡಿ ಹಿಡಿದ ವಯನಾಡು ದುರಂತ
Photo:x.com/SantoshSLadINC
ಇತ್ತೀಚೆಗಷ್ಟೇ ಅಂಕೋಲದ ಶಿರೂರಿನಲ್ಲಿ ನಡೆದ ಭೂಕುಸಿತ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತ್ತು. ಈ ದುರಂತದಲ್ಲಿ ಹತ್ತಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ . ಎಂಟು ಮೃತದೇಹಗಳು ಪತ್ತೆಯಾಗಿದ್ದು ಇನ್ನೂ ಮೂರು ಮೃತದೇಹಗಳಿಗಾಗಿ ಹುಡುಕಾಟದ ಕಾರ್ಯಾಚರಣೆ ಮುಂದುವರಿದಿದೆ. ಭೂಕುಸಿತದಿಂದ ಕಾಣೆಯಾದವರಲ್ಲಿ ಕೇರಳ ಮೂಲದ ಅರ್ಜುನ್ ಎಂಬ ಲಾರಿ ಚಾಲಕನಿದ್ದದ್ದು, ಘಟನೆ ರಾಜ್ಯದಾಚೆಗೂ ಸುದ್ದಿಯಾಗಲು ಮುಖ್ಯ ಕಾರಣವಾಯಿತು. ಅರ್ಜುನ್‌ಗಾಗಿ ಇಡೀ ಕೇರಳ ಮಿಡಿಯಿತು. ಅಲ್ಲಿನ ಟಿವಿಗಳು ಹಗಲೂ ರಾತ್ರಿ ಅರ್ಜುನ್‌ಗಾಗಿ ನಡೆಯುತ್ತಿರುವ ಕಾರ್ಯಾಚರಣೆಯನ್ನು ಪ್ರಸಾರ ಮಾಡಿದವು. ಕೇರಳ ಸರಕಾರವು ಅರ್ಜುನ್ ಪತ್ತೆಗೆ ವಿಶೇಷ ಒತ್ತಡವನ್ನು ರಾಜ್ಯದ ಮೇಲೆ ಹಾಕಿತು. ಇಷ್ಟಾದರೂ, ಅರ್ಜುನ್ ಮೃತದೇಹ ಪತ್ತೆಯಾಗಲಿಲ್ಲ. ಇದೀಗ ರಕ್ಷಣಾ ಕಾರ್ಯಾಚರಣೆ ಭಾಗಶಃ ಸ್ಥಗಿತಗೊಂಡಿದೆ. ಕಾಣೆಯಾದ ಲಾರಿ ಚಾಲಕನಿಗಾಗಿ ಕೇರಳ ಮಿಡಿಯುತ್ತಿರುವಾಗಲೇ, ದೇಶವೇ ಬೆಚ್ಚಿ ಬೀಳಿಸುವಂತಹ ಭೂ ಕುಸಿತ ಕೇರಳದ ವಯನಾಡ್‌ನಲ್ಲಿ ಸಂಭವಿಸಿದೆ. ಐದು ವರ್ಷಗಳ ಹಿಂದೆ ಭೀಕರ ಮಳೆಗೆ ಅಕ್ಷರಶಃ ಕೊಚ್ಚಿ ಹೋಗಿದ್ದ ಕೇರಳ ಆ ದುರಂತದಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಿಗೇ ಮತ್ತೆ ಇನ್ನೊಂದು ದುರಂತ ಸಂಭವಿಸಿದೆ.
ಕಳೆದೆರಡು ದಿನಗಳಿಂದ ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಸೋದ್ಯಮಕ್ಕೆ ಹೆಸರಾಗಿದ್ದ ವಯನಾಡ್‌ನಲ್ಲಿ ಮಂಗಳವಾರ ನಸುಕಿನಲ್ಲಿ ಭಾರೀ ಭೂಕುಸಿತಗಳು ಸಂಭವಿಸಿವೆ. 150ಕ್ಕೂ ಅಧಿಕ ಮೃತದೇಹಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಭೀಕರ ಸ್ವರೂಪವನ್ನು ಪಡೆಯುವ ಸಾಧ್ಯತೆಗಳು ಕಾಣುತ್ತಿವೆ. ಒಂದಿಡೀ ಪಟ್ಟಣವೇ ಈ ಕುಸಿತದಿಂದ ನಾಮಾವಶೇಷವಾಗಿದೆ. ಹಲವು ಕುಟುಂಬಗಳು ದುರಂತದಲ್ಲಿ ಕಣ್ಮರೆಯಾಗಿವೆ. ಇಡೀ ದೇಶವೇ ಕೇರಳದ ಜನರ ನೋವಿಗೆ ಸ್ಪಂದಿಸುತ್ತಿದೆ. ರಸ್ತೆ, ಸೇತುವೆಗಳು ಸಂಪೂರ್ಣ ಮುಚ್ಚಿ ಹೋಗಿರುವ ಕಾರಣದಿಂದಾಗಿ ರಕ್ಷಣಾ ಕಾರ್ಯಾಚರಣೆಯೂ ಸುಲಭ ಸಾಧ್ಯವಾಗುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ ಈ ಭಾಗದಲ್ಲಿ 337 ಮಿ.ಮೀ. ಮಳೆಯಾಗಿದ್ದು ಮಾತ್ರವಲ್ಲ, ಮುಂಜಾವಿನ ವೇಳೆಗೆ ಮೇಘ ಸ್ಫೋಟ ಸಂಭವಿಸಿತ್ತು. ಈ ಭೀಕರ ಮಳೆ ಭಾರೀ ಭೂಕುಸಿತಗಳಿಗೆ ಕಾರಣವಾಯಿತು ಎನ್ನಲಾಗಿದೆ.
ಗುಜರಾತ್ ರಾಜ್ಯವು ಭೂಕಂಪಗಳಿಂದ ಹೇಗೆ ನಲುಗುತ್ತಾ ಬಂದಿದೆಯೋ, ಕೇರಳ ಹಲವು ಪ್ರವಾಹಗಳಲ್ಲಿ ಮುಳುಗಿ ಎದ್ದು ನಿಂತ ರಾಜ್ಯವಾಗಿದೆ. 1924ರಲ್ಲಿ ಕೇರಳ ಅತ್ಯಂತ ಭೀಕರವಾದ ಮಳೆ ಮತ್ತು ನೆರೆಯನ್ನು ಎದುರಿಸಿತು. ಅದಾದ ಬಳಿಕ 1961ರಲ್ಲಿ ಸಂಭವಿಸಿದ ಭಾರೀ ಪ್ರವಾಹದಿಂದ ಕೇರಳ ಅಪಾರ ಸಾವು ನೋವುಗಳಿಗೆ ಸಾಕ್ಷಿಯಾಯಿತು. 2018ರ ಪ್ರವಾಹದಿಂದಾದ ಹಾನಿ ಇನ್ನೂ ಹಸಿಯಾಗಿಯೇ ಇದೆ. ಆ ಬಳಿಕ ಭೀಕರ ಮಳೆಯಾದಾಗಲೆಲ್ಲ ಕೇರಳದ ಜನರು ಅಂಗೈಯಲ್ಲಿ ಬದುಕನ್ನಿಟ್ಟು ದಿನ ಕಳೆಯುತ್ತಿದ್ದರು. ಎಲ್ಲಿ 2018 ಮರುಕಳಿಸುತ್ತದೆಯೋ ಎನ್ನುವ ಭಯ ಅವರನ್ನು ಕಾಡುತ್ತಿತ್ತು. ಎಲ್ಲ ಮಳೆ ಪ್ರವಾಹಗಳಿಗೂ ವಯನಾಡು ಸಾಕಷ್ಟು ಬೆಲೆ ತೆರುತ್ತಾ ಬಂದಿದೆ. ಇತ್ತೀಚಿನ ದಿನಗಳಲ್ಲಿ ಮಳೆಗಾಲವನ್ನು ಅತ್ಯಂತ ಭೀಕರವಾಗಿಸುತ್ತಿರುವುದು ಹೆಚ್ಚುತ್ತಿರುವ ಭೂಕುಸಿತಗಳು. 2001ರಲ್ಲಿ ಇಡುಕ್ಕಿಯ ತೊಡುಪುಳ ತಾಲೂಕಿನ ವೆನ್ನಿಯಾನಿನಲ್ಲಿ 20 ಸಣ್ಣ ಪುಟ್ಟ ಗುಡ್ಡಗಳು ಕುಸಿದಿದ್ದವು. ಹೆಚ್ಚಿನ ಸಾವು ನೋವು ಸಂಭವಿಸದೇ ಇದ್ದಿದ್ದರೂ, ವರದಿ ಮಾಡಲು ಹೋಗಿದ್ದ ಪತ್ರಕರ್ತ, ಛಾಯಾಗ್ರಾಹಕ ವಿಕ್ಟರ್ ಜಾರ್ಜ್ ಜೀವಂತ ಸಮಾಧಿಯಾಗಿದ್ದರು. 2012ರಲ್ಲಿ ಕೋಝಿಕ್ಕೋಡಿನ ಪುಲ್ಲರಂಪಾರ ಪರ್ವತ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಎಂಟು ಮಂದಿ ಮೃತಪಟ್ಟಿದ್ದರು. 2018ರಲ್ಲಿ ಕಟ್ಟಿಪಾರದಲ್ಲಿ ಸಂಭವಿಸಿದ ಭೂಕುಸಿತದಲ್ಲಿ 15ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು 30ಕ್ಕೂ ಅಧಿಕ ಮನೆಗಳು ಧ್ವಂಸವಾಗಿದ್ದವು. 2019ರಲ್ಲಿ ಕವಲಪ್ಪಾರದಲ್ಲಿ ಸಂಭವಿಸಿದ ಭೂಕುಸಿತದಲ್ಲಿ 59 ಜನರು ಸಮಾಧಿಯಾಗಿದ್ದರು. 2019ರಲ್ಲಿ ಮುತ್ತುಮಲ ಭೂಕುಸಿತ, 2020ರಲ್ಲಿ ಪೆಟ್ಟಿಮುಡಿ ಭೂಕುಸಿತ, 2021ರಲ್ಲಿ ಕೂಟ್ಟಿಕಲ್ ಭೂಕುಸಿತ ಭಾರೀ ಸುದ್ದಿ ಮಾಡಿದ್ದವು. ಕಳೆದ ಹತ್ತು ವರ್ಷಗಳಲ್ಲಿ ಕೇರಳದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಭೂಕುಸಿತಗಳು ಸಂಭವಿಸಿವೆ. ಒಂದು ಸಾವಿರಕ್ಕೂ ಅಧಿಕ ಮಂದಿ ಭೂಕುಸಿತಕ್ಕೆ ಬಲಿಯಾಗಿದ್ದಾರೆ.
ಈ ನಾಶ ನಷ್ಟ ವನ್ನು ಮನುಷ್ಯ ಪ್ರಕೃತಿಯ ತಲೆಗೆ ಕಟ್ಟಿ ಪಾರಾಗುವಂತಿಲ್ಲ. ಕೇರಳ, ಕೊಡಗು ಮೊದಲಾದ ಪ್ರದೇಶಗಳಲ್ಲಿ ಭೂಕುಸಿತಗಳು ಯಾಕೆ ಹೆಚ್ಚುತ್ತಿವೆ ಎನ್ನುವುದರ ಬಗ್ಗೆ ಆತ್ಮವಿಮರ್ಶೆ ನಡೆಯಬೇಕಾದ ಸಂದರ್ಭ ಇದು. ವಯನಾಡು ಭೂಕುಸಿತದ ಜೊತೆ ಜೊತೆಗೇ ಕೇರಳ ಸರಕಾರ ಕಡೆಗಣಿಸಿದ್ದ ಮಾಧವ ಗಾಡ್ಗೀಳ್ ಸಮಿತಿ ವರದಿ ಮತ್ತೆ ಮುನ್ನೆಲೆಗೆ ಬಂದಿದೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿಯ ಮೇಲೆ ನಡೆಸುವ ಹಸ್ತಕ್ಷೇಪಗಳ ಬಗ್ಗೆ ಈ ಸಮಿತಿ ಹಿಂದೆಯೇ ಎಚ್ಚರಿಸಿತ್ತು. ಅಭಿವೃದ್ಧಿ ಹೆಸರಿನಲ್ಲಿ ನಡೆಯುವ ಅಕ್ರಮ, ಭ್ರಷ್ಟಾಚಾರಗಳು ಅಂತಿಮವಾಗಿ ಯಾವ ರೀತಿಯ ದುಷ್ಪರಿಣಾಮಗಳನ್ನು ಬೀರಬಹುದು ಎನ್ನುವುದಕ್ಕೆ ಬಿಹಾರದಲ್ಲಿ ಕುಸಿಯುತ್ತಿರುವ ಸೇತುವೆಗಳೇ ಉದಾಹರಣೆ. ಸೋರುತ್ತಿರುವ ರಾಮಮಂದಿರ, ಹೊಂಡ ಬಿದ್ದಿರುವ ರಾಮಪಥಗಳು ಈ ದೇಶದ ಅಭಿವೃದ್ಧಿಯ ವಾಸ್ತವವನ್ನು ಹೇಳುತ್ತಿದೆ. ಇದೇ ಸಂದರ್ಭದಲ್ಲಿ ಅಭಿವೃದ್ಧಿಯೆನ್ನುವುದೇ ಮನುಷ್ಯ ತನಗೆ ತಾನೇ ಎಸಗುವ ಒಂದು ಮೋಸ ಎನ್ನುವುದು ಕೇರಳದಲ್ಲಿ ಸಾಬೀತಾಗುತ್ತಿದೆ. ಮಾಧವ ಗಾಡ್ಗೀಳ್ ನೇತೃತ್ವದ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯು ೨೦೧೧ರಲ್ಲಿ ಕೇಂದ್ರಕ್ಕೆ ಸಲ್ಲಿಸಿದ್ದ ತನ್ನ ವರದಿಯಲ್ಲಿ ಮೆಪ್ಪಾಡಿಯಲ್ಲಿ ಪರಿಸರ ವಿರೋಧಿ ಚಟುವಟಿಕೆಗಳ ಬಗ್ಗೆ ನಿರ್ದಿಷ್ಟವಾಗಿ ಎಚ್ಚರಿಕೆ ನೀಡಿತ್ತು. ವೈತಿರಿ ತಾಲೂಕಿನಲ್ಲಿರುವ ಮೆಪ್ಪಾಡಿ ಗಾಡ್ಗೀಳ್ ಸಮಿತಿಯು ಗುರುತಿಸಿದ್ದ ಕೇರಳದ ೧೮ ಪರಿಸರ ಸೂಕ್ಷ್ಮಸ್ಥಳ (ಇಎಸ್‌ಎಲ್)ಗಳಲ್ಲಿ ಒಂದಾಗಿದೆ. ಮಂಗಳವಾರ ಸಂಭವಿಸಿದ ಭೂಕುಸಿತದಲ್ಲಿ ಸರ್ವನಾಶವಾದ ಗ್ರಾಮಗಳಲ್ಲಿ ಮೆಪ್ಪಾಡಿಯೂ ಒಂದು. ಕೇರಳದಲ್ಲಿ ಹೆಚ್ಚುತ್ತಿರುವ ಕಲ್ಲುಗಣಿಗಾರಿಕೆಗಳಿಗೆ ನಿಯಂತ್ರಣ ಹಾಕುವುದಕ್ಕೂ ಸಮಿತಿ ಸರಕಾರವನ್ನು ಒತ್ತಾಯಿಸಿತ್ತು. ಅಂತಿಮವಾಗಿ ಗಾಡ್ಗೀಳ್ ಸಮಿತಿಯ ವರದಿಯನ್ನೇ ತಿದ್ದುವುದಕ್ಕೆ ಇನ್ನೊಂದು ಸಮಿತಿಯನ್ನು ನೇಮಿಸಲಾಯಿತು.
ಒಂದೆಡೆ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ, ಇನ್ನೊಂದೆಡೆ ಪ್ರವಾಸೋದ್ಯಮದ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳು ಪರಿಸರದ ಸಮತೋಲನವನ್ನು ಅಸ್ತವ್ಯಸ್ತಗೊಳಿಸಿದೆ. ಗುಡ್ಡಗಳನ್ನು ಬಗೆಯಲಾಗುತ್ತಿದೆ. ಅದು ಕುಸಿಯದಂತೆ ಆಧರಿಸಿ ನಿಂತ ಮರಗಳನ್ನು ಕಡಿಯಲಾಗಿದೆ. ರಸ್ತೆ ಮತ್ತು ಕಟ್ಟಡಗಳ ನಿರ್ಮಾಣಕ್ಕಾಗಿ ಗುಡ್ಡ ಅಗೆದು ಜಮೀನಾಗಿ ಪರಿವರ್ತಿಸಲಾಗುತ್ತಿದೆ. ಆದುದರಿಂದಲೇ ಮಳೆಯನ್ನು ತಾಳಿಕೊಳ್ಳಲು ಗುಡ್ಡಗಳಿಗೆ ಸಾಧ್ಯವಾಗುತ್ತಿಲ್ಲ. ಗುಡ್ಡ ಕಡಿದು ಅದರ ತಪ್ಪಲಲ್ಲಿ ಮನೆಮಾಡಿದರೆ ದುರಂತಗಳು ಸಂಭವಿಸದೇ ಇನ್ನೇನಾಗುತ್ತದೆ? ಇದು ಕೇರಳಕ್ಕಷ್ಟೇ ಸೀಮಿತವಲ್ಲ. ಎಲ್ಲ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಮನುಷ್ಯ ಸ್ವತಃ ಅಪಾಯಕಾರಿ ಸ್ಥಳವಾಗಿ ಪರಿವರ್ತಿಸುತ್ತಿದ್ದಾನೆ. ಅಭಿವೃದ್ಧಿಯೂ ಪರಿಸರಕ್ಕೆ ಪೂರಕವಾಗಿರಬೇಕು ಎನ್ನುವ ವಿವೇಕವನ್ನು ಮನುಷ್ಯ ತನ್ನದಾಗಿಸಿಕೊಳ್ಳುವವರೆಗೆ ಇಂತಹ ದುರಂತಗಳನ್ನು ಪದೇ ಪದೇ ಎದುರಿಸಲೇಬೇಕಾಗುತ್ತದೆ.
ಅತ್ಯಂತ ವಿಷಾದನೀಯ ಸಂಗತಿಯೆಂದರೆ, ಕೇರಳದಲ್ಲಿ ಸಂಭವಿಸಿದ ಸಾವು ನೋವುಗಳನ್ನು ಕೆಲವು ಶಕ್ತಿಗಳು ಸಂಭ್ರಮಿಸುತ್ತಿರುವುದು. ಕೇರಳ ಸರಕಾರದ ಜೊತೆಗೆ, ಎಡಪಂಥೀಯ ಚಿಂತನೆಗಳ ಜೊತೆಗೆ, ನಾರಾಯಣ ಗುರುಗಳ ಕ್ರಾಂತಿಯೊಂದಿಗೆೆ ಭಿನ್ನಮತವಿರುವ ಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇರಳದಲ್ಲಿ ಸಂಭವಿಸಿರುವ ಈ ದುರಂತವನ್ನು ಸಂಭ್ರಮಿಸಿ ತಮ್ಮ ಕ್ರೌರ್ಯವನ್ನು ಮರೆದಿವೆ. ವಯನಾಡು ಕ್ಷೇತ್ರದ ಜನರು ರಾಹುಲ್ ಗಾಂಧಿಯನ್ನು ಗೆಲ್ಲಿಸಿದ್ದರು ಎನ್ನುವುದು ಕೂಡ ಇದಕ್ಕೆ ಒಂದು ಕಾರಣವಾಗಿದೆ. ಹೀಗೆ ಸಂಭ್ರಮಿಸಿದವರು ಬಲಪಂಥೀಯ ಅಥವಾ ಹಿಂದುತ್ವವಾದಿ ಸಿದ್ಧಾಂತದ ಜೊತೆಗೆ ಗುರುತಿಸಿಕೊಂಡವರಾಗಿರುವುದು ಆಕಸ್ಮಿಕ ಅಲ್ಲ. ಈ ಹಿಂದೆ ಗಾಂಧಿಯನ್ನು ಕೊಂದಾಗ ಸಿಹಿ ಹಂಚಿದ ಹಿನ್ನೆಲೆಯಿರುವ ಈ ಸಿದ್ಧಾಂತ, ಕೊಲೆಗಳನ್ನು, ಸಾವುಗಳನ್ನು, ಹತ್ಯಾಕಾಂಡಗಳನ್ನು ನೂರಾರು ಬಾರಿ ಸಂಭ್ರಮಿಸಿದೆ. ಇದೀಗ ಪ್ರಕೃತಿ ವಿಕೋಪದಿಂದ ಸಂಭವಿಸಿದ ಸಾವು, ನಷ್ಟಗಳನ್ನು ಕೂಡ ಸಂಭ್ರಮಿಸಲು ಮುಂದಾಗಿವೆ. ಮನುಷ್ಯನ ಸ್ವಾರ್ಥ, ಕ್ರೌರ್ಯ ತಲುಪಬಹುದಾದ ಪರಾಕಾಷ್ಠೆಯನ್ನು ವಯನಾಡು ದುರಂತ ಹೇಳುತ್ತಿದೆ. ಮನುಷ್ಯ ಒಳಗೂ, ಹೊರಗೂ ಹೇಗೆ ಸರ್ವನಾಶವಾಗುತ್ತಿದ್ದಾನೆ ಎನ್ನುವುದನ್ನು ನಾವು ಇದರಿಂದ ಕಂಡುಕೊಳ್ಳಬಹುದು.