×
Ad

ಯುದ್ಧದಿಂದ ಉಭಯ ದೇಶಗಳು ಪಡೆದುಕೊಂಡದ್ದು ಏನನ್ನು?

Update: 2025-08-11 06:51 IST

PC | PTI (ಸಾಂದರ್ಭಿಕ ಚಿತ್ರ)

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮುಗಿದಿದೆಯಾದರೂ, ಉಭಯ ದೇಶಗಳ ನಾಯಕರ ಮಾತಿನ ಎಂಜಲುಗಳ ಎರಚಾಟಗಳಿಗೆ ಇನ್ನೂ ವಿರಾಮ ಬಿದ್ದಿಲ್ಲ. ಯಾರಿಂದ ಯಾರಿಗೆ ಹೆಚ್ಚು ನಷ್ಟವಾಗಿದೆ ಎನ್ನುವ ವಿಷಯದಲ್ಲಿ ಉಭಯ ದೇಶಗಳು ಸ್ಪರ್ಧೆಗೆ ಬಿದ್ದು ಹೇಳಿಕೆಗಳನ್ನು ನೀಡುತ್ತಿವೆ. ಈಗಾಗಲೇ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ಐದಕ್ಕೂ ಅಧಿಕ ಯುದ್ಧ ವಿಮಾನಗಳು ನಾಶವಾಗಿರುವುದನ್ನು ಹಲವರು ಪ್ರಸ್ತಾಪಿಸಿದ್ದಾರೆ. ಅಮೆರಿಕವೂ ಈ ಬಗ್ಗೆ ಹೇಳಿಕೆಯನ್ನು ನೀಡಿದೆ. ಯಾವ ದೇಶದ ಯುದ್ಧ ವಿಮಾನಗಳಿಗೆ ಹೆಚ್ಚು ಹಾನಿಯಾಗಿದೆ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟತೆಗಳಿಲ್ಲ. ಇದೀಗ ಭಾರತದ ವಾಯುಪಡೆ ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್ ಅವರು ಹೊಸ ಹೇಳಿಕೆಯೊಂದರಲ್ಲಿ ‘‘ಪಾಕಿಸ್ತಾನದ ಐದು ಯುದ್ಧ ವಿಮಾನಗಳನ್ನು ಭಾರತ ಕಾರ್ಯಾಚರಣೆಯ ಸಂದರ್ಭದಲ್ಲಿ ಹೊಡೆದುರುಳಿಸಿದೆ’’ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಹೀಗೆ ಹೇಳಿಕೆ ನೀಡಿದ ಬೆನ್ನಿಗೇ, ಪಾಕಿಸ್ತಾನವು ಅದನ್ನು ಅಲ್ಲಗಳೆದಿದೆ. ನಮ್ಮ ಯಾವುದೇ ಯುದ್ಧ ವಿಮಾನಗಳಿಗೆ ಹಾನಿಯಾಗಿಲ್ಲ ಎಂದು ಪಾಕಿಸ್ತಾನ ಸ್ಪಷ್ಟೀಕರಣವನ್ನು ನೀಡಿದೆ. ಅಷ್ಟೇ ಅಲ್ಲ, ಬೆನ್ನಿಗೇ ಪಾಕಿಸ್ತಾನದ ಸೇನಾ ಮುಖ್ಯಸ್ಥರು ‘‘ಇನ್ನೊಮ್ಮೆ ಯುದ್ಧದ ಸ್ಥಿತಿ ನಿರ್ಮಾಣವಾದರೆ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗ ಮಾಡುತ್ತೇವೆ’’ ಎನ್ನುವ ಬೆದರಿಕೆಯನ್ನೂ ಹಾಕಿದ್ದಾರೆ.

ಆಪರೇಷನ್ ಸಿಂಧೂರದಲ್ಲಿ ಯಾವ ದೇಶಕ್ಕೆ ಎಷ್ಟು ನಷ್ಟವಾಗಿದೆ ಎನ್ನುವುದಕ್ಕಿಂತ, ಎರಡೂ ದೇಶಗಳಿಗೂ ಬಹಳಷ್ಟು ನಷ್ಟವಾಗಿದೆ ಎನ್ನುವುದೇ ಕಟು ವಾಸ್ತವ. ಈ ಯುದ್ಧದಿಂದ ನಿಜಕ್ಕೂ ಲಾಭವನ್ನು ತನ್ನದಾಗಿಸಿಕೊಂಡಿದ್ದು ಅಮೆರಿಕ ಎನ್ನುವುದು ಇನ್ನೊಂದು ಕಹಿ ಸತ್ಯ. ಹಾಗಾದರೆ ಪರಸ್ಪರ ದಾಳಿ ಮಾಡಿಕೊಂಡು ನಷ್ಟಗಳನ್ನು ಎದುರಿಸಿದ ಭಾರತ-ಪಾಕಿಸ್ತಾನ ಈ ಯುದ್ಧದಿಂದ ಗಳಿಸಿಕೊಂಡದ್ದು ಏನು? ನಾವಿಂದು ಪರಸ್ಪರ ಕೇಳಿಕೊಳ್ಳಬೇಕಾದ ಪ್ರಶ್ನೆ ಮತ್ತು ನಮ್ಮನ್ನಾಳುವ ನಾಯಕರು ಉತ್ತರಿಸಬೇಕಾದ ಪ್ರಶ್ನೆಯಿದು. ಉಭಯ ದೇಶಗಳು ಪರಸ್ಪರ ವಿಮಾನಗಳನ್ನು ಹೊಡೆದುರುಳಿಸಿದ್ದರಿಂದ, ಗಡಿಭಾಗದಲ್ಲಿರುವ ನಾಗರಿಕರ ಮೇಲೆ ಬಾಂಬ್‌ಗಳನ್ನು ಹಾಕಿದ್ದರಿಂದ, ಕಟ್ಟಡಗಳನ್ನು ನಾಶ ಮಾಡಿರುವುದರಿಂದ ಪಡೆದುಕೊಂಡದ್ದು ಏನು? ಉಭಯದೇಶಗಳ ಜನರು ಈ ಪ್ರಶ್ನೆಗೆ ಉತ್ತರದ ನಿರೀಕ್ಷೆಯಲ್ಲಿದ್ದಾರೆ. ಎಲ್ಲಕ್ಕೂ ಮೂಲ ‘ಪಹಲ್ಗಾಮ್ ದಾಳಿ’ ಎನ್ನುವುದು ಸ್ಪಷ್ಟ. ಈ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎನ್ನುವುದು ಭಾರತದ ಆರೋಪ. ಪಾಕಿಸ್ತಾನದ ಗಡಿಭಾಗದಲ್ಲಿ ಉಗ್ರರ ನೆಲೆಗಳಿವೆ. ಅಲ್ಲಿ ಉಗ್ರರಿಗೆ ತರಬೇತಿಗಳನ್ನು ನೀಡಲಾಗುತ್ತಿದೆ. ಪ್ರತೀಕಾರವಾಗಿ ಆ ಉಗ್ರರ ನೆಲೆಗಳಿಗೆ ದಾಳಿ ನಡೆಸಿ ಉಗ್ರರನ್ನು ಧ್ವಂಸಗೈದಿದ್ದೇವೆ ಎಂದು ನಮ್ಮ ಸೇನೆ ಹೇಳುತ್ತಿದೆ. ಅಂದರೆ, ಆಪರೇಷನ್ ಸಿಂಧೂರ ಉಗ್ರರ ನೆಲೆಗಳನ್ನು ಸರ್ವನಾಶ ಮಾಡುವಲ್ಲಿ ಯಶಸ್ವಿಯಾಗಿದೆ ಎನ್ನುವುದು ಇದರ ಅರ್ಥ.

ಪಹಲ್ಗಾಮ್ ದಾಳಿಗೆ ಪಾಕಿಸ್ತಾನ ಬೆಂಬಲಿತ ಉಗ್ರರು ಎಷ್ಟು ಕಾರಣವೋ, ಭಾರತ ಸರಕಾರದ ಭದ್ರತಾ ವೈಫಲ್ಯವೂ ಅಷ್ಟೇ ಕಾರಣ. ಉಗ್ರರು ಪಾಕಿಸ್ತಾನದ ಗಡಿಯಾಚೆಯಿಂದ ಬಂದಿದ್ದಾರೆ ಎನ್ನುವುದು ನಿಜವೇ ಆಗಿದ್ದರೆ ಗಡಿಯನ್ನು ದಾಟಿ ಹೇಗೆ ಬಂದರು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಈ ಹಿಂದೆ ಯುಪಿಎ ಸರಕಾರ ಅಸ್ತಿತ್ವದಲ್ಲಿರುವಾಗ ಇದೇ ಪ್ರಶ್ನೆಯನ್ನು ಮೋದಿಯವರು ಕೇಳಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ, ಕಾಶ್ಮೀರ ಸೇನೆಯ ಮುಷ್ಟಿಯೊಳಗಿದೆ. ಅಲ್ಲಿರುವ ಪ್ರಜಾಸತ್ತಾತ್ಮಕ ಸರಕಾರ ನೆಪಕ್ಕಷ್ಟೇ. ಸಾವಿರಾರು ಮಂದಿ ಪ್ರವಾಸಿಗರ ಆಗಮನಕ್ಕೆ ಅವಕಾಶ ಕೊಟ್ಟ ಬಳಿಕ ಅವರ ರಕ್ಷಣೆಗಾಗಿ ಒಂದೆರೆಡು ಸೇನಾ ಸಿಬ್ಬಂದಿಯನ್ನು ನೇಮಕ ಮಾಡುವುದು ಸರಕಾರದ ಕರ್ತವ್ಯವಾಗಿತ್ತು. ಪ್ರವಾಸಿಗರಿರುವ ಪ್ರದೇಶದಲ್ಲಿ ಯಾವುದೇ ಭದ್ರತಾ ಸಿಬ್ಬಂದಿಯನ್ನು ನೇಮಿಸದೇ ಉಗ್ರರಿಗೆ ಮುಕ್ತ ಆಹ್ವಾನವನ್ನು ಮೊದಲು ನೀಡಿದ್ದು ಭಾರತ ಸರಕಾರ. ನಮ್ಮ ಸರಕಾರದ ಭದ್ರತಾ ವೈಫಲ್ಯವೇ ಇಂತಹದೊಂದು ಕೃತ್ಯ ಎಸಗಲು ಉಗ್ರರಿಗೆ ಧೈರ್ಯವನ್ನು ನೀಡಿತು. ಆದುದರಿಂದ ಪಹಲ್ಗಾಮ್ ದಾಳಿಗೆ ಪಾಕಿಸ್ತಾನದಷ್ಟೇ ಭಾರತವೂ ಹೊಣೆಯಾಗಿದೆ. ಉಳಿದಂತೆ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ನಾಶ ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ ಈಗಲೂ ಕಾಶ್ಮೀರದಲ್ಲಿ ಉಗ್ರರ ದಾಳಿ ಮುಂದುವರಿದಿದೆ. ಶುಕ್ರವಾರ ರಾತ್ರಿ ಜಮ್ಮು ಕಾಶ್ಮೀರದ ಕುಲ್ಗಾಮ್‌ನಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಮೃತಪಟ್ಟಿದ್ದಾರೆ. ಕಳೆದ ಒಂದು ವಾರದಿಂದ ಉಗ್ರರ ವಿರುದ್ಧ್ದ ಕಾಶ್ಮೀರದೊಳಗೆ ವಿಶೇಷ ಕಾರ್ಯಾಚರಣೆ ನಡೆಯುತ್ತಿದೆ. ಉಗ್ರರ ನೆಲೆಗಳನ್ನು ನಾಶ ಮಾಡಿರುವುದು ಹೌದಾದರೆ ನಮ್ಮ ಸೈನಿಕರು ಮತ್ತೆ ಮತ್ತೆ ಯಾಕೆ ಉಗ್ರರ ಗುಂಡಿಗೆ ಬಲಿಯಾಗುತ್ತಿದ್ದಾರೆ? ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೊದಲಿಗೂ ಈಗಕ್ಕೂ ಏನು ವ್ಯತ್ಯಾಸ? ಕಾಶ್ಮೀರದಲ್ಲಿ ಉಗ್ರರ ಭಯವಿಲ್ಲದೆ ಬದುಕುವ ವಾತಾವರಣ ಆಪರೇಷನ್ ಸಿಂಧೂರದ ಬಳಿಕ ನಿರ್ಮಾಣವಾಗಿದೆಯೆ? ನಮ್ಮ ಸೇನಾ ಮುಖ್ಯಸ್ಥರು ಮತ್ತು ಕೇಂದ್ರ ಸರಕಾರ ಈ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ.

ಅದೆಷ್ಟು ಬಾರಿ ಇಲ್ಲ ಎಂದರೂ ಭಾರತವೂ ಈ ಕಾರ್ಯಾಚರಣೆಯಲ್ಲಿ ಸಾಕಷ್ಟು ಕಳೆದುಕೊಂಡಿದೆ. ಉಭಯ ದೇಶಗಳಲ್ಲಿ ನಾಶ ನಷ್ಟ ಸಂಭವಿಸಿವೆೆ. ಆದರೆ ಅಂತಿಮವಾಗಿ ಗೆದ್ದದ್ದು ಮಾತ್ರ ಅಮೆರಿಕ. ಪಾಕಿಸ್ತಾನ ಅಮೆರಿಕವನ್ನು ಇನ್ನಷ್ಟು ನೆಚ್ಚಿಕೊಳ್ಳುವ ಸ್ಥಿತಿ ನಿರ್ಮಾಣವಾಯಿತು. ಈ ಕಾರ್ಯಾಚರಣೆಯ ಬಳಿಕ ಪಾಕಿಸ್ತಾನ ಅಮೆರಿಕಕ್ಕೆ ಇನ್ನಷ್ಟು ಹತ್ತಿರವಾಗಿದೆ. ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎನ್ನುವ ಭಾರತದ ಆರೋಪ ಅರಣ್ಯ ರೋದನವಾಯಿತು. ‘ಯುದ್ಧವನ್ನು ನಾನು ನಿಲ್ಲಿಸಿದೆ’ ಎಂದು ಅಮೆರಿಕ ಪದೇ ಪದೇ ಹೇಳುತ್ತಲೇ ಬರುತ್ತಿದೆ. ಒಟ್ಟಿನಲ್ಲಿ ಕೋಟ್ಯಂತರ ರೂಪಾಯಿ ನಾಶ, ನಷ್ಟಗಳನ್ನು ಮಾಡಿಕೊಂಡು, ಸಾವು ನೋವುಗಳನ್ನು ಆಹ್ವಾನಿಸಿದ ಬಳಿಕವೂ ಉಭಯ ದೇಶಗಳು ಖಾಲಿ ಕೈಯಲ್ಲೇ ಇವೆ. ಒಂದೆಡೆ ಅಮೆರಿಕ ಭಾರೀ ಸುಂಕವನ್ನು ಹೇರುತ್ತಾ ಭಾರತದ ಮೇಲೆ ಸರ್ವಾಧಿಕಾರಿ ಧೋರಣೆಯನ್ನು ಮೆರೆಯುತ್ತಿದೆ. ಇಂದು ಭಾರತವು ನೆರೆಯ ದೇಶಗಳ ಜೊತೆಗೆ ಮೈತ್ರಿ ಕುದುರಿಸಿಕೊಂಡು ಅಮೆರಿಕದ ಈ ಸರ್ವಾಧಿಕಾರಿ ಮನಸ್ಥಿತಿಯನ್ನು ಎದುರಿಸಲು ಸಿದ್ಧತೆ ನಡೆಸಬೇಕಾಗಿದೆ. ಪಾಕಿಸ್ತಾನ, ಚೀನಾದ ಜೊತೆಗೆ ಹಳಸಿದ ಸಂಬಂಧವನ್ನು ಸರಿಪಡಿಸಿಕೊಂಡು ಮುಂದಕ್ಕೆ ಹೆಜ್ಜೆ ಇಡಬೇಕಾದ ಸಮಯ ಇದು. ಇನ್ನಾದರೂ ಎದುರಾಳಿಗೆ ಎಷ್ಟು ನಷ್ಟವಾಗಿದೆ ಎನ್ನುವುದರಲ್ಲಿ ತನ್ನ ಲಾಭವನ್ನು ಗುರುತಿಸುವುದನ್ನು ಉಭಯ ದೇಶಗಳು ನಿಲ್ಲಿಸಬೇಕಾಗಿದೆ. ಕಳೆದುಕೊಂಡ ವಿಮಾನಗಳ ಲೆಕ್ಕಕ್ಕಿಂತ, ಭವಿಷ್ಯದಲ್ಲಿ ಪಡೆದುಕೊಳ್ಳಬೇಕಾದುದರತ್ತ ಗಮನ ಕೇಂದ್ರೀಕರಿಸುವುದು ಇಂದಿನ ಅಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News