×
Ad

ಇದೆಂತಹ ನ್ಯಾಯ?

Update: 2025-02-14 09:30 IST

ಮನುಸ್ಮತಿ ಮತ್ತು ಸಂವಿಧಾನದ ನಡುವೆ ಅನೈಸರ್ಗಿಕ ರೀತಿಯ ಸಂಪರ್ಕಗಳಾದಾಗ ನ್ಯಾಯಾಲಯಗಳಿಂದ ಎಂತಹ ತೀರ್ಪುಗಳು ಹೊರ ಬೀಳಬಹುದು ಎನ್ನುವುದಕ್ಕೆ ಉದಾಹರಣೆಯಾಗಿ ಛತ್ತೀಸ್ಗಡ ಹೈಕೋರ್ಟ್ ನೀಡಿದ ತೀರ್ಪು ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇಲ್ಲಿನ ರಾಯಪುರ ಸಮೀಪ, 40 ವರ್ಷದ ಗೋರಖ್ ನಾಥ್ ರ್ಮಾ ಎಂಬ ವ್ಯಕ್ತಿಯೊಬ್ಬ ತನ್ನ ಪತ್ನಿಯ ಜೊತೆಗೆ ಅನೈಸರ್ಗಿಕ ರೀತಿಯಲ್ಲಿ ಲೈಂಗಿಕ ಕ್ರಿಯೆಯನ್ನು ನಡೆಸಿದ್ದ. ಇದರಿಂದ ಪತ್ನಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಈ ಬಗ್ಗೆ ಆಕೆ ಪೊಲೀಸರಿಗೆ ದೂರನ್ನು ನೀಡಿದ್ದಳು. ಅಷ್ಟೇ ಅಲ್ಲ, ಗಾಯ ಉಲ್ಬಣಗೊಂಡು ಆಕೆ ಮೃತಪಟ್ಟಿದ್ದಳು. ವೈದ್ಯಕೀಯ ಪರೀಕ್ಷೆಯು ಆಕೆಯ ಸಾವಿಗೆ ಪತಿಯ ಕೃತ್ಯ ಕಾರಣವೆನ್ನುವುದನ್ನು ಉಲ್ಲೇಖಿಸಿತ್ತು. 2017ರಲ್ಲಿ ಈ ಕೃತ್ಯ ನಡೆದಿದ್ದು, ಸುದೀರ್ಘ ವಿಚಾರಣೆಯ ಬಳಿಕ ಛತ್ತೀಸ್ಗಡ ಹೈಕೋರ್ಟ್ ನ್ಯಾಯಾಧೀಶ ನರೇಂದ್ರ ಕುಮಾರ್ ವ್ಯಾಸ್ ಎಂಬವರು, ದಂಪತಿಯ ನಡುವೆ ಒಪ್ಪಿತವಲ್ಲದ ಲೈಂಗಿಕ ಕ್ರಿಯೆ ಅಪರಾಧವಲ್ಲ ಎನ್ನುವ ನೆಪವನ್ನು ಮುಂದೊಡ್ಡಿಕೊಂಡು ಆರೋಪಿಯನ್ನು ಬಿಡುಗಡೆಗೊಳಿಸಲು ಆದೇಶಿಸಿದ್ದಾರೆ. ತಮ್ಮ ತೀರ್ಪಿಗೆ ಸುಪ್ರೀಂಕೋರ್ಟ್ ತೀರ್ಪನ್ನು ಅವರು ಸಮರ್ಥನೆಯಾಗಿ ಬಳಸಿಕೊಂಡಿದ್ದಾರೆ. ಪತ್ನಿಯನ್ನು ಪತಿ ಅತ್ಯಾಚಾರವೆಸಗಿದರೆ ಅದು ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ 2017ರಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಾಧೀಶರು, ತನ್ನ ಪತ್ನಿಯ ಒಪ್ಪಿಗೆಯಿಲ್ಲದೆ ಅಸ್ವಾಭಾವಿಕ ಲೈಂಗಿಕತೆ ಸೇರಿದಂತೆ ಯಾವುದೇ ರೀತಿಯಲ್ಲಿ ಲೈಂಗಿಕ ಕ್ರಿಯೆಯನ್ನು ನಡೆಸಿದರೆ ಭಾರತೀಯ ದಂಡ ಸಂಹಿತೆಯ ಪ್ರಕಾರ ಪತಿಯನ್ನು ಶಿಕ್ಷಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಛತ್ತೀಸ್ಗಡ ಹೈಕೋರ್ಟ್ನ ತೀರ್ಪು ಮಾನವ ಹಕ್ಕು ಸಂಘಟನೆಗಳು, ಮಹಿಳಾ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಮುಖ್ಯವಾಗಿ, ಭಾರತದ ದೇಶದಲ್ಲಿ ಇಬ್ಬರ ನಡುವಿನ ‘ಒಪ್ಪಿತ ಅನೈಸರ್ಗಿಕ ರೀತಿಯ ಲೈಂಗಿಕ ಕ್ರಿಯೆ’ಯ ಬಗ್ಗೆಯೇ ಭಿನ್ನಾಭಿಪ್ರಾಯಗಳಿವೆ, ಆಕ್ಷೇಪಗಳಿವೆ. ಎಲ್ಜಿಬಿಟಿ ಸಂಬಂಧಗಳ ವಿವಾಹಗಳ ಬಗ್ಗೆ ಭಾರತ ನ್ಯಾಯಾಲಯ ಈಗಲೂ ಸ್ಪಷ್ಟ ನಿರ್ಧಾರವನ್ನು ತಳೆಯದೇ ಇರಲು ಮುಖ್ಯ ಕಾರಣ, ಈ ಸಂಬಂಧ ಅನೈಸರ್ಗಿಕವಾದುದು ಎನ್ನುವುದಾಗಿದೆ. ಇಬ್ಬರು ಒಪ್ಪಿತವಾಗಿ ಅನೈಸರ್ಗಿಕವಾಗಿ ಲೈಂಗಿಕ ಕ್ರಿಯೆ ನಡೆಸಿದರೆ ಅದನ್ನು ಪ್ರಶ್ನಿಸುವ ನ್ಯಾಯ ವ್ಯವಸ್ಥೆ, ಮಹಿಳೆಯೊಬ್ಬಳ ಅಸಮ್ಮತಿಯೊಂದಿಗೆ ಪುರುಷನೊಬ್ಬ ಅನೈಸರ್ಗಿಕವಾಗಿ ಲೈಂಗಿಕ ದೌರ್ಜನ್ಯ ನಡೆಸಿದಾಗ ಅದನ್ನು ಹೇಗೆ ಒಪ್ಪುತ್ತದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಮುಖ್ಯವಾಗಿ, ಮದುವೆ ಎನ್ನುವುದು ಸಮ್ಮತಿಯ ಜೊತೆಗೆ ಎರಡು ಮನಸ್ಸುಗಳು, ಎರಡು ಕುಟುಂಬಗಳು ಒಂದಾಗುವುದು. ಮದುವೆಯಾದ ಬಳಿಕವೂ ಹೆಣ್ಣೊಬ್ಬಳ ಜೊತೆಗೆ ದೈಹಿಕ ಸಂಪರ್ಕವನ್ನು ಬೆಳೆಸುವ ಮೊದಲು ಆಕೆಯ ಸಮ್ಮತಿಯನ್ನು ಪಡೆದುಕೊಳ್ಳುವುದು ಕೆಲವು ಧರ್ಮಗಳಲ್ಲಿ ಅನಿವಾರ್ಯವಾಗಿದೆ. ಆಕೆಯ ಅನುಮತಿಯಿಲ್ಲದೆ ಆಕೆಯ ದೇಹವನ್ನು ಮುಟ್ಟುವ ಅಧಿಕಾರವೂ ಪುರುಷನಿಗಿಲ್ಲ ಎನ್ನುವಾಗ, ಮದುವೆಯಾಗಿರುವುದನ್ನೇ ಸಮರ್ಥನೆಯಾಗಿಟ್ಟುಕೊಂಡು ಹೆಣ್ಣಿನ ಮೇಲೆ ನಡೆಸುವ ಅತ್ಯಾಚಾರವನ್ನು ನ್ಯಾಯಾಲಯ ಸಮ್ಮತಿಸುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಕಳೆದ ಕೆಲವು ವರ್ಷಗಳಿಂದ ಚರ್ಚೆಗೊಳಗಾಗುತ್ತಲೇ ಬಂದಿದೆ. ಇದೀಗ ಪತ್ನಿಯ ಸಾವಿಗೆ ಕಾರಣವಾದ ಅನೈಸರ್ಗಿಕ ಲೈಂಗಿಕ ದೌರ್ಜನ್ಯವನ್ನು ಛತ್ತೀಸ್ಗಡ ಹೈಕೋರ್ಟ್ ಮಾನ್ಯಗೊಳಿಸಲು ಮುಂದಾಗಿದೆ. ಹಾಗಾದರೆ, ವಿವಾಹಬಂಧ ಹೆಣ್ಣಿನ ಮೇಲೆ ಅತ್ಯಾಚಾರ ನಡೆಸಲು, ಅನೈಸರ್ಗಿಕವಾಗಿ ಲೈಂಗಿಕ ದೌರ್ಜನ್ಯವೆಸಗಲು ನ್ಯಾಯಾಲಯವೇ ನೀಡುವ ಪರವಾನಿಗೆಯೇ ಎಂದು ಜನರು ಪ್ರಶ್ನಿಸುವಂತಾಗಿದೆ. ವಿಶೇಷವೆಂದರೆ, ಛತ್ತೀಸ್ಗಡ ಹೈಕೋರ್ಟ್ನ ಪ್ರಕಾರ, 15 ವರ್ಷ ಮೇಲ್ಮಟ್ಟ ತರುಣಿಯ ಮೇಲಿನ ಒಪ್ಪಿತವಲ್ಲದ ಲೈಂಗಿಕ ಕ್ರಿಯೆಯೂ ಕಾನೂನು ಪ್ರಕಾರ ಮಾನ್ಯವಂತೆ. ಹಾಗಾದರೆ ಬಾಲ್ಯವಿವಾಹ ಕಾಯ್ದೆ ಮತ್ತು ಪೊಕ್ಸೊ ಕಾಯ್ದೆಯ ಕುರಿತಂತೆ ಈ ಹೈಕೋರ್ಟ್ನ ಅಭಿಪ್ರಾಯವೇನಿರಬಹುದು? ಸ್ವತಃ ನ್ಯಾಯಾಧೀಶರೇ ಮಹಿಳೆಯರಿಗೆ ಸಂಬಂಧಿಸಿದ ತೀರ್ಪಿನ ಸಂದರ್ಭದಲ್ಲಿ ಸಂವಿಧಾನವನ್ನು ನಿರ್ಲಕ್ಷಿಸಿದರೆ ಇನ್ನು ನ್ಯಾಯ ವ್ಯವಸ್ಥೆಗೆ ಉಳಿಗಾಲವೆಲ್ಲಿದೆ?

ಇಂತಹದೇ ಅನೈಸರ್ಗಿಕ ಸಂಪರ್ಕದಿಂದ ಇನ್ನೊಂದು ಹೇಳಿಕೆ ಸುಪ್ರೀಂಕೋರ್ಟ್ ನಿಂದಲೂ ಹೊರ ಬಿದ್ದಿದೆ. ‘‘ಜನರಿಗೆ ಉಚಿತ ಪಡಿತರ ಮತ್ತು ಹಣ ದೊರೆಯುತ್ತಿರುವುದರಿಂದಾಗಿ ಅವರು ಕೆಲಸ ಮಾಡಲು ಸಿದ್ಧರಿಲ್ಲ’’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ. ನಗರ ಪ್ರದೇಶಗಳಲ್ಲಿ ನಿರಾಶ್ರಿತರ ಆಶ್ರಯದ ಹಕ್ಕಿಗೆ ಸಂಬಂಧಿಸಿದ ವಿಷಯದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸಂದರ್ಭದಲ್ಲಿ ತನ್ನ ಅಭಿಪ್ರಾಯವನ್ನು ಹೊರ ಹಾಕಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ, ‘‘ಈ ಉಚಿತ ಕೊಡುಗೆಗಳಿಂದಾಗಿ ಜನರು ಕೆಲಸ ಮಾಡಲು ಸಿದ್ಧರಿಲ್ಲ. ಅವರಿಗೆ ಉಚಿತ ಪಡಿತರವನ್ನು ಒದಗಿಸಲಾಗುತ್ತಿದೆ. ಯಾವುದೇ ಕೆಲಸವನ್ನು ಮಾಡದೆ ಅವರು ಹಣವನ್ನು ಪಡೆಯುತ್ತಿದ್ದಾರೆ’’ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಪರ್ಯಾಸವೆಂದರೆ, ಈ ದೇಶದಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆ, ಬಡತನದಿಂದ ಜನರನ್ನು ರಕ್ಷಿಸುತ್ತಿರುವುದು ಸರಕಾರ ನೀಡುತ್ತಿರುವ ಪಡಿತರ ವ್ಯವಸ್ಥೆ ಎನ್ನುವುದನ್ನು ವಿಶ್ವಸಂಸ್ಥೆಯೂ ಸೇರಿದಂತೆ ಹಲವು ಸಮೀಕ್ಷೆಗಳು ಸ್ಪಷ್ಟಪಡಿಸಿವೆ. ಇಂದು ಸರಕಾರ ಬೃಹತ್ ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ , ಸಬ್ಸಿಡಿಗಳ ಬಗ್ಗೆ ನ್ಯಾಯಾಲಯ ಮೌನವಾಗಿದೆ. ಬೃಹತ್ ಉದ್ಯಮಿಗಳು ಮಾಡಿರುವ ಕೋಟ್ಯಂತರ ರೂಪಾಯಿ ಸಾಲಗಳ ರೈಟ್ ಆಫ್ ಬಗ್ಗೆ ತುಟಿ ಬಿಚ್ಚಲು ನ್ಯಾಯಾಲಯಗಳು ಹಿಂದೇಟು ಹಾಕುತ್ತಿವೆ. ಆದರೆ, ಈ ದೇಶದ ಬಡವರ ಮೂಲಭೂತ ಅಗತ್ಯಗಳನ್ನು ಪೂರೈಸುವಾಗ ಮಾತ್ರ ಕಣ್ಣು ಕಿಸುರಾಗುತ್ತದೆ. ಈ ದೇಶದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಿರುವುದರ ಬಗ್ಗೆ ವಿಶ್ವಸಂಸ್ಥೆ ಹಲವು ಬಾರಿ ಎಚ್ಚರಿಸಿದೆ. ಕಳೆದ ಲಾಕ್ಡೌನ್ನ ಅವಧಿಯಲ್ಲಿ ವಲಸೆ ಕಾರ್ಮಿಕರ ಮಾರಣ ಹೋಮ ನಡೆಯಿತು. ನಿರುದ್ಯೋಗ, ಹಸಿವು ಇತ್ಯಾದಿಗಳಿಂದ ನಗರದ ಕಾರ್ಮಿಕರು ತತ್ತರಿಸಿದರು. ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ತಮ್ಮ ತಮ್ಮ ಹಳ್ಳಿಯೆಡೆಗೆ ಸಾವಿರಾರು ಕಿಲೋಮೀಟರ್ ದಾರಿಗಳನ್ನು ಸವೆಸಿದಾಗಲೂ ನ್ಯಾಯಾಲಯ ಮೌನವಾಗಿತ್ತು. ಈ ಸಂದರ್ಭದಲ್ಲಿ ಹಲವು ಕಾರ್ಮಿಕರು ಮೃತರಾದರು. ಆದರೆ ಸರಕಾರದ ಬಳಿ ಇವರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು, ಅಂಕಿಅಂಶಗಳು ಇರಲಿಲ್ಲ. ಇವುಗಳ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದರೂ, ನ್ಯಾಯಾಲಯ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲಿಲ್ಲ. ಇಂದು ಉಚಿತ ಪಡಿತರವನ್ನು ಯಾಕೆ ವಿತರಿಸುತ್ತೀರಿ ಎಂದು ಕೇಳುವ ಬದಲು, ಉಚಿತ ಪಡಿತರ ವಿತರಿಸುವಷ್ಟು ಬಡತನ ಈ ದೇಶದಲ್ಲಿ ಯಾಕೆ ಇನ್ನೂ ಉಳಿದುಕೊಂಡಿದೆ ಎಂದು ಆಳುವವರಿಗೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಳ್ಳಬೇಕಾಗಿತ್ತು. ಆದರೆ ಉಚಿತಗಳನ್ನು ನಿಲ್ಲಿಸಲು ಉಚಿತ ಸಲಹೆಗಳನ್ನು ನೀಡುತ್ತಿರುವ ನಮ್ಮ ನ್ಯಾಯಾಲಯಗಳು ಬಡತನ ಅಳಿಸಲು, ಉದ್ಯೋಗಗಳನ್ನು ನೀಡಲು, ಎಲ್ಲರಿಗೂ ಶಿಕ್ಷಣವನ್ನು ಒದಗಿಸಲು ಸಲಹೆಗಳನ್ನು ನೀಡುತ್ತಿಲ್ಲ. ಬಡವರಿಗೆ ನೀಡುವ ಉಚಿತಗಳು ಸಂವಿಧಾನ ಅವರಿಗೆ ನೀಡಿದ ಮೂಲಭೂತ ಹಕ್ಕು ಎನ್ನುವುದನ್ನು ನ್ಯಾಯಾಲಯ ಮರೆತು ಮಾತನಾಡುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ.

ಉಚಿತಗಳ ವಿರುದ್ಧ ನ್ಯಾಯಾಲಯ ತನ್ನ ಉಚಿತ ಅಭಿಪ್ರಾಯ ಮಂಡಿಸಿದ ಬೆನ್ನಿಗೇ ಇನ್ನೊಂದೆಡೆ ಎಲ್ ಆ್ಯಂಡ್ ಟಿ ಅಧ್ಯಕ್ಷ ಎಸ್. ಎನ್. ಸುಬ್ರಹ್ಮಣ್ಯನ್ ಅವರು ‘‘ಸರಕಾರದ ಕಲ್ಯಾಣ ಯೋಜನೆಗಳಿಂದಾಗಿ ಕಾರ್ಮಿಕರು ಕೆಲಸಕ್ಕಾಗಿ ಬೇರೆ ಕಡೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ’’ ಎನ್ನುವ ಬೇಜವಾಬ್ದಾರಿ ಮಾತುಗಳನ್ನು ಆಡಿದ್ದಾರೆ. ಇವರ ಮಾತುಗಳು ಸುಪ್ರೀಂಕೋರ್ಟ್ ಮಾತುಗಳೊಂದಿಗೆ ಸಾಮ್ಯತೆಯನ್ನು ಹೊಂದಿರುವುದು ಆಕಸ್ಮಿಕವಲ್ಲ. ಬಡವರಿಂದ ಕಿತ್ತುಕೊಂಡು ಬೃಹತ್ ಉದ್ಯಮಿಗಳಿಗೆ ನೀಡುವುದನ್ನೇ ಅಭಿವೃದ್ಧಿಯೆಂದು ಪ್ರತಿಪಾದಿಸಲು ನ್ಯಾಯ ವ್ಯವಸ್ಥೆಯೊಳಗಿರುವ ಜನರೂ ಮುಂದಾಗಿದ್ದಾರೆ. ಇದು ಬೃಹತ್ ಉದ್ಯಮಿಗಳು, ಮೇಲ್ಜಾತಿಗಳು ಮತ್ತು ಮನುವಾದಿಗಳ ಜೊತೆಗೆ ನ್ಯಾಯ ವ್ಯವಸ್ಥೆ ಹೊಂದಿರುವ ಅನೈಸರ್ಗಿಕ ಸಂಬಂಧಗಳ ಫಲ ಎನ್ನುವುದರಲ್ಲಿ ಅನುಮಾನವಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News