×
Ad

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ವೆಸ್ಟ್ ಇಂಡೀಸ್ ಕ್ರಿಕೆಟಿಗ ಆ್ಯಂಡ್ರೆ ರಸೆಲ್

Update: 2025-07-17 12:03 IST

ಆ್ಯಂಡ್ರೆ ರಸೆಲ್ (Photo credit: X/@ddsportschannel)

ಕಿಂಗ್ಸ್ಟನ್: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಲ್ ರೌಂಡರ್ ಆ್ಯಂಡ್ರೆ ರಸೆಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದು, ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯ ಎರಡು ಪಂದ್ಯಗಳ ನಂತರ, ನಿವೃತ್ತಿಯಾಗುವುದಾಗಿ ಪ್ರಕಟಿಸಿದ್ದಾರೆ.

37 ವರ್ಷದ ರಸೆಲ್ ಅವರನ್ನು ಆಸ್ಟ್ರೇಲಿಯಾ ತಂಡದ ವಿರುದ್ಧದ ಐದು ಪಂದ್ಯಗಳ ಸರಣಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದ್ದು, ಜಮೈಕಾದ ಸಬೀನಾ ಪಾರ್ಕ್ ನ ತಮ್ಮ ತವರು ಮೈದಾನದಲ್ಲಿ ನಡೆಯಲಿರುವ ಮೊದಲ ಎರಡು ಪಂದ್ಯಗಳ ಬಳಿಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಲಿದ್ದಾರೆ. ಅವರ ನಿವೃತ್ತಿಯ ನಿರ್ಧಾರವನ್ನು ಗೌರವಾರ್ಪಣೆ ಪೋಸ್ಟ್ ನೊಂದಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಕೂಡಾ ದೃಢಪಡಿಸಿದೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆ್ಯಂಡ್ರೆ ರಸೆಲ್, “ನಿವೃತ್ತಿಯ ಅರ್ಥವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದು ನನ್ನ ಜೀವನದ ಅತ್ಯಂತ ಹೆಮ್ಮೆಯ ಸಾಧನೆಗಳಲ್ಲಿ ಒಂದಾಗಿದೆ. ನಾನು ಸಣ್ಣವನಿದ್ದಾಗ, ನಾನು ಈ ಎತ್ತರಕ್ಕೆ ತಲುಪುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ, ನೀವು ಹೆಚ್ಚು ಆಟವಾಡಲು ಮತ್ತು ಕ್ರೀಡೆಯನ್ನು ಪ್ರೀತಿಸಲು ಪ್ರಾರಂಭಿಸಿದ ನಂತರ, ನೀವು ಏನನ್ನು ಸಾಧಿಸಬಹುದು ಎಂಬುದನ್ನು ನೀವೇ ಅರಿತುಕೊಳ್ಳುತ್ತೀರಿ. ಇದು ನನಗೆ ಸ್ಫೂರ್ತಿಯಾಯಿತು. ನಾನು ಕಡುಗೆಂಪು ಬಣ್ಣದಲ್ಲಿ ಒಂದು ಗುರುತು ಮೂಡಿಸಿ, ಇತರರಿಗೆ ಸ್ಫೂರ್ತಿಯಾಗಲು ಬಯಸಿದ್ದೆ” ಎಂದು ಹೇಳಿದ್ದಾರೆ.

ವೆಸ್ಟ್ ಇಂಡೀಸ್ ತಂಡದ ಪರ 84 ಟಿ-20 ಪಂದ್ಯಗಳಲ್ಲಿ ಆಡಿರುವ ಆ್ಯಂಡ್ರೆ ರಸೆಲ್, ಈ ಪಂದ್ಯಗಳಲ್ಲಿ ಒಟ್ಟು 1078 ರನ್ ಗಳಿಸಿದ್ದು, 61 ವಿಕೆಟ್ ಗಳನ್ನೂ ಕಿತ್ತಿದ್ದಾರೆ. ಇದಲ್ಲದೆ, 2012 ಹಾಗೂ 2016ರ ಟಿ-20 ವಿಶ್ವಕಪ್ ಗೆದ್ದ ತಂಡದಲ್ಲೂ ಅವರು ಭಾಗವಾಗಿದ್ದರು.

ಆದರೆ, ಕೇವಲ ಒಂದು ಟೆಸ್ಟ್ ಪಂದ್ಯದಲ್ಲಿ ಮಾತ್ರ ಆಡಿರುವ ಆ್ಯಂಡ್ರೆ ರಸೆಲ್, 56 ಏಕದಿನ ಪಂದ್ಯಗಳಲ್ಲೂ ಆಡಿದ್ದಾರೆ. ಈ ಮಾದರಿಯ ಕ್ರಿಕೆಟ್ ನಲ್ಲಿ ಅವರು ಒಟ್ಟು 1,034 ರನ್ ಗಳಿಸಿದ್ದು, 70 ವಿಕೆಟ್ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News