ವಿಂಬಲ್ಡನ್ | ಪ್ರಿ-ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದ ಅಮೆರಿಕದ ಆಟಗಾರ್ತಿ ಅನಿಸಿಮೋವಾ
ಲಂಡನ್: ಅಮಂಡಾ ಅನಿಸಿಮೋವಾ ಈ ವರ್ಷದ ವಿಂಬಲ್ಡನ್ ಟೂರ್ನಿಯಲ್ಲಿ ಅಂತಿಮ-16ರ ಸುತ್ತು ತಲುಪಿದ ಅಮೆರಿಕದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ 13ನೇ ಶ್ರೇಯಾಂಕದ ಅನಿಸಿಮೋವಾ ಅವರು ಹಂಗೇರಿಯದ ಡಾಲ್ಮಾ ಗಲ್ಫಿ ಅವರನ್ನು 6-3, 5-7, 6-3 ಸೆಟ್‌ಗಳಿಂದ ಮಣಿಸಿದರು.
2022ರಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದ ಅನಿಸಿಮೋವಾ ಅವರು ಮೊದಲ ಸೆಟ್ ಅನ್ನು 6-3 ಅಂತರದಿಂದ ಗೆದ್ದುಕೊಂಡು ಉತ್ತಮ ಆರಂಭ ಪಡೆದರು. ಆದರೆ 2ನೇ ಸೆಟ್ಟನ್ನು 5-7ರಿಂದ ಸೋಲನುಭವಿಸಿ ಆತಂಕಕ್ಕೀಡಾದರು. 3ನೇ ಸೆಟ್ಟನ್ನು 6-3 ಅಂತರದಿಂದ ಗೆದ್ದುಕೊಂಡು ಮೇಲುಗೈ ಸಾಧಿಸಿದರು.
ಸೋಲಾನಾ ಸಿಯೇರ್ರಾ ಅವರು 1968ರಲ್ಲಿ ವೃತ್ತಿಪರ ಟೆನಿಸ್ ಆರಂಭವಾದ ನಂತರ ಗ್ರ್ಯಾಸ್‌ಕೋರ್ಟ್ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ 4ನೇ ಸುತ್ತು ತಲುಪಿದ ಅರ್ಜೆಂಟೀನದ ಮೊದಲ ಆಟಗಾರ್ತಿ ಎನಿಸಿಕೊಂಡರು.
21ರ ಹರೆಯದ ಸೋಲಾನಾ ಸ್ಪೇನ್‌ನ ಕ್ರಿಸ್ಟಿನಾ ಬುಕ್ಸಾರನ್ನು 7-5, 1-6, 6-1 ಸೆಟ್‌ಗಳಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಲೌರಾ ಸೀಗ್ಮೆಂಡ್ ಅಥವಾ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಮ್ಯಾಡಿಸನ್ ಕೀಸ್ ರನ್ನು ಎದುರಿಸಲಿದ್ದಾರೆ.
ಬ್ರಿಟನ್‌ನ ಸೋನಾಯ್ ಕಾರ್ಟಲ್ ಕೂಡ ವಿಂಬಲ್ಡನ್ ಟೂರ್ನಿಯಲ್ಲಿ ಮೊದಲ ಬಾರಿ ನಾಲ್ಕನೇ ಸುತ್ತು ತಲುಪಿದ್ದಾರೆ. ಕಾರ್ಟಲ್ ಅವರು ಶುಕ್ರವಾರ ಮಹಿಳೆಯರ ಸಿಂಗಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ ಫ್ರೆಂಚ್ ಕ್ವಾಲಿಫೈಯರ್ ಡಿಯಾನ್ ಪಾರ್ರಿ ಅವರನ್ನು 6-4, 6-2 ನೇರ ಸೆಟ್‌ಗಳಿಂದ ಮಣಿಸಿದರು.