ಏಶ್ಯಕಪ್ | ನಾಳೆ ಭಾರತ- ಬಾಂಗ್ಲಾದೇಶ ಮುಖಾಮುಖಿ
PC : PTI
ದುಬೈ, ಸೆ. 23: ಏಶ್ಯ ಕಪ್ ಪಂದ್ಯಾವಳಿಯ ಮಹತ್ವದ ಸೂಪರ್ ಫೋರ್ ಪಂದ್ಯವೊಂದರಲ್ಲಿ ಬುಧವಾರ ಭಾರತೀಯ ಕ್ರಿಕೆಟ್ ತಂಡವು ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಮ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
ಬಾಂಗ್ಲಾದೇಶವು ರಿಶಾದ್ ಹುಸೈನ್ ಮತ್ತು ಮೆಹದಿ ಹಸನ್ ನೇತೃತ್ವದ ಸ್ಪಿನ್ ಪ್ರಾಬಲ್ಯದ ಬೌಲಿಂಗ್ ದಾಳಿಯ ಮೂಲಕ ಭಾರತಕ್ಕೆ ಸವಾಲೊಡ್ಡಲು ಮುಂದಾಗಿದೆ.
ಭಾರತವು ತನ್ನ ಮೊದಲ ಸೂಪರ್ ಫೋರ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದೆ. ಅದು ಈವರೆಗೆ ಪಂದ್ಯಾವಳಿಯಲ್ಲಿ ಅಜೇಯವಾಗಿ ಮುಂದುವರಿದಿದ್ದು, ಈ ಮೂಲಕ ಎದುರಾಳಿಗಳಿಗೆ ಕಠಿಣ ಎಚ್ಚರಿಕೆಯನ್ನು ನೀಡಿದೆ.
ಪಾಕಿಸ್ತಾನ ವಿರುದ್ಧದ ಸೂಪರ್ ಫೋರ್ ಪಂದ್ಯದಲ್ಲಿ, ಭಾರತದ ಅಭಿಶೇಕ್ ಶರ್ಮಾ ಮತ್ತು ಶುಭಮನ್ ಗಿಲ್ ತಮ್ಮ ನಿರ್ವಹಣೆ ಮೂಲಕ ಗಮನ ಸೆಳೆದಿದ್ದರು. ಅವರು ಪಂದ್ಯಾವಳಿಯ ಮೊದಲ 100 ಪ್ಲಸ್ ಭಾಗೀದಾರಿಕೆಯನ್ನು ನಿಭಾಯಿಸಿದ್ದರು.
ಬಾಂಗ್ಲಾದೇಶದ ಪ್ರಬಲ ಸ್ಪಿನ್ ದಾಳಿಯನ್ನು ಎದುರಿಸುವಲ್ಲಿ ಭಾರತದ ಪ್ರಮುಖ ಬ್ಯಾಟರ್‌ಗಳಾದ ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್ ಮತ್ತು ಅಭಿಶೇಕ್ ಶರ್ಮಾ ಮಹತ್ವದ ಪಾತ್ರ ವಹಿಸಲಿದ್ದಾರೆ. ಸ್ಪಿನ್ ದಾಳಿಯನ್ನು ಸುಲಲಿತವಾಗಿ ನಿಭಾಯಿಸುವ ಅವರ ಸಾಮರ್ಥ್ಯವು ಪಂದ್ಯದ ಗತಿಯನ್ನು ನಿರ್ಧರಿಸಲಿದೆ. ಈ ಸಂದರ್ಭದಲ್ಲಿ, ಮಧ್ಯಮ ಕ್ರಮಾಂಕದಲ್ಲಿ ಇರಬಹುದಾದ ಯಾವುದೇ ದೌರ್ಬಲ್ಯಗಳ ಲಾಭ ಪಡೆಯಲು ಬಾಂಗ್ಲಾದೇಶ ಬೌಲರ್‌ಗಳು ಶ್ರಮಿಸಲಿದ್ದಾರೆ.
ಫಾರ್ಮ್ ಮತ್ತು ಆತ್ಮವಿಶ್ವಾಸದಿಂದ ತುಂಬಿ ತುಳುಕುತ್ತಿರುವ ಭಾರತವು ತನ್ನ ವಿಜಯದ ಸರಣಿಯನ್ನು ಮುಂದುವರಿಸಿ ಇನ್ನೊಂದು ಗಮನಾರ್ಹ ಜಯವನ್ನು ತನ್ನದಾಗಿಸಿಲು ಎದುರು ನೋಡುತ್ತಿದೆ.
ಭಾರತ-ಬಾಂಗ್ಲಾ ಟಿ20ಐ ಮುಖಾಮುಖಿ
ಬಾಂಗ್ಲಾದೇಶದ ವಿರುದ್ಧದ ಬುಧವಾರದ ಪಂದ್ಯಕ್ಕೆ ಸಜ್ಜುಗೊಳ್ಳುತ್ತಿರುವ ಭಾರತವು ಗೆಲ್ಲುವ ಅತ್ಯಂತ ನೆಚ್ಚಿನ ತಂಡವಾಗಿದೆ. ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಈವರೆಗೆ ಪರಸ್ಪರ 17 ಟಿ20 ಪಂದ್ಯಗಳನ್ನು ಆಡಿದ್ದು, ಬಾಂಗ್ಲಾದೇಶ ಕೇವಲ ಒಂದು ಪಂದ್ಯವನ್ನು ಗೆದ್ದಿದೆ. ಬಲಿಷ್ಠ ಭಾರತೀಯ ತಂಡಕ್ಕೆ ಹೋಲಿಸಿದರೆ ಬಾಂಗ್ಲಾದೇಶ ತಂಡವು ಸಾಕಷ್ಟು ಸ್ಫೋಟಕ ಶಕ್ತಿಯನ್ನು ಹೊಂದಿಲ್ಲ.
ಭಾರತಕ್ಕೆ ಮೊದಲು ಬೌಲಿಂಗ್ ಮಾಡುವ ಅವಕಾಶ ಸಿಕ್ಕಿದರೆ ಮತ್ತು ಭಾರತವನ್ನು 150-160 ರನ್‌ಗೆ ನಿಯಂತ್ರಿಸಲು ಅದಕ್ಕೆ ಸಾಧ್ಯವಾದರೆ, ಅದು ಗೆಲುವಿಗಾಗಿ ಎದುರು ನೋಡಬಹುದಾಗಿದೆ. ಕೊನೆಯ ಹಂತದ ಓವರ್‌ಗಳಲ್ಲಿ ಮುಸ್ತಾಫಿಝುರ‌್ರಹ್ಮಾನ್‌ರ ನಿರ್ವಹಣೆ ಮತ್ತು ಮಧ್ಯಮ ಓವರ್‌ಗಳಲ್ಲಿ ಎದುರಾಳಿ ತಂಡದ ರನ್ ಹರಿವನ್ನು ನಿಧಾನಿಸುವಲ್ಲಿ ಸ್ಪಿನ್ನರ್‌ಗಳಾದ ರಿಶಾದ್ ಹುಸೈನ್ ಮತ್ತು ಮೆಹದಿ ಹಸನ್‌ರ ಯಶಸ್ಸು ಬಾಂಗ್ಲಾದೇಶದ ಅವಕಾಶಗಳನ್ನು ನಿರ್ಧರಿಸುತ್ತದೆ.
ಆಡುವ ಹನ್ನೊಂದರ ತಂಡದಲ್ಲಿ ಭಾರತವು ಯಾವುದೇ ಬದಲಾವಣೆಯನ್ನು ಮಾಡುವ ಸಾಧ್ಯತೆಯಿಲ್ಲ.
ಪಂದ್ಯ ಆರಂಭ: ರಾತ್ರಿ 8 ಗಂಟೆ
ಸಂಭಾವ್ಯ 11 ಆಟಗಾರರ ತಂಡಗಳು
ಭಾರತ: ಅಭಿಶೇಕ್ ಶರ್ಮಾ, ಶುಭಮನ್ ಗಿಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಶಿವಮ್ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.
ಬಾಂಗ್ಲಾದೇಶ: ಸೈಫ್ ಹಸನ್, ತಂಝೀದ್ ಹಸನ್, ಲಿಟೋನ್ ದಾಸ್ (ನಾಯಕ ಹಾಗೂ ವಿಕೆಟ್‌ಕೀಪರ್), ತೌಹೀದ್ ಹೃದಯ್, ಶಮೀಮ್ ಹುಸೈನ್, ಜಾಕಿರ್ ಅಲಿ, ಮೆಹದಿ ಹಸನ್, ನಸುಮ್ ಅಹ್ಮದ್, ತಸ್ಕಿನ್ ಅಹ್ಮದ್, ತಂಝೀಮ್ ಹಸನ್, ಮುಸ್ತಾಫಿಝುರ್ ರಹ್ಮಾನ್.