ಹೊಸ ಪ್ರಾಯೋಜಕರಿಗಾಗಿ ಬಿಸಿಸಿಐಯಿಂದ ಅರ್ಜಿ ಆಹ್ವಾನ
ಬಿಸಿಸಿಐ | PC : @BCCI
ಚೆನ್ನೈ, ಸೆ.2: ಭಾರತೀಯ ಕ್ರಿಕೆಟ್ ತಂಡಕ್ಕೆ ಹೊಸ ಶೀರ್ಷಿಕೆ ಪ್ರಾಯೋಜಕರಿಗಾಗಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು(ಬಿಸಿಸಿಐ)ಮಂಗಳವಾರ ಅರ್ಜಿಗಳನ್ನು ಆಹ್ವಾನಿಸಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಾಷ್ಟ್ರೀಯ ತಂಡದ ಪ್ರಮುಖ ಪ್ರಾಯೋಜಕರ ಹಕ್ಕುಗಳಿಗಾಗಿ ಆಸಕ್ತರಿಂದ ಅರ್ಜಿಗಳನ್ನು ಅಹ್ವಾನಿಸುತ್ತಿದೆ ಎಂದು ಮಂಡಳಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಕೇಂದ್ರ ಸರಕಾರವು ಇತ್ತೀಚೆಗೆ ನೈಜ ಹಣ ಆಧಾರಿತ ಆನ್ ಲೈನ್ ಗೇಮಿಂಗ್ ಅನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಡ್ರೀಮ್11 ಕಂಪನಿ ಇನ್ನು ಮುಂದೆ ಪ್ರಾಯೋಜಕರಾಗಿ ಮುಂದುವರಿಯಲು ತನ್ನಿಂದ ಸಾಧ್ಯವಿಲ್ಲ ಎಂದು ಬಿಸಿಸಿಐಗೆ ತಿಳಿಸಿದ ನಂತರ ಈ ಬದಲಾವಣೆ ಆಗಿದೆ.
ಡ್ರೀಮ್ 11 ಬಿಸಿಸಿಐ ಜೊತೆ 2023ರಿಂದ 2026ರ ತನಕ 44 ಮಿಲಿಯನ್ ಅಮೆರಿಕನ್ ಡಾಲರ್(ಸುಮಾರು 358 ಕೋ.ರೂ.)ಒಪ್ಪಂದ ಮಾಡಿಕೊಂಡಿತ್ತು.
ಮತ್ತೊಂದು ಫ್ಯಾಂಟಸಿ ಕ್ರೀಡಾ ವೇದಿಕೆಯಾದ ಮೈ 11 ಸರ್ಕಲ್ ಜೊತೆಗೂಡಿ ಡ್ರೀಮ್ 11 ಕಂಪನಿಯು ಭಾರತೀಯ ಕ್ರಿಕೆಟ್ ತಂಡ ಹಾಗೂ ಐಪಿಎಲ್ ಪ್ರಾಯೋಜಕತ್ವದ ಮೂಲಕ ಬಿಸಿಸಿಐಗೆ ಸುಮಾರು 1,000 ಕೋಟಿ ರೂ.ಗಳನ್ನು ಕೊಡುಗೆಯಾಗಿ ನೀಡಿದೆ.