ಬಿಸಿಸಿಐ ನಿವ್ವಳ ಆದಾಯ 6,700 ಕೋಟಿ ರೂ.ಗೆ ಏರಿಕೆ
Photo Credit : @BCCI
ಹೊಸದಿಲ್ಲಿ, ಅ. 17: ಇತ್ತೀಚೆಗೆ ಯುಎಇಯಲ್ಲಿ ನಡೆದ ಐಸಿಸಿ ಟಿ20 ಏಶ್ಯಕಪ್ ಪಂದ್ಯಾವಳಿಯ ಆತಿಥ್ಯದಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) 100 ಕೋಟಿ ರೂಪಾಯಿಗೂ ಅಧಿಕ ನಿವ್ವಳ ಆದಾಯವನ್ನು ಪಡೆಯಲಿದೆ.
ಬಿಸಿಸಿಐಯ 2025-26ನೇ ಸಾಲಿನ ವಾರ್ಷಿಕ ಬಜೆಟ್ ಪ್ರಕಾರ, ಅದಕ್ಕೆ 2025-26ನೇ ಸಾಲಿನ ಹಣಕಾಸು ವರ್ಷದಲ್ಲಿ ಸುಮಾರು 6,700 ಕೋಟಿ ರೂಪಾಯಿ ಉಳಿತಾಯವಾಗುತ್ತದೆ.
‘‘ಏಶ್ಯಕಪ್ ಆತಿಥ್ಯ ಶುಲ್ಕಗಳು, ಪ್ರಸಾರ ಹಕ್ಕುಗಳ ಶುಲ್ಕದಿಂದ ಬರುವ ಆದಾಯ ಮತ್ತು ಐಸಿಸಿ ಟಿ20 ವಿಶ್ವಕಪ್ ಸ್ಪರ್ಧಾ ಶುಲ್ಕಗಳಿಂದಾಗಿ ಬಿಸಿಸಿಐಗೆ 109.04 ಕೋಟಿ ರೂಪಾಯಿ ನಿವ್ವಳ ಆದಾಯವು ಬರುತ್ತದೆ. ಸ್ವದೇಶದಲ್ಲಿ ನಡೆಯುವ ಹೆಚ್ಚಿನ ಸಂಖ್ಯೆಯ ಅಂತರ್‌ರಾಷ್ಟ್ರೀಯ ಪಂದ್ಯಗಳಿಂದಾಗಿ ಮಾಧ್ಯಮ ಹಕ್ಕುಗಳ ರೂಪದಲ್ಲಿ ಬರುವ ನಿವ್ವಳ ಆದಾಯವೂ 138.64 ಕೋಟಿ ರೂಪಾಯಿಯಷ್ಟು ಹೆಚ್ಚಾಗುತ್ತದೆ’’ ಎಂದು ಬಿಸಿಸಿಐ ಬಜೆಟ್ ಹೇಳುತ್ತದೆ.
ಪ್ರಸಕ್ತ ಹಣಕಾಸು ವರ್ಷದ ಬಿಸಿಸಿಐಯ ನಿವ್ವಳ ಆದಾಯವು, 2017-18ರ ಸಾಲಿನ ನಿವ್ವಳ ಆದಾಯಕ್ಕೆ ಹೋಲಿಸಿದರೆ 10 ಪಟ್ಟು ಅಧಿಕವಾಗಿದೆ. 2017-18ರಲ್ಲಿ 666 ಕೋಟಿ ರೂ. ಆಗಿದ್ದ ಅದರ ನಿವ್ವಳ ಆದಾಯವು ಈ ಬಾರಿ ಸುಮಾರು 6,700 ಕೋಟಿ ರೂ.ಗೆ ಏರುವ ನಿರೀಕ್ಷೆಯಿದೆ.
ಐಪಿಎಲ್ ಮೌಲ್ಯ ಸತತ 2ನೇ ವರ್ಷವೂ ಕುಸಿತ:
ಆದರೆ, ಅದನ್ನು ಬಾಧಿಸುತ್ತಿರುವ ವಿಷಯವೆಂದರೆ, ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್)ಮೌಲ್ಯಮಾಪನವು ಸತತ 2ನೇ ವರ್ಷ ಗಮನಾರ್ಹವಾಗಿ ಕುಸಿದಿರುವುದು. ಕಳೆದ ವರ್ಷ ಎದುರಾಳಿ ಮಾಧ್ಯಮಗಳಾದ ಜಿಯೋ ಮತ್ತು ಸ್ಟಾರ್ ವಿಲೀನಗೊಂಡಿರುವುದು ಇದಕ್ಕೆ ಕಾರಣವಾಗಿದೆ.
ಡಿ ಮತ್ತು ಪಿ ಅಡ್ವೈಸರಿ ವರದಿಯ ಪ್ರಕಾರ, ಐಪಿಎಲ್‌ನ ಮೌಲ್ಯವು ಕಳೆದ ಎರಡು ವರ್ಷಗಳಲ್ಲಿ 16,000 ಕೋಟಿ ರೂಪಾಯಿಯಷ್ಟು ಕುಸಿದಿದೆ. ಹಣವಿಟ್ಟು ಆಡುವ ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳ ಮೇಲಿನ ನಿಷೇಧವೂ ಮೌಲ್ಯ ಕುಸಿತದಲ್ಲಿ ಗಮನಾರ್ಹ ಪಾತ್ರ ವಹಿಸಿದೆ. ಹಿಂದೆ ಈ ಆ್ಯಪ್‌ಗಳ ಪ್ರಾಯೋಜಕತ್ವಗಳ ಮೂಲಕ ಭಾರೀ ಪ್ರಮಾಣದ ಹಣ ಬಿಸಿಸಿಐಗೆ ಬರುತ್ತಿತ್ತು.