×
Ad

ಸ್ಟಾರ್ ಬೌಲರ್‌ ಗಳ ಕೆಲಸದ ಒತ್ತಡ ನಿಭಾಯಿಸುವ ಬಿಸಿಸಿಐ ಕ್ರಮ ಸಮರ್ಥಿಸಿದ ಭುವನೇಶ್ವರ್

Update: 2025-08-14 21:35 IST

ಜಸ್‌ಪ್ರಿತ್ ಬುಮ್ರಾ | PC : PTI

ಹೊಸದಿಲ್ಲಿ, ಆ.14: ಸ್ಟಾರ್ ಬೌಲರ್‌ ಗಳ ಕೆಲಸದ ಒತ್ತಡವನ್ನು ನಿಭಾಯಿಸುವ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಭಾರತದ ವೇಗಿ ಭುವನೇಶ್ವರ ಕುಮಾರ್ ಅವರು ಜಸ್‌ಪ್ರಿತ್ ಬುಮ್ರಾರ ಬೆಂಬಲಕ್ಕೆ ನಿಂತಿದ್ದಾರೆ.

ಇಂಗ್ಲೆಂಡ್ ವಿರುದ್ಧದ 2025ರ ಆವೃತ್ತಿಯ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿ ಟೂರ್ನಿಗಿಂತ ಮೊದಲು ಐದು ಟೆಸ್ಟ್ ಪಂದ್ಯಗಳ ಪೈಕಿ ಬುಮ್ರಾ ಅವರು ಮೂರೇ ಪಂದ್ಯವನ್ನು ಆಡಲಿದ್ದಾರೆ ಎಂದು ಆಯ್ಕೆದಾರರು ನಿರ್ಧರಿಸಿದ್ದರು. ಈ ಹೆಜ್ಜೆಯು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

‘ಪೋಡ್‌ಕಾಸ್ಟ್ ಟಾಕ್’ನೊಂದಿಗೆ ಮಾತನಾಡಿದ ಭುವನೇಶ್ವರ್, ಈ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡರು.

‘‘ಬುಮ್ರಾ ಅವರು ಎಲ್ಲ ಮಾದರಿಯ ಕ್ರಿಕೆಟ್‌ ನಲ್ಲಿ ಎಷ್ಟು ವರ್ಷದಿಂದ ಆಡುತ್ತಿದ್ದಾರೆ ಎನ್ನುವುದನ್ನು ಪರಿಗಣಿಸಬೇಕು. ಈ ಎಲ್ಲ ಮಾದರಿಯಲ್ಲಿ ಆಡುವುದು ಕಷ್ಟಕರ. ಬುಮ್ರಾ ಹೊಂದಿರುವ ಬೌಲಿಂಗ್ ಶೈಲಿಯಿಂದ ಅವರಿಗೆ ಹಾಗೂ ಇತರರಿಗೆ ಯಾವುದೇ ಸಮಯದಲ್ಲಿ ಗಾಯವಾಗಬಹುದು’’ ಎಂದರು.

‘‘ಐದು ಪಂದ್ಯಗಳಲ್ಲಿ ಮೂರರಲ್ಲಿ ಆಡುವುದರಿಂದ ನನಗೆ ಏನೂ ಸಮಸ್ಯೆ ಇಲ್ಲ. ಆ ಮೂರು ಪಂದ್ಯಗಳಲ್ಲಿ ಬುಮ್ರಾ ಉತ್ತಮವಾಗಿ ಆಡಬಲ್ಲರು ಎಂದು ಆಯ್ಕೆ ಸಮಿತಿಗೆ ಗೊತ್ತಿತ್ತು. ಬುಮ್ರಾ ಅವರು ಎಲ್ಲ ಐದು ಪಂದ್ಯಗಳಲ್ಲಿ ಆಡದೇ ಇದ್ದರೂ ಮೂರು ಪಂದ್ಯಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ’’ ಎಂದು ಭುವಿ ಹೇಳಿದರು.

‘‘ಹಲವು ವರ್ಷಗಳಿಂದ ಎಲ್ಲ ಮಾದರಿಯ ಕ್ರಿಕೆಟ್‌ ನಲ್ಲಿ ಆಡುವುದು ಎಷ್ಟು ಕಷ್ಟ ಎನ್ನುವುದು ಜನರಿಗೆ ಅರ್ಥವಾಗುವುದಿಲ್ಲ. ಬುಮ್ರಾ ಯಾವಾಗಲೂ ಕಠಿಣ ಪರಿಸ್ಥಿತಿಯಲ್ಲಿ ಬೌಲಿಂಗ್ ಮಾಡುತ್ತಾರೆ. ಇದರಿಂದ ಮಾನಸಿಕ ಹಾಗೂ ದೈಹಿಕ ಒತ್ತಡ ಉಂಟಾಗುತ್ತದೆ. ದೀರ್ಘ ಸಮಯದ ತನಕ ಆಡಬೇಕಾದರೆ ಕೆಲಸದ ಒತ್ತಡವನ್ನು ನಿಭಾಯಿಸುವುದು ಅಗತ್ಯ’’ ಎಂದು ಭುವನೇಶ್ವರ ಹೇಳಿದರು.

ಇಂಗ್ಲೆಂಡ್ ತಂಡದ ವಿರುದ್ಧ ಸರಣಿಯಲ್ಲಿ ಬುಮ್ರಾ ಅವರು ಮೂರೇ ಪಂದ್ಯಗಳನ್ನು ಆಡಿದ್ದರೂ 2 ಬಾರಿ ಐದು ವಿಕೆಟ್ ಗೊಂಚಲು ಸಹಿತ ಒಟ್ಟು 14 ವಿಕೆಟ್‌ ಗಳನ್ನು ಉರುಳಿಸಿ ತನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡಿದ್ದರು.

207 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಬುಮ್ರಾ ಅವರು 457 ವಿಕೆಟ್‌ ಗಳನ್ನು ಉರುಳಿಸಿ ಭಾರತದ ಬೌಲಿಂಗ್ ದಾಳಿಯ ಪ್ರಮುಖ ಅಸ್ತ್ರವಾಗಿ ಉಳಿದುಕೊಂಡಿದ್ದಾರೆ.

್‌‌‌‌‌‌‌‌..

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News