ಡ್ರೀಮ್ 11 ನಿರ್ಗಮನ ; ಹೊಸ ಪ್ರಾಯೋಜಕರ ಹುಡುಕಾಟದಲ್ಲಿ ಬಿಸಿಸಿಐ
PC : @BCCI
ಮುಂಬೈ, ಆ. 25: ಇನ್ನು ಮುಂದೆ ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕತ್ವವನ್ನು ವಹಿಸಲು ತನ್ನಿಂದ ಸಾಧ್ಯವಾಗದು ಎಂಬುದಾಗಿ ಡ್ರೀಮ್ 11 ತಿಳಿಸಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಭಾರತೀಯ ಕ್ರಿಕೆಟ್ ತಂಡದ ನೂತನ ಟೈಟಲ್ ಪ್ರಾಯೋಜಕರಿಗಾಗಿ ಹುಡುಕಾಟ ಆರಂಭಿಸಿದೆ.
ನೈಜ ಹಣವಿಟ್ಟು ಆಡುವ ಆನ್ ಲೈನ್ ಗೇಮ್ಸ್ ಗಳನ್ನು ಕಾನೂನುಬಾಹಿರಗೊಳಿಸುವ ಮಸೂದೆಯೊಂದನ್ನು ಸಂಸತ್ ಅಂಗೀಕರಿಸಿದ ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಆನ್‌ಲೈನ್ ಗೇಮ್ಸ್ ಕ್ಷೇತ್ರದಲ್ಲಿ ಡ್ರೀಮ್11 ಪ್ರಮುಖ ಭಾಗೀದಾರ ಕಂಪೆನಿಯಾಗಿದೆ. ಅದು ಕ್ರೀಡಾ ಪ್ರವಾಸೋದ್ಯಮದಿಂದ ಹಿಡಿದು ಆನ್‌ಲೈನ್ ಸ್ಟ್ರೀಮಿಂಗ್ ಆ್ಯಪ್ ಗಳವರೆಗೆ ವಿವಿಧ ಶಾಖೆಗಳನ್ನು ಹೊಂದಿದೆ.
2 ವಾರಗಳಲ್ಲಿ ಏಶ್ಯ ಕಪ್ ಮತ್ತು 1 ತಿಂಗಳಲ್ಲಿ ಮಹಿಳೆಯರ ಏಕದಿನ ವಿಶ್ವಕಪ್ ನಡೆಯಲಿದ್ದು, ಹೆಸರು(ಟೈಟಲ್) ಪ್ರಾಯೋಜಕರಿಗಾಗಿ ಶೀಘ್ರವೇ ನೂತನ ಟೆಂಡರ್‌ಗಳನ್ನು ಕರೆಯಲು ಬಿಸಿಸಿಐ ನಿರ್ಧರಿಸಿದೆ.
‘‘ಡ್ರೀಮ್ 11 ಪ್ರತಿನಿಧಿಗಳು ಇತ್ತೀಚೆಗೆ ಬಿಸಿಸಿಐ ಕಚೇರಿಗೆ ಬಂದು, ಇನ್ನು ಮುಂದೆ ತಂಡಗಳನ್ನು ಪ್ರಾಯೋಜಿಸುವ ಪರಿಸ್ಥಿತಿಯಲ್ಲಿ ಕಂಪೆನಿ ಇಲ್ಲ ಎಂಬುದಾಗಿ ತಿಳಿಸಿದರು. ಏಶ್ಯ ಕಪ್‌ಗೆ ಇನ್ನು ಹೆಚ್ಚೇನೂ ಸಮಯ ಉಳಿದಿಲ್ಲ. ಆದರೂ ನಾವು ಆಯ್ಕೆಗಳನ್ನು ಪರಿಶೀಲಿಸುತ್ತಿದ್ದೇವೆ’’ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.
ಡ್ರೀಮ್ 11 ಟೀಮ್ ಇಂಡಿಯಾ ಪ್ರಾಯೋಜಕತ್ವದಿಂದ ನಿರ್ಗಮಿಸಿದರೂ, ಅದು ಬಿಸಿಸಿಐಗೆ ಯಾವುದೇ ದಂಡವನ್ನು ಪಾವತಿಸಬೇಕಾಗಿಲ್ಲ. ಯಾಕೆಂದರೆ, ಸರಕಾರ ತರಬಹುದಾದ ಯಾವುದೇ ಕಾನೂನು ಪ್ರಾಯೋಜಕರ ಪ್ರಾಥಮಿಕ ಉದ್ಯಮಕ್ಕೆ ಹಾನಿ ಮಾಡಿದರೆ ಅದು ಬಿಸಿಸಿಐಗೆ ಏನನ್ನೂ ಕೊಡಬೇಕಾಗಿಲ್ಲ ಎನ್ನುವ ಷರತ್ತು ಗುತ್ತಿಗೆಯಲ್ಲಿದೆ.
2023ರಿಂದ ಡ್ರೀಮ್ 11 ಟೀಮ್ ಇಂಡಿಯಾದ ಹೆಸರು ಪ್ರಾಯೋಜಕನಾಗಿದೆ.
ಬಿಸಿಸಿಐಗೆ ಎಷ್ಟು ನಷ್ಟ?
ಡ್ರೀಮ್ 11 ಕಂಪೆನಿಯು 2023-26ರ ಅವಧಿಯ ಹೆಸರು ಪ್ರಾಯೋಜಕ ಗುತ್ತಿಗೆಯಡಿ ಬಿಸಿಸಿಐಗೆ 358 ಕೋಟಿ ರೂ. ಪಾವತಿಸಬೇಕಾಗುತ್ತದೆ. ಅಧಿಕೃತ ಐಪಿಎಲ್ ಭಾಗೀದಾರ ಕಂಪೆನಿ ಮೈ11ಸರ್ಕಲ್ 2024ರ ಫೆಬ್ರವರಿಯಲ್ಲಿ 2028ರವರೆಗಿನ ಗುತ್ತಿಗೆಗೆ ಸಹಿ ಹಾಕಿದ್ದು 625 ಕೋಟಿ ರೂ. ಪಾವತಿಸುವ ವಾಗ್ದಾನ ಮಾಡಿದೆ.
ಡ್ರೀಮ್ 11 ಭಾರತದ ಅತಿ ದೊಡ್ಡ ಜಾಹೀರಾತುದಾರನಾಗಿದೆ. ಅದರ ಮಾತೃ ಸಂಸ್ಥೆ ಡ್ರೀಮ್ ಸ್ಪೋರ್ಟ್ಸ್ ಹಣಕಾಸು ವರ್ಷ 2023ರಲ್ಲಿ ಜಾಹೀರಾತುಗಳು ಮತ್ತು ಪ್ರಚಾರಕ್ಕಾಗಿ 2,964 ಕೋಟಿ ರೂ. ಹಣ ವೆಚ್ಚ ಮಾಡಿದೆ. ಇದು ಹಿಂದಿನ ವರ್ಷಕ್ಕಿಂತ 37 ಶೇಕಡ ಹೆಚ್ಚಳವಾಗಿದೆ.
ಫ್ಯಾಂಟಸಿ ಕ್ರೀಡಾ ವೇದಿಕೆಗಳು ಮಾರುಕಟ್ಟೆ ಚಟುವಟಿಕೆಗಳು ಮತ್ತು ಜಾಹೀರಾತಿಗಾಗಿ ಪ್ರತಿ ವರ್ಷ ಒಟ್ಟು 5,000 ಕೋಟಿ ರೂ.ಗೂ ಅಧಿಕ ಹಣವನ್ನು ಖರ್ಚು ಮಾಡಿವೆ ಎನ್ನಲಾಗಿದೆ
2022-23ರ ಸಾಲಿನಲ್ಲಿ ಜಾಹೀರಾತಿಗಾಗಿ ಡ್ರೀಮ್ 11 ಕಂಪೆನಿಯು 2,964 ಕೋಟಿ ರೂ. ಖರ್ಚು ಮಾಡಿದರೆ, ಮೈ11ಸರ್ಕಲ್ ಮತ್ತು ರಮ್ಮಿ ಸರ್ಕಲ್‌ನ ಮಾತೃ ಕಂಪೆನಿ ‘ಗೇಮ್ಸ್ 24x7' 1,421 ಕೋಟಿ ರೂ. ವೆಚ್ಚ ಮಾಡಿದೆ.