‘ಈ ಸಲ ಕಪ್ ನಮ್ದೆ’: ಆರ್ ಸಿ ಬಿ ಅಭಿಮಾನಿಗಳ ತಮಾಷೆ, ಅಪಶಕುನ ಹಾಗೂ ಸಂಭ್ರಮಾಚರಣೆಯ ಮಹಾಪಯಣ!
Credit: DH Photo
ಬೆಂಗಳೂರು: ಕ್ರೀಡೆ ಜನರನ್ನು ದೇಶಗಳು, ರಾಜ್ಯಗಳು, ಭಾಷೆಗಳನ್ನು ಮೀರಿ ಸೀಮಾತೀತವಾಗಿ ಒಗ್ಗೂಡಿಸುತ್ತದೆ ಎಂಬ ಮಾತಿದೆ. ವಿಶೇಷವಾಗಿ ಬೆಂಗಳೂರಿಗೆ ಸಂಬಂಧಿಸಿದಂತೆ ಈ ಮಾತನ್ನು ಸಾಬೀತು ಪಡಿಸಲು ರಾಜಕಾರಣ ಮತ್ತು ಭಾಷಾ ಚರ್ಚೆಗಳಿಗೆ ಸಾಧ್ಯವಾಗದಿದ್ದರೂ, ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರೀಡಾಕೂಟಕ್ಕೆ ಸಾಧ್ಯವಾಗಿದೆ.
ಬೆಂಗಳೂರು ನಗರದಲ್ಲಿ ಭಾಷಾ ಚರ್ಚೆಗಳು ದೈನಂದಿನ ಜೀವನದ ಭಾಗವಾಗಿದೆ. ಉತ್ತರ ಭಾರತದ ವಲಸಿಗರು ಇಲ್ಲಿ ಹಲವಾರು ವರ್ಷಗಳಿಂದ ನೆಲೆಸಿದ್ದರೂ, ಇದುವರೆಗೂ ಕನ್ನಡ ಕಲಿಯುವ ಗೋಜಿಗೆ ಹೋಗಿಲ್ಲ. ಇದು ಈ ನಗರದಲ್ಲಿ ತೀವ್ರ ಪ್ರಕ್ಷುಬ್ಧತೆಯನ್ನುಂಟು ಮಾಡಿದ್ದು, ದಿನದಿಂದ ದಿನಕ್ಕೆ ಆಳವಾಗುತ್ತಲೇ ಹೋಗುತ್ತಿದೆ. ಹೀಗಿದ್ದೂ, ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನಲ್ಲಿ ಮಾತ್ರ ಈ ಎಲ್ಲ ಭಿನ್ನಾಭಿಪ್ರಾಯಗಳೂ ಹಿನ್ನೆಲೆಗೆ ಸರಿಯುತ್ತವೆ.
ದಿಲ್ಲಿ ಅಥವಾ ಲಕ್ನೊ ಅಥವಾ ಬೆಂಗಳೂರಿನಲ್ಲಿ ಕುಳಿತಿರುವವರಿಗೂ ಕೂಡಾ ‘ಈ ಸಲ ಕಪ್ ನಮ್ದೆ’ ಎಂಬುದರ ಅಕ್ಷರಶಃ ಅರ್ಥವೇನೆಂದು ತಿಳಿದಿರುವ ಸಾಧ್ಯತೆ ಕಡಿಮೆ. ಹೀಗಿದ್ದೂ, ಆರ್ ಸಿ ಬಿ ತಂಡದ ಅಭಿಮಾನಿಗಳು ಮಾತ್ರ ಈ ಘೋಷಣೆಯನ್ನು ಪೂರ್ಣಪ್ರಮಾಣದ ಚೈತನ್ಯದೊಂದಿಗೆ ಪಠಿಸುತ್ತಾರೆ. ಅವರು ಒಂದು ವೇಳೆ ಕರ್ನಾಟಕದಲ್ಲಿ ಎಂದಿಗೂ ಇರಲೇ ಇಲ್ಲವೆಂಬುದಾಗಲಿ ಅಥವಾ ಒಂದೇ ಒಂದು ನಾಮಫಲಕವನ್ನು ಓದಲಾಗುವುದಿಲ್ಲ ಎಂಬುದಾಗಲಿ ಇಲ್ಲಿ ಮುಖ್ಯವಾಗುವುದೇ ಇಲ್ಲ. ಈ ಘೋಷಣೆಯು ಅನುವಾದಕ್ಕಿಂತ ದೊಡ್ಡದಾಗಿ ಬೆಳೆದು ನಿಂತಿದೆ.
ಯಾಕೆಂದರೆ, ನೀವು ಅಪಶಕುನದ ನಂತರ ಅಪಶಕುನದ ಸ್ಥಿತಿಯನ್ನು ಹಾದು ಹೋದಾಗ ಹಾಗೂ ನೀವು ಕಳೆದುಕೊಂಡ ಅವಕಾಶಗಳ ಕುರಿತು ವರ್ಷಾನುಗಟ್ಟಲೆ ಮೀಮ್ ಗಳ ಮೂಲಕ ನಿಮ್ಮನ್ನು ಹಾಸ್ಯ ಮಾಡಿದಾಗ, ನಿಮಗೆ ಭಾಷೆ ತಿಳಿದಿರಬೇಕಾದ ಅಗತ್ಯವಿಲ್ಲ. ಬದಲಿಗೆ, ನಿಮ್ಮಲ್ಲಿ ವಿಶ್ವಾಸ ಮಾತ್ರ ಇರಬೇಕಾಗುತ್ತದೆ. ಹಾಗೂ ಈ ಬಾರಿ ಹಾಗೂ ಇದೇ ಮೊದಲ ಬಾರಿ ಈ ವಿಶ್ವಾಸ ಫಲ ನೀಡಿದೆ. ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಭರವಸೆಯಾಗಿ ಪ್ರಾರಂಭಗೊಂಡು, ಮೀಮ್ ಆಗಿ ರೂಪಾಂತರವಾಗಿ ಹಾಗೂ ನಿರಾಶೆ ಮತ್ತು ಅಪಶಕುನದ ಅಡಿಬರಹವಾಗಿ ರೂಪಾಂತರಗೊಂಡಿದ್ದ ಈ ಘೋಷಣೆ ಈಗ ನೆರವೇರಿದ ಭವಿಷ್ಯವಾಣಿಯಾಗಿ ಸಾಕಾರವಾಗಿದೆ.
‘ಈ ಸಲ ಕಪ್ ನಮ್ದೆ’ ಎಂಬುದು ಆರ್ ಸಿ ಬಿ ಅಭಿಮಾನಿಗಳ ಜನಪ್ರಿಯ ಘೋಷಣೆಯಾಗಿದ್ದರೂ, ಆರ್ ಸಿ ಬಿ ತಂಡದ ಅಧಿಕೃತ ಘೋಷಣೆ ಮಾತ್ರ ‘ಖುಲ್ಲಂಖುಲ್ಲಾ ಆಟವಾಡು’ ಎಂದಾಗಿದೆ. ಆದರೆ, ಈ ಘೋಷಣೆ 2016-17ರ ಐಪಿಎಲ್ ಋತುವಿನವರೆಗೂ ಕಾಣಿಸಿಕೊಂಡಿರಲಿಲ್ಲ. ಆದರೆ, Redditor ಪ್ರಕಾರ, 2016ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ತಂಡದೆದುರು ಆರ್ ಸಿ ಬಿ ತಂಡ ಪರಾಭವಗೊಂಡ ನಂತರ, ಆರ್ ಸಿ ಬಿ ತಂಡದ ಮನೋಬಲವನ್ನು ಉತ್ತೇಜಿಸಲು ಕನ್ನಡ ಫೇಸ್ ಬುಕ್ ಪೇಜ್ ಗಳಲ್ಲಿ ಈ ಘೋಷಣೆ ಕಾಣಿಸಿಕೊಂಡಿತು ಎನ್ನಲಾಗಿದೆ.
ಬಳಿಕ, 2017ನೇ ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿ, ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಾಗ, ಇತರ ಐಪಿಎಲ್ ತಂಡಗಳ ಅಭಿಮಾನಿಗಳು ಆರ್ ಸಿ ಬಿ ಅಭಿಮಾನಿಗಳನ್ನು ಮೀಮ್ ಮೂಲಕ ಹಾಸ್ಯ ಮಾಡಲು ಪ್ರಾರಂಭಿಸಿದ್ದರಿಂದ, ಇದು ಜನಪ್ರಿಯ ಘೋಷಣೆಯಾಗಿ ಬದಲಾಯಿತು.
2018ರ ವೇಳೆಗೆ ಆರ್ ಸಿ ಬಿಯ ಅಧಿಕೃತ ಪುಟಗಳು ಹಾಗೂ ಬೆಂಗಳೂರು ನಗರ ಪೊಲೀಸರೂ ಈ ಘೋಷಣೆಯನ್ನು ಅನುಮೋದಿಸಲು ಪ್ರಾರಂಭಿಸಿದರು.
ಆದರೆ, ಈ ವೇಳೆಗೆ ನಿರಂತರ ನಿರಾಶೆಯಿಂದಾಗಿ ಆರ್ ಸಿ ಬಿಯ ‘ಈ ಸಲ ಕಪ್ ನಮ್ದೆ’ ಘೋಷಣೆಯು ಜಿಗುಪ್ಸೆಯಂತೆ ಭಾಸವಾಗಲು ಪ್ರಾರಂಭಿಸಿದ್ದರಿಂದ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ‘ವಿಷಲ್ ಪೋಡು’ ಹಾಗೂ ಮುಂಬೈ ತಂಡದ ‘ದುನಿಯಾ ಹಿಲಾ ದೇಂಗೇ ಹಮ್’ ಘೋಷಣೆಗಳು ಪ್ರಾಬಲ್ಯ ಸಾಧಿಸಿದ್ದವು.
2018ರಲ್ಲಿ ಅತಿರಂಜಿತವಾಗಿ ಬಳಕೆಯಾಗಿರುವ ಘೋಷಣೆಯಿದು ಎಂದು ಕೆಲವು ಎಕ್ಸ್ ಬಳಕೆದಾರರು ಹಣೆಪಟ್ಟಿ ಹಚ್ಚಿದರೆ, ಮತ್ತೆ ಕೆಲವರು, “ಈ ಘೋಷಣೆಯನ್ನು ಫುಟ್ ಬಾಲ್ ಅಭಿಮಾನಿಗಳ ‘ಇಟ್ಸ್ ಕಮಿಂಗ್ ಹೋಮ್’ ಘೋಷಣೆಗೆ ಹೋಲಿಕೆ ಮಾಡಿದ್ದರು ಹಾಗೂ ಈ ಎರಡೂ ಘೋಷಣೆಗಳು ಅಪಶಕುನಗಳು ಎಂದು ಗೇಲಿ ಮಾಡಿದ್ದರು. ಈ ಚಾಲ್ತಿ ತಮಾಷೆಯಿಂದಾಗಿ ಪ್ರತಿ ಋತುವಿನಲ್ಲೂ ಆರ್ ಸಿ ಬಿ ಅಭಿಮಾನಿಗಳೂ ಮತ್ತಷ್ಟು ಘಾಸಿಯಾಗುತ್ತಿದ್ದರು.
ಈ ಘೋಷಣೆಗೆ ತಗುಲಿಕೊಂಡಿದ್ದ ಅಪಶಕುನದ ಅಪವಾದ ಎಷ್ಟು ಕರಾಳವಾಗಿತ್ತೆಂದರೆ, ಆರ್ ಸಿ ಬಿ ತಂಡ ಕೊನೆಗೂ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡರೂ, ನಮ್ಮಂಥ ದೊಡ್ಡ ಕಂದಾಚಾರದ ದೇಶದಲ್ಲಿ ಸುನೀಲ್ ಗಾವಸ್ಕರ್ ರಂಥವರೂ ಕೂಡಾ, “’ಈಸಲ ಕಪ್ ನಮ್ದೆ’ ಘೋಷಣೆ ಸಂಪೂರ್ಣವಾಗಿ ಕಳೆಗುಂದಿರುವ ಹೊತ್ತಿನಲ್ಲಿ, ಈ ಜನಪ್ರಿಯ ಘೋಷಣೆ ಮತ್ತೊಮ್ಮೆ ಅಪಶಕುನವಾಗಿ ಬದಲಾಗಿದೆ” ಎಂದು ಹೇಳಿಕೆ ನೀಡಿದ್ದರು.
ಆದರೆ, 2025ರಲ್ಲಿ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಜಯಿಸಿರುವುದು ಹಾಗೂ ಆರ್ ಸಿ ಬಿ ತಂಡ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿರುವುದು ಅಪಶಕುನಗಳು ಅಂತಿಮವಾಗಿ ಕಳೆಗುಂದುತ್ತಿರುವುದರ ಸಂಕೇತವಾಗಿದೆ ಎಂದು ನೆಟ್ಟಿಗರು ಪ್ರಶಂಸಿಸುತ್ತಿದ್ದಾರೆ.
ಅಂತಿಮವಾಗಿ, ಜೂನ್ 3, 2025ರ ರಾತ್ರಿ 11.30ರ ವೇಳೆಗೆ ಗೂಗಲ್ ಸರ್ಚ್ ನಲ್ಲಿ ‘ಈ ಸಲ ಕಪ್ ನಮ್ದೆ’ ಎಂಬ ಘೋಷಣೆಯ ಹುಡುಕಾಟ ಉತ್ತುಂಗಕ್ಕೆ ತಲುಪುವ ಮೂಲಕ ಈ ಘೋಷಣೆಗೆ ಅಂಟಿಕೊಂಡಿದ್ದ ಅಪಶಕುನಕ್ಕೆ ತೆರೆ ಬಿದ್ದಿತು ಎಂದು ಮುಕ್ತವಾಗಿ ಹೇಳಬಹುದಾದರೂ, ವಾಸ್ತವವಾಗಿ, ‘ಈ ಸಲ ಕಪ್ ನಮ್ದೆ’ ಘೋಷಣೆಗೆ ಅಂಟಿಕೊಂಡಿದ್ದ ಅಪಶಕುನ ಹಾಗೂ ನಕಾರಾತ್ಮಕತೆಯನ್ನು ಮೊದಲು ಸಾಕಷ್ಟು ಇಲ್ಲವಾಗಿಸಿದ್ದು ಆರ್ ಸಿ ಬಿ ಮಹಿಳಾ ತಂಡ. 2024ರ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಐಪಿಎಲ್ ಟ್ರೋಫಿಯನ್ನು ಜಯಿಸಿದ್ದ ಆರ್ ಸಿ ಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂದಾನ, “ಈ ಸಲ ಕಪ್ ನಮ್ದು’ ಎಂದು ಹೇಳುವ ಮೂಲಕ, ಈ ಘೋಷಣೆಯನ್ನು ಒಂದಿಷ್ಟು ಮಾರ್ಪಡಿಸಿದ್ದರು.
ಇದೀಗ 18 ವರ್ಷಗಳ ನಂತರ, ಐಪಿಎಲ್ ಟ್ರೋಫಿಯನ್ನು ಜಯಿಸುವ ಮೂಲಕ ಆರ್ ಸಿ ಬಿ ಮಹಿಳಾ ತಂಡದ ನಾಯಕಿಯಾಗಿದ್ದ ಸ್ಮೃತಿ ಮಂದಾನರ ಮಾತುಗಳನ್ನು ಪುರುಷರ ಆರ್ ಸಿ ಬಿ ತಂಡ ಕೂಡಾ ಪ್ರತಿಧ್ವನಿಸಿದೆ. ಕೊನೆಗೂ ಪುರುಷರ ಆರ್ ಸಿ ಬಿ ತಂಡವು ಐಪಿಎಲ್ ಟ್ರೋಫಿಯನ್ನು ಜಯಿಸುವ ಮೂಲಕ, ಮೀಮ್, ಜಿಗುಪ್ಸೆ, ತಮಾಷೆಯಾಗಿ ಪ್ರಾರಂಭಗೊಂಡಿದ್ದ ‘ಈ ಸಲ ಕಪ್ ನಮ್ದೆ’ ಘೋಷಣೆ ಈಗ, ಆರ್ ಸಿ ಬಿ ಅಭಿಮಾನಿಗಳ ನಿಷ್ಠೆ ಹಾಗೂ ವಿಶ್ವಾಸಕ್ಕೆ ದೊರೆತಿರುವ ಬಹುಮಾನದಂತೆ ಭಾಸವಾಗುತ್ತಿದೆ.
ಹೀಗಿದ್ದೂ, ಆರ್ ಸಿ ಬಿ ತಂಡದ ವಿಜಯೋತ್ಸವ ಸಂಭ್ರಮಾಚರಣೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದರಿಂದ, ಈ ಸಂಭ್ರಮಾಚರಣೆಗೆ ಸೂತಕ ಕವಿಯುವಂತಾಯಿತು. ಹೀಗಿದ್ದೂ, ಈ ಘೋಷಣೆಯ ಹಿಂದಿನ ಭಾವುಕತೆ, ಐಕ್ಯತೆಯ ಪ್ರಜ್ಞೆ ಹಾಗೂ ಅದು ಹೊಮ್ಮಿಸಿದ ಒಳಗೊಳ್ಳುವಿಕೆ ಭಾವ ಬೆಂಗಳೂರಿನೊಂದಿಗೆ ತುಂಬಾ ತುಂಬಾ ದೀರ್ಘ ಕಾಲ ಉಳಿಯಲಿದೆ.
ಸೌಜನ್ಯ: deccanherald.com