ಹಂಗೇರಿ: ಪ್ರೇಕ್ಷಕರ ಮೇಲೆ ನುಗ್ಗಿದ ರೇಸ್ ಕಾರು
Photo: X
ಬುಡಾಪೆಸ್ಟ್ (ಹಂಗೇರಿ) : ರವಿವಾರ ಹಂಗೇರಿಯಲ್ಲಿ ಮೋಟಾರ್ಸ್ಪೋರ್ಟ್ಸ್ ರ್‍ಯಾಲಿಯೊಂದರಲ್ಲಿ ಸ್ಪರ್ಧಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಪ್ರೇಕ್ಷಕರ ಮೇಲೆ ನುಗ್ಗಿದಾಗ ನಾಲ್ವರು ಮೃತಪಟ್ಟಿದ್ದಾರೆ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ವಾಯುವ್ಯ ಹಂಗೇರಿಯಲ್ಲಿ ನಡೆಯುತ್ತಿದ್ದ ಎರಡು ದಿನಗಳ ಎಝ್ಟರ್ಗೋಮ್ ನಯರ್ಗಿಸ್ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಕಾರು ಯಾಕೆ ಸ್ಕಿಡ್ ಆಯಿತು ಎನ್ನುವುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ನೀಡಿರುವ ಹೇಳಿಕೆಯೊಂದು ತಿಳಿಸಿದೆ.
ಸ್ಲೊವೇಕಿಯ ಗಡಿಗೆ ಹತ್ತಿರವಾಗಿರುವ ವಾಯವ್ಯ ಕೊಮರೊಮ್ ಎಝ್ಟರ್ಗೋಮ್ ಕೌಂಟಿಯಲ್ಲಿರುವ ಬಜೊಟ್ ಎಂಬ ಪಟ್ಟಣದ ಸಮೀಪ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದರು.
ಅಪಘಾತ ನಡೆದ ಕೂಡಲೇ ರ್‍ಯಾಲಿಯನ್ನು ನಿಲ್ಲಿಸಲಾಯಿತು. ಗಾಯಗೊಂಡವರ ಪೈಕಿ, ಒಂದು ಮಗು ಸೇರಿದಂತೆ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಒಂದು ಮಗು ಸೇರಿದಂತೆ ಇತರ ಆರು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಹಂಗೇರಿಯನ್ ನ್ಯಾಶನಲ್ ಮೋಟಾರ್ಸ್ಪೋರ್ಟ್ ಅಸೋಸಿಯೇಶನ್ ಮೃತರ ಸಂಬಂಧಿಗಳಿಗೆ ಸಂತಾಪ ವ್ಯಕ್ತಪಡಿಸಿದೆ.