×
Ad

ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯಕ್ಕೆ ಕೀಟಗಳ ಕಾಟ!

Update: 2025-10-05 21:16 IST

Picture Credit: AP

ಕೊಲಂಬೊ, ಅ.5: ಕೀಟಗಳ ಕಾಟದಿಂದಾಗಿ ಭಾರತ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳ ನಡುವೆ ರವಿವಾರ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್‌ನ ಆರನೇ ಲೀಗ್ ಪಂದ್ಯವು 15 ನಿಮಿಷ ಸ್ಥಗಿತಗೊಂಡಿರುವ ಘಟನೆ ನಡೆದಿದೆ.

ಏಕಾಏಕಿ ಮೈದಾನಕ್ಕೆ ನುಗ್ಗಿದ ಕೀಟಗಳು ಭಾರತದ ಬ್ಯಾಟರ್‌ಗಳು ಹಾಗೂ ಪಾಕಿಸ್ತಾನದ ಬೌಲರ್‌ಗಳ ತಾಳ್ಮೆಯನ್ನು ಪರೀಕ್ಷಿಸಿದವು.

ಭಾರತದ ಇನ್ನಿಂಗ್ಸ್‌ ಸಮಯದಲ್ಲಿ ಕೀಟಗಳು ಹೆಚ್ಚು ಅಡ್ಡಿಪಡಿಸಿದವು. ಪಾಕಿಸ್ತಾನದ ಸ್ಪಿನ್ನರ್ ನಶ್ರಾ ಸಂಧು ಆಗಾಗ ಟವಲ್‌ನಿಂದ ಕೀಟಗಳನ್ನು ಹೊಡೆದುರುಳಿಸುತ್ತಿರುವುದು ಕಂಡುಬಂದಿತು. ಸಂಧು ಹಾಗೂ ಇತರ ಆಟಗಾರ್ತಿಯರು ಅಂಪೈರ್‌ಗಳನ್ನು ಸಂಪರ್ಕಿಸಿ ಈ ಕುರಿತು ಚರ್ಚಿಸಿದರು.

ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾ ಬೌಲಿಂಗ್ ಕ್ರೀಸ್ ಸುತ್ತ ಹಾಗೂ ತಮ್ಮ ಬಟ್ಟೆಯ ಮೇಲೆ ಸ್ಪ್ರೇ ಬಳಸಬೇಕಾಯಿತು. ಆದರೆ ಕೀಟಗಳ ಕಾಟ ಮುಂದುವರಿಯಿತು. ಆಗ ಪಾನೀಯ ವಿರಾಮ ನೀಡಲಾಯಿತು. ಪಾನೀಯ ವಿರಾಮದ ನಂತರವೂ ಕೀಟಗಳು ಮೈದಾನದಲ್ಲಿ ಸುಳಿದಾಡುತಲ್ಲೇ ಇದ್ದವು.

ಹರ್ಲೀನ್ ಡಿವೋಲ್ ಎಸೆತವನ್ನು ಎದುರಿಸಲು ಸಿದ್ದವಾಗುತ್ತಿದ್ದಂತೆ ಕೀಟಗಳು ಕಾಟ ನೀಡಿದವು. 34ನೇ ಓವರ್‌ಗಳ ನಂತರ ಉಭಯ ತಂಡಗಳ ಆಟಗಾರ್ತಿಯರು ಮೈದಾನದಿಂದ ಹೊರ ನಡೆದರು. ಆಗ ಗ್ಯಾಸ್ ಮಾಸ್ಕ್ ಧರಿಸಿದ ಸಿಬ್ಬಂದಿಯೊಬ್ಬರು ಫಾಗಿಂಗ್ ಯಂತ್ರದೊಂದಿಗೆ ಮೈದಾನಕ್ಕೆ ಆಗಮಿಸಿದರು. ಕೆಲವೇ ನಿಮಿಷದಲ್ಲಿ ಇಡೀ ಆಟದ ಪ್ರದೇಶವು ಕೀಟನಿವಾರಕ ಹೊಗೆಯಿಂದ ಆವೃತವಾಯಿತು. ಹೊಗೆ ತೆರವುಗೊಂಡ ನಂತರ ಆಟವು ಪುನರಾರಂಭಗೊಂಡಿತು.

ಈ ಸಂದರ್ಭದಲ್ಲಿ ಭಾರತದ ಮಹಿಳಾ ತಂಡವು 30 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 136 ರನ್ ಗಳಿಸಿತ್ತು. ಪ್ರತಿಕಾ ರಾವಲ್ 31 ರನ್ ಗಳಿಸಿದರೆ, ಸ್ಮತಿ ಮಂಧಾನ 23 ರನ್ ಗಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News