ಐಸಿಸಿ ಮಹಿಳಾ ಏಕದಿನ ವಿಶ್ವಕಪ್ : ಬಾಂಗ್ಲಾ ವಿರುದ್ಧ ಕಿವೀಸ್‌ಗೆ 100 ರನ್‌ಗಳ ಜಯ
Photo Credit : NDTV
ಗುವಾಹಟಿ, ಅ. 10: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಶುಕ್ರವಾರ ನ್ಯೂಝಿಲ್ಯಾಂಡ್ ಮಹಿಳೆಯರು ಬಾಂಗ್ಲಾದೇಶಿ ಮಹಿಳೆಯರನ್ನು ಭರ್ಜರಿ 100 ರನ್‌ಗಳಿಂದ ಸೋಲಿಸಿದ್ದಾರೆ.
ನ್ಯೂಝಿಲ್ಯಾಂಡ್‌ನ ವಿಜಯದಲ್ಲಿ ಅರ್ಧ ಶತಕಗಳನ್ನು ಬಾರಿಸಿದ ನಾಯಕಿ ಸೋಫೀ ಡಿವೈನ್ (63) ಮತ್ತು ಬ್ರೂಕ್ ಹ್ಯಾಲಿಡೇ (69) ಪ್ರಮುಖ ಪಾತ್ರ ವಹಿಸಿದರು. ಜೊತೆಗೆ, ಬಾಂಗ್ಲಾದೇಶಿ ಇನಿಂಗ್ಸ್ ಮೇಲೆ ಸವಾರಿಗೈದ ನ್ಯೂಝಿಲ್ಯಾಂಡ್ ಬೌಲರ್‌ಗಳಾದ ಜೆಸ್ ಕೆರ್ ಮತ್ತು ಲೀ ಟಹುಹು ತಲಾ ಮೂರು ವಿಕೆಟ್‌ಗಳನ್ನು ಉರುಳಿಸಿ ತಂಡದ ಗೆಲುವಿಗೆ ದೇಣಿಗೆಗಳನ್ನು ನೀಡಿದರು.
ಗುವಾಹಟಿಯ ಬರ್ಸಪಾರ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 50 ಓವರ್‌ಗಳಲ್ಲಿ 228 ರನ್‌ಗಳ ಗುರಿಯನ್ನು ಪಡೆದ ಬಾಂಗ್ಲಾದೇಶಿ ಮಹಿಳೆಯರು ಕೇವಲ 39.5 ಒವರ್‌ಗಳಲ್ಲಿ 127 ರನ್‌ಗಳನ್ನು ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡರು.
ಟಾಸ್ ಗೆದ್ದ ನ್ಯೂಝಿಲ್ಯಾಂಡ್ ಮಹಿಳೆಯರು ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕ ಬ್ಯಾಟರ್ ಸುಝೀ ಬೇಟ್ಸ್ 29 ರನ್‌ಗಳನ್ನು ಗಳಿಸಿ ಉತ್ತಮ ಆರಂಭವನ್ನು ನೀಡಿದರು. ಆದರೆ, ಒಂದು ಹಂತದಲ್ಲಿ ಬ್ಯಾಟಿಂಗ್ ಕುಸಿತಕ್ಕೆ ಒಳಗಾದ ನ್ಯೂಝಿಲ್ಯಾಂಡ್ 38 ರನ್‌ಗಳನ್ನು ಗಳಿಸುವಷ್ಟರಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.
ಆಗ ಬ್ಯಾಟಿಂಗ್‌ಗೆ ಇಳಿದ ಸೋಫಿ ಡಿವೈನ್ ಮತ್ತು ಬ್ರೂಕ್ ಹ್ಯಾಲಿಡೇ ನಾಲ್ಕನೇ ವಿಕೆಟ್‌ಗೆ 112 ರನ್‌ಗಳನ್ನು ಸೇರಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಬ್ರೂಕ್ ಹ್ಯಾಲಿಡೇಯನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.
ಬ್ರೂಕ್ ಹ್ಯಾಲಿಡೇ ನಿರ್ಗಮನದ ಬಳಿಕ ಮ್ಯಾಡಿ ಗ್ರೀನ್ 25 ರನ್‌ಗಳ ದೇಣಿಗೆ ನೀಡಿದರು.
ನ್ಯೂಝಿಲ್ಯಾಂಡ್ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 227 ರನ್ ಗಳಿಸಿತು.
ಬಾಂಗ್ಲಾದೇಶದ ರಬಿಯಾ ಖಾನ್ 30 ರನ್‌ಗಳನ್ನು ನೀಡಿ 3 ವಿಕೆಟ್‌ಗಳನ್ನು ಪಡೆದರು.
ಗೆಲ್ಲಲು 228 ರನ್‌ಗಳ ಗುರಿಯನ್ನು ಪಡೆದ ಬಾಂಗ್ಲಾದೇಶದ ಆರಂಭ ಚಿಂತಾಜನಕವಾಗಿತ್ತು. ಅದರ ಆರಂಭಿಕರಾದ ರುಬಿಯಾ ಹೈದರ್ (4) ಮತ್ತು ಶರ್ಮಿನ್ ಅಖ್ತರ್ (3) ಬಂದಷ್ಟೇ ವೇಗದಲ್ಲಿ ಹಿಂದಿರುಗಿದರು.
ಮಧ್ಯಮ ಕ್ರಮಾಂಕದಲ್ಲಿ ಫಾಹಿಮಾ ಖಾತುನ್ 34 ರನ್‌ಗಳನ್ನು ಗಳಿಸಿ ಒಂದು ಮಟ್ಟಕ್ಕೆ ತಂಡವನ್ನು ಆಧರಿಸಿ ಸೋಲನ್ನು ಮುಂದೂಡುವಲ್ಲಿ ಯಶಸ್ವಿಯಾದರು. ಬಳಿಕ ರಬಿಯಾ ಖಾನ್ 25 ರನ್‌ಗಳ ದೇಣಿಗೆ ನೀಡಿದರು.
ನಹಿದಾ ಅಖ್ತರ್ 17 ರನ್ ಗಳಿಸಿದನ್ನು ಹೊರತುಪಡಿಸಿದರೆ, ನ್ಯೂಝಿಲ್ಯಾಂಡ್‌ನ ಬೌಲಿಂಗ್ ದಾಳಿಗೆ ನಲುಗಿದ ಉಳಿದ ಆಟಗಾರ್ತಿಯರಿಗೆ ಎರಡಂಕಿ ಮೊತ್ತವನ್ನು ತಲುಪಲು ಸಾಧ್ಯವಾಗಲಿಲ್ಲ.
ಬಾಂಗ್ಲಾದೇಶವು 127 ರನ್‌ಗಳಿಗೆ ತನ್ನ ಇನಿಂಗ್ಸನ್ನು ಮುಕ್ತಾಯಗೊಳಿಸಿತು.
ನ್ಯೂಝಿಲ್ಯಾಂಡ್ ಪರವಾಗಿ ಜೆಸ್ ಕೆರ್ ಮತ್ತು ಲೀ ಟಹುಹು ತಲಾ ಮೂರು ವಿಕೆಟ್‌ಗಳನ್ನು ಪಡೆದರೆ, ರೋಸ್‌ಮೇರಿ ಮೇರ್ 2 ವಿಕೆಟ್ ಉರುಳಿಸಿದರು.