×
Ad

ವೆಸ್ಟ್‌ಇಂಡೀಸ್ ವಿರುದ್ಧ ಏಕದಿನ ಸರಣಿ | ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡ ಪ್ರಕಟ, ವಿಲಿಯಮ್ಸನ್ ಅಲಭ್ಯ

Update: 2025-11-07 20:34 IST

ಕೇನ್ ವಿಲಿಯಮ್ಸನ್ | Photo Credit : PTI

ವೆಲ್ಲಿಂಗ್ಟನ್, ನ.7: ವೆಸ್ಟ್‌ಇಂಡೀಸ್ ವಿರುದ್ಧ ನ.16ರಿಂದ ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಗೆ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ವೇಗದ ಬೌಲರ್ ಮ್ಯಾಟ್ ಹೆನ್ರಿ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿದ್ದಾರೆ.

ಕೇನ್ ವಿಲಿಯಮ್ಸನ್ ಟೆಸ್ಟ್ ಪಂದ್ಯದ ತಯಾರಿಯತ್ತ ಗಮನ ಹರಿಸಿದ್ದು, ಏಕದಿನ ಸರಣಿಗೆ ಲಭ್ಯ ಇಲ್ಲ. ಇತರ ಏಳು ಆಟಗಾರರಾದ ಮುಹಮ್ಮದ್ ಅಬ್ಬಾಸ್, ಫಿನ್ ಅಲೆನ್, ಲಾಕಿ ಫರ್ಗ್ಯುಸನ್, ಆಡಮ್ ಮಿಲ್ನೆ, ವಿಲ್ ಓ’ರೂರ್ಕಿ, ಗ್ಲೆನ್ ಫಿಲಿಪ್ ಹಾಗೂ ಬೆನ್ ಸಿಯರ್ಸ್ ವಿವಿಧ ರೀತಿಯ ಗಾಯದ ಸಮಸ್ಯೆಗಳಿಂದ ಬಳಲುತ್ತಿದ್ದು, ಆಯ್ಕೆಗೆ ಅಲಭ್ಯವಾಗಿರುವಾಗಲೇ ನ್ಯೂಝಿಲ್ಯಾಂಡ್ ತನ್ನ ತಂಡವನ್ನು ಪ್ರಕಟಿಸಿದೆ.

ಸದ್ಯ ಪುನಶ್ಚೇತನ ಶಿಬಿರದಲ್ಲಿರುವ ಹೆನ್ರಿ ಅವರು ಏಕದಿನ ಸರಣಿ ಹಾಗೂ 3 ಪಂದ್ಯಗಳ ಟೆಸ್ಟ್ ಸರಣಿಗೆ ತಯಾರಾಗುತ್ತಿದ್ದಾರೆ. ಹೆನ್ರಿ ಮರಳಿಕೆಯಿಂದಾಗಿ ನ್ಯೂಝಿಲ್ಯಾಂಡ್‌ನ ಬೌಲಿಂಗ್ ದಾಳಿಗೆ ಮತ್ತಷ್ಟು ಬಲ ಬಂದಿದೆ. ಕಿವೀಸ್ ಪಡೆಯು ಸತತ 10ನೇ ಏಕದಿನ ಸರಣಿಯ ಗೆಲ್ಲುವತ್ತ ಗಮನ ಹರಿಸಿದೆ.

ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಸತತವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಬ್ಲೆಯರ್ ಟಿಕ್ನರ್ ತಂಡದಲ್ಲಿ ತನ್ನ ಸ್ಥಾನ ಉಳಿಸಿಕೊಂಡಿದ್ದಾರೆ. 32ರ ವಯಸ್ಸಿನ ಆಟಗಾರ 2 ಪಂದ್ಯಗಳಲ್ಲಿ 8 ವಿಕೆಟ್‌ ಗಳನ್ನು ಕಬಳಿಸಿದ್ದಾರೆ.

ಏಕದಿನ ಸರಣಿಯು ನ.16ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಲಿದ್ದು, ನ.19ರಂದು ನೇಪಿಯರ್ ಹಾಗೂ ನ.22ರಂದು ಹ್ಯಾಮಿಲ್ಟನ್‌ ನಲ್ಲಿ ಇನ್ನೆರಡು ಪಂದ್ಯಗಳು ನಡೆಯಲಿವೆ.

ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ 3-0 ಅಂತರದಿಂದ ಸರಣಿ ಕ್ಲೀನ್‌ ಸ್ವೀಪ್‌ಗೈದಿದ್ದ ನ್ಯೂಝಿಲ್ಯಾಂಡ್ ತಂಡವು ಮುಂಬರುವ ಸರಣಿಯಲ್ಲೂ ತನ್ನ ಪ್ರಾಬಲ್ಯ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ.

*ನ್ಯೂಝಿಲ್ಯಾಂಡ್ ಏಕದಿನ ತಂಡ: ಮಿಚೆಲ್ ಸ್ಯಾಂಟ್ನರ್(ನಾಯಕ), ಮೈಕಲ್ ಬ್ರೆಸ್‌ವೆಲ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಜೇಕಬ್ ಡಫಿ, ಜಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್(ವಿಕೆಟ್‌ ಕೀಪರ್), ಡ್ಯಾರಿಲ್ ಮಿಚೆಲ್, ರಚಿನ್ ರವೀಂದ್ರ, ನಾಥನ್ ಸ್ಮಿತ್, ಬ್ಲೆಯರ್ ಟಿಕ್ನರ್ ಹಾಗೂ ವಿಲ್ ಯಂಗ್.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News