ಖತರ್ ಓಪನ್ ಟೆನಿಸ್ ಟೂರ್ನಿ | ಸ್ವಿಯಾಟೆಕ್, ಅಲೆಕ್ಸಾಂಡ್ರೋವಾ ಸೆಮಿ ಫೈನಲ್‌ಗೆ
Photo Credit | X/@stanchers
ದೋಹಾ: ಮೂರು ಬಾರಿಯ ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಹಾಗೂ ರಶ್ಯದ ಆಟಗಾರ್ತಿ ಎಕಟೆರಿನಾ ಅಲೆಕ್ಸಾಂಡ್ರೋವಾ ಖತರ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಎರಡನೇ ಶ್ರೇಯಾಂಕದ ಸ್ವಿಯಾಟೆಕ್ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಕಳೆದ ವರ್ಷದ ರನ್ನರ್ಸ್ ಅಪ್ ಎಲೆನಾ ರೈಬಾಕಿನಾರನ್ನು 6-2, 7-5 ನೇರ ಸೆಟ್‌ಗಳ ಅಂತರದಿಂದ ಸದೆ ಬಡಿದರು.
ಸ್ವಿಯಾಟೆಕ್ ಅವರು ರೈಬಾಕಿನಾ ಎದುರು ಮೊದಲ ಸೆಟ್ಟನ್ನು ಸುಲಭವಾಗಿ ಗೆದ್ದುಕೊಂಡರು. ಪೋಲ್ಯಾಂಡ್ ಆಟಗಾರ್ತಿ ಎರಡನೇ ಸೆಟ್‌ನಲ್ಲಿ ಲಯ ಕಂಡುಕೊಳ್ಳಲು ದೀರ್ಘ ಸಮಯ ತೆಗೆದುಕೊಂಡಿದ್ದು, ಐದು ಬ್ರೇಕ್ ಪಾಯಿಂಟ್ಸ್‌ನಿಂದ ವಂಚಿತರಾದರು. 4-4ರಿಂದ ಸಮಬಲ ಸಾಧಿಸಿ ಕೊನೆಗೂ ತನ್ನ ಲಯ ಕಂಡುಕೊಂಡರು.
ರೈಬಾಕಿನಾ ಹಾಗೂ ಪೆಗುಲಾ ಸೋತಿರುವ ಹಿನ್ನೆಲೆಯಲ್ಲಿ ಸ್ವಿಯಾಟೆಕ್ ಪಂದ್ಯಾವಳಿಯಲ್ಲಿರುವ ಏಕೈಕ ಶ್ರೇಯಾಂಕಿತ ಆಟಗಾರನಾಗಿದ್ದಾರೆ.
ಸ್ವಿಯಾಟೆಕ್ ಮುಂದಿನ ಸುತ್ತಿನಲ್ಲಿ ಲಾಟ್ವಿಯದ ಆಟಗಾರ್ತಿ ಜೆಲೆನಾ ಒಸ್ಟಾಪೆಂಕೊರನ್ನು ಎದುರಿಸಲಿದ್ದಾರೆ. ಒಸ್ಟಾಪೆಂಕೊ ಅಂತಿಮ-8ರ ಸುತ್ತಿನ ಪಂದ್ಯದಲ್ಲಿ ಟ್ಯುನಿಶಿಯದ ಉನ್ಸ್ ಜಾಬಿರ್‌ರನ್ನು 6-2, 6-2 ನೇರ ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
ಐದು ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಸ್ವಿಯಾಟೆಕ್, 23ನೇ ಡಬ್ಲ್ಯುಟಿಎ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಜೂನ್‌ನಲ್ಲಿ ಫ್ರೆಂಚ್ ಓಪನ್ ಚಾಂಪಿಯನ್ ಆದ ನಂತರ ಸ್ವಿಯಾಟೆಕ್ ಯಾವುದೆ ಪ್ರಶಸ್ತಿ ಜಯಿಸಿಲ್ಲ.
ಮತ್ತೊಂದು ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಜೆಸ್ಸಿಕಾ ಪೆಗುಲಾರನ್ನು 4-6, 6-1, 6-1 ನೇರ ಸೆಟ್‌ಗಳ ಅಂತರದಿಂದ ಮಣಿಸಿರುವ ಎಕಟೆರಿನಾ ಅಲೆಕ್ಸಾಂಡ್ರೋವಾ ತನ್ನ ಗೆಲುವಿನ ಓಟ ಮುಂದುವರಿಸಿದರು.
26ನೇ ರ್ಯಾಂಕಿನ ಅಲೆಕ್ಸಾಂಡ್ರೋವಾ ಇತ್ತೀಚೆಗೆ ಆಸ್ಟ್ರೀಯದ ಲಿಂಝ್‌ನಲ್ಲಿ ಜಯಶಾಲಿಯಾದ ನಂತರ ಸತತ 8ನೇ ಪಂದ್ಯವನ್ನು ಗೆದ್ದುಕೊಂಡಿದ್ದಾರೆ.
ಅಲೆಕ್ಸಾಂಡ್ರೋವಾ ಅವರು ಪೆಗುಲಾ ವಿರುದ್ಧ ಮೊದಲ ಸೆಟ್‌ನಲ್ಲಿ ಪರದಾಟ ನಡೆಸಿದ್ದ ಹೊರತಾಗಿಯೂ ಪಂದ್ಯದ ಉಳಿದ ಅವಧಿಯಲ್ಲಿ ಪ್ರಾಬಲ್ಯ ಮೆರೆದರು.
‘‘ನಾನು ಕೇವಲ ಒಂದೇ ಪಂದ್ಯ ಹಾಗೂ ಒಂದೇ ಪಾಯಿಂಟ್ ಗಳಿಸುವತ್ತ ಗಮನ ನೀಡುವೆ. ಭವಿಷ್ಯದ ಬಗ್ಗೆ ಚಿಂತಿಸಲಾರೆ’’ ಎಂದು ವೃತ್ತಿಬದುಕಿನ ಆರನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ 30ರ ಹರೆಯದ ಅಲೆಕ್ಸಾಂಡ್ರೋವಾ ಹೇಳಿದ್ದಾರೆ.
ಅಲೆಕ್ಸಾಂಡ್ರೋವಾ ಸೆಮಿ ಫೈನಲ್‌ನಲ್ಲಿ ಅಮೆರಿಕದ ಅಮಂಡಾ ಅನಿಸಿಮೋವಾರನ್ನು ಎದುರಿಸಲಿದ್ದಾರೆ. ಅನಿಸಿಮೋವಾ ಉಕ್ರೇನ್ ಆಟಗಾರ್ತಿ ಮಾರ್ಟಾ ಕೋಸ್ಟ್ಯುಕ್‌ರನ್ನು 4-6, 7-5, 6-4 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.