ಅಂಪೈರ್ ಮೇಲೆ ತಾಳ್ಮೆ ಕಳೆದುಕೊಂಡ ರಿಷಭ್ ಪಂತ್!
ರಿಷಭ್ ಪಂತ್ | PC : X \ @riseup_pant17
ಹೊಸದಿಲ್ಲಿ: ಕ್ರಿಕೆಟ್ ಮೈದಾನದೊಳಗೆ ರಿಷಭ್ ಪಂತ್ ತಾಳ್ಮೆ ಕಳೆದುಕೊಂಡಿರುವುದು ತೀರಾ ಅಪರೂಪ. ಸಾಮಾನ್ಯವಾಗಿ ಶಾಂತಚಿತ್ತದಿಂದ ಇರುವ ವಿಕೆಟ್‌ಕೀಪರ್-ಬ್ಯಾಟರ್ ಪಂತ್ ಹೆಡ್ಡಿಂಗ್ಲೆಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ 3ನೇ ದಿನದಾಟದಲ್ಲಿ ಹತಾಶೆಯಲ್ಲಿದ್ದಂತೆ ಕಂಡುಬಂದರು.
ಚೆಂಡನ್ನು ಬದಲಿಸುವಂತೆ ಆನ್‌ಫೀಲ್ಡ್ ಅಂಪೈರ್‌ಗೆ ಪಂತ್ ಮನವಿ ಸಲ್ಲಿಸಿದಾಗ ಈ ಘಟನೆ ನಡೆದಿದೆ. ಅಂಪೈರ್ ಕೋರಿಕೆಯನ್ನು ಮನ್ನಿಸಲು ನಿರಾಕರಿಸಿದರು. ಆಗ ಪಂತ್ ಕೋಪಗೊಂಡು ಚೆಂಡನ್ನು ಎಸೆದರು. ಈ ವೇಳೆ ಜಸ್‌ಪ್ರೀತ್ ಬುಮ್ರಾ ಅವರು ಚೆಂಡಿನ ಪರಿಸ್ಥಿತಿಯನ್ನು ಬೆಟ್ಟು ಮಾಡಿ ಚೆಂಡು ಬದಲಾಯಿಸಲು ಒತ್ತಾಯಿಸಿದರು. ಆದರೆ ಅಂಪೈರ್ ತಮ್ಮ ನಿಲುವಿಗೆ ಅಂಟಿಕೊಂಡು ಮತ್ತೊಮ್ಮೆ ಮನವಿ ತಿರಸ್ಕರಿಸಿದರು.
ಪ್ರಸಕ್ತ ಪಂದ್ಯದಲ್ಲಿ ಪಂತ್ ಬ್ಯಾಟಿಂಗ್‌ನಲ್ಲಿ ದಾಖಲೆ ನಿರ್ಮಿಸಿ ಗಮನ ಸೆಳೆದಿದ್ದಾರೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಭಾರತದ ಮಾಜಿ ನಾಯಕ ರೋಹಿತ್ ಶರ್ಮಾರ ದಾಖಲೆಯನ್ನು ಮುರಿದಿರುವ ಪಂತ್ ಇದೀಗ ಡಬ್ಲ್ಯುಟಿಸಿ ಪಂದ್ಯಗಳಲ್ಲಿ ಒಟ್ಟು 62 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. 40 ಟೆಸ್ಟ್ ಪಂದ್ಯಗಳಲ್ಲಿ 56 ಸಿಕ್ಸರ್‌ಗಳನ್ನು ಸಿಡಿಸಿದ್ದ ರೋಹಿತ್ ದಾಖಲೆಯನ್ನು ಮುರಿದಿದ್ದಾರೆ.
ಪಂತ್ ಅವರು ಗರಿಷ್ಠ ಟೆಸ್ಟ್ ಶತಕಗಳನ್ನು ಗಳಿಸಿರುವ ಭಾರತೀಯ ವಿಕೆಟ್‌ಕೀಪರ್-ಬ್ಯಾಟರ್ ಎನಿಸಿಕೊಂಡು ಎಂ.ಎಸ್. ಧೋನಿ ಅವರ ದಾಖಲೆಯನ್ನೂ ಮುರಿದಿದ್ದಾರೆ. ಶನಿವಾರ ಇಂಗ್ಲೆಂಡ್ ವಿರುದ್ಧ 7ನೇ ಶತಕ ಗಳಿಸಿ ಈ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧ 3 ಶತಕಗಳನ್ನು ಗಳಿಸಿರುವ ಪಂತ್ ಅವರು ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ್ದ ತಲಾ ಒಂದು ಶತಕ ಗಳಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 7ನೇ ಶತಕ ಗಳಿಸಿರುವ ಏಶ್ಯದ ನಿಯೋಜಿತ ವಿಕೆಟ್ ಕೀಪರ್ ಆಗಿರುವ ಪಂತ್ ಅವರು ಶ್ರೀಲಂಕಾದ ಕುಮಾರ ಸಂಗಕ್ಕರ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದೇ ವೇಳೆ ಟೆಸ್ಟ್ ಕ್ರಿಕೆಟ್‌ನಲ್ಲಿ 3,000 ರನ್ ಪೂರೈಸಿದ್ದಾರೆ. ಧೋನಿಯ ನಂತರ ಈ ಸಾಧನೆ ಮಾಡಿದ ಭಾರತದ 2ನೇ ವಿಕೆಟ್‌ಕೀಪರ್ ಆಗಿದ್ದಾರೆ.
ಪಂತ್ ಅವರು 44 ಟೆಸ್ಟ್ ಪಂದ್ಯಗಳಲ್ಲಿ 43.40ರ ಸರಾಸರಿಯಲ್ಲಿ 7 ಶತಕಗಳು ಹಾಗೂ 15 ಅರ್ಧಶತಕಗಳ ಸಹಿತ ಒಟ್ಟು 3,082 ರನ್ ಗಳಿಸಿದ್ದಾರೆ. ತನ್ನ ನಿರ್ಬೀತ ಹಾಗೂ ಪ್ರತಿ ದಾಳಿ ಶೈಲಿಯಲ್ಲಿ 73.89ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.