ರಿಷಭ್ ಪಂತ್ ಫಿಟ್ನೆಸ್ ಕುರಿತ ಮಾಹಿತಿ ನೀಡಿದ ಬಿಸಿಸಿಐ
ರಿಷಭ್ ಪಂತ್ | PC : BCCI
ಹೊಸದಿಲ್ಲಿ: ಲಾರ್ಡ್ಸ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಆರಂಭವಾಗುವ ಮೊದಲು ರಿಷಭ್ ಪಂತ್ ಬ್ಯಾಟಿಂಗ್ ಗ್ಲೌಸ್ ಧರಿಸಿದ್ದಾರೆ. ಭಾರತೀಯ ವಿಕೆಟ್ ಕೀಪರ್-ಬ್ಯಾಟರ್ ಗೆ ಮೊದಲ ದಿನದಾಟದಲ್ಲಿ ತೋರು ಬೆರಳಿಗೆ ಗಾಯವಾಗಿತ್ತು.
ಪಂತ್ ಅವರು ಈಗಲೇ ವಿಕೆಟ್ ಕೀಪಿಂಗ್ ಗ್ಲೌಸ್ ಧರಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ.
ಶುಕ್ರವಾರ 2ನೇ ದಿನದಾಟ ಆರಂಭವಾಗುವ ಮೊದಲು ಬ್ಯಾಟಿಂಗ್ ಗ್ಲೌಸ್ ಗಳನ್ನು ಧರಿಸಿದ ಪಂತ್ ಅವರು ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್ ಅವರಿಂದ ಕೆಲವು ಎಸೆತಗಳನ್ನು ಎದುರಿಸಿದರು. ಆದರೆ, ಅವರು ತಮ್ಮ ಎಡಗೈಯನ್ನು ಹಲವು ಬಾರಿ ಅಲ್ಲಾಡಿಸಿ ನೋಡಿದರು. ನೋವು ಕಡಿಮೆಯಿದ್ದಂತೆ ಕಂಡುಬಂದಿಲ್ಲ. ಇದು ಭಾರತೀಯ ತಂಡದ ಕಳವಳಕ್ಕೆ ಕಾರಣವಾಗಿದೆ.
ಪಂತ್ ನೋವಿನಿಂದ ಚೇತರಿಸಿಕೊಳ್ಳದ ಕಾರಣ ಧ್ರುವ್ ಜುರೆಲ್ ಅವರು ಭಾರತದ ಪರ ವಿಕೆಟ್ ಕೀಪಿಂಗ್ ಮುಂದುವರಿಸಲಿದ್ದಾರೆ.
‘‘ರಿಷಭ್ ಪಂತ್ ಅವರ ಎಡಗೈ ತೋರು ಬೆರಳಿಗೆ ಆಗಿರುವ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಬಿಸಿಸಿಐ ವೈದ್ಯಕೀಯ ತಂಡವು ಅವರ ಪ್ರಗತಿಯನ್ನು ಗಮನಿಸುತ್ತಲೇ ಇದೆ. ಧ್ರುವ್ ಜುರೆಲ್ 2ನೇ ದಿನದಾಟದಲ್ಲಿ ವಿಕೆಟ್ ಕೀಪಿಂಗ್ ಅನ್ನು ಮುಂದುವರಿಸಲಿದ್ದಾರೆ’’ಎಂದು ಬಿಸಿಸಿಐ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಪಂತ್ ಅವರು ತನ್ನ ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿಸಿಕೊಂಡರೆ, ಜುರೆಲ್ ಅವರು ವಿಕೆಟ್ ಕೀಪಿಂಗ್ ಕೆಲಸದತ್ತ ತನ್ನ ಗಮನ ಹರಿಸುವುದನ್ನು ಮುಂದುವರಿಸಿದರು.
‘‘ಭಾರತ ತಂಡದ ಉಪ ನಾಯಕ ರಿಷಭ್ ಪಂತ್ ಅವರ ಎಡಗೈ ತೋರು ಬೆರಳಿಗೆ ಪೆಟ್ಟಾಗಿದೆ. ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ. ರಿಷಭ್ ಅನುಪಸ್ಥಿತಿಯಲ್ಲಿ ಧ್ರುವ್ ಜುರೆಲ್ ಸದ್ಯ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ’’ ಎಂದು ಮೊದಲ ದಿನದಾಟವಾದ ಗುರುವಾರ ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಗುರುವಾರ 34ನೇ ಓವರ್ ನಲ್ಲಿ ಜಸ್ ಪ್ರಿತ್ ಬುಮ್ರಾ ಎಸೆತವನ್ನು ತಡೆಯಲು ಹೋದ ಪಂತ್ ಬೆರಳಿಗೆ ಗಾಯವಾಗಿತ್ತು. ತಕ್ಷಣವೇ ಫಿಸಿಯೋರಿಂದ ಚಿಕಿತ್ಸೆ ಪಡೆದರು. ಸ್ವಲ್ಪ ಹೊತ್ತು ಮೈದಾನದಲ್ಲಿ ಉಳಿಯಲು ಪ್ರಯತ್ನಿಸಿದರು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಮೈದಾನದಿಂದ ಹೊರ ನಡೆದರು.
ಪ್ರಸಕ್ತ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಂತ್ ಅವರು 2 ಪಂದ್ಯಗಳಲ್ಲಿ 85.50ರ ಸರಾಸರಿಯಲ್ಲಿ 2 ಶತಕಗಳ ಸಹಿತ ಒಟ್ಟು 342 ರನ್ ಗಳಿಸಿದ್ದಾರೆ.