ಆಸ್ಟ್ರೇಲಿಯದಲ್ಲಿ ಗರಿಷ್ಠ ವೈಯಕ್ತಿಕ ಶತಕ : ವಿರಾಟ್ ಕೊಹ್ಲಿ ದಾಖಲೆ ಮುರಿದ ರೋಹಿತ್ ಶರ್ಮಾ
ರೋಹಿತ್ ಶರ್ಮಾ | Photo Credit : PTI
ಸಿಡ್ನಿ, ಅ.25: ರೋಹಿತ್ ಶರ್ಮಾ ತನ್ನ 33ನೇ ಏಕದಿನ ಶತಕ ಸಿಡಿಸುವ ಮೂಲಕ ಭಾರತೀಯ ಕ್ರಿಕೆಟಿಗೆ ಸಿಡ್ನಿ ಕ್ರೀಡಾಂಗಣವು ಶನಿವಾರ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಯಿತು.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ 125 ಎಸೆತಗಳಲ್ಲಿ ಔಟಾಗದೆ 121 ರನ್ ಗಳಿಸಿದ ರೋಹಿತ್ ಆಸ್ಟ್ರೇಲಿಯ ತಂಡದ ವಿರುದ್ಧ ಭಾರತವು 9 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸುವಲ್ಲಿ ಮಹತ್ವದ ಕೊಡುಗೆ ನೀಡಿದರು. ವಿರಾಟ್‌ಕೊಹ್ಲಿ(ಔಟಾಗದೆ 74)ಅವರೊಂದಿಗೆ 2ನೇ ವಿಕೆಟ್‌ಗೆ 168 ರನ್ ಜೊತೆಯಾಟ ನಡೆಸಿದ ರೋಹಿತ್ ಭಾರತ ತಂಡವನ್ನು ಸರಣಿ ವೈಟ್‌ವಾಶ್‌ನಿಂದ ಪಾರು ಮಾಡಿದರು.
ಆಸ್ಟ್ರೇಲಿಯದ ವಿರುದ್ಧ ತನ್ನ 9ನೇ ಶತಕವನ್ನು ಸಿಡಿಸಿದ ರೋಹಿತ್, ಆಸೀಸ್ ವಿರುದ್ಧ 8 ಶತಕಗಳನ್ನು ಗಳಿಸಿದ್ದ ಕೊಹ್ಲಿ ದಾಖಲೆಯನ್ನು ಮುರಿದರು. ಈ ಮೂಲಕ ತನ್ನ ಯಶಸ್ವಿ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದರು.
ಈ ಸಾಧನೆಯ ಮೂಲಕ ಆಸ್ಟ್ರೇಲಿಯ ವಿರುದ್ಧ ಗರಿಷ್ಠ ಶತಕ ಗಳಿಸಿದ ಸಚಿನ್ ತೆಂಡುಲ್ಕರ್‌ರೊಂದಿಗೆ ದಾಖಲೆ ಹಂಚಿಕೊಂಡರು. ರೋಹಿತ್ ಕೇವಲ 49 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ, ಆಸ್ಟ್ರೇಲಿಯ ಎದುರು ತೆಂಡುಲ್ಕರ್ 70 ಇನಿಂಗ್ಸ್ ಹಾಗೂ ಕೊಹ್ಲಿ 51 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.
ಆಸ್ಟ್ರೇಲಿಯದಲ್ಲಿ ಗರಿಷ್ಠ ಏಕದಿನ ಶತಕಗಳನ್ನು ಗಳಿಸಿರುವ ರೋಹಿತ್ ಈ ಸಾಧನೆ ಮಾಡಿದ ಪ್ರವಾಸಿ ತಂಡದ ಮೊದಲ ಆಟಗಾರ ಎನಿಸಿಕೊಂಡು ಇತಿಹಾಸ ಸೃಷ್ಟಿಸಿದರು. ಆಸ್ಟ್ರೇಲಿಯ ನೆಲದಲ್ಲಿ ರೋಹಿತ್ 6 ಶತಕಗಳನ್ನು ಗಳಿಸಿದ್ದಾರೆ. ಕೊಹ್ಲಿ 32 ಇನಿಂಗ್ಸ್‌ಗಳಲ್ಲಿ 5 ಶತಕ ಗಳಿಸಿದ್ದಾರೆ. ಶ್ರೀಲಂಕಾದ ಬ್ಯಾಟಿಂಗ್ ದಂತಕತೆ ಕುಮಾರ ಸಂಗಕ್ಕರ ಕೂಡ ಆಸ್ಟ್ರೇಲಿಯದಲ್ಲಿ 5 ಶತಕಗಳನ್ನು ಗಳಿಸಿದ್ದು, ಇದಕ್ಕಾಗಿ 49 ಇನಿಂಗ್ಸ್ ತೆಗೆದುಕೊಂಡಿದ್ದರು.
ಇದೀಗ ರೋಹಿತ್ ಅವರು ಒಟ್ಟು 50 ಅಂತರ್‌ರಾಷ್ಟ್ರೀಯ ಶತಕಗಳನ್ನು(ಟೆಸ್ಟ್‌ನಲ್ಲಿ 12, ಏಕದಿನದಲ್ಲಿ 33, ಟಿ-20ಯಲ್ಲಿ 5)ದಾಖಲಿಸಿದ್ದಾರೆ.