×
Ad

2ನೇ ಟೆಸ್ಟ್ ಪಂದ್ಯದ ಗೆಲುವು ನನ್ನ ಕ್ರಿಕೆಟ್ ಪಯಣದ ಸಂತಸದ ಕ್ಷಣಗಳ ಪೈಕಿ ಒಂದು: ಗಿಲ್

Update: 2025-07-07 22:08 IST

ಶುಭಮನ್ ಗಿಲ್ | PC : X  \ @ShubmanGill

ಬರ್ಮಿಂಗ್‌ಹ್ಯಾಮ್: ಎಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧ 337 ರನ್ ಭರ್ಜರಿ ಗೆಲುವಿಗೆ ಟೀಮ್ ಇಂಡಿಯಾದ ನೇತೃತ್ವವಹಿಸಿದ್ದ ನಾಯಕ ಶುಭಮನ್ ಗಿಲ್, 2ನೇ ಟೆಸ್ಟ್ ಪಂದ್ಯದ ಗೆಲುವು ನನ್ನ ಕ್ರಿಕೆಟ್ ಪಯಣದ ಅತ್ಯಂತ ಸಂತಸದ ಕ್ಷಣಗಳ ಪೈಕಿ ಒಂದಾಗಿದೆ ಎಂದು ಬಣ್ಣಿಸಿದ್ದಾರೆ.

‘‘ನಾನು ಈ ಪಂದ್ಯದ ಕೊನೆಯ ಕ್ಯಾಚ್ ಪಡೆದೆ. ನಾವು ಪಂದ್ಯವನ್ನು ಮುಕ್ತಾಯಗೊಳಿಸಿದ ರೀತಿಯು ನನಗೆ ಖುಷಿಕೊಟ್ಟಿದೆ. ನಮಗೆ ಇನ್ನೂ 3 ಪ್ರಮುಖ ಪಂದ್ಯಗಳು ಆಡಲು ಬಾಕಿ ಇದೆ. ನಾವು ತಕ್ಷಣವೇ ಪುಟಿದೆದ್ದು, ಮತ್ತೆ ಗೆಲುವಿನ ಹಳಿಗೆ ಮರಳಿದ್ದೇವೆ’’ ಎಂದು ಬಿಸಿಸಿಐ ಡಾಟ್ ಟಿವಿಗೆ ಗಿಲ್ ಹೇಳಿದ್ದಾರೆ.

ಭಾರತದ ಆಲ್‌ರೌಂಡ್ ಪ್ರದರ್ಶನವು ಗೆಲುವಿಗೆ ಹೇಗೆ ಪೂರಕವಾಯಿತು ಎಂಬ ಕುರಿತು ಮಾತನಾಡಿದ ಗಿಲ್, ‘‘ಈ ಪಂದ್ಯದಲ್ಲಿ ಪ್ರತಿಯೊಬ್ಬರು ಬ್ಯಾಟ್ ಹಾಗೂ ಬಾಲ್‌ನಲ್ಲಿ ನೀಡಿರುವ ಕೊಡುಗೆಯು ದೊಡ್ಡ ಧನಾತ್ಮಕ ಅಂಶವಾಗಿದೆ. ಬೇರೆ ಬೇರೆ ಆಟಗಾರರು ವಿವಿಧ ಹಂತಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ನಾವು ಇದನ್ನೇ ಬಯಸುತ್ತೇವೆ. ಇದು ತಂಡವನ್ನು ಚಾಂಪಿಯನ್ ಆಗಿಸುತ್ತದೆ’’ ಎಂದರು.

‘‘ನಾವು ಈ ಪಂದ್ಯವನ್ನು ಗೆಲ್ಲಲು ಕಠಿಣ ಶ್ರಮಪಟ್ಟಿದ್ದೇವೆ. ನಾವು ಕಳೆದ ಆರರಿಂದ 8 ತಿಂಗಳುಗಳಿಂದ ಟೆಸ್ಟ್ ಪಂದ್ಯದ ಗೆಲುವಿಗಾಗಿ ಎಷ್ಟೊಂದು ಶ್ರಮಪಟ್ಟಿದ್ದೇವೆ ಎಂದು ನನಗೆ ಗೊತ್ತಿದೆ. ನಾವು ಈ ತನಕ ಟೆಸ್ಟ್ ಪಂದ್ಯ ಗೆಲ್ಲದ ಎಜ್‌ಬಾಸ್ಟನ್ ಮೈದಾನದಲ್ಲಿ ಈ ಸಾಧನೆ ಮಾಡಿರುವುದು ಅತ್ಯಂತ ವಿಶೇಷವಾಗಿದೆ’’ ಎಂದು ಗಿಲ್ ಹೇಳಿದರು.

‘‘ನನಗೆ ಪ್ರತಿಯೊಬ್ಬರ ಬಗ್ಗೆಯೂ ಹೆಮ್ಮೆಯಾಗುತ್ತಿದೆ. ಈ ದೇಶಕ್ಕಾಗಿ ಟೆಸ್ಟ್ ಪಂದ್ಯವನ್ನು ಗೆಲ್ಲಲು ಪ್ರತಿಯೊಬ್ಬರೂ ಕೊಡುಗೆ ನೀಡಬೇಕೆಂದು ಮೊದಲ ದಿನದಾಟದಲ್ಲೇ ನಿಶ್ಚಯಿಸಿದ್ದೆವು. ನಾನು ಈ ಕ್ಷಣವನ್ನು ಜೀವನದಲ್ಲಿ ಎಂದಿಗೂ ಮರೆಯಲಾರೆ. ನಾನು ನಿವೃತ್ತಿಯಾದಾಗ ದು ನನ್ನ ಅತ್ಯಂತ ಖುಷಿಯ ನೆನಪುಗಳಲ್ಲಿ ಇದು ಕೂಡ ಒಂದಾಗಬಹುದು’’ ಎಂದರು.

ಗಿಲ್ ಅವರ ದ್ವಿಶತಕ ಹಾಗೂ ಆಕಾಶ್ ದೀಪ್ ಅವರ 10 ವಿಕೆಟ್ ಗೊಂಚಲು ಭಾರತದ ಭರ್ಜರಿ ಗೆಲುವಿಗೆ ನೆರವಾಗಿದ್ದರೂ, ‘‘ಕೊನೆಯ ದಿನದಾಟದಲ್ಲಿ ಸಿರಾಜ್ ಪಡೆದಿರುವ ಕ್ಯಾಚ್ ಈ ಟೆಸ್ಟ್ ಪಂದ್ಯದಲ್ಲಿ ನನಗೆ ವಿಶೇಷ ಅಂಶವಾಗಿದೆ’’ ಎಂದು ಗಿಲ್ ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News