ಇಂಗ್ಲೆಂಡ್ ನಲ್ಲಿ ಒಂದೇ ಟೆಸ್ಟ್ ಸರಣಿಯಲ್ಲಿ ಗರಿಷ್ಠ ರನ್; ಇತಿಹಾಸ ನಿರ್ಮಿಸಿದ ಶುಭಮನ್ ಗಿಲ್
ಶುಭಮನ್ ಗಿಲ್ | PC : PTI
ಮ್ಯಾಂಚೆಸ್ಟರ್, ಜು.27: ಇಂಗ್ಲೆಂಡ್ ನಲ್ಲಿ ಒಂದೇ ಟೆಸ್ಟ್ ಸರಣಿಯಲ್ಲಿ 700ಕ್ಕೂ ಅಧಿಕ ರನ್ ಗಳಿಸಿರುವ ಏಶ್ಯದ ಮೊದಲ ಬ್ಯಾಟರ್ ಎನಿಸಿಕೊಂಡಿರುವ ಶುಭಮನ್ ಗಿಲ್ ಓಲ್ಡ್ ಟ್ರಾಫರ್ಡ್ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ನಾಯಕ ಗಿಲ್ ಐದನೇ ದಿನವಾದ ರವಿವಾರ ಈ ಸಾಧನೆಯ ಮೈಲಿಗಲ್ಲು ತಲುಪಿದರು. ಈ ಸಾಧನೆಯ ಮೂಲಕ 25ರ ವಯಸ್ಸಿನ ಗಿಲ್ ಅವರು ಏಶ್ಯನ್ ಬ್ಯಾಟರ್ ಆಗಿ ದಾಖಲೆ ನಿರ್ಮಿಸಿದ್ದಲ್ಲದೆ, ಸರಣಿಯೊಂದರಲ್ಲಿ 700 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿರುವ ಟೆಸ್ಟ್ ನಾಯಕರ ಪ್ರತಿಷ್ಠಿತ ಕ್ಲಬ್ ಗೆ ಸೇರ್ಪಡೆಯಾದರು.
ಈ ಕ್ಲಬ್ ನಲ್ಲಿ ಕ್ರಿಕೆಟ್ ನ ಖ್ಯಾತನಾಮರಾದ ಸರ್ ಡೊನಾಲ್ಡ್ ಬ್ರಾಡ್ಮನ್(ಎರಡು ಬಾರಿ), ಸರ್ ಗ್ಯಾರಿಫೀಲ್ಡ್ ಸೋಬರ್ಸ್, ಗ್ರೆಗ್ ಚಾಪೆಲ್, ಸುನೀಲ್ ಗವಾಸ್ಕರ್, ಡೇವಿಡ್ ಗೋವೆರ್, ಗ್ರಹಾಂ ಗೂಚ್ ಹಾಗೂ ಗ್ರೇಮ್ ಸ್ಮಿತ್ ಅವರಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ಪ್ರವಾಸದಲ್ಲಿ ಬ್ಯಾಟಿಂಗ್ ನಲ್ಲಿ ಸ್ಥಿರ ಪ್ರದರ್ಶನವು ಗಿಲ್ ಭಾರತದ ಪ್ರಮುಖ ಹೆಗ್ಗಳಿಕೆಯ ಪೈಕಿ ಒಂದಾಗಿದೆ. ತನ್ನ ಹೆಗಲ ಮೇಲೆ ಭಾರೀ ಜವಾಬ್ದಾರಿಯಿದ್ದರೂ ಸವಾಲಿನ ಪರಿಸ್ಥಿತಿಯಲ್ಲಿ ಬ್ಯಾಟರ್ ಹಾಗೂ ಭಾರತದ ನೂತನ ನಾಯಕನಾಗಿ ರನ್ ಗಳಿಸಿರುವ ಗಿಲ್ ಅವರು ಸರಣಿಯಲ್ಲಿ ಈ ತನಕ 4 ಶತಕಗಳನ್ನು ಗಳಿಸಿದ್ದಾರೆ.
►ಭಾರತ ತಂಡದ ಪರ ಟೆಸ್ಟ್ ಸರಣಿಯಲ್ಲಿ 700ಕ್ಕೂ ಅಧಿಕ ರನ್ ಗಳಿಸಿದವರು
774-ಸುನೀಲ್ ಗವಾಸ್ಕರ್, ವೆಸ್ಟ್‌ಇಂಡೀಸ್ ವಿರುದ್ಧ, 1971(ವಿದೇಶ)
774-ಸುನೀಲ್ ಗವಾಸ್ಕರ್, ವೆಸ್ಟ್‌ಇಂಡೀಸ್ ವಿರುದ್ಧ, 1978/79(ಸ್ವದೇಶ)
712-ಯಶಸ್ವಿ ಜೈಸ್ವಾಲ್, ಇಂಗ್ಲೆಂಡ್ ವಿರುದ್ಧ, 2024(ಸ್ವದೇಶ)
701-ಶುಭಮನ್ ಗಿಲ್, ಇಂಗ್ಲೆಂಡ್ ವಿರುದ್ಧ, 2025