×
Ad

ಒಂದೇ ಟೆಸ್ಟ್ ಸರಣಿಯಲ್ಲಿ 4 ಶತಕ ಗಳಿಸಿದ 3ನೇ ನಾಯಕ ಗಿಲ್

Update: 2025-07-27 20:19 IST

 ಶುಭಮನ್ ಗಿಲ್ | PC : PTI 

ಮ್ಯಾಂಚೆಸ್ಟರ್, ಜು.27: ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧ ಈಗ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು. ಓಲ್ಡ್ ಟ್ರಾಫರ್ಡ್‌ ನಲ್ಲಿ 4ನೇ ಟೆಸ್ಟ್‌ನ 5ನೇ ದಿನವಾದ ರವಿವಾರ ಭಾರತ ತಂಡದ ನಾಯಕ ಗಿಲ್ ಸರಣಿಯಲ್ಲಿ ತನ್ನ 4ನೇ ಶತಕವನ್ನು ಗಳಿಸಿದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಸರಣಿಯಲ್ಲಿ 4 ಶತಕಗಳನ್ನು ಗಳಿಸಿದ ಕೇವಲ ಮೂರನೇ ನಾಯಕನೆಂಬ ಕೀರ್ತಿಗೆ ಭಾಜನರಾದರು.

ಈ ಸಾಧನೆಯ ಮೂಲಕ ಕ್ರಿಕೆಟ್ ದಿಗ್ಗಜರಾದ ಸರ್ ಡಾನ್ ಬ್ರಾಡ್ಮನ್ ಹಾಗೂ ಸುನೀಲ್ ಗವಾಸ್ಕರ್ ಅವರ ದಾಖಲೆಯನ್ನು ಸರಿಗಟ್ಟಿದರು.

ಗಿಲ್ ಅವರು 4ನೇ ಟೆಸ್ಟ್ ಪಂದ್ಯದಲ್ಲಿ ಕಠಿಣ ಪರಿಸ್ಥಿತಿಯಲ್ಲಿ 103 ರನ್ ಗಳಿಸಿದ್ದಾರೆ. ಕೆ.ಎಲ್.ರಾಹುಲ್(90 ರನ್)ವಿಕೆಟನ್ನು ಕಬಳಿಸಿದ ಸ್ಟೋಕ್ಸ್ ಅವರು 188 ರನ್ ಜೊತೆಯಾಟವನ್ನು ಮುರಿದರು.

ರಾಹುಲ್ ಔಟಾದ ಸ್ವಲ್ಪ ಹೊತ್ತಿನಲ್ಲೆ ಗಿಲ್ 103 ರನ್ ಗಳಿಸಿ ಜೋಫ್ರಾ ಆರ್ಚರ್‌ಗೆ ವಿಕೆಟ್ ಒಪ್ಪಿಸಿದರು. ಶತಕ ಸಿಡಿಸುವ ಮೂಲಕ ಗಿಲ್ ಅವರು ಕ್ರಿಕೆಟ್ ಇತಿಹಾಸದ ಪುಟದಲ್ಲಿ ಸ್ಥಾನ ಪಡೆದರು.

*ಚೊಚ್ಚಲ ಸರಣಿಯಲ್ಲಿ 4 ಶತಕ, ಕೊಹ್ಲಿ ದಾಖಲೆ ಪತನ

ಗಿಲ್ ಅವರು ನಾಯಕನಾಗಿ ತನ್ನ ಚೊಚ್ಚಲ ಟೆಸ್ಟ್ ಸರಣಿಯಲ್ಲಿ 4 ಶತಕಗಳನ್ನು ಗಳಿಸಿರುವ ಮೊತ್ತ ಮೊದಲ ಆಟಗಾರನಾಗಿದ್ದಾರೆ. ಈ ಮೂಲಕ ವಾರ್ವಿಕ್, ಡಾನ್ ಬ್ರಾಡ್ಮನ್, ಗ್ರೆಗ್ ಚಾಪೆಲ್, ವಿರಾಟ್ ಕೊಹ್ಲಿ ಹಾಗೂ ಸ್ಟೀವನ್ ಸ್ಮಿತ್ ದಾಖಲೆಯನ್ನು ಮುರಿದರು. ಈ ಎಲ್ಲ ಆಟಗಾರರು ನಾಯಕರಾಗಿ ತನ್ನ ಮೊದಲ ಟೆಸ್ಟ್ ಸರಣಿಗಳಲ್ಲಿ ಮೂರು ಶತಕ ಗಳಿಸುವಲ್ಲಿ ಶಕ್ತರಾಗಿದ್ದರು.

►ನಾಯಕನಾಗಿ ಟೆಸ್ಟ್ ಸರಣಿಯಲ್ಲಿ ಗರಿಷ್ಠ ಶತಕ ಗಳಿಸಿದ ಆಟಗಾರರು

4-ಸರ್ ಡಾನ್ ಬ್ರಾಡ್ಮನ್, ಭಾರತದ ವಿರುದ್ಧ, 1947/48(ಸ್ವದೇಶ)

4-ಸುನೀಲ್ ಗವಾಸ್ಕರ್, ವೆಸ್ಟ್‌ಇಂಡೀಸ್ ವಿರುದ್ಧ, 1978/79(ಸ್ವದೇಶ)

4-ಶುಭಮನ್ ಗಿಲ್, ಇಂಗ್ಲೆಂಡ್ ವಿರುದ್ಧ, 2025(ವಿದೇಶ)

-ಟೆಸ್ಟ್ ಸರಣಿಯಲ್ಲಿ ಭಾರತದ ಪರ ಗರಿಷ್ಠ ಶತಕ ಗಳಿಸಿದವರು

4-ಸುನೀಲ್ ಗವಾಸ್ಕರ್, ವೆಸ್ಟ್‌ಇಂಡೀಸ್ ವಿರುದ್ಧ, 1971(ವಿದೇಶ)

4-ಸುನೀಲ್ ಗವಾಸ್ಕರ್, ವೆಸ್ಟ್‌ಇಂಡೀಸ್ ವಿರುದ್ದ, 1978/79(ಸ್ವದೇಶ)

4-ವಿರಾಟ್ ಕೊಹ್ಲಿ, ಆಸ್ಟ್ರೇಲಿಯದ ವಿರುದ್ಧ, 2014-15(ವಿದೇಶ)

4-ಶುಭಮನ್ ಗಿಲ್, ಇಂಗ್ಲೆಂಡ್ ವಿರುದ್ಧ, 2025(ವಿದೇಶ)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News