×
Ad

ಮರೆಯಲಾಗದ ಇಂಗ್ಲೆಂಡ್ ಸರಣಿ | ವಿಶೇಷ ವಸ್ತುಗಳನ್ನು ಜೋಪಾನವಾಗಿಟ್ಟುಕೊಂಡ ಶುಭಮನ್ ಗಿಲ್

Update: 2025-08-05 20:14 IST

ಶುಭಮನ್ ಗಿಲ್ | PTI

ಲಂಡನ್, ಆ.5: ಭಾರತ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ಅವರು ಇಂಗ್ಲೆಂಡ್ ನಲ್ಲಿ ತನ್ನ ವೀರೋಚಿತ ಟೆಸ್ಟ್ ಸರಣಿಯ ಕೆಲವೊಂದು ಮರೆಯಲಾಗದ, ಸಂಗ್ರಹಯೋಗ್ಯ ವಸ್ತುಗಳೊಂದಿಗೆ ಸ್ವದೇಶಕ್ಕೆ ಮರಳುತ್ತಿದ್ದಾರೆ.

ಹೆಡ್ಡಿಂಗ್ಲೆಯಲ್ಲಿ 147 ರನ್ ಗಳಿಸಿದ್ದ ಪಂದ್ಯದ ಸ್ಟಂಪ್ ಹಾಗೂ ಎಜ್ ಬಾಸ್ಟನ್ ನಲ್ಲಿ ತನ್ನ ಅವಳಿ ಶತಕಗಳ ಸ್ಮರಣಾರ್ಥ ಇಡೀ ಭಾರತೀಯ ತಂಡದ ಹಸ್ತಾಕ್ಷರವಿರುವ ಪಂದ್ಯದ ಜೆರ್ಸಿಯನ್ನು ಗಿಲ್ ತನ್ನೊಂದಿಗೆ ಇಟ್ಟುಕೊಂಡಿದ್ದಾರೆ.

ಹೊಸತಾಗಿ ಟೆಸ್ಟ್ ನಾಯಕನಾಗಿ ನೇಮಕಗೊಂಡಿದ್ದ 25ರ ಹರೆಯದ ಗಿಲ್ ಅವರು ಐದು ಪಂದ್ಯಗಳ ಸರಣಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿ ಒಟ್ಟು 754 ರನ್ ಗಳಿಸಿ ‘ಸರಣಿಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು. ಸುನೀಲ್ ಗವಾಸ್ಕರ್ ಅವರ ಹೆಸರಲ್ಲಿ ದೀರ್ಘ ಸಮಯದಿಂದ ಇರುವ ಭಾರತೀಯ ದಾಖಲೆಯನ್ನು ಮುರಿಯುವ ಸನಿಹ ತಲುಪಿದ್ದರು.

ರೋಹಿತ್ ಶರ್ಮಾ ನಿವೃತ್ತಿಯ ಹಿನ್ನೆಲೆಯಲ್ಲಿ ನಾಯಕನ ಸ್ಥಾನದ ಜೊತೆಗೆ ವಿರಾಟ್ ಕೊಹ್ಲಿ ಅವರಿಂದ ತೆರವಾದ 4ನೇ ಕ್ರಮಾಂಕದಲ್ಲಿ ಗಿಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಎಜ್ಬಾಸ್ಟನ್ ನಲ್ಲಿ ಗಿಲ್ ಅತ್ಯಮೋಘ ಪ್ರದರ್ಶನ ನೀಡಿದ್ದರು. ಮೊದಲ ಇನಿಂಗ್ಸ್ ನಲ್ಲಿ 269 ರನ್ ಗಳಿಸಿದ್ದ ಗಿಲ್ ಅವರು ಆ ನಂತರ 161 ರನ್ ಗಳಿಸಿದ್ದರು. ಈ ಮೂಲಕ ಭಾರತವು 2ನೇ ಪಂದ್ಯವನ್ನು ಜಯಿಸಿ ಸರಣಿ ಸಮಬಲಗೊಳಿಸುವಲ್ಲಿ ನೆರವಾಗಿದ್ದರು. ಆ ಪಂದ್ಯದ ಸ್ಟಂಪ್ ಅನ್ನು ಗಿಲ್ ಸಂಗ್ರಹಿಸಿಟ್ಟುಕೊಂಡಿದ್ದು, ಸ್ಟಂಪ್ ಮೇಲೆ ಹಸ್ತಾಕ್ಷರದ ಜೊತೆಗೆ ಪಂದ್ಯದ ವಿವರಗಳನ್ನು ಬರೆಯಲಾಗಿದೆ.

ದ ಓವಲ್ ನಲ್ಲಿ ನಡೆದಿದ್ದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಧರಿಸಿದ್ದ ಜೆರ್ಸಿಯನ್ನು ಗಿಲ್ ತನ್ನೊಂದಿಗೆ ಇಟ್ಟುಕೊಂಡಿದ್ದಾರೆ. ಭಾರತವು ಈ ಪಂದ್ಯವನ್ನು 6 ರನ್ನಿಂದ ರೋಚಕವಾಗಿ ಗೆದ್ದುಕೊಂಡು ಸರಣಿಯನ್ನು 2-2ರಿಂದ ಸಮಬಲಗೊಳಿಸಿ ಇತಿಹಾಸ ನಿರ್ಮಿಸಿತ್ತು.

ಐದನೇ ಟೆಸ್ಟ್ ಪಂದ್ಯದಲ್ಲಿ ರನೌಟ್ ಆಗಿ ನಿರಾಶೆ ಅನುಭವಿಸಿದ್ದನ್ನು ಹೊರತುಪಡಿಸಿ ಗಿಲ್ ಅವರು ಸರಣಿಯುದ್ದಕ್ಕೂ ದಕ್ಷ ನಾಯಕತ್ವದೊಂದಿಗೆ, ರನ್ ಕೂಡ ಕಲೆ ಹಾಕಿ ತಂಡವನ್ನು ಮುನ್ನಡೆಸಿದರು.

ಸರಣಿಯಲ್ಲಿ ನೀಡಿರುವ ಮಹತ್ವದ ಕೊಡುಗೆಗಾಗಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿರುವ ಗಿಲ್ ಅವರು ಒತ್ತಡದಲ್ಲೂ ಶಾಂತಚಿತ್ತರಾಗಿದ್ದುಕೊಂಡು ತಂಡವನ್ನು ನಾಯಕನಾಗಿ ಮುನ್ನಡೆಸಿದ ರೀತಿಗೆ ಸಚಿನ್ ತೆಂಡುಲ್ಕರ್ ರಂತಹ ಲೆಜೆಂಡ್ಗಳು ಶ್ಲಾಘಿಸಿದ್ದಾರೆ.

ಈ ಸಂಗ್ರಹಯೋಗ್ಯ ವಸ್ತುಗಳು ಕೇವಲ ಸ್ಮರಣಿಕೆಗಳು ಮಾತ್ರವಲ್ಲ. ಅವುಗಳು ಯುವ ನಾಯಕನೊಬ್ಬ ಸಂದರ್ಭಕ್ಕೆ ತಕ್ಕಂತೆ ಎದ್ದು ನಿಂತು ಭಾರತೀಯ ಕ್ರಿಕೆಟ್ ನಲ್ಲಿ ಹೊಸ ಅಧ್ಯಾಯವನ್ನು ಬರೆದ ಕಥೆಯನ್ನು ಹೇಳುತ್ತವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News