×
Ad

ಎರಡನೇ ಟೆಸ್ಟ್: ಬಾಂಗ್ಲಾದೇಶಕ್ಕೆ ಕಡಿವಾಣ ಹಾಕಿದ ಶ್ರೀಲಂಕಾ

Update: 2025-06-25 21:12 IST
PC : ICC

ಕೊಲಂಬೊ: ಚೊಚ್ಚಲ ಪಂದ್ಯವನ್ನಾಡಿದ ಸ್ಪಿನ್ನರ್ ಸೋನಾಲ್ ದಿನುಶಾ(2-22) ಹಾಗೂ ವೇಗದ ಬೌಲರ್‌ ಗಳಾದ ವಿಶ್ವ ಫೆರ್ನಾಂಡೊ(2-35) ಹಾಗೂ ಅಸಿತ ಫೆರ್ನಾಂಡೊ(2-43) ಅವರ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಶ್ರೀಲಂಕಾ ಕ್ರಿಕೆಟ್ ತಂಡವು ಬುಧವಾರ ಆರಂಭವಾದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 8 ವಿಕೆಟ್‌ಗಳ ನಷ್ಟಕ್ಕೆ 220 ರನ್‌ ಗೆ ನಿಯಂತ್ರಿಸಿದೆ.

ಸಿಂಹಳೀಸ್ ಸ್ಪೋಟ್ಸ್ ಕ್ಲಬ್‌ನಲ್ಲಿ ಟಾಸ್ ಜಯಿಸಿದ ಬಾಂಗ್ಲಾದೇಶ ತಂಡದ ನಾಯಕ ನಜ್ಮುಲ್ ಹುಸೈನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. 5 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟನ್ನು ಕಳೆದುಕೊಂಡ ಬಾಂಗ್ಲಾದೇಶ ನೀರಸ ಆರಂಭ ಪಡೆಯಿತು.

ಶ್ರೀಲಂಕಾದ ವಿಕೆಟ್‌ಕೀಪರ್ ಕುಸಾಲ್ ಮೆಂಡಿಸ್ ನೀಡಿದ ಜೀವದಾನದ ಲಾಭ ಪಡೆಯಲು ವಿಫಲವಾದ ಆರಂಭಿಕ ಬ್ಯಾಟರ್ ಅನಮುಲ್ ಹಕ್ ಅವರು ರನ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಮೂಮಿನುಲ್ ಹಕ್(21 ರನ್) ಹಾಗೂ ಶಾದ್‌ಮನ್ ಇಸ್ಲಾಮ್(46 ರನ್) 2ನೇ ವಿಕೆಟ್‌ಗೆ 38 ರನ್ ಜೊತೆಯಾಟ ನಡೆಸಿದರು. ಆದರೆ ಶ್ರೀಲಂಕಾದ ನಾಯಕ ಧನಂಜಯ ಡಿಸಿಲ್ವ ಅವರು ಮೂಮಿನುಲ್(21 ರನ್)ವಿಕೆಟನ್ನು ಪಡೆದರು. ಆಗ ಭೋಜನ ವಿರಾಮದ ವೇಳೆಗೆ ಪ್ರವಾಸಿಗರು 2 ವಿಕೆಟ್‌ಗೆ 71 ರನ್ ಗಳಿಸಿದ್ದರು.

ಭೋಜನ ವಿರಾಮದ ನಂತರ ಶ್ರೀಲಂಕಾ ತಂಡವು ಕ್ಷಿಪ್ರವಾಗಿ 2 ವಿಕೆಟ್‌ಗಳನ್ನು ಪಡೆದಿದೆ. ಗಾಲೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ನ ಎರಡೂ ಇನಿಂಗ್ಸ್‌ ಗಳಲ್ಲಿ ಶತಕ ಗಳಿಸಿದ್ದ ನಜ್ಮುಲ್ ಅವರು ಕೇವಲ 8 ರನ್ ಗಳಿಸಿ ಫೆರ್ನಾಂಡೊಗೆ ವಿಕೆಟ್ ಒಪ್ಪಿಸಿದರು.

ಆಫ್ ಸ್ಪಿನ್ನರ್ ಥರಿಂದು ರತ್ನಾನಾಯಕೆ ಅವರು ಶಾದ್‌ಮನ್(46 ರನ್)ವಿಕೆಟನ್ನು ಪಡೆದರು. ಬಾಂಗ್ಲಾದ ಇನಿಂಗ್ಸ್‌ ನಲ್ಲಿ ಶಾದ್‌ ಮನ್ ಗರಿಷ್ಠ ಸ್ಕೋರ್ ಗಳಿಸಿದರು.

ಬಾಂಗ್ಲಾದೇಶವು 76 ರನ್‌ ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಆಗ ಮುಶ್ಫಿಕುರ್ರಹೀಂ(35 ರನ್) ಹಾಗೂ ಲಿಟನ್ ದಾಸ್(34 ರನ್) 5ನೇ ವಿಕೆಟ್‌ಗೆ 67 ರನ್ ಸೇರಿಸಿ ತಂಡವನ್ನು ಆಧರಿಸಿದರು.

ಆ್ಯಂಜೆಲೊ ಮ್ಯಾಥ್ಯೂಸ್ ನಿವೃತ್ತಿಯಾದ ಕಾರಣ ಅವರ ಬದಲಿಗೆ ಆಡಿದ ಆಲ್‌ ರೌಂಡರ್ ದಿನುಶಾ 22 ರನ್‌ ಗೆ 2 ವಿಕೆಟ್ ಪಡೆದರು.

ಜೋರಾಗಿ ಸುರಿದ ಮಳೆಯಿಂದಾಗಿ ಮೊದಲ ದಿನದಾಟದಲ್ಲಿ ಕೇವಲ 71 ಓವರ್ ಪಂದ್ಯ ಆಡಲು ಸಾಧ್ಯವಾಗಿದೆ. 2ನೇ ದಿನದಾಟವು 15 ನಿಮಿಷ ಬೇಗನೆ ಆರಂಭವಾಗಲಿದೆ.

ಗಾಲೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿದೆ.

►ಸಂಕ್ಷಿಪ್ತ ಸ್ಕೋರ್

ಬಾಂಗ್ಲಾದೇಶ ಮೊದಲ ಇನಿಂಗ್ಸ್: 71 ಓವರ್‌ ಗಳಲ್ಲಿ 220/8

(ಶಾದ್‌ಮನ್ ಇಸ್ಲಾಮ್ 46, ಮುಶ್ಫಿಕುರ್ರಹೀಂ 35, ಲಿಟನ್ ದಾಸ್ 34, ಮೆಹದಿ ಹಸನ್ 31, ಸೋನಾಲ್ ದಿನುಶಾ 2-22, ವಿಶ್ವ ಫೆರ್ನಾಂಡೊ 2-35, ಅಸಿತ ಫೆರ್ನಾಂಡೊ 2-43)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News