RCB ಮೊದಲೇ ಪ್ರಶಸ್ತಿ ಗೆದ್ದಿದ್ದರೆ ಇಷ್ಟೊಂದು ಉನ್ಮಾದ ಇರುತ್ತಿರಲಿಲ್ಲ: ಸುನೀಲ್ ಗವಾಸ್ಕರ್
ಹೊಸದಿಲ್ಲಿ: ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್ ಪ್ರಶಸ್ತಿ ಗೆಲುವಿನಾಚರಣೆಯ ವೇಳೆ ಸಂಭವಿಸಿದ ಕಾಲ್ತುಳಿತದ ಘಟನೆಯನ್ನು ‘ಹೃದಯ ವಿದ್ರಾವಕ’’ ಎಂದು ಬಣ್ಣಿಸಿರುವ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್, ತಮ್ಮ ಪ್ರೀತಿ-ಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.
18 ವರ್ಷಗಳ ನಂತರ RCB ಪ್ರಶಸ್ತಿ ಗೆದ್ದ ಹಿನ್ನೆಲೆಯಲ್ಲಿ ಅಭಿಮಾನಿಗಳು ತೀವ್ರವಾಗಿ ಭಾವುಕರಾಗಿದ್ದನ್ನು ಗವಾಸ್ಕರ್ ಒತ್ತಿ ಹೇಳಿದರು.
‘‘ಈ ಹಿಂದೆಯೇ RCB ತಂಡವು ಐಪಿಎಲ್ ಟ್ರೋಫಿ ಜಯಿಸಿದ್ದರೆ ಕ್ರಿಕೆಟ್ ಅಭಿಮಾನಿಗಳಲ್ಲಿ ಇಷ್ಟೊಂದು ಭಾವುಕತೆ ಕಂಡುಬರುತ್ತಿರಲಿಲ್ಲ. ಇತರ ತಂಡಗಳು ಪ್ರಶಸ್ತಿ ಜಯಿಸಿವೆ. ಆದರೆ ಆ ತಂಡಗಳ ಸಂಭ್ರಮಾಚರಣೆಯು ಹೆಚ್ಚು ಉನ್ಮಾದದಿಂದ ಕೂಡಿರಲಿಲ್ಲ. ಏಕೆಂದರೆ ಆ ತಂಡಗಳ ಅಭಿಮಾನಿಗಳು ಪ್ರಶಸ್ತಿಗಾಗಿ 18 ವರ್ಷಗಳನ್ನು ಕಾದಿರಲಿಲ್ಲ ಎಂದು ‘ಮಿಡ್ ಡೇ’ ಪತ್ರಿಕೆಗೆ ಬರೆದ ತನ್ನ ಕಾಲಂನಲ್ಲಿ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
‘ಈ ಸಲ ಕಪ್ ನಮ್ದೇ ’ ಎಂಬ ಘೋಷಣೆಯು ಪ್ರೇರಣೆಗಿಂತ ಹೊರೆಯಾಗಿತ್ತು. ವಿಪರ್ಯಾಸವೆಂದರೆ ಈ ವರ್ಷ ಈ ಘೋಷಣೆಗೆ ಕಡಿಮೆ ಪ್ರಾಮುಖ್ಯತೆ ಇದ್ದಾಗ RCB ಅದ್ಭುತ ಕ್ರಿಕೆಟ್ ಆಡಿ, ತವರಿನಿಂದ ಹೊರಗೆ ಅಡಿರುವ ಎಲ್ಲ ಪಂದ್ಯಗಳನ್ನು ಜಯಿಸುವ ಮೂಲಕ ಹೊಸ ಐಪಿಎಲ್ ದಾಖಲೆಯನ್ನು ನಿರ್ಮಿಸಿತ್ತು’’ ಎಂದು ಗವಾಸ್ಕರ್ ಹೇಳಿದರು.