×
Ad

ಜರ್ಮನಿಯಲ್ಲಿ ಸ್ಪೋರ್ಟ್ಸ್ ಹರ್ನಿಯ ಶಸ್ತ್ರಚಿಕಿತ್ಸೆಗೆ ಒಳಗಾದ ಸೂರ್ಯಕುಮಾರ್ ಯಾದವ್

Update: 2025-06-26 21:33 IST

 ಸೂರ್ಯಕುಮಾರ್ ಯಾದವ್ | PC : X \ @CricCrazyJohns 

ಮುಂಬೈ: ಭಾರತೀಯ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ತನ್ನ ಕೆಳ ಕಿಬ್ಬೊಟ್ಟೆಯಲ್ಲಿನ ಸ್ಪೋರ್ಟ್ಸ್ ಹರ್ನಿಯಕ್ಕೆ ಜರ್ಮನಿಯ ಮ್ಯೂನಿಕ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಸೂರ್ಯಕುಮಾರ್ ತನ್ನ ಕೆಳ ಕಿಬ್ಬೊಟ್ಟೆಯಲ್ಲಿ ಸ್ಪೋರ್ಟ್ಸ್ ಹರ್ನಿಯದಿಂದ ಬಳಲುತ್ತಿದ್ದಾರೆ ಮತ್ತು ಅಗತ್ಯ ಬಿದ್ದರೆ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂಬುದಾಗಿ ಪಿಟಿಐ ಕಳೆದ ವಾರ ವರದಿ ಮಾಡಿತ್ತು.

‘‘ಲೈಫ್ ಅಪ್‌ಡೇಟ್: ಕೆಳ ಕಿಬ್ಬೊಟ್ಟೆಯಲ್ಲಿನ ಸ್ಪೋರ್ಟ್ಸ್ ಹರ್ನಿಯಕ್ಕಾಗಿ ಶಸ್ತ್ರಚಿಕಿತ್ಸೆಗೆ ಒಳಗಾದೆ. ಸುಲಲಿತ ಶಸ್ತ್ರಚಿಕಿತ್ಸೆಯ ಬಳಿಕ ನಾನು ಈಗಾಗಲೇ ಚೇತರಿಕೆಯ ಹಾದಿಯಲ್ಲಿದ್ದೇನೆ ಎಂದು ಹೇಳಲು ಸಂತೋಷ ಪಡುತ್ತೇನೆ. ಯಾವಾಗ ವಾಪಸ್ ಬರುತ್ತೇನೋ ಅನ್ನಿಸುತ್ತಿದೆ’’ ಎಂಬುದಾಗಿ 34 ವರ್ಷದ ಬ್ಯಾಟರ್ ಬುಧವಾರ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬರೆದಿದ್ದಾರೆ.

ಶಸ್ತ್ರಚಿಕಿತ್ಸೆಯ ಬಳಿಕ, ಅವರು ಇನ್ನು ಸುಮಾರು ಎರಡು ವಾರಗಳಲ್ಲಿ ಬೆಂಗಳೂರಿನಲ್ಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪುನಶ್ಚೇತನ ಪ್ರಕ್ರಿಯೆಯನ್ನು ಆರಂಭಿಸಲಿದ್ದಾರೆ.

ಭಾರತವು ತನ್ನ ಮುಂದಿನ ಅಂತರರಾಷ್ಟ್ರೀಯ ಸೀಮಿತ ಓವರ್‌ ಗಳ ಪಂದ್ಯವನ್ನು ಆಡುವುದು ಆಗಸ್ಟ್‌ ನಲ್ಲಿ ನಡೆಯಲಿರುವ ಬಾಂಗ್ಲಾದೇಶ ಪ್ರವಾಸದ ವೇಳೆ. ಆ ಪ್ರವಾಸದಲ್ಲಿ ಭಾರತವು ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲಿದೆ.

2023ರ ವಿಶ್ವಕಪ್ ಫೈನಲ್ ಬಳಿಕ, ಸೂರ್ಯಕುಮಾರ್ 50 ಓವರ್‌ ಗಳ ಪಂದ್ಯದಲ್ಲಿ ಆಡಿಲ್ಲ. ಆಗಸ್ಟ್ 26ರಂದು ಚಟ್ಟೋಗ್ರಾಮ್‌ನಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅವರು ಭಾರತೀಯ ಟಿ20 ತಂಡದ ನಾಯಕತ್ವವನ್ನು ವಹಿಸುವ ನಿರೀಕ್ಷೆಯಿದೆ.

ಇದು ಮೂರು ವರ್ಷಗಳಲ್ಲಿ ಸೂರ್ಯಕುಮಾರ್‌ ರ ಮೂರನೇ ಶಸ್ತ್ರಚಿಕಿತ್ಸೆಯಾಗಿದೆ. ಅವರು 2023ರಲ್ಲಿ ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು 2024ರಲ್ಲಿ ಇದೇ ಸ್ಪೋರ್ಟ್ಸ್ ಹರ್ನಿಯ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News