ಟಿ20 ರ‍್ಯಾಂಕಿಂಗ್: ಅಭಿಷೇಕ್ ಶರ್ಮಾ ನಂ. 1 ಸ್ಥಾನ ಅಬಾಧಿತ
PC: x.com/Atharb
ಹೊಸದಿಲ್ಲಿ: ಐಸಿಸಿ ಟಿ20 ರ‍್ಯಾಂಕಿಂಗ್ ನಲ್ಲಿ ಭರವಸೆಯ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಮತ್ತು ಸ್ಟಾರ್ ಬೌಲರ್ ವರುಣ್ ಚಕ್ರವರ್ತಿ ಕ್ರಮವಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಐಸಿಸಿ ಹೊಸ ರ‍್ಯಾಂಕಿಂಗ್ ನಲ್ಲಿ ಪಾಕಿಸ್ತಾನ ಆಟಗಾರರಿಗೂ ಸಿಹಿ ಸುದ್ದಿ ಲಭ್ಯವಾಗಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ 2-1 ಅಂತರದಿಂದ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಲವು ಆಟಗಾರರು ಬಡ್ತಿ ಪಡೆದಿದ್ದಾರೆ.
925 ರೇಟಿಂಗ್ ಅಂಕ ಪಡೆದಿರುವ ಅಭಿಷೇಕ್ ಶರ್ಮಾ ವಿಶ್ವದ ನಂಬರ್ ವನ್ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದು, ಇಂಗ್ಲೆಂಡಿನ ಫಿಲ್ ಸಾಲ್ಟ್ ಹಾಗೂ ಭಾರತದ ತಿಲಕ್ ವರ್ಮಾನಂತರದ ಸ್ಥಾನಗಳಲ್ಲಿದ್ದಾರೆ. ಎಂಟನೇ ಸ್ಥಾನದಲ್ಲಿರುವ ಸೂರ್ಯಕುಮಾರ್ ಯಾದವ್ ಮಾತ್ರ ಅಗ್ರ 10ರ ಪಟ್ಟಿಯಲ್ಲಿ ಸೇರಿರುವ ಭಾರತೀಯರು. ಬೌಲರ್ ಗಳ ಪೈಕಿ ವರುಣ್ ಚಕ್ರವರ್ತಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ವೆಸ್ಟ್ಇಂಡೀಸ್ ಸ್ಪಿನ್ನರ್ ಅಕೀಲ್ ಹುಸೇನ್ ಹಾಗೂ ಅಫ್ಘಾನಿಸ್ತಾನದ ರಶೀದ್ ಖಾನ್ ನಂತರದ ಸ್ಥಾನಗಳಲ್ಲಿದ್ದಾರೆ. ಅಗ್ರ ಮೂವರು ಆಟಗಾರರಲ್ಲಿ ಈ ವಾರ ಯಾವುದೇ ಬದಲಾವಣೆ ಇಲ್ಲ.
ಆದರೆ ಆಸ್ಟ್ರೇಲಿಯಾದ ಆಡಂ ಜಂಪಾ ನಾಲ್ಕನೇ ಸ್ಥಾನದಿಂದ ಏಳಕ್ಕೆ ಕುಸಿದ್ದು, ಶ್ರೀಲಂಕಾದ ವನಿಂದು ಹಸರಂಗ ಅವರಿಗೆ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಇಂಗ್ಲೆಂಡ್ ನ ಆದಿಲ್ ರಶೀದ್, ನುವಾನ್ ತುಶಾರಾ ಬಡ್ತಿ ಪಡೆದು ಕ್ರಮವಾಗಿ ಐದು ಮತ್ತ ಆರನೇ ಸ್ಥಾನದಲ್ಲಿದ್ದಾರೆ. ಭಾರತ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಜೋಶ್ ಹೇಝಲ್ ವುಡ್ ಎರಡು ಸ್ಥಾನ ಮೇಲೇರಿ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ.
ವರುಣ್ ಚಕ್ರವರ್ತಿ ಅಗ್ರ 10ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ. ಆಲ್ ರೌಂಡರ್ ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಹಾರ್ದಿಕ್ ಪಾಂಡ್ಯ ಕೂಡಾ ಈ ವರ್ಗದಲ್ಲಿ ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿರುವ ಏಕೈಕ ಭಾರತೀಯ ಆಟಗಾರ. ಪಾಕಿಸ್ತಾನದ ಸೈಮ್ ಅಯೂಬ್ ಅಗ್ರಸ್ಥಾನಿ. ಜಿಂಬಾಬ್ವೆಯ ಸಿಕಂದರ್ ರಝಾ ಮತ್ತು ವೆಸ್ಟ್ಇಂಡೀಸ್ ನ ರೋಸ್ಟನ್ ಚಾಸ್ ನಂತರದ ಸ್ಥಾನಗಳಲ್ಲಿದ್ದಾರೆ.
ಪಾಕಿಸ್ತಾನದ ಬಾಬರ್ ಆಝಂ ಒಂಬತ್ತ ಸ್ಥಾನ ಮೇಲೇರೆ 30ನೇ ಸ್ಥಾನ ತಲುಪಿದ್ದರೆ, ಸಯೀಮ್ ಅಯೂಬ್ 10 ಸ್ಥಾನ ಮೇಲೇರಿ 39ರಲ್ಲಿದ್ದಾರೆ.