×
Ad

ದಕ್ಷಿಣ ಆಫ್ರಿಕಾದ ಕ್ರಿಕೆಟ್‌ ನ ಭರವಸೆಯ ಬೆಳಕು ಟೆಂಬಾ ಬವುಮಾ

Update: 2025-06-14 22:09 IST

ಟೆಂಬಾ ಬವುಮಾ | PC : X 

ಲಂಡನ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಟೆಂಬಾ ಬವುಮಾ ರನ್ ಗಳಿಕೆಯಲ್ಲಿ ಹಿಂದಿರಬಹುದು, ಆದರೆ, ಅವರ ನಾಯಕತ್ವಕ್ಕೆ ಸರಿಸಾಟಿಯಿಲ್ಲ. ಶನಿವಾರ, ಅವರು ನಾಯಕನಾಗಿ ಟೆಸ್ಟ್ ಕ್ರಿಕೆಟ್‌ ನಲ್ಲಿ ತನ್ನ ಅಜೇಯ ಯಾನವನ್ನು ಮುಂದುವರಿಸಿದ್ದಾರೆ. ಅವರ ನಾಯಕತ್ವದ ತಂಡವು 27 ವರ್ಷಗಳಲ್ಲಿ ಮೊದಲ ಐಸಿಸಿ ಪ್ರಶಸ್ತಿಯೊಂದನ್ನು ಗೆದ್ದಿದೆ.

ಇಲ್ಲಿನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ನಲ್ಲಿ ಶನಿವಾರ ದಕ್ಷಿಣ ಆಫ್ರಿಕಾವು ಆಸ್ಟ್ರೇಲಿಯವನ್ನು 5 ವಿಕೆಟ್‌ಗಳಿಂದ ಸೋಲಿಸಿದೆ.

2023ರ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಿದ ಬಳಿಕ, ಬವುಮಾ ಟೆಸ್ಟ್ ಕ್ರಿಕೆಟ್‌ ನಲ್ಲಿ ದಕ್ಷಿಣ ಆಫ್ರಿಕಾದ ಪುನಶ್ಚೇತನದ ರೂವಾರಿಯಾದರು. ಅವರ ನಾಯಕತ್ವದಲ್ಲಿ ತಂಡವು ಈವರೆಗೆ 10 ಟೆಸ್ಟ್‌ಗಳನ್ನು ಆಡಿದ್ದು, ಒಂಭತ್ತರಲ್ಲಿ ಜಯ ಗಳಿಸಿದೆ ಮತ್ತು ಒಂದು ಪಂದ್ಯ ಡ್ರಾಗೊಂಡಿದೆ. ಇದು ಅಮೋಘ ದಾಖಲೆಯಾಗಿದ್ದು, ಇದರಲ್ಲಿ ಐತಿಹಾಸಿಕ ಸರಣಿ ಜಯಗಳು ಮತ್ತು ಈಗ ಟೆಸ್ಟ್ ಕ್ರಿಕೆಟ್‌ ನ ಅತ್ಯಂತ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಪ್ರಶಸ್ತಿ ಸೇರಿದೆ.

ಆಸ್ಟ್ರೇಲಿಯ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ನಲ್ಲಿ, ಬವುಮಾ ಮುಂದೆ ನಿಂತು ತಂಡವನ್ನು ನಡೆಸಿದರು. ಮೊದಲ ಇನಿಂಗ್ಸ್‌ನಲ್ಲಿ 36 ರನ್ ಗಳಿಸಿದ ಬಳಿಕ, 2ನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಒತ್ತಡದಲ್ಲಿದ್ದಾಗ ಆಡಲು ಬಂದು 134 ಎಸೆತಗಳಲ್ಲಿ 66 ರನ್ ಗಳಿಸಿದರು. ಅವರು ಏಡನ್ ಮಾರ್ಕ್ರಾಮ್ (207 ಎಸೆತಗಳಲ್ಲಿ 136 ರನ್) ಜೊತೆಗೆ 3ನೇ ವಿಕೆಟ್‌ ಗೆ 147 ರನ್‌ಗಳ ಅಮೋಘ ಭಾಗೀದಾರಿಕೆ ನಿಭಾಯಿಸಿ ಐತಿಹಾಸಿಕ ವಿಜಯವೊಂದಕ್ಕೆ ನಾಂದಿ ಹಾಡಿದರು.

ಈ ಪಂದ್ಯದಲ್ಲಿ ಅವರ ನಾಯಕತ್ವ ಮತ್ತು ಬ್ಯಾಟಿಂಗ್ ಎರಡೂ ಮಿಂಚಿತು. ನಾಯಕ ಆದಂದಿನಿಂದ ಬವುಮಾ 10 ಟೆಸ್ಟ್‌ ಗಳಲ್ಲಿ 57ರ ಸರಾಸರಿಯಲ್ಲಿ 911 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 3 ಶತಕಗಳು ಮತ್ತು 5 ಅರ್ಧ ಶತಕಗಳಿವೆ.

ಡಬ್ಲ್ಯುಟಿಸಿ ಫೈನಲ್ ವಿಜಯವು ದಕ್ಷಿಣ ಆಫ್ರಿಕಾದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರಲ್ಲಿ ಒಬ್ಬರು ಎಂಬ ಬವುಮಾರ ಹೆಗ್ಗಳಿಕೆಯನ್ನು ಮತ್ತಷ್ಟು ಬಲಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News