×
Ad

ಯು.ಎಸ್. ಓಪನ್ | ಸಿನ್ನರ್, ಒಸಾಕಾ, ಸ್ವಿಯಾಟೆಕ್ ಕ್ವಾರ್ಟರ್ ಫೈನಲ್‌ ಗೆ

Update: 2025-09-02 21:24 IST

ಜಪಾನಿನ ನವೊಮಿ ಒಸಾಕಾ , ಜನ್ನಿಕ್ ಸಿನ್ನರ್ | PC :  X 

ನ್ಯೂಯಾರ್ಕ್, ಸೆ.2: ಹಾಲಿ ಚಾಂಪಿಯನ್ ಜನ್ನಿಕ್ ಸಿನ್ನರ್, ಜಪಾನಿನ ನವೊಮಿ ಒಸಾಕಾ ಹಾಗೂ ಪೋಲ್ಯಾಂಡ್ ಆಟಗಾರ್ತಿ ಇಗಾ ಸ್ವಿಯಾಟೆಕ್ ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ ಗೆ ತೇರ್ಗಡೆಯಾದರು.

ಸೋಮವಾರ ಕೇವಲ 81 ನಿಮಿಷಗಳಲ್ಲಿ ಕೊನೆಗೊಂಡ ಪುರುಷರ ಸಿಂಗಲ್ಸ್ ವಿಭಾಗದ ಪ್ರಿ-ಕ್ವಾರ್ಟರ್ ಫೈನಲ್‌ ನಲ್ಲಿ ಇಟಲಿ ಆಟಗಾರ ಸಿನ್ನರ್ ಅವರು ಅಚ್ಚರಿ ಫಲಿತಾಂಶಕ್ಕೆ ಪ್ರಸಿದ್ದರಾಗಿರುವ ಕಝಕ್‌ಸ್ತಾನದ 23ನೇ ಶ್ರೇಯಾಂಕದ ಅಲೆಕ್ಸಾಂಡರ್ ಬಬ್ಲಿಕ್‌ರನ್ನು 6-1, 6-1, 6-1 ಸೆಟ್‌ಗಳಿಂದ ಸದೆಬಡಿದರು.

ಈ ಮೂಲಕ ಹಾರ್ಡ್‌ಕೋರ್ಟ್ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ತನ್ನ ಅಮೋಘ ಪ್ರದರ್ಶನ ಮುಂದುವರಿಸಿದ್ದಾರೆ. ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಸತತ 25ನೇ ಪಂದ್ಯವನ್ನು ಗೆದ್ದಿದ್ದಾರೆ.

ಈ ವರ್ಷ ಕಾರ್ಲೊಸ್ ಅಲ್ಕರಾಝ್ ಹಾಗೂ ಬಬ್ಲಿಕ್ ಮಾತ್ರ ಸಿನ್ನರ್‌ಗೆ ಸೋಲಿನ ಕಹಿ ಉಣಿಸಿದ್ದಾರೆ.

ರೋಜರ್ ಫೆಡರರ್ ನಂತರ ಯು.ಎಸ್.ಓಪನ್ ಸಿಂಗಲ್ಸ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಸಿನ್ನರ್ ಪ್ರಯತ್ನಿಸುತ್ತಿದ್ದಾರೆ. ಫೆಡರರ್ ಅವರು ಯು.ಎಸ್. ಓಪನ್‌ ನಲ್ಲಿ ಸತತ ಐದು ಬಾರಿ ಪ್ರಶಸ್ತಿಗಳನ್ನು ಗೆದ್ದಿದ್ದರು.

3ನೇ ಬಾರಿ ಗ್ರ್ಯಾನ್‌ ಸ್ಲಾಮ್‌ ನಲ್ಲಿ ಸೆಮಿ ಫೈನಲ್ ತಲುಪಲು ಬಯಸಿರುವ ಸಿನ್ನರ್ ಅವರು ತಮ್ಮದೇ ದೇಶದ 10ನೇ ಶ್ರೇಯಾಂಕದ ಲೊರೆಂರೊ ಮುಸೆಟ್ಟಿ ಅವರನ್ನು ಕ್ವಾರ್ಟರ್ ಫೈನಲ್‌ ನಲ್ಲಿ ಎದುರಿಸಲಿದ್ದಾರೆ. ಮುಸೆಟ್ಟಿ ಶ್ರೇಯಾಂಕರಹಿತ ಸ್ಪೇನ್ ಆಟಗಾರ ಜೌಮ್‌ಮುನರ್ ಅವರನ್ನು 6-3, 6-0, 6-1 ಸೆಟ್‌ಗಳ ಅಂತರದಿಂದ ಮಣಿಸಿ ಯು.ಎಸ್. ಓಪನ್ ಟೂರ್ನಿಯಲ್ಲಿ ಮೊದಲ ಬಾರಿ ಅಂತಿಮ-8ರ ಘಟ್ಟ ತಲುಪಿದರು.

ಇಟಲಿಯ 10ನೇ ಶ್ರೇಯಾಂಕದ ಮುಸೆಟ್ಟಿ ವಿಶ್ವದ ನಂ.44ನೇ ಆಟಗಾರ ಮುನಾರ್ ವಿರುದ್ಧದ 2ನೇ ಸೆಟ್‌ನಲ್ಲಿ ಕೊನೆಯ 15 ಗೇಮ್‌ಗಳಲ್ಲಿ 14ರಲ್ಲಿ ಜಯ ಸಾಧಿಸಿದ್ದು, ಕೇವಲ 5 ಅಂಕ ಕೈಚೆಲ್ಲಿದರು.

ಕೆನಡಾ ಆಟಗಾರ ಫೆಲಿಕ್ಸ್ ಅಗುರ್-ಅಲಿಯಸಿಮ್ ತನ್ನ ವೃತ್ತಿಜೀವನದಲ್ಲಿ 4ನೇ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಫೆಲಿಕ್ಸ್ ಅವರು ಸೋಮವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಶ್ಯದ ಆಂಡ್ರೆ ರುಬ್ಲೇವ್‌ ರನ್ನು 7-5, 6-3, 6-4 ಸೆಟ್‌ಗಳ ಅಂತರದಿಂದ ಸೋಲಿಸಿದರು. ರುಬ್ಲೇವ್ ವಿರುದ್ಧ ಆಡಿರುವ 9ನೇ ಪಂದ್ಯದಲ್ಲಿ 2ನೇ ಬಾರಿ ಗೆಲುವು ದಾಖಲಿಸಿದರು.

25ರ ಹರೆಯದ ಫೆಲಿಕ್ಸ್ 2022ರ ಆಸ್ಟ್ರೇಲಿಯನ್ ಓಪನ್ ನಂತರ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಮುಂದಿನ ಸುತ್ತಿನಲ್ಲಿ ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ ಅವರನ್ನು ಎದುರಿಸಲಿದ್ದಾರೆ.

8ನೇ ಶ್ರೇಯಾಂಕದ ಆಟಗಾರ ಅಲೆಕ್ಸ್ ಡಿ ಮಿನೌರ್ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಸ್ವಿಸ್ ಕ್ವಾಲಿಫೈಯರ್ ಲಿಯಾಂಡ್ರೊ ರೇಡಿ ಅವರನ್ನು 6-3, 6-2, 6-1 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ 6ನೇ ಬಾರಿ ಕ್ವಾರ್ಟರ್ ಫೈನಲ್ ತಲುಪಿದರು.

*ಸ್ವಿಯಾಟೆಕ್, ಒಸಾಕಾ ಅಂತಿಮ-8ರ ಸುತ್ತಿಗೆ ಲಗ್ಗೆ

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಒಂದು ಗಂಟೆಯೊಳಗೆ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 2ನೇ ಶ್ರೇಯಾಂಕದ ಆಟಗಾರ್ತಿ ಸ್ವಿಯಾಟೆಕ್ ರಶ್ಯದ 13ನೇ ಶ್ರೇಯಾಂಕದ ಎಕಟೆರಿನಾ ಅಲೆಕ್ಸಾಂಡ್ರೋವಾರನ್ನು 6-3, 6-1 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು.

ಯು.ಎಸ್. ಓಪನ್‌ ನಲ್ಲಿ ಎರಡನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಸ್ವಿಯಾಟೆಕ್ ಗ್ರ್ಯಾನ್‌ ಸ್ಲಾಮ್ ಟೂರ್ನಿಯಲ್ಲಿ ಸತತ 11ನೇ ಪಂದ್ಯವನ್ನು ಗೆದ್ದಿದ್ದಾರೆ.

ಸ್ವಿಯಾಟೆಕ್ ಕ್ವಾರ್ಟರ್ ಫೈನಲ್‌ ನಲ್ಲಿ ಅಮಂಡಾ ಅನಿಸಿಮೋವಾರನ್ನು ಎದುರಿಸಲಿದ್ದಾರೆ. ಈ ಹಿಂದೆ ವಿಂಬಲ್ಡನ್ ಫೈನಲ್‌ನಲ್ಲಿ ಅನಿಸಿಮೋವಾರನ್ನು ಎದುರಿಸಿದ್ದ ಸ್ವಿಯಾಟೆಕ್ 6-0, 6-0 ನೇರ ಸೆಟ್‌ಗಳ ಅಂತರದಿಂದ ಜಯಶಾಲಿಯಾಗಿದ್ದರು.

ಅಮೆರಿಕದ ಆಟಗಾರ್ತಿ ಅನಿಸಿಮೋವಾ ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್‌ ನಲ್ಲಿ ಬ್ರೆಝಿಲ್‌ನ 18ನೇ ಶ್ರೇಯಾಂಕದ ಬೀಟ್ರಿಝ್ ಹಡ್ಡಾಡ್‌ರನ್ನು 6-0, 6-3 ನೇರ ಸೆಟ್‌ಗಳ ಅಂತರದಿಂದ ಸೋಲಿಸಿದರು.

ಇದೇ ವೇಳೆ, ಪ್ರಶಸ್ತಿ ಫೇವರಿಟ್, ಸ್ಥಳೀಯ ಆಟಗಾರ್ತಿ ಕೊಕೊ ಗೌಫ್‌ರನ್ನು ಅಂತಿಮ-16ರ ಸುತ್ತಿನಲ್ಲಿ ಸೋಲಿಸಿದ ನವೊಮಿ ಒಸಾಕಾ ಮಹತ್ವದ ಸಾಧನೆ ಮಾಡಿದ್ದಾರೆ.

ಜಪಾನಿನ ಸ್ಟಾರ್ ಆಟಗಾರ್ತಿ ಒಸಾಕಾ 3ನೇ ಶ್ರೇಯಾಂಕದ ಗೌಫ್‌ರನ್ನು 6-3, 6-2 ನೇರ ಸೆಟ್‌ಗಳ ಅಂತರದಿಂದ ಸೋಲಿಸಿದರು.

ಅರ್ಥರ್ ಅಶೆ ಸ್ಟೇಡಿಯಂನಲ್ಲಿ ನೆರೆದಿದ್ದ ತವರು ಪ್ರೇಕ್ಷಕರ ಎದುರು ನಿರೀಕ್ಷಿತ ಪ್ರದರ್ಶನ ನೀಡದ ಗೌಫ್ 33 ಅನಗತ್ಯ ತಪ್ಪೆಸಗಿದರು.

27ರ ಹರೆಯದ ಒಸಾಕಾ ಎರಡು ಬಾರಿ ಯು.ಎಸ್. ಓಪನ್‌ ನಲ್ಲಿ ಚಾಂಪಿಯನ್ ಆಗಿದ್ದಾರೆ. 2021ರಲ್ಲಿ 2ನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ ನಂತರ ಮೊದಲ ಪ್ರಮುಖ ಪ್ರಶಸ್ತಿಯ ಬೇಟೆಯಲ್ಲಿದ್ದಾರೆ.

2023ರಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ ನಂತರ ಕಳೆದ ವರ್ಷ ಸಕ್ರಿಯ ಟೆನಿಸ್‌ ಗೆ ವಾಪಸಾಗಿದ್ದ ಒಸಾಕಾ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಕಾಲುನೋವು ಎದುರಿಸಿದರು. ನೋವನ್ನು ನುಂಗಿಕೊಂಡು ಗೆಲುವಿನ ನಗೆ ಬೀರಿದರು.

ಒಸಾಕಾ ಬುಧವಾರ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಝೆಕ್‌ನ 11ನೇ ಶ್ರೇಯಾಂಕದ ಕರೊಲಿನಾ ಮುಚೋವಾರನ್ನು ಎದುರಿಸಲಿದ್ದಾರೆ. ಮುಚೋವಾ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಉಕ್ರೇನ್‌ನ 27ನೇ ಶ್ರೇಯಾಂಕದ ಮಾರ್ಟಾ ಕೊಸ್ಟ್ಯುಕ್‌ರನ್ನು 6-3, 6-7(0/7), 6-3 ಸೆಟ್‌ಗಳ ಅಂತರದಿಂದ ಸೋಲಿಸಿದರು. ಅಮೆರಿಕನ್ ಓಪನ್ ಟೂರ್ನಿಯಲ್ಲಿ ಸತತ ಮೂರನೇ ಬಾರಿ ಸೆಮಿ ಫೈನಲ್ ತಲುಪುವತ್ತ ಚಿತ್ತ ಹರಿಸಿದ್ದಾರೆ.

‘‘ವಿಶ್ವದಲ್ಲಿ ಇದು ನನ್ನ ನೆಚ್ಚಿನ ಟೆನಿಸ್ ಕೋರ್ಟ್ ಆಗಿದೆ. ನಾನು ಇಲ್ಲಿ ಪಂದ್ಯವನ್ನು ಆನಂದಿಸುತ್ತಿರುವೆ. ನಾನು ಮಗುವಿಗೆ ಜನ್ಮ ನೀಡಿದ 2 ತಿಂಗಳ ನಂತರ ಗೌಫ್ ಪಂದ್ಯವನ್ನು ವೀಕ್ಷಿಸಲು ಸ್ಟೇಡಿಯಂಗೆ ಆಗಮಿಸಿದ್ದೆ. ನಾನು ಆಕೆಯೊಂದಿಗೆ ಆಡುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೆ’’ ಎಂದು ಐದನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಒಸಾಕಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News