×
Ad

ಲಾರ್ಡ್ಸ್ ಟೆಸ್ಟ್ ನಲ್ಲಿ ಬೂಮ್ರಾ ಆಡುತ್ತಾರೆಯೇ ಎಂಬ ಪ್ರಶ್ನೆಗೆ ಗಿಲ್ ಹೇಳಿದ್ದೇನು....?

Update: 2025-07-07 08:17 IST

PC: x.com/CricketNDTV

ಹೊಸದಿಲ್ಲಿ: ಭಾರತದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಲಾರ್ಡ್ಸ್ ನಲ್ಲಿ ನಡೆಯುವ ಮೂರನೇ ಟೆಸ್ಟ್ ನಲ್ಲಿ ಆಡುವ 11ರ ಬಳಗ ಸೇರಿಕೊಳ್ಳಲಿದ್ದಾರೆ ಎಂದು ನಾಯಕ  ಶು‌ಭ್‌ಮನ್ ಗಿಲ್ ಸ್ಪಷ್ಟಪಡಿಸಿದ್ದಾರೆ. ಎಡ್ಜ್‌ಬಾಸ್ಟನ್ ಟೆಸ್ಟ್ ನಲ್ಲಿ ಅತಿಥೇಯ ತಂಡವನ್ನು 336 ರನ್ ಗಳ ಭಾರಿ ಅಂತರದಿಂದ ಸೋಲಿಸಿ ಆಂಡರ್ಸನ್- ತೆಂಡೂಲ್ಕರ್ ಟ್ರೋಫಿ ಸರಣಿಯಲ್ಲಿ 1-1 ಸಮಬಲ ಸಾಧಿಸಿದ ಬಳಿಕ ಗಿಲ್ ಈ ಸ್ಪಷ್ಟನೆ ನೀಡಿದರು.

ಎರಡನೇ ಟೆಸ್ಟ್ ನಲ್ಲಿ ಬೂಮ್ರಾ ಅನುಪಸ್ಥಿತಿಯಲ್ಲೂ ಚೊಚ್ಚಲ ಟೆಸ್ಟ್ ಆಡಿದ ಆಕಾಶ್ ದೀಪ್ ಅದ್ಭುತ ಪ್ರದರ್ಶನ ನೀಡಿದರು. ಪಂದ್ಯದಲ್ಲಿ 187 ರನ್ ಗಳಿಗೆ 10 ವಿಕೆಟ್ ಸಂಪಾದಿಸಿದ ಆಕಾಶ್ ದೀಪ್ ಎರಡನೇ ಇನಿಂಗ್ಸ್ ನಲ್ಲಿ 99 ರನ್ ಗಳಿಗೆ 6 ವಿಕೆಟ್ ಕಬಳಿಸಿ ನಿಬ್ಬೆರಗುಗೊಳಿಸಿದರು. ಇಂಗ್ಲೆಂಡ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಗಳ ಗೊಂಚಲು ಪಡೆದ ಎರಡನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು. 1986ರಲ್ಲಿ ಬರ್ಮಿಂಗ್ ಹ್ಯಾಂನಲ್ಲಿ ಚೇತನ್ ಶರ್ಮಾ 188 ರನ್ ಗಳಿಗೆ 10 ವಿಕೆಟ್ ಕಿತ್ತಿದ್ದರು.

ಮೂರನೇ ಟೆಸ್ಟ್ ಪಂದ್ಯಕ್ಕೆ ಬೂಮ್ರಾ ಲಭ್ಯತೆ ಬಗ್ಗೆ ಕೇಳಿದ ಪ್ರಶ್ನೆಗೆ ಒಂದು ಶಬ್ದದಲ್ಲಿ ನೇರ ಉತ್ತರ ನೀಡಿದ ಗಿಲ್, "ಖಚಿತವಾಗಿಯೂ ಆಡುತ್ತಾರೆ" ಎಂದರು. ಕುಲದೀಪ್ ಯಾದವ್ ಮತ್ತು ಬೂಮ್ರಾ ಅವರಂಥ ಪ್ರಮುಖ ಆಟಗಾರರು ಇಲ್ಲದಿದ್ದರೂ ಎಡ್ಜ್‌ಬಾಸ್ಟನ್ ನಲ್ಲಿ ಚೊಚ್ಚಲ ವಿಜಯನ್ನು ಭಾರತ ದಾಖಲಿಸಿದ್ದು, ಇದು ವಿದೇಶಿ ನೆಲದಲ್ಲಿ ಭಾರತದ ಅತಿದೊಡ್ಡ ಅಂತರದ ಜಯ ಎನಿಸಿದೆ.

608 ರನ್ ಗಳ ದೈತ್ಯ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 271 ರನ್ ಗಳಿಗೆ ಸರ್ವಪತನ ಕಂಡಿತು. ಆಕಾಶ್ ದೀಪ್ ಅವರ ಐತಿಹಾಸಿಕ ಸಾಧನೆ ಜತೆಗೆ ಮೊಹ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದರು. ನಾಯಕನ ಆಟವಾಡಿದ ಗಿಲ್ ಪ್ರಥಮ ಇನಿಂಗ್ಸ್ ನಲ್ಲಿ 269 ಹಾಗೂ ದ್ವಿತೀಯ ಇನಿಂಗ್ಸ್ ನಲ್ಲಿ 161 ರನ್ ಗಳಿಸಿದರು.

ಮೊದಲ ಪಂದ್ಯದ ಸೋಲಿನ ಬಳಿಕ ತಂಡದ ಮರುಹೋರಾಟದ ಬಗ್ಗೆ ಕೇಳಿದಾಗ, "ಮೊದಲ ಇನಿಂಗ್ಸ್ ಬಳಿಕ ನಾವೆಲ್ಲ ಮಾತನಾಡಿಕೊಂಡೆವು. ನಾವು ಒಳ್ಳೆಯ ದಾರಿಯಲ್ಲಿದ್ದೆವು. ನಮ್ಮ ಬೌಲಿಂಗ್ ಹಾಗೂ ಫೀಲ್ಡಿಂಗ್ ಕೂಡಾ ಅದ್ಭುತವಾಗಿತ್ತು. ಈ ವಿಕೆಟ್ ನಲ್ಲಿ ನಾವು 400-500 ರನ್ ಗಳಿಸಿದರೆ ನಿಯಂತ್ರಣ ಸಾಧಿಸುತ್ತೇವೆ ಎಂಬ ವಿಶ್ವಾಸವಿತ್ತು. ಪ್ರತಿ ಬಾರಿಯೂ ನಾವು ಕ್ಯಾಚ್ ಗಳನ್ನು ಕೈಚೆಲ್ಲುವುದಿಲ್ಲ" ಎಂದು ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News