ಬಿಜೆಪಿ ಗೆಲುವುಗಳು ಮತ್ತು ಇವಿಎಂ ಭ್ರಾಂತಿಗಳು?

ಒಂದು ಪ್ರಜಾತಂತ್ರದಲ್ಲಿ ಜನರ ನೈಜ ಆತಂಕಗಳು ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಅಥವಾ ಬದಲಾಯಿಸುವ ಅವಕಾಶಗಳನ್ನು ಒದಗಿಸುತ್ತದೆ. ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ)ಗಳ ಸುತ್ತ್ತ ಎದ್ದಿರುವ ಅನುಮಾನಗಳು ಭಾರತದ ಪ್ರಜಾತಂತ್ರಕ್ಕೆ ಅಂಥ ಒಂದು ಅವಕಾಶವನ್ನು ಒದಗಿಸುತ್ತಿದೆ. ಆದರೆ ಈಗ ದೇಶದಲ್ಲಿ ಇವಿಎಂಗಳ ಬಗ್ಗೆ ಸರಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಮತ್ತು ಆ ಬಗ್ಗೆ ನಡೆಯುತ್ತಿರುವ ಸಾರ್ವಜನಿಕ ಚರ್ಚೆಗಳನ್ನು ನೋಡಿದರೆ ಭಾರತವು ತನ್ನ ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಪ್ರಜಾತಂತ್ರೀಕರಿಸಬಹುದಾದ ಅವಕಾಶಗಳನ್ನು ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ.

Update: 2023-12-27 05:15 GMT

Photo: PTI

ಭಾಗ-1

ಕಳೆದ ತಿಂಗಳು ನಡೆದ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಉತ್ತರ ಭಾರತದ ಮೂರೂ ರಾಜ್ಯಗಳಲ್ಲಿ ಬಿಜೆಪಿ ಗೆದ್ದ ನಂತರ ಚುನಾವಣೆಗಳಲ್ಲಿ ಇವಿಎಂ ಯಂತ್ರಗಳು ದುರ್ಬಳಕೆಯ ಬಗ್ಗೆ ಅಲ್ಲಲ್ಲಿ ಅಸಮಾಧಾನಗಳು ಕೇಳಿಬರುತ್ತಿವೆ. ಇದು ಇತ್ತೀಚಿನ ದಿನಗಳಲ್ಲಿ ಚುನಾವಣೆಯ ನಂತರ ಫಲಿತಾಂಶ ಬರುವಷ್ಟೇ ಸಹಜವಾದ ವಿದ್ಯಮಾನವಾಗಿ ನಿಯಮಿತವಾಗಿ ಕಾಣತೊಡಗಿದೆ.

ಚುನಾವಣೆಗಳಲ್ಲಿ ಬಿಜೆಪಿ ಗೆದ್ದು ವಿರೋಧ ಪಕ್ಷಗಳು ಸೋತಾಗಲೆಲ್ಲಾ ಫ್ಯಾಶಿಸ್ಟ್ ಬಿಜೆಪಿ ಸೋಲಬೇಕು ಎಂಬ ಕಾಳಜಿ ಇಟ್ಟುಕೊಂಡಿರುವ ಎಲ್ಲರಿಗೂ ಇವಿಎಂ ಯಂತ್ರಗಳ ದುರ್ಬಳಕೆಯ ಬಗ್ಗೆ ಪ್ರಾಮಾಣಿಕ ಅನುಮಾನ ಹುಟ್ಟುತ್ತದೆ. ಆದರೆ ಅಪರೂಪಕ್ಕೊಮ್ಮೆ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಆದಂತೆ ಕಾಂಗ್ರೆಸ್‌ನಂತಹ ವಿರೋಧ ಪಕ್ಷಗಳು ಗೆದ್ದಾಗ ಈ ಅನುಮಾನಗಳು ಬೇರೆ ಬಗೆಯ ತರ್ಕವನ್ನು ಹುಡುಕುತ್ತವೆ. ಎಲ್ಲಾ ಚುನಾವಣೆಗಳನ್ನು ತಾವೇ ಗೆದ್ದುಬಿಟ್ಟರೆ ಅನುಮಾನ ಬರಬಹುದೆಂದು ಕೆಲವು ಕಡೆ ಬಿಜೆಪಿ ಬೇಕೆಂತಲೇ ಇವಿಎಂ ದುರ್ಬಳಕೆ ಮಾಡಿರಲಿಕ್ಕಿಲ್ಲ. ಏಕೆಂದರೆ ಅವರ ಮುಖ್ಯ ಗುರಿ 2024ರ ಲೋಕಸಭಾ ಗೆಲುವು ಎಂಬ ತರ್ಕಗಳಿಗೆ ಮೊರೆಹೋಗುತ್ತವೆ.

2009ರ ಚುನಾವಣೆಯಲ್ಲಿ ಬಿಜೆಪಿ ಸೋತಾಗ ಅವರೂ ಇದೇ ಬಗೆಯ ವಾದಗಳನ್ನು ಮುಂದಿಟ್ಟಿದ್ದರು. ಆಗ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದ್ದವರೂ ಅವರೇ. ಆಗ ಇವಿಎಂ ಯಂತ್ರಗಳಲ್ಲಿ ಯಾವುದೇ ಲೋಪವಿಲ್ಲವೆಂದು ವಾದಿಸಿದ್ದು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳೇ.

ಒಂದು ವೇಳೆ ಇವಿಎಂ ದುರ್ಬಳಕೆಯಾಗುತ್ತಿದೆ ಎಂದು ನಿಜವಾಗಿಯೂ ವಿರೋಧ ಪಕ್ಷಗಳು ಭಾವಿಸುತ್ತವೆಯಾದರೆ, 2024ರ ಚುನಾವಣೆ ಇವಿಎಂ ಮೂಲಕವೇ ಬಿಜೆಪಿ ಪರ ನಿರ್ಧಾರವಾಗುತ್ತದೆ ಎಂದು ಸ್ಪಷ್ಟವಾಗಿದ್ದಲ್ಲಿ, ತಮಗೆ ಜನಬೆಂಬಲವಿದ್ದರೂ ಇವಿಎಂ ಯಂತ್ರಗಳು ತಮ್ಮನ್ನು ಸೋಲಿಸುತ್ತಿವೆ, ಹೀಗಾಗಿ ಇವಿಎಂ ಬಳಸುವ ಚುನಾವಣೆ ಪೂರ್ವನಿರ್ಧಾರಿತ ಬಿಜೆಪಿ ಪರ ಫಲಿತಾಂಶಗಳನ್ನು ಮಾತ್ರ ನೀಡುತ್ತದೆ ಎಂಬುದು ಖಾತರಿಯಾಗಿದ್ದಲ್ಲಿ, ವಿರೋಧ ಪಕ್ಷಗಳೆಲ್ಲಾ ಒಟ್ಟುಗೂಡಿ ಇವಿಎಂ ಬಳಸುವುದಾದರೆ ತಾವು ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಬಹುದಲ್ಲವೇ? ಹಾಗೆ ನೋಡಿದರೆ ಕಾಂಗ್ರೆಸನ್ನೊ ಒಳಗೊಂಡಂತೆ ಎಲ್ಲಾ ವಿರೋಧ ಪಕ್ಷಗಳೂ ತಾವು ಗೆದ್ದಾಗ ಇವಿಎಂ ಬಗ್ಗೆ ಮಾತೇ ಆಡುವುದಿಲ್ಲ- ಸೋತಾಗ ಗೊಣಗಾಡಿದರೂ ಮತ್ತೊಮ್ಮೆ ಚುನಾವಣೆಲ್ಲಿ ಸೋಲಾಗುವ ತನಕ ಅದರ ಬಗ್ಗೆ ಮಾತಾಡುವುದಿಲ್ಲ.

ಹಾಗಿದ್ದಲ್ಲಿ ಬಿಜೆಪಿಯ ಗೆಲುವುಗಳಿಗೆ ವತ್ತು ವಿರೋಧ ಪಕ್ಷಗಳ ಸೋಲುಗಳಿಗೆ ನಿಜಕ್ಕೂ ಇವಿಎಂ ಕಾರಣವೇ? ಇವಿಎಂ ತಂತ್ರಜ್ಞಾನ ದೋಷರಹಿತವೇ? ದೋಷಗಳಿದ್ದರೂ ಬಿಜೆಪಿಯ ಗೆಲುವಿಗೆ ಅವರು 24x7 ಮತ್ತು 365 ದಿನ ಜನರ ನಡುವೆ ನುಗ್ಗಿ ದ್ವೇಷ ರಾಜಕಾರಣ ಬಿತ್ತುತ್ತಿರುವುದು, ದಲಿತ-ಆದಿವಾಸಿ-ಒಬಿಸಿಗಳ ನಡುವೆಯೂ ತಮ್ಮ ನೆಲೆಯನ್ನು ವರ್ಷ ಪೂರ್ತಿ ವಿಸ್ತರಿಸಿಕೊಳ್ಳುತ್ತಿರುವುದು ಕಾರಣವೋ?

ಹಿಂದೂ ರಾಷ್ಟ್ರದ ಹೆಸರಿನಲ್ಲಿ ಕಾರ್ಪೊರೇಟ್-ಬ್ರಾಹ್ಮಣ್ಯದ ಆಳ್ವಿಕೆಯನ್ನು ನೆಲೆಗೊಳಿಸಲೆಂದೇ ಅಧಿಕಾರಕ್ಕೆ ಬಂದಿರುವ ಆರೆಸ್ಸೆಸ್-ಬಿಜೆಪಿಗಳು ಚುನಾವಣೆಯಲ್ಲಿ ಗೆಲ್ಲಲು ಮತ್ತು ಅಧಿಕಾರದಲ್ಲಿರಲು ಏನೂ ಬೇಕಾದರೂ ಮಾಡಬಲ್ಲರು ಎನ್ನುವುದು ನಿಜ. ಅವರು ಚುನಾವಣೆಯಲ್ಲಿ ಗೆಲ್ಲಲು ಇವಿಎಂ ಅಡ್ಡಿಯಾಗಿದ್ದರೆ ಅಥವಾ ಅದರ ದುರ್ಬಳಕೆಯ ಅಗತ್ಯವಿದ್ದರೆ ಅದನ್ನೂ ಮಾಡುತ್ತಾರೆ ಅಥವಾ ಚುನಾವಣೆಯೇ ಒಂದು ಅಡ್ಡಿಯಾದರೆ ಇಂದಿರಾಗಾಂಧಿಯವರಿಗಿಂತಲೂ ದೀರ್ಘ ಕಾಲ ಚುನಾವಣೆಯನ್ನೇ ಬರ್ಖಾಸ್ತು ಮಾಡಬಲ್ಲರು ಅಥವಾ ಹಿಂದೂ ರಾಷ್ಟ್ರ ಜಾರಿಗೆ ಸಂವಿಧಾನವೇ ಅಡ್ಡಿಯಾದರೆ ಅದನ್ನೂ ಬದಲಿಸಬಲ್ಲರು. ಈ ದಿಕ್ಕಿನಲ್ಲಿ ಅವರು ಹಲವು ಪ್ರಯತ್ನಗಳನ್ನು ಮಾಡುತ್ತಾ ಬಂದಿದ್ದಾರೆ. ಹೀಗಾಗಿ ಐದು ರಾಜ್ಯಗಳ ಚುನಾವಣಾ ಫಲಿತಾಂಶವನ್ನು ಗಮನಿಸಿದವರಿಗೆ ಬಿಜೆಪಿ ಗೆಲುವಿಗೆ ಇವಿಎಂ ಕಾರಣವಿರಬಹುದೇ ಎಂಬ ಅನುಮಾನ ಬರುವುದು ತಪ್ಪೇನಲ್ಲ.

ಆದರೆ ಇಂದಿನ ವಾಸ್ತವವೆಂದರೆ ಸದ್ಯಕ್ಕಂತೂ ಬಿಜೆಪಿ-ಆರೆಸ್ಸೆಸ್-ಕಾರ್ಪೊರೇಟ್ ಕೂಟ ಅಧಿಕಾರದಲ್ಲುಳಿಯಲು ಹಾಗೂ ತಮ್ಮ ಬ್ರಾಹ್ಮಣ್ಯ-ಕಾರ್ಪೊರೇಟ್ ಅಜೆಂಡಾವನ್ನು ಜಾರಿ ಮಾಡಲು ಚುನಾವಣೆ ಗಳಾಗಲೀ, ಇವಿಎಂ ಯಂತ್ರಗಳಗಲೀ ಅಥವಾ ಸಂವಿಧಾನವಾಗಲೀ ಅಂತಹ ದೊಡ್ಡ ಅಡೆತಡೆ ಉಂಟುಮಾಡುತ್ತಿಲ್ಲ. ಹೀಗಾಗಿಯೇ ಎರಡನೇ ಬಾರಿ ಮೋದಿ ಅಧಿಕಾರಕ್ಕೆ ಬಂದಮೇಲೆ ಬಿಜೆಪಿ-ಆರೆಸ್ಸೆಸಿಗರು ಯಾರೂ ಸಂವಿಧಾನ ಬದಲಾವಣೆಯ ಮಾತುಗಳನ್ನೂ ಹೆಚ್ಚಾಗಿ ಆಡುತ್ತಿಲ್ಲ.

ಇವಿಎಂನಲ್ಲಿ ಕೆಲವು ಭಾರತೀಯ ಸಮಸ್ಯೆಗಳಿವೆ. ಅದರ ಅರ್ಥ ಇವಿಎಂ ವ್ಯವಸ್ಥೆಯಲ್ಲಿ ಲೋಪಗಳಿಲ್ಲವೆಂದೇನೂ ಅಲ್ಲ. ಮನುಷ್ಯ ಕಂಡುಹಿಡಿಯುವ ಯಾವುದೇ ಯಂತ್ರ ಪರಿಪೂರ್ಣವೇನಲ್ಲ. ಸದ್ಯಕ್ಕೆ ಒಂದು ಯಂತ್ರ ಸಮಸ್ಯೆ ಕೊಡುತ್ತಿಲ್ಲ ಎಂದ ಮಾತ್ರಕ್ಕೆ ಅದು ಸಮಸ್ಯಾಮುಕ್ತವೆಂದೇನೂ ಅಲ್ಲ. ಇದು ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ)ಗೂ ಅನ್ವಯಿಸುತ್ತದೆ.

ಹಾಗೆ ನೋಡಿದರೆ 2019ರ ಲೋಕಸಭಾ ಚುನಾವಣೆಯಲ್ಲಿ ಒಟ್ಟಾರೆ 542 ಕ್ಷೇತ್ರಗಳಲ್ಲಿ 347 ಕ್ಷೇತ್ರಗಳ ಮತಗಳ ಎಣಿಕೆಯಲ್ಲಿ ಹಲವು ಲೋಪದೋಷಗಳಿದ್ದವು. ಒಟ್ಟಾರೆ ಚಲಾವಣೆಯಾದ ಮತಗಳಿಗಿಂತ ಇವಿಎಂ ಯಂತ್ರವು ಕೆಲವು ಕಡೆ ಹೆಚ್ಚು ಮತ್ತು ಕೆಲವು ಕಡೆ ಕಡಿಮೆ ಮತಗಳ ಎಣಿಕೆಯನ್ನು ತೋರಿಸಿತ್ತು. ಈ ವ್ಯತ್ಯಾಸ ಒಂದು ಮತದಿಂದ ಹಿಡಿದು ಒಂದು ಲಕ್ಷ ಮತದವರೆಗೂ ಇತ್ತು.

ಹಾಗೆಯೇ ಇವಿಎಂ ಮತಗಳ ಮತ್ತು ವಿವಿಪ್ಯಾಟ್ ಮತಗಳ ತಾಳೆಯನ್ನು ಮಾಡಿದ 26,000 ಕ್ಷೇತ್ರಗಳಲ್ಲಿ ನಾಲ್ಕು ಕಡೆ ತಾಳೆಯಾಗಿರಲಿಲ್ಲ.

ಇತ್ತೀಚೆಗೆ ಅಶೋಕ ವಿಶ್ವವಿದ್ಯಾನಿಲಯದ ವಿದ್ವಾಂಸರೊಬ್ಬರು ಅತ್ಯಂತ ಕಡಿಮೆ ಅಂತರದಲ್ಲಿ ಬಿಜೆಪಿ ಗೆದ್ದ ಎರಡು ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಮತ್ತು ನಿರ್ದಿಷ್ಟ ರೀತಿಯ ವ್ಯತ್ಯಾಸಗಳನ್ನು ಮತ್ತು ಅಲ್ಲಿ ಮತಯಂತ್ರಗಳ ಅಲ್ಗಾರಿದಂ ಕಾರಣದಿಂದಾಗಿ ಆಗಿರಬಹುದಾದ ವೈಪರೀತ್ಯಗಳ ತಾಂತ್ರಿಕ ಸಾಧ್ಯತೆಗಳನ್ನು ಎತ್ತಿ ತೋರಿಸಿದ್ದರು. ಆದರೆ ಅವರು ಕೂಡ ತಮ್ಮ ಪ್ರಬಂಧದಲ್ಲಿ ಇಂಥ ವೈಪರೀತ್ಯಗಳು ಬೂತ್ ಮಟ್ಟದಲ್ಲಿ ಎಲ್ಲಾ ಸಿಬ್ಬಂದಿಯ ಸಂಪೂರ್ಣ ಪಾಲುದಾರಿಕೆಯಿಂದ ಮಾತ್ರ ಸಾಧ್ಯವೇ ಹೊರತು ಒಂದು ಇಡೀ ಶಾಸನಾ ಸಭಾ ಅಥವಾ ಲೋಕ ಸಭಾ ವ್ಯಾಪ್ತಿಯಲ್ಲಿ ಕೇವಲ ಅಂತರ್ಜಾಲವನ್ನು ಬಳಸಿಕೊಂಡು ಸಾಧಿಸಲು ಸಾಧ್ಯ ಎಂದು ತಮ್ಮ ಸಂಶೋಧನೆ ಹೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೂ ಅವರನ್ನು ಅಶೋಕ ವಿಶ್ವವಿದ್ಯಾನಿಲಯ ವಜಾ ಮಾಡಿದ್ದು ಬೇರೆ ವಿಷಯ.

ಈ ಯಾವುದೇ ವ್ಯತ್ಯಾಸಗಳು 2019ರ ಚುನಾವಣಾ ಜಯಾಪಜಯಗಳ ಮೇಲೆ ಯಾವುದೇ ಪ್ರಭಾವ ಬೀರದಿದ್ದರೂ ಇವಿಎಂ ವ್ಯವಸ್ಥೆ ತಾಂತ್ರಿಕವಾಗಿ ಮತ್ತು ಆಡಳಿತಾತ್ಮಕವಾಗಿ ಇನ್ನೂ ಸುಧಾರಿಸಬೇಕಾದ ಅಗತ್ಯ ಇದೆಯೆಂಬುದನ್ನು ಮಾತ್ರ ಸಾರಿ ಹೇಳುತ್ತದೆ. ಆದರೆ ಸರಕಾರ ಮತ್ತು ಚುನಾವಣಾ ಆಯೋಗ ಈ ಅಗತ್ಯವನ್ನು ನಿರಾಕರಿಸುತ್ತಾ ಬಂದಿವೆ. ಅವು ಇವಿಎಂ ವ್ಯವಸ್ಥೆಯಲ್ಲಿ ಎಲ್ಲವೂ ಅದ್ಭುತವಾಗಿದೆ ಎಂದು ಪ್ರತಿಪಾದಿಸುವಾಗ ಸಹಜವಾಗಿ ಇಡೀ ಇವಿಎಂ ವ್ಯವಸ್ಥೆಯಲ್ಲಿ ಆಡಳಿತರೂಢ ಪಕ್ಷಕ್ಕೆ ಒಂದು ಪಟ್ಟಭದ್ರ ಹಿತಾಸಕ್ತಿ ಇದೆ ಎಂಬ ಭಾವನೆ ಬಲಿಯುವುದು ಸಹಜ. ಅದಕ್ಕೆ ಸರಕಾರ ಮತ್ತು ಚುನಾವಣಾ ಆಯೋಗವೇ ಹೊಣೆಗಾರರು.

ಒಂದು ಪ್ರಜಾತಂತ್ರದಲ್ಲಿ ಜನರ ನೈಜ ಆತಂಕಗಳು ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಅಥವಾ ಬದಲಾಯಿಸುವ ಅವಕಾಶಗಳನ್ನು ಒದಗಿಸುತ್ತದೆ. ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ)ಗಳ ಸುತ್ತ್ತ ಎದ್ದಿರುವ ಅನುಮಾನಗಳು ಭಾರತದ ಪ್ರಜಾತಂತ್ರಕ್ಕೆ ಅಂಥ ಒಂದು ಅವಕಾಶವನ್ನು ಒದಗಿಸುತ್ತಿದೆ. ಆದರೆ ಈಗ ದೇಶದಲ್ಲಿ ಇವಿಎಂಗಳ ಬಗ್ಗೆ ಸರಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಮತ್ತು ಆ ಬಗ್ಗೆ ನಡೆಯುತ್ತಿರುವ ಸಾರ್ವಜನಿಕ ಚರ್ಚೆಗಳನ್ನು ನೋಡಿದರೆ ಭಾರತವು ತನ್ನ ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಪ್ರಜಾತಂತ್ರೀಕರಿಸಬಹುದಾದ ಅವಕಾಶಗಳನ್ನು ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ.

ಈ ದುರದೃಷ್ಟಕರ ಬೆಳವಣಿಗೆಯ ಪ್ರಧಾನ ಮತ್ತು ಮೊದಲ ಹೊಣೆಗಾರಿಕೆಯನ್ನು ಹೊರಬೇಕಾದವರು ಸರ್ವಾಧಿಕಾರಿ ಧೋರಣೆಯ ಬಿಜೆಪಿ ಸರಕಾರ, ಪಕ್ಷಪಾತಿ ಚುನಾವಣಾ ಆಯೋಗ ಹಾಗೂ ದೇಶದ ಸುಪ್ರೀಂ ಕೋರ್ಟ್. ಇದರ ಜೊತೆಗೆ ತಮ್ಮೆಲ್ಲಾ ರಾಜಕೀಯ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇವಿಎಂ ಬಗ್ಗೆ ಇರುವ ಸಹಜ ಅನುಮಾನಗಳನ್ನು ನೆಪವಾಗಿ ಬಳಸಿಕೊಳ್ಳುತ್ತಿರುವ ವಿರೋಧಿ ಪಕ್ಷಗಳ ಅವಕಾಶವಾದಿ ಸಂಕುಚಿತ ರಾಜಕೀಯಗಳಿಗೂ ಸಹ ಇದರಲ್ಲಿ ತನ್ನದೇ ಆದ ಪಾಲಿದೆ.

ಇವಿಎಂ-ರೌಡಿ ರಿಗ್ಗಿಂಗ್ ತಡೆಗಟ್ಟಿತು, ಡಿಜಿಟಲ್ ರಿಗ್ಗಿಂಗ್?

ಭಾರತದ ಚುನಾವಣೆಗಳಲ್ಲಿ 1998ರಲ್ಲಿ ಮೊತ್ತಮೊದಲ ಬಾರಿಗೆ ಇವಿಎಂಗಳನ್ನು ಪ್ರಯೋಗಾರ್ಥವಾಗಿ ಬಳಸಲಾಯಿತು. ನಂತರದಲ್ಲಿ ನಡೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಇವಿಎಂಗಳ ಬಳಕೆಯನ್ನು ಹಂತಹಂತವಾಗಿ ಹೆಚ್ಚಿಸುತ್ತಾ 2007ರ ವೇಳೆಗೆ ಇವಿಎಂ ಬಳಕೆಯನ್ನು ಸಾರ್ವತ್ರೀಕರಿಸಲಾಯಿತು. ಈ ಮಧ್ಯೆ ಇವಿಎಂ ಬಳಕೆಯನ್ನು ಶಾಸನಬದ್ಧಗೊಳಿಸುವ ಕಾನೂನೊಂದನ್ನು ಸಹ ಸಂಸತ್ತಿನಲ್ಲಿ ಪಾಸು ಮಾಡಲಾಯಿತು.

ಇವಿಎಂ ಬಳಕೆಗೆ ಮುಂಚೆ ಭಾರತದಲ್ಲಿ ಬ್ಯಾಲೆಟ್ ಪೇಪರ್‌ಗಳನ್ನು ಬಳಸಲಾಗುತ್ತಿತ್ತು. ಆಗ ಎಲ್ಲೆಡೆ ಅದರಲ್ಲೂ ವಿಶೇಷವಾಗಿ ಆಂಧ್ರ, ತೆಲಂಗಾಣ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಬೂತ್ ವಶಪಡಿಸಿಕೊಳ್ಳುವುದು ಮತ್ತು ನಕಲಿ ಮತಗಳನ್ನು ಹಾಕುವುದರ ಮೂಲಕ ರಿಗ್ಗಿಂಗ್ ಮಾಡುವುದು ಸಹಜ ವಿದ್ಯಮಾನವಾಗಿಬಿಟ್ಟಿತ್ತು. ಶೇಷನ್ ಅವರು ಚುನಾವಣಾ ಆಯುಕ್ತರಾಗಿದ್ದಾಗ ಬಿಹಾರದ ಎರಡು ಕ್ಷೇತ್ರಗಳಲ್ಲಿ ವ್ಯಾಪಕ ರಿಗ್ಗಿಂಗ್ ನಡೆದ ಕಾರಣಕ್ಕಾಗಿ ಆ ಚುನಾವಣೆಯನ್ನೇ ರದ್ದುಗೊಳಿಸಿದ್ದರು. ಹೀಗೆ ಆಗಿನ ಬ್ಯಾಲೆಟ್ ಪೇಪರ್ ಬಳಕೆಯ ಚುನಾವಣೆಯು ಭಾರತದ ಪ್ರಜಾತಂತ್ರದ ಅಣಕದಂತೆ ನಡೆಯುತ್ತಿತ್ತು. ಅದನ್ನು ತಡೆಗಟ್ಟುವ ಉದ್ದೇಶದಿಂದ ಇವಿಎಂ ಯಂತ್ರ ಬಳಕೆ ಪ್ರಾರಂಭವಾಯಿತು.

ಇಂದಿನ ಚುನಾವಣೆಗಳಲ್ಲಿ ಇವಿಎಂ ಅನ್ನು ಬಳಸುವ ಮೂಲಕ ಅಂತಹ ಎಲ್ಲಾ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವುದರಲ್ಲಿ ಯಶಸ್ವಿಯಾಗಿದ್ದೇವೆಯೇ?

ಇವಿಎಂ ಪರ ವಿರೋಧಿಗಳೆಲ್ಲರೂ ಇವಿಎಂ ಬಳಕೆಯಿಂದ ಬ್ಯಾಲೆಟ್ ಪೇಪರ್ ಚುನಾವಣಾ ಪದ್ಧತಿಯಲ್ಲಿದ್ದ ರಿಗ್ಗಿಂಗ್ ಮತ್ತು ಬೂತ್ ವಶದಂತಹ ಅಕ್ರಮಗಳು ನಿಂತಿವೆ ಎಂದು ಒಪ್ಪಿಕೊಳ್ಳುತ್ತಾರೆ.

ಏಕೆಂದರೆ ಇವಿಎಂ ಯಂತ್ರದಲ್ಲಿ ಒಂದು ನಿಮಿಷಕ್ಕೆ ಕೇವಲ ಐದು ಮತಗಳನ್ನು ಮಾತ್ರ ಚಲಾಯಿಸಬಹುದಾಗಿದೆ. ಹೀಗಾಗಿ ಚುನಾವಣಾ ಪರಿಣಾಮಗಳನ್ನೇ ಬದಲಿಸುವಷ್ಟು ದೊಡ್ಡ ಮಟ್ಟದಲ್ಲಿ ರಿಗ್ಗಿಂಗ್ ಮಾಡಬೇಕೆಂದರೆ ಕೆಲವು ಗಂಟೆಗಳೇ ಬೇಕಾಗುತ್ತದೆ. ಅದು ಸಾಧ್ಯವಿಲ್ಲದ ಮಾತು. ಇದಲ್ಲದೆ ಇವಿಎಂ ಯಂತ್ರದಲ್ಲಿ ‘ಕ್ಲೋಸ್’ ಬಟನ್ ನೀಡಲಾಗಿದೆ. ಒಮ್ಮೆ ಚುನಾವಣಾಧಿಕಾರಿ ಕ್ಲೋಸ್ ಬಟನ್ ಒತ್ತಿದರೆ ಆ ಯಂತ್ರವು ವೋಟುಗಳನ್ನು ತೆಗೆದುಕೊಳ್ಳುವುದಿಲ್ಲ.

ಇದರ ಬಗ್ಗೆ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಮತ್ತು ಬ್ರೂಕಿಂಗ್ ಇನ್‌ಸ್ಟಿಟ್ಯೂಟ್‌ನ ವಿದ್ವಾಂಸರು 2017ರಲ್ಲಿ ಒಂದು ಅಧ್ಯಯನ ನಡೆಸಿದ್ದಾರೆ. ಅದರಲ್ಲಿ ಅವರು 1997-2007ರ ನಡುವೆ ಬ್ಯಾಲೆಟ್ ಪೇಪರ್ ಪದ್ಧತಿಯಲ್ಲಿ ಮತ್ತು ಇವಿಎಂ ಬಳಸಿ ನಡೆದ 135ಕ್ಕೂ ಹೆಚ್ಚು ಚುನಾವಣೆಗಳ ಅಧ್ಯಯನ ಮಾಡಿ ಇವಿಎಂ ಬಳಕೆಯಿಂದ ಆದ ಸತ್ಪರಿಣಾಮಗಳನ್ನು ಪಟ್ಟಿ ಮಾಡಿದ್ದಾರೆ. ಆ ವರದಿಯ ಪ್ರಕಾರ ಇವಿಎಂ ಬಳಕೆಯಾದ ಪ್ರದೇಶಗಳಲ್ಲಿ ರಿಗ್ಗಿಂಗ್ ನಿಂತಿದೆ. ಮೊದಲಿಗಿಂತ ವೋಟಿನ ಪ್ರಮಾಣ ತಗ್ಗಿದೆ. ಅರ್ಥಾತ್ ನಕಲಿ ಮತದಾರರ ಸಂಖ್ಯೆ ಕಡಿಮೆಯಾಗಿದೆ. ಚುನಾವಣಾ ಸಂಬಂಧಿ ಹಿಂಸಾಚಾರಗಳು ಇವಿಎಂ ವ್ಯವಸ್ಥೆಯಲ್ಲಿ ಕಡಿಮೆಯಾಗಿದೆ ಮತ್ತು ಇವಿಎಂ ವ್ಯವಸ್ಥೆಯಲ್ಲಿ ಹೆಂಗಸರು, ದಲಿತರು ಮತ್ತು ವೃದ್ಧರು ವೋಟು ಹಾಕುವ ಪ್ರಮಾಣ ಬ್ಯಾಲೆಟ್ ಪೇಪರ್ ಪದ್ಧತಿಗಿಂತ ಹೆಚ್ಚಾಗಿದೆ.

ಇದೆಲ್ಲವೂ ನಿಜವೇ. ಆ ವರದಿಯಲ್ಲಿ ಇರಬಹುದಾದ ಅಲ್ಪಸ್ವಲ್ಪ ಉತ್ಪ್ರೇಕ್ಷೆಗಳ ಬಗ್ಗೆ ತಕರಾರಿರಬಹುದಾದರೂ ಬ್ಯಾಲೆಟ್ ಪದ್ಧತಿಯಲ್ಲಿ ನಡೆಯುತ್ತಿದ್ದ ಅಕ್ರಮಗಳು ಇವಿಎಂನಲ್ಲಿ ನಡೆಯುವುದಿಲ್ಲ ಎನುವುದನ್ನು ನಿರಾಕರಿಸಲಾಗುವುದಿಲ್ಲ.

ಆದರೆ ವಿರೋಧ ಪಕ್ಷಗಳ ಮತ್ತು ಇವಿಎಂ ವ್ಯವಸ್ಥೆಯನ್ನು ವಿರೋಧಿಸುವವರ ಪ್ರಶ್ನೆ ಇರುವುದು ಇವಿಎಂ ವ್ಯವಸ್ಥೆಯಲ್ಲಿ ನಡೆಯಬಹುದಾದ ಸುಧಾರಿತ, ಆಮೂಲಾಗ್ರ ತಾಂತ್ರಿಕ ರಿಗ್ಗಿಂಗ್‌ನ ಸಾಧ್ಯತೆಗಳ ಬಗ್ಗೆ.

ಇವಿಎಂ ವಿರೋಧಿಗಳ ವಾದ

ಇವಿಎಂಗೆ ಬಳಸುವ ಕಂಪ್ಯೂಟರ್‌ಗಳನ್ನು ಹೊರಗಿನಿಂದ ಟ್ಯಾಂಪರ್ ಮಾಡಬಹುದಾದ (ಅಕ್ರಮವಾಗಿ ತಿದ್ದುವ) ಮತ್ತು ಒಂದು ಪಕ್ಷಕ್ಕೆ ಹಾಕಿದ ಮತಗಳು ಸಾರಾಸಗಟಾಗಿ ಮತ್ತೊಂದು ಪಕ್ಷಕ್ಕೆ ವಿಶೇಷವಾಗಿ ಬಿಜೆಪಿಗೆ ಬೀಳುವ ಸಾಧ್ಯತೆ ಕುರಿತು ಇವಿಎಂ ವಿರೋಧಿಗಳು ಸಕಾರಣವಾದ ಆತಂಕಗಳನ್ನು ವ್ಯಕ್ತಪಡಿಸುತ್ತಾರೆ.

ಹಾಗೆ ನೋಡಿದರೆ ಇಂತಹ ಆತಂಕವನ್ನು ಮೊದಲು ವ್ಯಕ್ತಪಡಿಸಿದ್ದು ಬಿಜೆಪಿ ಪಕ್ಷವೇ. 2009ರ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲಿಗೆ ಗುರಿಯಾದ ಬಿಜೆಪಿ ಅದಕ್ಕೆ ಇವಿಎಂ ಅನ್ನು ದೂರುತ್ತಾ ದೊಡ್ಡ ಗೊಂದಲವನ್ನೇ ಹುಟ್ಟುಹಾಕಿತ್ತು. ಬಿಜೆಪಿ ಪಕ್ಷದ ಜಿ.ವಿ.ಎಲ್. ನರಸಿಂಹರಾವ್ ಎಂಬವರು ಇವಿಎಂನ ಅಪಾಯದ ಬಗ್ಗೆ ‘ಡೆಮಾಕ್ರಸಿ ಅಟ್ ರಿಸ್ಕ್’ ಎಂಬ ಪುಸ್ತಕವನ್ನೇ ಬರೆದರು. ಆ ಪಕ್ಷದ ಸುಬ್ರಹ್ಮಣ್ಯಸ್ವಾಮಿಯವರು ಇವಿಎಂನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನ ಮೆಟ್ಟಿಲನ್ನೂ ಏರಿದ್ದರು. ಇಷ್ಟೆಲ್ಲಾ ಹಗರಣ ಮಾಡಿದ ಬಿಜೆಪಿ 2014ರಲ್ಲಿ ಅಷ್ಟೇ ಅನಿರೀಕ್ಷಿತ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ ಮಾತ್ರ ಇವಿಎಂ ಅನ್ನು ಹಾಡಿಹೊಗಳುತ್ತಾ ಅದನ್ನು ಆಕ್ಷೇಪಿಸುವ ವಿರೋಧಿಗಳನ್ನು ಅವಹೇಳನ ಮಾಡಲು ಪ್ರಾರಂಭಿಸಿತು.

ಭಾರತದಲ್ಲಿ ಬಳಸಲಾಗುತ್ತಿರುವ ಇವಿಎಂಗಳ ಕುರಿತು ಮಿಚಿಗನ್ ವಿಶ್ವವಿದ್ಯಾನಿಲಯದ ಪ್ರೊಫೆಸರ್‌ಗಳು ಮತ್ತು ಹೈದಾರಾದಿನ ಇಂಜಿನಿಯರ್‌ಗಳು ಜಂಟಿಯಾಗಿ ಅಧ್ಯಯನ ನಡೆಸಿ 2010ರಲ್ಲಿ ವರದಿಯೊಂದನ್ನು ನೀಡಿದ್ದರು. ಅದರಲ್ಲಿ ಅವರು ಆಗ ಭಾರತವು ಬಳಸುತ್ತಿದ್ದ ಇವಿಎಂ ಯಂತ್ರಗಳು ಸಂಪೂರ್ಣವಾಗಿ ದುರ್ಬಳಕೆ ಮುಕ್ತವಲ್ಲವೆಂದು ಪ್ರತಿಪಾದಿಸಿದ್ದರು ಮತ್ತು ಅದನ್ನು ಸಾಬೀತು ಮಾಡಲು ಬೇಕಿದ್ದ ತಾಂತ್ರಿಕ ಕಾರಣಗಳನ್ನು ನೀಡಿದ್ದರು. ಇವಿಎಂ ಉತ್ಪಾದನೆಯ ಹಂತದಲ್ಲಿ ಜೋಡಿಸುವ ಆಪರೇಟಿಂಗ್ ಸಿಸ್ಟಮ್ ಅನ್ನು ಮತದಾನದ ನಂತರ ಬದಲಿಸುವ ಮೂಲಕ ಅಥವಾ ಇವಿಎಂಗೆ ಬಳಸುವ ಚಿಪ್ ಅನ್ನು ದೂರಸಂಪರ್ಕದ ಮೂಲಕ ಮರುಪ್ರೋಗ್ರಾಮಿಂಗ್ ಮಾಡುವ ಮೂಲಕ ಇವಿಎಂ ಅನ್ನು ಟ್ಯಾಂಪರ್ (ಅಂದರೆ ತಮಗೆ ಬೇಕಾದಂತೆ ಅಳಿಸಿ ಬರೆಯಬಹುದು) ಮಾಡಬಹುದು ಎನ್ನುವುದು ಅವರ ಪ್ರತಿಪಾದನೆಯ ಸಾರಾಂಶ.

ಇದಲ್ಲದೆ ಭಾರತವನ್ನು ಬಿಟ್ಟರೆ ಬೇರೆಲ್ಲೂ ಇವಿಎಂ ಅನ್ನು ಬಳಸುತ್ತಿಲ್ಲವೆಂದೂ, ಜರ್ಮನಿಯಲ್ಲೂ ಮೊದಲು ಇವಿಎಂ ಬಳಸುತ್ತಿದ್ದವರು ಈಗ ಅದನ್ನು ಕೈಬಿಟ್ಟಿದ್ದಾರೆಂದೂ ಇವಿಎಂ ವಿರೋಧಿಗಳು ಹೇಳುತ್ತಾರೆ.

ಮಿಚಿಗನ್ ವರದಿ ಮತ್ತು ಇತರರ ಆಕ್ಷೇಪಣೆಗಳು ಸಾರದಲ್ಲಿ ಪ್ರತಿಪಾದಿಸುವುದಿಷ್ಟು: ಭಾರತದಲ್ಲಿ ಬಳಸಲಾಗುತ್ತಿರುವ ಇವಿಎಂ ಯಂತ್ರಗಳನ್ನು ಇಂಟರ್‌ನೆಟ್ ಅಥವಾ ವೈಫೈ ಅಥವಾ ಇನ್ಯಾವುದೇ ನಿಸ್ತಂತು ತರಂಗಾಂತರ ತಂತ್ರಜ್ಞಾನವನ್ನು ಬಳಸಿ ಹ್ಯಾಕ್ ಮಾಡಬಹುದು ಮತ್ತು ಫಲಿತಾಂಶಗಳನ್ನು ಬದಲಿಸಬಹುದು.

ಇವಿಎಂ ಪರವಾದಿಗಳ ಸಮರ್ಥನೆಗಳು

ಆದರೆ ಬಿಜೆಪಿ, ಚುನಾವಣಾ ಆಯೋಗ ಹಾಗೂ ಸುಪ್ರೀಂಕೋರ್ಟ್ ಈ ಬಗೆಯ ತಾಂತ್ರಿಕ ರಿಗ್ಗಿಂಗ್ ನ ತಾಂತ್ರಿಕ ಮತ್ತು ಆಡಳಿತಾತ್ಮಕ ಸಾಧ್ಯತೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕುತ್ತವೆ. ಅಲ್ಲದೆ ಇತ್ತೀಚೆಗೆ ಎಡಪಂಥೀಯ ಚಿಂತನೆಗಳುಳ್ಳ ‘ಇಂಡಿಯಾ ಫೋರಂ’ ಸಂಘಟನೆ ನಡೆಸಿದ ಅಧ್ಯಯನವೂ ಭಾರತದ ಇವಿಎಂ ಅನ್ನು ಅದರ ವಿರೋಧಿಗಳು ಹೇಳುವ ರೀತಿಯಲ್ಲಿ ಹ್ಯಾಕ್ ಮಾಡಲು ಸಾಧ್ಯವಿಲ್ಲವೆಂದು ಹೇಳುತ್ತದೆ.

ಒಂದು ಕಂಪ್ಯೂಟರ್ ಇಂಟರ್‌ನೆಟ್‌ನೊಂದಿಗೆ ಸಂಪರ್ಕದಲ್ಲಿದ್ದರೆ ಖಂಡಿತಾ ಅದನ್ನು ವಿಶ್ವದಲ್ಲಿ ಎಲ್ಲಿದ್ದರೂ ಹ್ಯಾಕ್ ಮಾಡಿ ಬಯಸಿದಂತೆ ಫಲಿತಾಂಶಗಳನ್ನು ಬದಲಿಸಿಕೊಳ್ಳಬಹುದು. ಆದರೆ ನಾವು ಬಳಸುವ ಇವಿಎಂಗಳಿಗೆ ಇಂಟರ್‌ನೆಟ್ ಸಂಪರ್ಕವೂ ಇಲ್ಲ ಮತ್ತು ಭಾರತದಲ್ಲಿ ಇಂಟರ್‌ನೆಟ್ ವೋಟಿಂಗ್ ಪದ್ಧತಿ ಇಲ್ಲ. ಅದಲ್ಲದೆ ಕಂಪ್ಯೂಟರ್‌ಗಳು ವಿಂಡೋಸ್ ಇತ್ಯಾದಿ ನಿರ್ದಿಷ್ಟವಾದ ಆಪರೇಟಿಂಗ್ ಸಿಸ್ಟಮ್ ಬಳಸಿದರೆ ಅದರ ಮೂಲ ಕರ್ತೃಗಳು ಇಂಟರ್‌ನೆಟ್ ಇಲ್ಲದೆಯೂ ತಿದ್ದಬಹುದು ಎನ್ನುವುದು ನಿಜ. ಆದರೆ ಈ ಇವಿಎಂಗಳಲ್ಲಿ ಆಪರೇಟಿಂಗ್ ಸಿಸ್ಟಮೇ ಇಲ್ಲ. ಅವು ಒಂದು ಬಗೆಯ ದೊಡ್ಡ ಕ್ಯಾಲುಕುಲೇಟರ್‌ಗಳೇ ವಿನಃ ಕಂಪ್ಯೂಟರ್ ಅಲ್ಲ ಹಾಗೂ ಅದರಲ್ಲಿ ಬಳಸುವ ಚಿಪ್‌ಗಳು ಒಮ್ಮೆ ಮಾತ್ರ ಬಳಸಿ ಬಿಸಾಕಬಹುದಾದ ಚಿಪ್‌ಗಳೇ ವಿನಃ ಮರುಪ್ರೋಗ್ರಾಮಿಂಗ್ ಸಾಧ್ಯವಿಲ್ಲ. ಇದು ಇವಿಎಂ ಟ್ಯಾಂಪರಿಂಗ್ ಸಾಧ್ಯವಿಲ್ಲ ಎನ್ನುವವರ ತಾಂತ್ರಿಕ ವಾದದ ಸಾರಾಂಶ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಶಿವಸುಂದರ್

contributor

Similar News