‘ಪ್ರಜ್ವಲ’ ಪಾಳೇಗಾರಿಕೆಯ ಬೇರುಗಳು ಮತ್ತು ಉದಾರವಾದಿ ಕುರುಡುಗಳು

ಹಾಲಿ ಚುನಾವಣೆಯಲ್ಲಿ ಮೋದಿಯವರು ದಿನ ಬೆಳಗಾದರೆ ಮುಸ್ಲಿಮರ ಮೇಲೆ, ಸಂವಿಧಾನದ ವಿರುದ್ಧ, ಸೆಕ್ಯುಲರಿಸಂ ವಿರುದ್ಧ ಮಾಡುತ್ತಿರುವ ದಾಳಿಯ ಬಗ್ಗೆ ದೇವೇಗೌಡರಾಗಲೀ, ಜೆಡಿಎಸ್ ಆಗಲಿ ಚಕಾರವೆತ್ತಿಲ್ಲ. ಮಹಿಳಾ ಪೀಡಕ ಬ್ರಿಜ್‌ಭೂಷಣ್‌ನ ಮಗನಿಗೆ, ಹಾಥರಸ್‌ನಲ್ಲಿ ದಲಿತ ಯುವತಿಯನ್ನು ಅತ್ಯಾಚಾರ ಮಾಡಿ ಕೊಂದವರನ್ನು ಸಮರ್ಥಿಸಿಕೊಳ್ಳುವವರಿಗೆ ಟಿಕೆಟ್ ಕೊಡುವ ಬಿಜೆಪಿ ಹಾಗೂ ಎಲ್ಲಾ ಗೊತ್ತಿದ್ದು ಕೀಚಕ ಪ್ರಜ್ವಲ್‌ನಿಗೆ ಟಿಕೆಟು ಕೊಡಿಸುವ ಜೆಡಿಎಸ್ ಪಿತಾಮಹರು.. ಯಾವ ದೊಡ್ಡ ವ್ಯತ್ಯಾಸವೂ ಇಲ್ಲ.

Update: 2024-05-24 04:44 GMT
Editor : Thouheed | Byline : ಶಿವಸುಂದರ್,

1972ರಲ್ಲಿ ದೇವೇಗೌಡರು ಕರ್ನಾಟಕದ ಶಾಸನಭೆಯಲ್ಲಿ ಕಾಂಗ್ರೆಸ್(ಒ) ನಾಯಕರಾಗಿ ವಿರೋಧ ಪಕ್ಷದ ನಾಯಕರಾಗಿದ್ದರು. ಆಗ ವಿಧಾನ ಸಭೆಯಲ್ಲಿ ಸಮಾಜವಾದಿ ಪಕ್ಷದ ಮೂವರು ಸದಸ್ಯರು ಮತ್ತು ಕಮ್ಯುನಿಸ್ಟ್ ಪಕ್ಷದ ಮೂವರು ಸದಸ್ಯರು ಸಹ ವಿರೋಧಿಗಳ ಸಾಲಿನಲ್ಲಿದ್ದರು.

ದೇವೇಗೌಡರು ಅರಸು ಅವರೊಂದಿಗೆ ಸ್ನೇಹದಲ್ಲಿದ್ದರು ಮತ್ತು ಅವರ ಸರಕಾರದ ಭ್ರಷ್ಟಾಚಾರಗಳನ್ನು ಮಾತ್ರ ಬಯಲುಗೊಳಿಸುತ್ತಿದ್ದರೇ ವಿನಾ ಅವರ ಜನಪರ ನೀತಿಗಳ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ ಎಂದು ಲೇಖಕರು ವಕಾಲತ್ತು ವಹಿಸುತ್ತಾರೆ.

ಇದು ಸತ್ಯ. ಆದರೆ ಅರ್ಧ ಸತ್ಯವೆಂದು ಮತ್ತೊಂದು ಉದಾಹರಣೆ ಸಾಬೀತು ಪಡಿಸುತ್ತದೆ.

ಅರಸು ಅವರ ಭೂ ಸುಧಾರಣೆಯ ಮೂಲ ಕರಡು ಅಷ್ಟೊಂದು ಕ್ರಾಂತಿಕಾರಿಯಾಗೇನೂ ಇರಲಿಲ್ಲ. ಅದರ ಅಂತರ್ಗತ ಭೂ ಮಾಸಕ ಪರತೆಯನ್ನು ವಿರೋಧಿಸಿ ವಿರೋಧಿಗಳ ಸಾಲಿನಲ್ಲಿದ್ದ ಸಮಾಜವಾದಿಗಳು ಮತ್ತು ಕಮ್ಯುನಿಸ್ಟರು ಸರಕಾರದ ವಿರುದ್ಧ ಸಂಘರ್ಷ ಹೂಡುತ್ತಾರೆ. ಅದರ ಪರಿಣಾಮವಾಗಿಯೇ ಕಕ್ಕಿಲ್ಲಾಯ ಅವರ ನೇತೃತ್ವದಲ್ಲಿ ಸದನ ಸಮಿತಿಯೊಂದು ನೇಮಕವಾಗಿ ಅದರ ಶಿಫಾರಸನ್ನು ಸಂಪೂರ್ಣವಾಗಿ ಅರಸು ಸರಕಾರ ಒಪ್ಪಿಕೊಂಡ ನಂತರ ಭೂ ಸುಧಾರಣೆ ನೀತಿಗೆ ಇದ್ದಿದ್ದರಲ್ಲಿ ಸ್ವಲ್ಪ ಕ್ರಾಂತಿಕಾರಿ ಸ್ವರೂಪ ಬರುತ್ತದೆ. ಇದು ದೇವರಾಜ ಅರಸು ಅವರ ಸರಕಾರದ ವಿರುದ್ಧ ವಿರೋಧ ಪಕ್ಷಗಳಾಗಿದ್ದ ಸಮಾಜವಾದಿ ಮತ್ತು ಕಮ್ಯುನಿಸ್ಟ್ ಪಕ್ಷಗಳು ವಹಿಸಿದ ಪಾತ್ರ.

ಆದರೆ ದೇವೇಗೌಡರ ನೇತೃತ್ವದ ಕಾಂಗ್ರೆಸ್ (ಒ) ಪಕ್ಷ ಅಧಿಕೃತ ವಿರೋಧ ಪಕ್ಷವಾಗಿದ್ದರೂ ಇದರ ಬಗ್ಗೆ ಮೌನ ವಹಿಸಿತು. ಲೇಖಕರೇ ಹೇಳುವಂತೆ ಮುಂದೆ ಜನತಾ ಪಕ್ಷವಾದಾಗಲೂ ದೇವೇಗೌಡರಿಗೆ ಜೆಪಿಯವರ ಸಂಪೂರ್ಣ ಕ್ರಾಂತಿ ಪರಿಕಲ್ಪನೆಯ ಬಗ್ಗೆ ವಿರೋಧವೂ ಇರಲಿಲ್ಲ. ಸಮ್ಮತಿಯೂ ಇರಲಿಲ್ಲ.

ಮುಂದೆ 1984ರಲ್ಲಿ ವೆಂಕಟಸ್ವಾಮಿ ವರದಿಯು ಒಕ್ಕಲಿಗ ಸಮುದಾಯವನ್ನು ಪ್ರಬಲ ಜಾತಿಗಳೆಂಬ ಆಧಾರದಲ್ಲಿ ಹಿಂದುಳಿದ ಜಾತಿಗಳ ಮೀಸಲಾತಿಯಿಂದ ಹೊರಗಿಟ್ಟಾಗ ದೇವೇಗೌಡರ ನಿಲುವು ಮತ್ತು ವರ್ತನೆಗಳನ್ನು ಲೇಖಕರು ಅಷ್ಟಾಗಿ ವಿಶ್ಲೇಷಣೆ ಮಾಡಲು ಹೋಗದಿರುವುದೂ ಕೂಡ ಪುಸ್ತಕದ ಮಿತಿಯಾಗಿ ಕಾಣಿಸುತ್ತದೆ.

ಆದರೆ ಲೇಖಕರು ಒತ್ತಿ ಹೇಳುವ ಒಂದು ಅಂಶ ನಿಜ. ಕಾಂಗ್ರೆಸ್ (ಒ)ನ ಆಗಿನ ಇನ್ನಿತರ ಹಿರಿಯ ನಾಯಕರಾಗಿದ್ದ ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ನಿಜಲಿಂಗಪ್ಪ, ಜತ್ತಿಯವರುಗಳು ಕೂಡ ಇಷ್ಟೇ ಬಲಿಷ್ಠ ಜಾತಿ ಪರವಾದ ನಿಲುವನ್ನು ಹೊಂದಿದ್ದರೂ ಮಾಧ್ಯಮಗಳು ಮತ್ತು ಸಾರ್ವಜನಿಕರು ದೇವೇಗೌಡರನ್ನು ವಿಮರ್ಶಿಸಿದಷ್ಟು ವಿಮರ್ಶೆ ಮಾಡಲಿಲ್ಲ.

ಇಂಗ್ಲಿಷ್ ಹಾಗೂ ಕಾರ್ಪೊರೇಟ್ ಮಾಧ್ಯಮಗಳ ಈ ಬ್ರಾಹ್ಮಣೀಯ ಸೋಗಲಾಡಿತನವನ್ನು ಲೇಖಕರು ಉದ್ದಕ್ಕೂ ಚೆನ್ನಾಗಿಯೇ ಬಯಲು ಮಾಡುತ್ತಾರೆ. ಅಷ್ಟರ ಮಟ್ಟಿಗೆ ಅದು ಸರಿ.

ಆದರೆ ಅದು ದೇವೇಗೌಡರು ಮಾಡಿದ ಅದೇ ತಪ್ಪುಗಳಿಗೆ ಹೇಗೆ ಸಮರ್ಥನೆಯಾಗುತ್ತದೆ?

ದೇವೇಗೌಡರು ರಾಜಕಾರಣದಲ್ಲಿ ಮೊರಾರ್ಜಿ ದೇಸಾಯಿಯವರನ್ನು ತಮ್ಮ ಅತ್ಯಂತ ಮೆಚ್ಚಿನ ಗುರುವನ್ನಾಗಿ ಮಾನ್ಯ ಮಾಡುತ್ತಿದ್ದರು. ಅದಕ್ಕೆ ಅವರಿಬ್ಬರಲ್ಲಿ ಇದ್ದ ದೈವ ಶ್ರದ್ಧೆ ಹಾಗೂ ಮುಲಾಜಿಲ್ಲದ ನಡವಳಿಕೆಗಳ ಸಾಮ್ಯತೆ ಕಾರಣವಿರಬಹುದು ಎಂದು ಲೇಖಕರು ಸೂಚಿಸುತ್ತಾರೆ. ಆದರೆ ಮೊರಾರ್ಜಿ ದೇಸಾಯಿಯವರು ಭಾರತದ ರಾಜಕಾರಣ ಕಂಡ ಅತ್ಯಂತ ಪ್ರತಿಗಾಮಿ, ಊಳಿಗಮಾನ್ಯ ಹಿತಾಸಕ್ತಿಯುಳ್ಳ, ಸಮಾಜವಾದ ಹಾಗೂ ಸೆಕ್ಯುಲರಿಸಂನ ಕಡುವಿರೋಧಿಗಳಲ್ಲಿ ಒಬ್ಬರು ಎಂಬುದನ್ನು ಲೇಖಕರು ಏಕೆ ಹೇಳುವುದಿಲ್ಲ ಎಂಬುದು ಅಸ್ಪಷ್ಟ.

ಅದೇ ರೀತಿ ಕುಟುಂಬ ರಾಜಕಾರಣದ ಬಗ್ಗೆಯೂ ಲೇಖಕರು ದೇವೇಗೌಡರಿಗೆ ಸಂಪೂರ್ಣ ರಿಯಾಯಿತಿ ಕೊಡುತ್ತಾರೆ. ಇಡೀ ಪುಸ್ತಕದಲ್ಲಿ ದೇವೇಗೌಡರ ಕುಟುಂಬ ರಾಜಕಾರಣ ಮತ್ತು ವ್ಯಾಮೋಹದ ಬಗ್ಗೆ ವಿಮರ್ಶಾತ್ಮಕವಾದ ಕೇವಲ ನಾಲ್ಕು ಸಾಲುಗಳಿವೆ!.

ಆದರೆ ಉಪಸಂಹಾರದಲ್ಲಿ ಆ ನಾಲ್ಕು ಸಾಲುಗಳನ್ನು ನುಂಗಿಹಾಕುವಂತಹ ಸಮರ್ಥನೆಗಳನ್ನು ಲೇಖಕರು ಒದಗಿಸುತ್ತಾರೆ.

ಕಾಂಗ್ರೆಸನ್ನೂ ಒಳಗೊಂಡಂತೆ ಎಲ್ಲಾ ಪ್ರಾದೇಶಿಕ ಪಕ್ಷಗಳಲ್ಲೂ ಸ್ಥಾಪಕ ಕುಟುಂಬಗಳಿಗೆ ಮಾತ್ರ ಪಕ್ಷವನ್ನು ಉಳಿಸುವ ಬಂಧವಿರುತ್ತದಾದ್ದರಿಂದ ಅದು ಅನಿವಾರ್ಯ ಎಂಬ ವಿಚಿತ್ರ ಪ್ರಜಾತಂತ್ರ ವಿರೋಧಿ ತರ್ಕ ಮಾಡುತ್ತಾರೆ.

ಇಲ್ಲಿ ದೇವೇಗೌಡರನ್ನು ಕುಟುಂಬ ರಾಜಕಾರಣಕ್ಕಾಗಿ ದೂಷಿಸುವವರು ಇತರ ಪಕ್ಷಗಳನ್ನು ದೂಷಿಸದ ಸೋಗಲಾಡಿತನದ ಬಗ್ಗೆ ಲೇಖಕರು ಗಮನ ಸೆಳೆಯುವುದು ಸರಿಯಾಗಿಯೇ ಇದೆ. ಆದರೆ ಅದು ದೇವೇಗೌಡರ ಮಾಡುತ್ತಿರುವ ಅದೇ ತಪ್ಪಿಗೆ ಸಮರ್ಥನೆಯೇ?

ಮತ್ತೊಮ್ಮೆ ಇದೇ ತರ್ಕವನ್ನು ಲೇಖಕರು ದೇವೇಗೌಡರ ಪಕ್ಷವು ಬಿಜೆಪಿಯೊಂದಿಗೆ ಮಾಡಿಕೊಂಡ ಅಥವಾ ಮಾಡಿಕೊಳ್ಳುತ್ತಿರುವ ಮೈತ್ರಿಯ ತಪ್ಪನ್ನು ಗೌಣಗೊಳಿಸಿಕೊಳ್ಳಲು ಬಳಸಿಕೊಳ್ಳುತ್ತಾರೆ.

ಸೆಕ್ಯುಲರ್ ಎಂದು ಹೇಳಿಕೊಳ್ಳುವ ಎಲ್ಲಾ ಪಕ್ಷಗಳು ಒಂದಲ್ಲ ಒಂದು ಕಾಲದಲ್ಲಿ ಗೌಡರಿಗಿಂತ ಮೊದಲೇ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಕೇವಲ ದೇವೇಗೌಡರ ಪಕ್ಷ ಮಾಡಿಕೊಂಡ ಮೈತ್ರಿಯ ಬಗೆಗಿನ ವಿಮರ್ಶೆಯ ಸೋಗಲಾಡಿತನ ಮಾತ್ರ ಪುಸ್ತಕದಲ್ಲಿ ಟೀಕೆಗೆ ಗುರಿಯಾಗುತ್ತದೆ.

ದೇವೇಗೌಡರ ಮತ್ತವರ ಪಕ್ಷದ ಮಿತಿಗಳೇನೇ ಇದ್ದರೂ ದೇವೇಗೌಡರು ಪ್ರಧಾನಿಯಾದ 10 ತಿಂಗಳಲ್ಲಿ ತೋರಿದ ಕ್ರಿಯಾಶೀಲತೆಯನ್ನು ಮಾಧ್ಯಮಗಳು ಮತ್ತು ದೇಶ ಅವಗಣನೆ ಮಾಡಿವೆ ಮತ್ತು ಅದಕ್ಕೆ ಸಮಾಜದ ಸ್ಥಾಪಿತ ಪೂರ್ವಗ್ರಹಗಳೇ ಕಾರಣ ಎಂಬುದು ಅಕ್ಷರಶಃ ಸತ್ಯ.

ದೇವೇಗೌಡರು ಮಾಡಿದ್ದಷ್ಟನ್ನು ಇತರ ಕುಲೀನರು ಮಾಡಿದ್ದರೆ ಅವರ ಸುತ್ತ ಸೃಷ್ಟಿಯಾಗುತ್ತಿದ್ದ ಪ್ರಭಾ ವಲಯವೇ ಬೇರೆ. ಅಷ್ಟರಮಟ್ಟಿಗೆ ದೇವೇಗೌಡರಿಗಾದ ಅನ್ಯಾಯವನ್ನು ಈ ಪುಸ್ತಕ ಸರಿಪಡಿಸುತ್ತದೆ.

ಆದರೂ ಕೃತಿಯುದ್ದಕ್ಕೂ ಸುಗತರಂಥ ಅಧ್ಯಯನಶೀಲ ಪತ್ರಕರ್ತರು ದೇವೇಗೌಡರು ಪ್ರಧಾನಿಯಾಗಿ ಕೈಗೊಂಡ ಎಲ್ಲಾ ಕ್ರಮಗಳನ್ನು ಅಷ್ಟೊಂದು ಅವಿಮರ್ಶಾತ್ಮಕವಾಗಿ ಎಲ್ಲವನ್ನು ಅಪರೂಪದ ಸಾಧನೆಯೆಂದು ಬಣ್ಣಿಸಿರುವುದು ನಿರಾಶೆ ಮೂಡಿಸುತ್ತದೆ.

ಕಾಶ್ಮೀರದ ಕಣ್ಮಣಿ ಆರ್ಟಿಕಲ್ 370 ರದ್ದನ್ನು ಸಮರ್ಥಿಸಿದ್ದೇಕೆ?

ಉದಾಹರಣೆಗೆ :

ಕಾಶ್ಮೀರದಲ್ಲಿ ಸತತ ಏಳು ವರ್ಷಗಳಿಂದ ನಡೆಯದ ಚುನಾವಣೆಗಳನ್ನು 1996ರಲ್ಲಿ ದೇವೇಗೌಡರು ನಡೆಸಿದ್ದು ಹಾಗೂ ಆ ಭಯೋತ್ಪಾದಕಸಿಕ್ತ ರಾಜ್ಯಕ್ಕೆ ಯಾವ ಪ್ರಧಾನಿಯೂ ಭೇಟಿ ಕೊಡದಿದ್ದ ಸಂದರ್ಭದಲ್ಲಿ ನಾಲ್ಕು ಬಾರಿ ಭೇಟಿ ಕೊಟ್ಟು ತೆರೆದ ಜೀಪಿನಲ್ಲಿ ಪ್ರಯಾಣಿಸುತ್ತಾ ವಿಶ್ವಾಸ ತುಂಬಿದ್ದು ಎಲ್ಲವೂ ತನ್ನಂತೆ ತಾನೇ ಒಂದು ಸಾಧನೆಯೇ.

ಆದರೆ ಅದು ಜನರಲ್ಲಿ ವಿಶ್ವಾಸ ತುಂಬಿತೇ, ಚುನಾವಣೆ ನ್ಯಾಯ ಸಮ್ಮತವಾಗಿ ನಡೆಯಿತೇ?

ಇದರ ಬಗ್ಗೆ ದೇವೇಗೌಡರು ಹೇಳಿದ್ದನ್ನು ಮತ್ತು ಆ ಕ್ರಮದ ನೇರ ಫಲಾನುಭವಿಗಳು ಹೇಳಿದ್ದನ್ನು ಮಾತ್ರವಲ್ಲದೆ ಅದಕ್ಕೆ ಬಲಿಪಶುಗಳಾದವರ ಅಥವಾ ಸ್ವತಂತ್ರ ವರದಿಗಳನ್ನು ಲೇಖಕರು ಪರಾಂಬರಿಸಿದ್ದರೆ ಕೃತಿ ಇನ್ನಷ್ಟು ಮೌಲಿಕವಾಗುತ್ತಿತ್ತು.

ವಿಪರ್ಯಾಸವೆಂದರೆ 2019ರಲ್ಲಿ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಮೋದಿ ಸರಕಾರದ ಮಸೂದೆಯನ್ನು ದೇವೇಗೌಡರು ಖಂಡಿಸುತ್ತಾರೆ. ಆದರೆ ಅವರ ಪಕ್ಷದ ರಾಜ್ಯಾಧ್ಯಕ್ಷ ಮತ್ತು ಅವರ ಪುತ್ರ ಕುಮಾರಸ್ವಾಮಿಯವರು ‘‘ಅದರಿಂದಾಗಿ ಕಾಶ್ಮೀರದಲ್ಲ್ ಶಾಂತಿ ಸ್ಥಾಪನೆಯಾಗುವುದಾದರೆ ಮಸೂದೆಯನ್ನು ಸಮರ್ಥಿಸುತ್ತೇವೆ’’ ಎಂದು ಹೇಳಿಕೆಯಿತ್ತಿದ್ದರು. ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಆಗ ಸಂಸತ್ ಸದಸ್ಯರಾಗಿದ್ದರು. ಮಸೂದೆಯ ಪರವಾಗಿ ಆಗಲೀ ಅಥವಾ ವಿರೋಧವಾಗಿಯಾಗಲೀ ಅವರು ಮತ ಚಲಾಯಿಸಿದ ದಾಖಲೆಗಳು ಸಂಸತ್ತಿನ ಕಡತಗಳಿಲ್ಲ.

ಇದನ್ನು ಗಮನಕ್ಕೆ ತೆಗೆದುಕೊಳ್ಳದೆ ಕಾಶ್ಮೀರದ ಬಗ್ಗೆ ದೇವೇಗೌಡರ ಮಮತೆಯನ್ನು ಹೇಗೆ ಅರ್ಥಮಾಡಿಕೊಳ್ಳುವುದು?

ಹಾಗೆಯೇ ಈಶಾನ್ಯ ಭಾರತಕ್ಕೆ ವಿಶ್ವಾಸ ತುಂಬುವ ಕಾರ್ಯಕ್ರಮ ಹಾಗೂ ಅಲ್ಲಿ ಏಳು ದಿನಗಳ ಕಾಲ ಖುದ್ದು ಪ್ರವಾಸ ಮಾಡಿದ ದೇವೇಗೌಡರ ಕ್ರಮಗಳು ಭಾರತದ ಜನರಿಗೆ ಗೊತ್ತೇ ಇರಲಿಲ್ಲ ಎಂದರೂ ನಡೆಯುತ್ತದೆ. ಅದು ನಿಜಕ್ಕೂ ಪ್ರಶಂಸನೀಯ ದೂರಗಾಮಿ ಕ್ರಮ.

ಆದರೆ ಕಾಶ್ಮೀರದ ಅಥವಾ ಈಶಾನ್ಯ ಭಾರತದ ಐತಿಹಾಸಿಕ ರಾಷ್ಟ್ರೀಯತಾ ಸಮಸ್ಯೆಗಳನ್ನು ಕೇವಲ ನಿರುದ್ಯೋಗದ ಸಮಸ್ಯೆ ಎಂದು ಅರ್ಥಮಾಡಿಕೊಂಡದ್ದನ್ನೇ ದೇವೇಗೌಡರು ಮುಂದುವರಿಸಿದ್ದು ಎರಡೂ ಭಾಗಗಳ ರಾಜಕೀಯ ಸಮಸ್ಯೆ ಮುಂದುವರಿಯಲು ಕಾರಣವಲ್ಲವೇ?

ಲೇಖಕರು ಅದರ ಬಗ್ಗೆ ಮೌನವಾಗಿರುವುದು ಕೂಡ ಸಮಸ್ಯಾತ್ಮಕ.

ಹಾಗೆಯೇ

ನರ್ಮದಾ ಯೋಜನೆ ಹಾಗೂ ತೆಹ್ರಿ ಅಣೆಕಟ್ಟು ಯೋಜನೆಯ ವಿರೋಧವನ್ನು ದೇವೇಗೌಡರು ಯಶಸ್ವಿಯಾಗಿ ನಿಭಾಯಿಸಿದರು ಎಂದು ಲೇಖಕರು ದೇವೇಗೌಡರಿಗೆ ಪ್ರಮಾಣ ಪತ್ರ ಕೊಡುತ್ತಾರೆ. ಆದರೆ ಪುಸ್ತಕದಲ್ಲಿನ ವಿವರಗಳೇ ಸೂಚಿಸುವಂತೆ ಎರಡೂ ಯೋಜನೆಯನ್ನು ಮುಂದುವರಿಸಲು ದೇವೇಗೌಡರು ತೆಗೆದುಕೊಂಡ ತೀರ್ಮಾನಗಳು ಆದಿವಾಸಿ ವಿರೋಧಿ ಹಾಗೂ ಕಾರ್ಪೊರೇಟ್ ಪರವಾಗಿದ್ದವು ಮತ್ತು ಅವು ಅವರ ಸಾಧನೆಗಳ ಗರಿಗಳಲ್ಲ. ಬದಲಿಗೆ ಗೌಡರನ್ನೂ ಒಳಗೊಂಡಂತೆ ಭಾರತದ ಆಳುವ ವರ್ಗಗಳ ಜನವಿರೋಧಿ ದೃಷ್ಟಿಕೋನದ ವೈಫಲ್ಯದ ಕಪ್ಪುಚುಕ್ಕೆಗಳಾಗಿದ್ದವು.

ಲೇಖಕರು ಅದನ್ನು ಬಲ್ಲವರಾಗಿದ್ದೂ ಅದನ್ನು ಸಾಧನೆಯೆಂದು ಬಣ್ಣಿಸಿಬಿಡುತ್ತಾರೆ.

ಇವಲ್ಲದೆ ಸ್ಪಷ್ಟವಾಗಿ ನಗರ ಭೂ ಕಬಳಿಕೆ ಯೋಜನೆಗಳಾಗಿದ್ದ ಬೆಂಗಳೂರು ಮೈಸೂರು ಕಾರಿಡಾರ್ ಯೋಜನೆ, ಐಟಿ ಕಂಪೆನಿಗಳಿಗಾಗಿ ನಗರ ಭೂ ಸ್ವಾಧೀನ ತಿದ್ದುಪಡಿ ನೀತಿ, ವಿದೇಶಿ ಬಂಡವಾಳಕ್ಕೆ ಪೈಪೋಟಿಯಲ್ಲಿ ರಿಯಾಯಿತಿ ಕೊಡುವುದು, ಕೊಜೆಂಟ್ರಿಕ್ಸ್ ಮತ್ತು ಎನ್ರಾನ್‌ನಂತಹ ವಂಚಕ ಹಾಗೂ ಮೋಸದ ಕಂಪೆನಿಗಳಿಗೆ ಪರವಾನಿಗೆ ಕೊಟ್ಟಿದ್ದನ್ನು ಸಹ ಲೇಖಕರು ದೇವೇಗೌಡರ ಸಾಧನೆಯ ಪಟ್ಟಿಗೆ ಸೇರಿಸಿರುವುದು ಆಶ್ಚರ್ಯಕರವಾಗಿದೆ.

ಮತ್ತೊಂದು ವಿಸಂಗತಿಯೂ ಪುಸ್ತಕದಲ್ಲಿದೆ.

ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯ ಭಾಗವಾಗಿ ಮುಸ್ಲಿಮರಿಗೆ ಮೀಸಲಾತಿಯನ್ನು 1959ರಲ್ಲಿ ನಾಗನಗೌಡ ಸಮಿತಿಯ ವರದಿ ಕಾಲದಿಂದಲೂ ಒದಗಿಸಲಾಗುತ್ತಿದೆ. ಅದನ್ನು ಹಾವನೂರು ಸಮಿತಿ ನಿರಾಕರಿಸಿದಾಗ ಕರ್ನಾಟಕ ಹೈಕೋರ್ಟ್ ಮರುಸ್ಥಾಪಿಸುತ್ತದೆ. ನಂತರ ಹೆಗಡೆ ಸರಕಾರದಲ್ಲೂ ಮುಸ್ಲಿಮ್ ಮೀಸಲಾತಿ ಮುಂದುವರಿಯುತ್ತದೆ.

1990ರಲ್ಲಿ ಚಿನ್ನಪ್ಪ ರೆಡ್ಡಿ ಆಯೋಗ ಅತ್ಯಂತ ಸ್ಪಷ್ಟವಾಗಿ ಮುಸ್ಲಿಮರನ್ನು ಹಿಂದುಳಿದವರೆಂದು ಘೋಷಿಸಿ ಮೀಸಲಾತಿ ಶಿಫಾರಸು ಮಾಡುತ್ತದೆ. ಅದನ್ನು ಆಧರಿಸಿ ಕಾಂಗ್ರೆಸ್‌ನ ವೀರಪ್ಪ ಮೊಯ್ಲಿ ಸರಕಾರ 1994ರ ಚುನಾವಣೆಗೆ ಮುನ್ನ ಶೇ. 4ರಷ್ಟು ಮೀಸಲಾತಿ ಘೋಷಿಸಿ ಆದೇಶ ಹೊರಡಿಸುತ್ತದೆ. ಆನಂತರ ಅಧಿಕಾರಕ್ಕೆ ಬಂದ ದೇವೇಗೌಡರ ಸರಕಾರವೂ ಅದೇ ನೀತಿಯನ್ನು ಮುಂದುವರಿಸುತ್ತದೆ.

ಆದರೆ ಲೇಖಕರು ದೇವೇಗೌಡರ ಪಕ್ಷ ಹೇಳುವಂತೆ ಅದು ದೇವೇಗೌಡರ ಕೊಡುಗೆ ಎಂಬಂತೆ ತಪ್ಪಾಗಿ ದಾಖಲಿಸುತ್ತಾರೆ.

ಬಾಬರಿ ಮಸೀದಿ ನಾಶ ಖಂಡಿಸಿದವರು

ರಾಮಮಂದಿರವನ್ನು ಸ್ವಾಗತಿಸುತ್ತಾರೆ!

ಸೆಕ್ಯುಲರಿಸಂ ಬಗ್ಗೆ ದೇವೇಗೌಡರದ್ದು ನಿಸ್ಸಂಶಯವಾದ ಬದ್ಧತೆ ಎಂದು ಲೇಖಕರು ಮೇಲೆ ಹೇಳಲಾದ ಹಲವಾರು ಸಂಗತಿಗಳನ್ನು ಉಲ್ಲೇಖಿಸುತ್ತಾರೆ. ಆದರೆ ಗುಜರಾತ್, ದಿಲ್ಲಿ, ಮುಝಫ್ಫರ್ ನಗರ ಹತ್ಯಾಕಾಂಡವನ್ನು ಮಾಡಿರುವ ಮತ್ತು ಮಾಡಿದ್ದನ್ನು ಸಮರ್ಥಿಸಿಕೊಳ್ಳುವ, ಮಣಿಪುರದಲ್ಲಿ ಜನಾಂಗೀಯ ನರಮೇಧವನ್ನು, ಈಶಾನ್ಯ ಭಾರತದಲ್ಲಿ ದಿಲ್ಲಿ ದೌರ್ಜನ್ಯವನ್ನು ನಡೆಸುತ್ತಿರುವ, ಸಂವಿಧಾನವನ್ನು ಕೇಸರೀಕರಿಸುತ್ತಿರುವ, ರೈತ ಬದುಕನ್ನು ಕಾರ್ಪೊರೇಟ್ ಗುಲಾಮತನಕ್ಕೆ ತಳ್ಳುತ್ತಿರುವ ಮೋದಿ ನೇತೃತ್ವದ ಬಿಜೆಪಿ ಪಕ್ಷದೊಂದಿಗೆ ದೇವೇಗೌಡರ ನೇತೃತ್ವದಲ್ಲಿ ಅವರ ಪಕ್ಷವೇ ಹೊಂದಾಣಿಕೆ ಮಾಡಿಕೊಂಡಿದೆ.

2006ರಲ್ಲಿ ಕನಿಷ್ಠ ಪಕ್ಷ ಮಾತು ಮುರಿದ ಮಗ ಎಂಬ ನೆಪವಾದರೂ ಇತ್ತು. ಈಗ ದೇವೇಗೌಡರೇ ಕರ್ನಾಟಕದಲ್ಲಿ ಕೇಸರಿ-ಹಸಿರು ರಥದ ಸಾರಥಿ.

ಮೊನ್ನೆ ತಮ್ಮ 92ನೇ ಜನ್ಮದಿನದಂದು ಅಭಿನಂದಿಸಿದ ಮೋದಿಗೆ ಪತ್ರ ಬರೆದಿರುವ ದೇವೇಗೌಡರು ಮೂರನೇ ಬಾರಿ ಮೋದಿಯನ್ನು ಪ್ರಧಾನಿಯನ್ನಾಗಿ ಕಾಣುವುದೇ ತಮ್ಮ ಜೀವನದ ಆಶಯ ಎಂದು ಮರುಪತ್ರ ಬರೆದಿದ್ದಾರೆ.

ಹಾಲಿ ಚುನಾವಣೆಯಲ್ಲಿ ಮೋದಿಯವರು ದಿನ ಬೆಳಗಾದರೆ ಮುಸ್ಲಿಮರ ಮೇಲೆ, ಸಂವಿಧಾನದ ವಿರುದ್ಧ, ಸೆಕ್ಯುಲರಿಸಂ ವಿರುದ್ಧ ಮಾಡುತ್ತಿರುವ ದಾಳಿಯ ಬಗ್ಗೆ ದೇವೇಗೌಡರಾಗಲೀ, ಜೆಡಿಎಸ್ ಆಗಲಿ ಚಕಾರವೆತ್ತಿಲ್ಲ. ಮಹಿಳಾ ಪೀಡಕ ಬ್ರಿಜ್‌ಭೂಷಣ್‌ನ ಮಗನಿಗೆ, ಹಾಥರಸ್‌ನಲ್ಲಿ ದಲಿತ ಯುವತಿಯನ್ನು ಅತ್ಯಾಚಾರ ಮಾಡಿ ಕೊಂದವರನ್ನು ಸಮರ್ಥಿಸಿಕೊಳ್ಳುವವರಿಗೆ ಟಿಕೆಟ್ ಕೊಡುವ ಬಿಜೆಪಿ ಹಾಗೂ ಎಲ್ಲಾ ಗೊತ್ತಿದ್ದು ಕೀಚಕ ಪ್ರಜ್ವಲ್‌ನಿಗೆ ಟಿಕೆಟು ಕೊಡಿಸುವ ಜೆಡಿಎಸ್ ಪಿತಾಮಹರು.. ಯಾವ ದೊಡ್ಡ ವ್ಯತ್ಯಾಸವೂ ಇಲ್ಲ.

ಅದೇ ರೀತಿ ಕಾಂಗ್ರೆಸ್‌ನಲ್ಲೂ ಇನ್ನು ಬಯಲಾಗದ ಹಲವು ಮಹಿಳಾ ಪೀಡಕರೂ, ಗುಪ್ತ ಹಿಂದೂತ್ವವಾದಿಗಳು ಇದ್ದಾರೆ. ಈ ಶಕ್ತಿಗಳ ಪಕ್ಷಾತೀತ ಸಮರ್ಥನೆ ಮತ್ತು ರಕ್ಷಣೆಯಿಂದಲೇ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಹಿಂದುತ್ವ ಹಾಗೂ ಪುರುಷಾಧಿಪತ್ಯ ಅಧಿಕಾರ ಮಾಡುತ್ತದೆ.

ಸೆಕ್ಯುಲರಿಸಂ ಬಗ್ಗೆ ಉದಾರವಾದಿ ಕುರುಡು ಕಳೆದು ನೈಜ ಪ್ರಜಾತಾಂತ್ರಿಕ ಸೆಕ್ಯುಲರಿಸಂನ ಬೀದಿ ಸಂಘರ್ಷ ಮಾತ್ರ ಪುರುಷಾಧಿಪತ್ಯ ವನ್ನು ಫ್ಯಾಶಿಸಂ ಅನ್ನು ಸೋಲಿಸಬಹುದು. ಅಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್,

contributor

Similar News