ದೇವನಹಳ್ಳಿ ಭೂ ಹೋರಾಟ ತೊಡಕಿರುವುದು KIADB ಕಾನೂನಿನಲ್ಲಲ್ಲ ಕಾಂಗ್ರೆಸ್‌ನ ಕಾರ್ಪೊರೇಟ್ ಹಿತಾಸಕ್ತಿಯಲ್ಲಿ!
KIADB ಕಾಯ್ದೆಯಲ್ಲಿ ರೈತರ ಪರವಾಗಿ ಸರಕಾರ ನಿರ್ಧಾರ ತೆಗೆದುಕೊಳ್ಳಲು ಯಾವುದೇ ತೊಡಕುಗಳಿಲ್ಲ. ಹಾಗೆಯೇ ಈವರೆಗೆ ವಿವಿಧ ಮುಖ್ಯಮಂತ್ರಿಗಳು ರಿಯಲ್ ಎಸ್ಟೇಟ್ ಭ್ರಷ್ಟಾಚಾರ ಮಾಡಲು ಮಾಡಿದ ಡಿ-ನೋಟಿಫಿಕೇಶನ್ ಸಾಲುಗಳಿಗೂ ಇದು ಸೇರುವುದಿಲ್ಲ. ಈ ಅಂಶಗಳನ್ನೆಲ್ಲ ಸರಕಾರವು ಈವರೆಗೆ ಕಾರ್ಪೊರೇಟ್ ಹಿತಾಸಕ್ತಿ ಕಾಪಾಡಲು ಬಳಸಿದೆ. ಈಗಲಾದರೂ ಅದಕ್ಕೆ ಜನಪರ ವ್ಯಾಖ್ಯಾನ ಕೊಟ್ಟು ಜನಪರವಾಗಿ ಬಳಸುವ ಅವಕಾಶ ಕಾಯ್ದೆಯಲ್ಲಿಯೇ ಇದೆ.
ಬೆಂಗಳೂರು ನಗರದ ಆಸುಪಾಸಿನ ಜಮೀನುಗಳ ಮೇಲೆ ದೇಶ-ವಿದೇಶಿ ಕಾರ್ಪೊರೇಟ್ ಕಂಪೆನಿಗಳಿಗೆ, ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಕುಳಗಳಿಗೆ, ಅವರ ದಲ್ಲಾಳಿ ರಾಜಕಾರಣಿಗಳಿಗೆ ಮೊದಲಿಂದಲೂ ಮಾರಿಕಣ್ಣು. 1991ರ ನಂತರ ಚುನಾಯಿತ ಸರಕಾರಗಳೇ ಅಧಿಕೃತವಾಗಿ ದೊಡ್ಡ ಬಂಡವಾಳಿಗರ ಏಜೆಂಟರಾದ ಖಾಸಗಿ ಹೂಡಿಕೆದಾರರನ್ನು ಆಕರ್ಷಿಸಲು ದುಗ್ಗಾಣಿ ಬೆಲೆಗೆ ಸಾರ್ವಜನಿಕ ಸ್ವತ್ತನ್ನು ಮತ್ತು ವಿಶೇಷವಾಗಿ ರೈತರ ಜಮೀನುಗಳನ್ನು ಕಾರ್ಪೊರೇಟ್‌ಗಳಿಗೆ ಪರಭಾರೆ ಮಾಡುವುದೇ ಸರಕಾರದ ಯಶಸ್ಸಿನ ಮಾನದಂಡವಾಗಿಬಿಟ್ಟಿದೆ. ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಯಾವ ಸರಕಾರಗಳೂ ಈ ರೈತ ವಿರೋಧಿ ನೀತಿಗಳಿಗೆ ಹೊರತಲ್ಲ.
ಇದರ ಭಾಗವಾಗಿಯೇ, ಬೆಂಗಳೂರು ಬಳಿಯ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ಹದಿಮೂರು ಹಳ್ಳಿಗಳ ರೈತರ 1,774 ಎಕರೆ ಜಮೀನನ್ನು ಏರೋಸ್ಪೇಸ್ ಕೈಗಾರಿಕಾ ವಸಾಹತು ನಿರ್ಮಿಸಲು ಭೂ ಸ್ವಾಧೀನ ಮಾಡಿಕೊಳ್ಳಲು 2022ರಲ್ಲಿ ಬಿಜೆಪಿ ಸರಕಾರ ತನ್ನ ಭೂ ಕಬಳಿಕೆ ಸಾಧನವಾದ KIADB ಮೂಲಕ ರೈತರಿಗೆ ಪ್ರಾಥಮಿಕ ನೋಟಿಸ್ ನೀಡಿದೆ.
ಅಂದಿನಿಂದ ನಿರಂತರವಾಗಿ ಹದಿಮೂರು ಹಳ್ಳಿಗಳ ರೈತರು ಭೂ ಸ್ವಾಧೀನದ ವಿರುದ್ಧ ಆಮಿಷಗಳಿಗೆ ಬಲಿಯಾಗದೆ, ಬೆದರಿಕೆಗಳಿಗೆ ಜಗ್ಗದೆ ‘‘ಪ್ರಾಣ ಹೋದರೂ, ಕಾರ್ಪೊರೇಟ್‌ಗಳಿಗೆ ಭೂಮಿ ಬಿಟ್ಟು ಕೊಡೆವು’’ ಎಂದು ರಾಜಿರಹಿತ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ಆಗ ವಿರೋಧಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರೂ ಬೆಂಬಲಿಸಿ ತಾವು ಅಧಿಕಾರಕ್ಕೆ ಬಂದರೆ ಭೂ ಸ್ವಾಧೀನ ರದ್ದುಪಡಿಸುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಅತ್ತ ತಿರುಗಿಯೂ ನೋಡದ ಸಿದ್ದರಾಮಯ್ಯನವರ ಸರಕಾರ ಬದಲಿಗೆ 2025ರ ಫೆಬ್ರವರಿಯಲ್ಲಿ ‘ಜಾಗತಿಕ ಹೂಡಿಕೆದಾರರ ಸಮ್ಮೇಳನ’ (Global Investors Meet-GIM) ನಡೆಸಿದ ನಂತರ ಎಪ್ರಿಲ್ ತಿಂಗಳಲ್ಲಿ ದೇವನಹಳ್ಳಿ ರೈತರ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ (Final Notification) ಹೊರಡಿಸಿ ರೈತರಿಗೆ ದ್ರೋಹ ಬಗೆದಿದೆ.
ಅದರಿಂದ ಹಿಂಜರಿಯದ ರೈತರು ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದಲ್ಲದೆ, ರಾಜ್ಯದ ಹಲವಾರು ಜನಪರ ಸಂಘಟನೆಗಳು ಆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ, ಕಳೆದ ಜೂನ್ 25ರಂದು ದೇವನಹಳ್ಳಿ ಚಲೋ ನಡೆಸಿ, ಸರಕಾರ ಕೂಡಲೇ ಭೂ ಸ್ವಾಧೀನವನ್ನು ಹಿಂದೆಗೆದುಕೊಳ್ಳದಿದ್ದರೆ ಅನಿರ್ದಿಷ್ಟಕಾಲ ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿದರು. ಆದರೆ ಪೊಲೀಸರು ಸಂಜೆಯಾಗುತ್ತಿದ್ದಂತೆ ಬಲಪ್ರಯೋಗ ಮಾಡಿ ಹೋರಾಟಗಾರರನ್ನು ವಶಕ್ಕೆ ತೆಗೆದುಕೊಂಡು ಬಲವಂತದಿಂದ ಬೆಂಗಳೂರಿಗೆ ಹೊತ್ತೊಯ್ದರು.
ಮಾರನೇ ದಿನ ಜನಪರ ಕಲಾವಿದ ಪ್ರಕಾಶ್ ರಾಜ್ ಅವರ ನೇತೃತ್ವದಲ್ಲಿ ಹೋರಾಟಪರ ಸಾಹಿತಿ-ಕಲಾವಿದರನ್ನು ಭೇಟಿಯಾದ ಮುಖ್ಯಮಂತ್ರಿಗಳು ಈ ವಿಷಯದ ಬಗ್ಗೆ ಜುಲೈ 4ರಂದು ರೈತರು ಮತ್ತು ಹೊರಾಟಗಾರರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಮಾತುಕೊಟ್ಟು ಹೋರಾಟವನ್ನು ತಣಿಸಲು ನೋಡಿದರು.
ಬಣ್ಣದ ಮಾತಿನ ಸರಕಾರ-ಬಗ್ಗಲೊಲ್ಲದ ಜನತೆ
ಆದರೆ ಈ ಮಾತುಕತೆಯಾಗುತ್ತಿರುವಾಗಲೇ ಕೈಗಾರಿಕಾ ಮಂತ್ರಿ ಎಂ.ಬಿ. ಪಾಟೀಲರು ರೈತರ ಮನಒಲಿಸಿ ಭೂ ಸ್ವಾಧೀನ ಮಾಡುವುದಾಗಿಯೂ, ಹೂಡಿಕೆದಾರರು ಕೇಳಿದ ಕಡೆ ಭೂಮಿ ಕೊಡದಿದ್ದರೆ ಕೈಗಾರಿಕೆಗಳು ಬರುವುದಿಲ್ಲವೆಂದೂ, ಆಗ ರಾಜ್ಯದ ಅಭಿವೃದ್ಧಿ ಆಗುವುದಿಲ್ಲ, ಉದ್ಯೋಗಗಳು ಸೃಷ್ಟಿಯಾಗುವುದಿಲ್ಲವೆಂದೂ ಪತ್ರಿಕೆಯಲ್ಲಿ ಲೇಖನ ಬರೆದು ಸರಕಾರದ ಅಭಿಪ್ರಾಯ ಸ್ಪಷ್ಟಪಡಿಸಿದರು.
ಜೂನ್ 27ರಿಂದ ಜುಲೈ 4ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟಕ್ಕೆ ಮದ್ದತು ತೋರುತ್ತಾ ಧರಣಿ ನಡೆಯಿತು. ಸಾಹಿತಿಗಳು, ಕಲಾವಿದರು, ಕೊನೆಯ ದಿನಗಳಲ್ಲಿ ದಿಲ್ಲಿ ರೈತ ಹೋರಾಟದ ರೂವಾರಿಗಳಾದ ರಾಷ್ಟ್ರೀಯ ನಾಯಕರು ಬಂದು ರೈತರಿಗೆ ಬೆಂಬಲ ವ್ಯಕ್ತಪಡಿಸಿದರು.
ಆದರೂ ಜಗ್ಗದ ಸಿದ್ದು-ಪಾಟೀಲ್ ಸರಕಾರ ಜುಲೈ 3ರ ರಾತ್ರಿ ಹೋರಾಟಗಾರರಿಗೆ ಫೋನ್ ಮಾಡಿ ಇನ್ನು ಹತ್ತು ದಿನಗಳ ಕಾಲಾವಕಾಶ ಬೇಕೆಂದು, ಭೇಟಿಯ ಅಗತ್ಯವಿಲ್ಲವೆಂದು ಹೇಳಿಬಿಟ್ಟಿತು. ಆದರೂ ಹೋರಾಟಗಾರರ ಒತ್ತಾಯಕ್ಕೆ ಮಣಿದು ಜುಲೈ 4ರಂದು ರೈತ ನಾಯಕರನ್ನು ಭೇಟಿ ಮಾಡಿತು. ಅಂದು ಸಭೆಗೆ ಸಾವಿರಾರು ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಯುವಜನರು ಫ್ರೀಡಂ ಪಾರ್ಕ್‌ನ ಸಮಾವೇಶಕ್ಕೆ ಬಂದು ದೇವನಹಳ್ಳಿ ಭೂ ಸ್ವಾಧೀನ ಕೈಬಿಡಬೇಕೆಂಬ ಆಗ್ರಹಕ್ಕೆ ಧ್ವನಿಗೂಡಿಸಿದರು.
ಆದರೆ ಜುಲೈ 4ರಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು ರೈತರ ಅಹವಾಲುಗಳನ್ನು ಅರ್ಥಮಾಡಿಕೊಂಡು ಪೂರಕವಾಗಿ ಸ್ಪಂದಿಸುವ ಗೋಜಿಗೆ ಹೋಗಲಿಲ್ಲ. ಬದಲಿಗೆ ರೈತರನ್ನು ಭೇಟಿಯಾಗಿದ್ದೇ ಸರಕಾರದ ಪ್ರಗತಿಪರತೆ ಎಂಬಂತೆ ವರ್ತಿಸಿತು ಮತ್ತು ಮುಖ್ಯಮಂತ್ರಿಗಳು ಹೋರಾಟಕ್ಕೆ ಪೂರಕವಾಗಿ ಸ್ಪಂದಿಸದಿರಲು ಒಂದು ಪಿಳ್ಳೆ ನೆಪ, ಮತ್ತೊಂದು ಕಾರ್ಪೊರೇಟ್ ಪರ ಕಾರಣಗಳನ್ನೂ ಮುಂದಿಟ್ಟರು:
1. ಇತ್ತೀಚೆಗೆ ತಾನೇ ಆ ಭೂಮಿಗಳ ಸ್ವಾಧೀನಕ್ಕಾಗಿ Final Notification ಮಾಡಿರುವುದರಿಂದ ಭೂ ಸ್ವಾಧೀನ ರದ್ದು ಮಾಡಲು ಕಾನೂನಿನ ತೊಡಕುಗಳು ಎದುರಾಗಬಹುದು. ಆದ್ದರಿಂದ ಅದನ್ನು ನಿವಾರಿಸಿಕೊಳ್ಳಲು ಕಾಲಾವಕಾಶ ಬೇಕು.
2. ತಾವು ರೈತನ ಮಗನೇ ಆಗಿದ್ದರೂ, ರೈತರು ಕೇಳಿದ್ದನ್ನೆಲ್ಲಾ ಕೊಡಲಾಗುವುದಿಲ್ಲ, ಏಕೆಂದರೆ ಕಾನೂನಿನ ಮಿತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ.
3. ಇದರ ಜೊತೆಗೆ: ಹೂಡಿಕೆದಾರರಿಗೆ ಎಲ್ಲಿ ಬೇಕೋ ಅಲ್ಲಿ ಭೂಮಿ ಕೊಡಬೇಕು, ಇಲ್ಲದಿದ್ದರೆ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯಾಗುವುದಿಲ್ಲ ಎಂಬ ಸಿದ್ದರಾಮಯ್ಯನವರು ಹೇಳದೆ ಉಳಿಸಿದ ಅಸಲಿ ಕಾರಣಗಳನ್ನು ಕೈಗಾರಿಕಾ ಮಂತ್ರಿ ಎಂ.ಬಿ. ಪಾಟೀಲರು ಜುಲೈ 4ರ ಸಭೆಯ ನಂತರವೂ ಸ್ಪಷ್ಟವಾಗಿ ಹೇಳುತ್ತಿದ್ದಾರೆ.
ಆದರೆ, ಅಂದೇ ರೈತ ಸಮಾವೇಶದಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನ್ಯಾ. ಗೋಪಾಲಗೌಡ ಅವರೂ ಮಾತನಾಡಿ ತೊಡಕಿರುವುದು ಕಾನೂನಿನಲ್ಲಲ್ಲ. ಸರಕಾರದ ರಾಜಕೀಯ ಇಚ್ಛಾಶಕ್ತಿಯಲ್ಲಿ ಎಂದು ಸ್ಪಷ್ಟಪಡಿಸಿದರು. ನ್ಯಾ. ಗೋಪಾಲಗೌಡರು 2006ರಲ್ಲಿ ಪ. ಬಂಗಾಳದ ಎಡ ಸರಕಾರ ಕೋಲ್ಕತಾ ಬಳಿಯ ಸಿಂಗೂರ್‌ನಲ್ಲಿ ಇದೇ ರೀತಿಯಲ್ಲಿ ಸಾವಿರ ಎಕರೆ ಜಮೀನನ್ನು ರೈತರ ಆಗ್ರಹಕ್ಕೆ ವಿರುದ್ಧವಾಗಿ ವಶಪಡಿಸಿಕೊಂಡಿದ್ದಾಗ ಅದನ್ನು ಅಕ್ರಮ ಹಾಗೂ ಸಂವಿಧಾನ ವಿರೋಧಿ ಎಂದು ಘೋಷಿಸಿ ರೈತರಿಗೆ ಜಮೀನು ವಾಪಸ್ ಮಾಡುವ ಐತಿಹಾಸಿಕ ತೀರ್ಪು ನೀಡಿದ್ದರು.
ಹೀಗಾಗಿ ಸಿದ್ದು ಸರಕಾರ ಮತ್ತೆ ಹತ್ತುದಿನಗಳ ಕಾಲಾವಕಾಶ ಕೇಳಿರುವ ಕಾರಣಗಳನ್ನು ಪರಿಶೀಲಿಸಿದರೆ ಹಾಸ್ಯಾಸ್ಪದ, ಸಂದೇಹಾಸ್ಪದ ಮತ್ತು ಅನಗತ್ಯ ಎಂಬುದು ಸ್ಪಷ್ಟವಾಗುತ್ತದೆ. ಅವುಗಳನ್ನು ಮತ್ತು ಸರಕಾರದ ನೈಜ ಹಿತಾಸಕ್ತಿಗಳನ್ನು ಒಂದೊಂದಾಗಿ ಪರಿಶೀಲಿಸೋಣ.
ತೊಡಕಿರುವುದು ಕಾನೂನಿಲ್ಲಲ್ಲ!
ಸರಕಾರದ ನೆಪಗಳಲ್ಲಿ ಪ್ರಮುಖವಾದದ್ದು ಫೈನಲ್ ನೋಟಿಫಿಕೇಶನ್ ಆದಮೇಲೆ ವಶಪಡಿಸಿಕೊಂಡರೆ ಕಾನೂನು ಸಮಸ್ಯೆಗಳು ಎದುರಾಗುತ್ತವೆ ಎಂಬುದು. ಹೌದೇ?
1. KIADB ಕಾಯ್ದೆಯಲ್ಲಿ ಸರಕಾರ ಯಾವುದೇ ಸಂದರ್ಭದಲ್ಲಿ ಡಿನೋಟಿಫಿಕೇಷನ್ ಮಾಡಲು ಸರಕಾರಕ್ಕೆ ಪರಮಾಧಿಕಾರವಿದೆ:
(ಅ): ಮೊದಲನೆಯದಾಗಿ KIADB ಕಾನೂನಿನಲ್ಲಿ ಫೈನಲ್ ನೋಟಿಫಿಕೇಶನ್ ಆದಮೇಲೂ ಸರಕಾರವೇ ಭೂ ಸ್ವಾಧೀನ ಕೈಬಿಡಲು ಅವಕಾಶಗಳಿವೆ. ಏಕೆಂದರೆ ರಾಜ್ಯದ ಜನರು ಆಯ್ಕೆ ಮಾಡಿರುವ ಸರಕಾರಕ್ಕೆ KIADB ಮೇಲೆ ಪರಮಾಧಿಕಾರವಿದೆ.
KIADB ಸರಕಾರದ ಕೂಸೇ ವಿನಾ, ಸರಕಾರದ ತಾಯಿಯಲ್ಲ ಮತ್ತು ಸರಕಾರದ ತಾಯಿ ಅದನ್ನು ಆಯ್ಕೆ ಮಾಡಿದ ಜನರು.
(ಆ): ಎರಡನೆಯದಾಗಿ KIADB ಕಾಯ್ದೆಯ ಸೆಕ್ಷನ್ 4 ಹೀಗೆ ಹೇಳುತ್ತದೆ:
4. Alteration of industrial area.- The State Government may at any time, by notification, exclude from any industrial area, any area, or include therein any additional area, as may be specified in such notification.
ಅಂದರೆ ರಾಜ್ಯ ಸರಕಾರವೂ ಯಾವುದೇ ಸಮಯದಲ್ಲಿ (ಯಾವುದೇ ಸಮಯದಲ್ಲಿ ಅಂದರೆ ಪ್ರಾಥಮಿಕ ಹಾಗೂ ಫೈನಲ್ ನೋಟಿಫಿಕೇಶನ್ ಆಗಿರುವ ಅಥವಾ ಆಗುತ್ತಿರುವ ಸಂದರ್ಭದಲ್ಲೂ ಎಂದೇ ಅರ್ಥವಲ್ಲವೇ ) ಒಂದು ಅಧಿಸೂಚನೆಯನ್ನು ಹೊರಡಿಸಿ ಯಾವುದೇ ಪ್ರದೇಶವನ್ನು ಕೈಗಾರಿಕಾ ಪ್ರದೇಶದಿಂದ ಹೊರಗಿಡಬಹುದು.
(ಇ) ಮೂರನೆಯದಾಗಿ KIADB ಕಾಯ್ದೆಯ ಸೆಕ್ಷನ್ 32(3): ಹೀಗೆ ಹೇಳುತ್ತದೆ :
32 (3): If any land placed at the disposal of the Board under sub-section (1), is required at any time thereafter by the State Government, the Board shall replace it at the disposal of the State Government upon such terms and conditions as may be mutually agreed upon.
ಅಂದರೆ ಸೆಕ್ಷನ್ 1ರ ಪ್ರಕಾರ KIADBಗೆ ವರ್ಗಾಯಿಸಿದ ಯಾವುದೇ ಭೂಮಿಯನ್ನು (ಸರಕಾರ KIADBಗೆ ಭೂಮಿ ವರ್ಗಾವಣೆ ಮಾಡುವುದು ಫೈನಲ್ ನೋಟಿಫಿಕೇಶನ್ ಆದ ಮೇಲೆಯೇ ಅಲ್ಲವೇ?), ರಾಜ್ಯ ಸರಕಾರ ತನಗೆ ಅಗತ್ಯವಿದ್ದಾಗ ಸೂಕ್ತ ಒಡಂಬಡಿಕೆಯ ಮೇರೆಗೆ ವಾಪಸ್ ಪಡೆಯಬಹುದು.
ಈ ) ಎಲ್ಲಕ್ಕಿಂತ ಮುಖ್ಯವಾಗಿ ಏIಂಆಃ ಕಾಯ್ದೆಯ ಸೆಕ್ಷನ್ 37 ಹೀಗೆ ಹೇಳುತ್ತದೆ:
37. Withdrawal of area or estate or part thereof.- Where the State Government is satisfied that in respect of any industrial area or any part thereof, the purpose for which the Board was established under this Act has been substantially achieved so as to render the continued existence of such area or part thereof under the Board unnecessary, the State Government may, by notification, declare that such industrial area, or part thereof, has been removed from the jurisdiction of the Board. The State Government may also make such other incidental arrangements for the administration of such area or part thereof as the circumstances necessitate.
ಅಂದರೆ ಯಾವುದೇ ಪ್ರದೇಶವನ್ನು ಕೈಗಾರಿಕಾ ಪ್ರದೇಶವೆಂದು ಈ ಕಾಯ್ದೆಯಡಿ ಘೋಷಿಸಿದ ನಂತರ (ಅದು ಫೈನಲ್ ನೋಟಿಫಿಕೇಶನ್ ನಂತರವೇ ಅಲ್ಲವೇ?) ಅಥವಾ ಅದರ ಉಪಭಾಗಗಳು ಕೈಗಾರಿಕಾ ಪ್ರದೇಶವೆಂಬ ಘೋಷಣೆಯ ಉದ್ದೇಶವನ್ನು ಪೂರೈಸಿದೆ ಎಂದು ಭಾವಿಸಿದಲ್ಲಿ ಮತ್ತು ಆ ಕಾರಣದಿಂದ ಆ ಭೂಮಿಯು KIADB ಅಡಿಯಲ್ಲಿರುವುದು ಅನಗತ್ಯ ಎಂದು ತೋರಿದಲ್ಲಿ ಆ ಪ್ರದೇಶವನ್ನು KIADB ವ್ಯಾಪ್ತಿಯಿಂದ ಹೊರತೆಗೆಯಬಹುದು..
(ಉ ) ಹಾಗೆಯೇ ಸೆಕ್ಷನ್ 40ರ ಪ್ರಕಾರ KIADB ಅನುಸರಿಸಬೇಕಾದ ನೀತಿ ನಿಯಮಗಳನ್ನೆಲ್ಲಾ ರೂಪಿಸುವುದು ಜನರಿಂದ ಆಯ್ಕೆಯಾದ ರಾಜ್ಯ ಸರಕಾರವೇ..
40. Power to make rules.- (1) The State Government, after previous publication, may, by notification, make rules to carry out the purposes of this Act.
ಹೀಗಾಗಿ KIADB ಕಾಯ್ದೆಯಲ್ಲಿ ರೈತರ ಪರವಾಗಿ ಸರಕಾರ ನಿರ್ಧಾರ ತೆಗೆದುಕೊಳ್ಳಲು ಯಾವುದೇ ತೊಡಕುಗಳಿಲ್ಲ. ಹಾಗೆಯೇ ಈವರೆಗೆ ವಿವಿಧ ಮುಖ್ಯಮಂತ್ರಿಗಳು ರಿಯಲ್ ಎಸ್ಟೇಟ್ ಭ್ರಷ್ಟಾಚಾರ ಮಾಡಲು ಮಾಡಿದ ಡಿ-ನೋಟಿಫಿಕೇಶನ್ ಸಾಲುಗಳಿಗೂ ಇದು ಸೇರುವುದಿಲ್ಲ. ಈ ಅಂಶಗಳನ್ನೆಲ್ಲ ಸರಕಾರವು ಈವರೆಗೆ ಕಾರ್ಪೊರೇಟ್ ಹಿತಾಸಕ್ತಿ ಕಾಪಾಡಲು ಬಳಸಿದೆ. ಈಗಲಾದರೂ ಅದಕ್ಕೆ ಜನಪರ ವ್ಯಾಖ್ಯಾನ ಕೊಟ್ಟು ಜನಪರವಾಗಿ ಬಳಸುವ ಅವಕಾಶ ಕಾಯ್ದೆಯಲ್ಲಿಯೇ ಇದೆ.
2.KIADB ಭೂ ಸ್ವಾಧೀನ ಹಿಂದೆಗೆದುಕೊಳ್ಳುವಾಗ ಎದುರಿಸುವ ಸಾಮಾನ್ಯ ಸಮಸ್ಯೆ ದೇವನಹಳ್ಳಿ ಪ್ರಕರಣದಲ್ಲಿಲ್ಲ:
KIADB ಸ್ವಾಧೀನ ಪಡಿಸಿಕೊಂಡ ಭೂಮಿಗಳನ್ನು ಡಿನೋಟಿಫೈ ಮಾಡುವಾಗ ಸರಕಾರ ಸಮಸ್ಯೆಗಳನ್ನು ಎದುರಿಸುವುದು ಬೇರೆಯೇ ಆದ ಸಂದರ್ಭಗಳಲ್ಲಿ. ಉದಾಹರಣೆಗೆ:
-ಈಗಾಗಲೇ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಉದ್ದಿಮೆಗಳಿಗೆ ಕೊಟ್ಟುಬಿಟ್ಟಿದ್ದಾಗ.
-ಸ್ವಾಧೀನ ಪಡಿಸಿಕೊಂಡ ಭೂಮಿಗಳಿಗೆ ಈಗಾಗಲೇ ಪರಿಹಾರ ವಿತರಿಸಿಬಿಟ್ಟಿದ್ದಾಗ.
-ಮತ್ತು ಮೇಲಿನ ಎರಡು ವರ್ಗಗಳಲ್ಲಿ ಯಾರಾದರೂ ಕೋರ್ಟಿಗೆ ಹೋದಾಗ..
ದೇವನಹಳ್ಳಿಯ ಪ್ರಕರಣಗಳಲ್ಲಿ ಮೇಲಿನ ಮೂರೂ ಸಮಸ್ಯೆಗಳಿಲ್ಲ.
3. KIADBಯು ಪ್ರೈಮರಿ ಮತ್ತು ಫೈನಲ್ ನೋಟಿಫಿಕೇಶನ್ ಮಾಡಿದ ನಂತರವೂ ಜಮೀನನ್ನು ಡಿನೋಟಿಫೈ ಮಾಡಿದ ಹತ್ತಾರು ಉದಾಹರಣೆಗಳಿವೆ:
KIADB ಇತಿಹಾಸದಲ್ಲಿ ಕಳೆದ ಹತ್ತುವರ್ಷಗಳಲ್ಲಿ ಸಾವಿರಾರು ಎಕರೆ ಭೂಮಿಯನ್ನು ನೋಟಿಫೈ ಮಾಡಿ ಮತ್ತೆ ಡಿನೋಟಿಫೈ ಮಾಡಿ ರೈತರಿಗೆ ವಾಪಸ್ ಮಾಡಲಾಗಿದೆ. ಅವುಗಳಲ್ಲಿ :
-ಬಳ್ಳಾರಿಯ POSCO
-ಬೆಂಗಳೂರು ಬಳಿಯ ನಂದಗುಡಿ ಬಳಿಯ ಜಮೀನುಗಳು
-ಮಂಗಳೂರಿನಲ್ಲಿ SEZಗಾಗಿ ವಶಪಡಿಸಿಕೊಂಡ ಜಮೀನುಗಳು, ಹಾಗೂ
-ಬೆಂಗಳೂರು-ಮೈಸೂರು ಕಾರಿಡಾರ್‌ಗಾಗಿ ವಶಪಡಿಸಿಕೊಂಡ ಪ್ರಕರಣಗಳು... ಪ್ರಮುಖವಾದವು.
ಅವುಗಳಲ್ಲಿ ಬಹುಪಾಲು ಪ್ರಾಥಮಿಕ ನೋಟಿಫಿಕೇಶನ್ ಆದಮೇಲೆ ಭುಗಿಲೆದ್ದ ರೈತ ಪ್ರತಿರೋಧಗಳಿಗೆ ಮಣಿದು ಫೈನಲ್ ನೋಟಿಫಿಕೇಶನ್ ಮಾಡದೆ ಭೂಮಿ ವಾಪಸ್ ಮಾಡಿದ ಪ್ರಸಂಗಗಳು.