ವಿಜಯಪುರ: ಸೆ.4 ರಂದು ಶಾಂತಿಯುತ ಮೀಲಾದುನ್ನಬಿ ಮೆರವಣಿಗೆ
ವಿಜಯಪುರ : ಶಾಂತಿ, ಮಾನವೀಯತೆ ಸಂದೇಶ ಸಾರಿದ ಪ್ರವಾದಿ ಹಝ್ರತ್ ಮುಹಮ್ಮದ್ ಪೈಗಂಬರ್ ಸ.ಅ.) ರ ಜನ್ಮ ದಿನಾಚರಣೆಯ ಪ್ರಯುಕ್ತ ಸೆ. 4 ರಂದು ಸಂಜೆ ಈದ್ ಮಿಲಾದ್ ಶಾಂತಿಯುತ ಮೆರವಣಿಗೆ ನಡೆಯಲಿದೆ ಎಂದು ಹಿರಿಯ ಮುಖಂಡ ಹಾಗೂ ನ್ಯಾಯವಾದಿ ಎಲ್.ಎಲ್. ಉಸ್ತಾದ್ ತಿಳಿಸಿದರು.
ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಜುಮನ್ ಇಸ್ಲಾಂ ಹಾಗೂ ಮೈನಾರಿಟಿ ಮುಸ್ಲಿಂ ಡೆವಲಪ್ಟೆಂಟ್ ಕಮಿಟಿ ವತಿಯಿಂದ ಈ ಮೆರವಣಿಗೆ ನಡೆಯಲಿದೆ.
ಜಗತ್ತಿಗೆ ಶಾಂತಿಯ ಸಂದೇಶ ನೀಡಿರುವ ನೀಡಿರುವ ಪ್ರವಾದಿ ಹಝ್ರತ್ ಮುಹಮ್ಮದ್ ಪೈಗಂಬರ್ (ಸ.ಅ.) ರ 1500 ನೇ ಈದ್ ಮಿಲಾದ್ ಆಚರಣೆ ಇದಾಗಿದ್ದು, ಈ ಹಿನ್ನೆಲೆಯಲ್ಲಿ ಈ ಅರ್ಥಪೂರ್ಣ ಕಾರ್ಯಕ್ರಮ ನಡೆಯಲಿದೆ ಎಂದರು.
ಹಕೀಂ ಚೌಕದಿಂದ ಆರಂಭವಾಗುವ ಯಾತ್ರೆ ಐತಿಹಾಸಿಕ ಜಾಮೀಯಾ ಮಸೀದಿ ಬಳಿ ಇರುವ ಝಂಡಾ ಕಟ್ಟೆ, ಬಾರಾ ಕಮಾನ್, ಅತಾವುಲ್ಲಾ ಸರ್ಕಲ್, ಅಷ್ಟಪೈಲ ಬಂಗ್ಲೆ, ಬಾಗಲಕೋಟೆ ಕ್ರಾಸ್, ಹಝ್ರತ್ ಟಿಪ್ಪು ಸುಲ್ತಾನ್ ಸರ್ಕಲ್, ಜಗಜ್ಯೋತಿ ಬಸವೇಶ್ವರ ಸರ್ಕಲ್, ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕಲ್ ಸರ್ಕಲ್, ಸಂತ ಶ್ರೇಷ್ಠ ಕನಕದಾಸ ಸರ್ಕಲ್ ಮೂಲಕ ಸಾಗುತ್ತಾ ಅಸಾರ್ ಮಹಲ್ ತಲುಪಲಿದೆ. ಕೇವಲ ಪವಿತ್ರ ನಅತ್ ಹಾಗೂ ದರೂದ್ ಷರೀಫ್ ಓದುತ್ತಾ ಮೆರವಣಿಗೆ ಸಾಗಲಿದ್ದು, ಯಾವುದೇ ತೆರನಾದ ಡಿಜೆ ಸದ್ದು, ಕರ್ಕಶ ಶಬ್ದ ಇರುವುದಿಲ್ಲ ಎಂದರು.
ಎಲ್ಲಾ ದರ್ಗಾದ ಸಜ್ಜಾದೆ ನಶೀನ್ ಅವರು, ರಾಜಕೀಯ ಗಣ್ಯರು, ಸಾಮಾಜಿಕ ಧುರೀಣರು ಪಾಲ್ಗೊಳ್ಳಲಿದ್ದಾರೆ. ಪ್ರವಾದಿ ಮುಹಮ್ಮದ್ (ಸ.ಅ.) ರವರ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸುವುದಕ್ಕಾಗಿ ಈ ಮೆರವಣಿಗೆ ನಡೆಯಲಿದ್ದು, ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ಪರ ಅಥವಾ ವಿರೋಧವೂ ಅಲ್ಲ. ಭಾಗವಹಿಸುವ ಪ್ರತಿಯೊಬ್ಬರೂ ಆದಷ್ಟು ಬಿಳಿ ವಸ್ತ್ರಧಾರಿಗಳು ಆಗಿರಬೇಕೆಂದು ಕೋರಲಾಗಿದೆ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಮುಖಂಡರಾದ ಬಂದೇನವಾಝ್ ಮಅಬರಿ, ಆಪ್ತಾಬ್ ಖಾದ್ರಿ ಇನಾಮ್‌ದಾರ್, ಝಮೀರ್ ಭಕ್ಷ್, ಜಮೀಲ್ ಬಾಂಗಿ, ಗೌಸ್ ಅಹ್ಮದ್ ಹವಾಲ್ದಾರ್, ಇರ್ಫಾನ್ ಶೇಖ್, ಹಾಫಿಝ್ ಸಿದ್ದೀಕಿ ಮುಂತಾದವರು ಇದ್ದರು.