×
Ad

ವಿಜಯಪುರ | ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜು ಶೋಷಣೆಗೆ ದಾರಿ : ಸಚಿವ ಶಿವಾನಂದ ಪಾಟೀಲ್‌

Update: 2025-08-28 18:14 IST

ವಿಜಯಪುರ : ವಿಜಯಪುರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯು ಜನರ ಶೋಷಣೆಗೆ ಕಾರಣವಾಗುತ್ತದೆಯೇ ಹೊರತು ಜನರಿಗೆ ಯಾವ ರೀತಿಯ ಪ್ರಯೋಜನ ಆಗುವುದಿಲ್ಲ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್‌ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯ ಅನಿವಾರ್ಯತೆಯೇ ಇಲ್ಲ, ಒಂದು ವೇಳೆ ಈ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಯಾದರೆ ಅದು ಒಂದು ರೀತಿ ಜನರ ಶೋಷಣೆಗೆ ಕಾರಣವಾಗುತ್ತದೆ. ಈ ನಿರ್ಧಾರವನ್ನು ಸಚಿವ ಸಂಪುಟ ಸಭೆಯಲ್ಲಿಯೂ ವಿರೋಧಿಸಿದ್ದೇನೆ, ಮುಖ್ಯಮಂತ್ರಿಗಳಿಗೂ ಸಹ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿರುವೆ ಎಂದರು.

ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿಯೇ ಸಾಕಷ್ಟು ಜಾಗ ಹಾಗೂ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಅನೇಕ ಪೂರಕ ಸೌಲಭ್ಯಗಳನ್ನು ಕಲ್ಪಿಸಿದ್ದೇನೆ, ನೂರಾರು ಎಕರೆ ಜಾಗ, ಟ್ರಾಮಾ ಸೆಂಟರ್, ಕ್ಯಾನ್ಸರ್ ಸೆಂಟರ್ ಹೀಗೆ ಎಲ್ಲವೂ ಇದೆ, ಹೀಗಿರುವಾಗ ಖಾಸಗಿಯವರೆಗೆ ಮಣೆ ಹಾಕುವ ಅವಶ್ಯಕತೆಯೇ ಇಲ್ಲ ಎಂದರು.

ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಲು ಸ್ಥಾಪನೆ ಕೈಬಿಟ್ಟು ಸರಕಾರಿ ವೈದ್ಯಕೀಯ ಕಾಲೇಲು ಸ್ಥಾಪನೆಯ ವಿಷಯವಾಗಿ ಈ ಹಿಂದೆಯೂ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ಪತ್ರ ಬರೆದಿದ್ದೇನೆ, ಅವಶ್ಯಕತೆ ಇದ್ದರೆ ಇನ್ನೊಮ್ಮೆ ಪತ್ರ ಬರೆಯುವೆ ಎಂದರು.

ನಾನು ಆರೋಗ್ಯ ಸಚಿವನಾಗಿದ್ದ ಸಂದರ್ಭದಲ್ಲಿ ಟ್ರಾಮಾ ಸೆಂಟರ್, 300 ಹಾಸಿಗೆಯುಳ್ಳ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್ ಸೆಂಟರ್ ಎಲ್ಲವೂ ಆರಂಭಿಸಲು ದಿವ್ಯ ಸಂಕಲ್ಪ ಮಾಡಿ ಯಶಸ್ವಿಯೂ ಆಗಿದೆ. ಆದರೆ ಅದರ ಕಾರ್ಯಾರಂಭಕ್ಕೆ ಸರಕಾರಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬ ನೋವು ನನ್ನನ್ನು ಈಗಲೂ ಕಾಡುತ್ತದೆ. ನನಗೆ ಕ್ರೆಡಿಟ್ ಬರುವುದನ್ನು ತಪ್ಪಿಸಲು ಸಹ ಈ ರೀತಿ ವಿಳಂಬವಾಗುತ್ತಿದೆಯೇನೋ ಎಂದು ಸಹ ನೋವಾಗುತ್ತದೆ. ಆದರೆ ನಾನು ಕ್ರೆಡಿಟ್‌ಗಾಗಿ ಮಾಡಿಲ್ಲ, ಜನರ ಒಳಿತಿಗಾಗಿ ಇದನ್ನು ಮಾಡಿದ್ದೇನೆ ಎಂದರು.

ಏಮ್ಸ್ ತನ್ನಿ :

ನೀವು ಗೋಳಗುಮ್ಮಟವಂತೂ ಕಟ್ಟಲು ಆಗಲ್ಲ, ಕೊನೆಪಕ್ಷ ಏಮ್ಸ್ ಕಾಲೇಜು ವಿಜಯಪುರದಲ್ಲಿ ಸ್ಥಾಪನೆಯಾಗುವಂತೆ ಮಾಡಲು ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡಿ ಎಂದು ಸಚಿವ ಶಿವಾನಂದ ಪಾಟೀಲ್‌, ಸಂಸದ ರಮೇಶ್‌ ಜಿಗಜಿಣಗಿ ಅವರಿಗೆ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News