ವಿಜಯಪುರ | ಮನಗೂಳಿ ಕೆನರಾ ಬ್ಯಾಂಕ್ ಕಳವು ಪ್ರಕರಣ : ಬಂಗಾರ ಹಂಚಿಕೆಯಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಆರೋಪಿಸಿ ಬ್ಯಾಂಕ್‌ಗೆ ಗ್ರಾಹಕರಿಂದ ಮುತ್ತಿಗೆ
ವಿಜಯಪುರ : ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಬ್ಯಾಂಕ್ ದರೋಡೆ ಪ್ರಕರಣವಾಗಿರುವ ಮನಗೂಳಿ ಕೆನರಾ ಬ್ಯಾಂಕ್ ಶಾಖೆಯಲ್ಲಿ ಚಿನ್ನ ಕಳೆದುಕೊಂಡಿರುವ ಗ್ರಾಹಕರು ಪರಿಹಾರ ಹಣದಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಆರೋಪಿಸಿ, ಗ್ರಾಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಕಳೆದ ಮೇ.25 ರಂದು ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕಳ್ಳತನ ನಡೆದಿತ್ತು. ಕೋಟ್ಯಂತರ ರೂ. ಮೌಲ್ಯದ ಚಿನ್ನ ಕಳುವಾಗಿತ್ತು. ಈಗ ಚಿನ್ನ ಕಳೆದುಕೊಂಡಿರುವ ಗ್ರಾಹಕರು ತಮಗೆ ಕಡಿಮೆ ಪರಿಹಾರ ಧನ ಪಾವತಿಸಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೆ, ಬ್ಯಾಂಕ್‌ನಲ್ಲಿ ಇರಿಸಿದ್ದ ಚಿನ್ನಕ್ಕೆ ಸರಿಸಮಾನದ ಮಾರುಕಟ್ಟೆ ದರ ನೀಡುವಂತೆ ಪಟ್ಟು ಹಿಡಿದ್ದಾರೆ. ಆದರೆ ಪ್ರತಿ 10 ಗ್ರಾಂಗೆ 92 ಸಾವಿರ ರೂ. ಮಾತ್ರ ನೀಡುತ್ತಿದ್ದಾರೆ, ಆದರೆ ಮಾರುಕಟ್ಟೆ ದರ ಇದಕ್ಕಿಂತ ಹೆಚ್ಚಿದೆ. ಹೀಗಾಗಿ ಮಾರುಕಟ್ಟೆ ದರ ಆಧರಿಸಿ ಪರಿಹಾರ ನೀಡಿ ಎಂದು ಒತ್ತಾಯಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೆನರಾ ಬ್ಯಾಂಕ್ ಎಜಿಎಂಗಳಾದ ಜಮೀರ್, ಸುರೇಶ ಪರ್ವತೀಕರ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದರು. ಆಗ ಈ ಅಧಿಕಾರಿಗಳನ್ನು ಸಹ ಗ್ರಾಹಕರು ತರಾಟೆಗೆ ತೆಗೆದುಕೊಂಡರು. ನಮಗೆ ನ್ಯಾಯ ಕೊಡಿಸಿ, ಅನ್ಯಾಯ ಮಾಡಬೇಡಿ ಎಂದರು.
ಘಟನಾ ಸ್ಥಳದಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಡಿವೈಎಸ್‌ಪಿ ಟಿ.ಎಸ್. ಸುಲ್ಫಿ, ಸಿಪಿಐ ರಮೇಶ ಅವಜಿ, ಪಿಎಸ್‌ಐ ಶ್ರೀಕಾಂತ ಕಾಂಬಳೆ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದರು.
ದರೋಡೆ ಪ್ರಕರಣವನ್ನು ವಿಜಯಪುರ ಪೊಲೀಸರು ಭೇದಿಸಿ ಆರೋಪಿಗಳಿಂದ ಕಳ್ಳತನವಾಗಿದ್ದ ನಗದು ಬಂಗಾರವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಗ್ರಾಹಕರ ಬಂಗಾರವನ್ನು ಮರಳಿಸುವಲ್ಲಿ ಬ್ಯಾಂಕ್ ನವರು ಬಂಗಾರದ ವೆಚ್ಚವನ್ನ ಕಡಿತಗೊಳಿಸಿ ಹಣ ವರ್ಗಾಯಿಸುತ್ತಿದ್ದಾರೆ. ಇದರಿಂದ ನಮಗೆ ತುಂಬಾ ನಷ್ಟವಾಗುತ್ತದೆ. ನಮಗೆ ಹಣದ ಬದಲಿಗೆ ನಮ್ಮ ಬಂಗಾರವನ್ನೇ ಮರಳಿಸಿ ಎಂದು ಗ್ರಾಹಕರು ಬ್ಯಾಂಕ್ ತೆರಯಲು ಬಿಡದೆ ಬ್ಯಾಂಕ್ ಮುಂದೆ ಪಟ್ಟು ಹಿಡಿದಿದ್ದರು.