×
Ad

ತುಬಚಿ ಬಬಲೇಶ್ವರ ಯೋಜನೆ | ಹಂಚಿಕೆಯಾದ ನೀರಿನ ಗರಿಷ್ಠ ಸದ್ಭಳಕೆಗೆ 0.8 ಟಿಎಂಸಿ ಸಾಮರ್ಥ್ಯದ ಜಲಸಂಗ್ರಹಗಾರ ನಿರ್ಮಾಣ : ಎಂ.ಬಿ.ಪಾಟೀಲ್‌

Update: 2025-11-02 19:42 IST

ವಿಜಯಪುರ : ತುಬಚಿ ಬಬಲೇಶ್ವರ ಯೋಜನೆಯಡಿ ಹಂಚಿಕೆಯಾದ ನಮ್ಮ ಪಾಲಿನ ನೀರನ್ನು ಗರಿಷ್ಠ ಮಟ್ಟದಲ್ಲಿ ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಾಬಾನಗರದ ಹತ್ತಿರದಲ್ಲಿರುವ ಸರಕಾರಿ ಜಮೀನಿನಲ್ಲಿ ಹೆಚ್ಚಿನ ಸಾಮರ್ಥ್ಯವುಳ್ಳ 0.8 ಟಿಎಂಸಿ ಜಲಸಂಗ್ರಹಗಾರ ನಿರ್ಮಾಣ ಮಾಡಲು ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್‌ ಹೇಳಿದರು.

ತಿಕೋಟಾ ತಾಲೂಕಿನ ಬಾಬಾನಗರ ಹತ್ತಿರವಿರುವ ಉದ್ದೇಶಿತ ಯೋಜನಾ ಪ್ರದೇಶಕ್ಕೆ ಅಧಿಕಾರಿಗಳು, ರೈತ ಮುಖಂಡರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಅವರು, ಜಲಸಂಗ್ರಹಗಾರ ನಿರ್ಮಾಣಕ್ಕೆ ಎಲ್ಲರ ಸಲಹೆ ಸೂಚನೆಗಳನ್ನು ಪಡೆದುಕೊಂಡು ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದರೂ ಸರಿಪಡಿಸಿಕೊಂಡು ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ಈಗಾಗಲೇ ನಾವು ಕೇವಲ ನಮ್ಮ ಪಾಲಿನ 2 ಟಿಎಂಸಿ ನೀರು ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಎಫ್ಐಸಿ ಆದ ನಂತರವೂ ಸಹ ಕೇವಲ 3 ಟಿಎಂಸಿ ನೀರು ಮಾತ್ರ ಬಳಕೆಯಾಗುತ್ತದೆ. ಹಾಗಾಗಿ ಉಳಿದ 2.5 ಟಿಎಂಸಿ ನೀರನ್ನು  ಶೇಖರಿಸಿಕೊಂಡು ಗರಿಷ್ಠ ಮಟ್ಟದ ನೀರನ್ನು ಬಳಕೆಗೆ ಮಾಡುವ ನಿಟ್ಟಿನಲ್ಲಿ 0.8 ಟಿಎಂಸಿ ಜಲಸಂಗ್ರಹಗಾರ ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಬೆಳಗಾವಿ ವೃತ್ತದ ಅಧೀಕ್ಷಕ ಅಭಿಯಂತರ ಬಿ.ಆರ್.ರಾಠೋಡ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಂಬಣ್ಣ, ನೀರಾವರಿ ತಜ್ಞ ಡಾ.ಹುಗ್ಗಿ ಸೇರಿದಂತೆ ವಿವಿಧ ಅಧಿಕಾರಿಗಳು, ರೈತ ಮುಖಂಡರು, ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News