79ನೇ ಸ್ವಾತಂತ್ರೋತ್ಸವ ದಿನಾಚರಣೆ | ಧ್ವಜಾರೋಹಣ ನೆರವೇರಿಸಿದ ಸಚಿವ ಎಂ.ಬಿ.ಪಾಟೀಲ್
ವಿಜಯಪುರ : ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣದ ಬಳಿಕ ಸಚಿವರು ಪಥ ಸಂಚಲನ ವೀಕ್ಷಿಸಿದರು. ಸಶಸ್ತ್ರ ಪಡೆಗಳು, ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ಮಾಡಿದರು.
ನಂತರ ಮಾತನಾಡಿದ ಸಚಿವರು, ಸ್ವಾತಂತ್ರ್ಯವು ನಮ್ಮ ಹಿರಿಯರ ನಿಸ್ವಾರ್ಥ, ತ್ಯಾಗ, ಸಂಕಲ್ಪ ಮತ್ತು ಹೋರಾಟಗಳ ಫಲವಾಗಿದೆ. ಅವರು ಮಾಡಿದ ಹೋರಾಟದಿಂದ ಇಂದು ನಾವೆಲ್ಲರೂ ಸುಖವಾಗಿದ್ದೇವೆ. ಇದನ್ನು ನಾವು ಎಂದಿಗೂ ಮರೆಯದೆ, ಆ ಹಿರಿಯರಿಗೆ ಕೃತಜ್ಞರಾಗಿರಬೇಕು ಮತ್ತು ಈ ಸಂದೇಶವನ್ನು ನಮ್ಮ ಕಿರಿಯ ತಲೆಮಾರಿಗೂ ಮುಟ್ಟಿಸಬೇಕು. ಇದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು
ಅರಿವೇ ಗುರು ಮತ್ತು ಕಾಯಕವೇ ಕೈಲಾಸ ಎಂಬ ತತ್ವಗಳೊಂದಿಗೆ ಸಮಷ್ಠಿ ಭಾವದಲ್ಲಿ ನಂಬಿಕೆಯಿಟ್ಟು ಸಕಲ ಜೀವಿಗಳಿಗೆ ಲೇಸನ್ನೇ ಬಯಸಿದ ಬಸವಾದಿ ಶರಣರು, ಸಂತರು, ಸೂಫಿಗಳು, ದಾರ್ಶನಿಕರು, ಸಮಾಜ ಸುಧಾರಕರು, ಸಾಂಸ್ಕೃತಿಕ ಹರಿಕಾರರು ಮತ್ತು ಶೂರ ಸೇನಾನಿಗಳು ಹಾಗೂ ಅಪ್ರತಿಮ ರಾಷ್ಟ್ರಭಕ್ತರು ಭಾರತಾಂಬೆಗೆ ನೀಡಿದ ಕೊಡುಗೆಗಳು ಅಜರಾಮರ, ಆದ್ದರಿಂದ ಅವರೆಲ್ಲರಿಗೂ ಈ ವೇದಿಕೆಯ ಮೂಲಕ ಗೌರವ ನಮನಗಳನ್ನು ಅರ್ಪಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪಾಲಿಕೆ ಮೇಯರ್ ಎಂ.ಎಸ್ ಕರಡಿ, ಉಪಮೇಯರ್ ಸುಮಿತ್ರಾ ಜಾಧಾವ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಕಾಂತಾ ನಾಯಕ, ಕನ್ನಾನ ಮುಶ್ರೀಫ್, ಜಿಲ್ಲಾಧಿಕಾರಿ ಆನಂದ ಕೆ, ಜಿಲ್ಲಾ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಸಿಇಓ ರಿಷಿ ಆನಂದ, ಪಾಲಿಕೆ ಆಯುಕ್ತ ವಿಜಯ ಮೇಕ್ಕಳಿಕ್ಕಿ ಮುಂತಾದವರು ಇದ್ದರು.