ಬಿಜೆಪಿ ಸರ್ಕಾರ ಪಂಚಮಸಾಲಿ ಸಮಾಜಕ್ಕೆ ಟೋಪಿ ಹಾಕಿದೆ: ಸಿಎಂ ಸಿದ್ದರಾಮಯ್ಯ
ವಿಜಯಪುರ: ಪ್ರಜಾಪ್ರಭುತ್ವ ದಲ್ಲಿ ಹೋರಾಟಕ್ಕೆ ತಕರಾರು ಇಲ್ಲ. ಆದರೆ ಪಂಚಮಸಾಲಿ ಹೋರಾಟ ಸಂವಿಧಾನ ಪರವಾಗಿರಬೇಕು.ಶಾಂತಿಯುತವಾಗಿ ಹೋರಾಟ ಮಾಡಬೇಕು.ಕಾನೂನು ಕೈಗೆ ತೆಗೆದುಕೊಂಡ್ರೆ ಸರ್ಕಾರ ಸುಮ್ಮನಿರಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಬಿಎಲ್ ಡಿ ಗೆಸ್ಟ್ ಹೌಸ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಇದೆಲ್ಲ ಮಾಡಿದ್ದು ಬಿಜೆಪಿ ಸರ್ಕಾರದವರು. 2ಡಿ ಮೀಸಲಾತಿ ಕೊಡುವ ಮೂಲಕ ಬಿಜೆಪಿ ಸರ್ಕಾರ ಪಂಚಮಸಾಲಿ ಸಮಾಜಕ್ಕೆ ಟೋಪಿ ಹಾಕಿದೆ. ಆಗ ಯಾಕೆ ಹೋರಾಟ ಮಾಡಿಲ್ಲ. ಹೈಕೋರ್ಟ್ ಗೆ ಅಫಿಡವಿಟ್ ಹಾಕಿದ್ಯಾರು. ಇದೆ ಸ್ವಾಮೀಜಿಗಳು ಇದ್ರಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿ ಅವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ವರದಿ ಕೊಟ್ಟಿದ್ದಾರೆ. 2ಎ 2ಬಿ ಕೆಟಗೆರಿಯಲ್ಲಿ ಯಾವುದೂ ಸೇರಿಸಬೇಡಿ ಯಾವುದೂ ತೆಗೆಯಬೇಡಿ ಅಂತ ಇದೆ. ವರದಿ, ಕಾನೂನು ಪಾಲಿಸುವುದು ಸರ್ಕಾರದ ಜವಾಬ್ದಾರಿ. ಪರೋಕ್ಷವಾಗಿ ಪಂಚಮಸಾಲಿ ಸಮಾಜಕ್ಕೆ 2ಎ ಕೊಡುವುದು ಡೌಟ್ ಎಂದ ಸಿಎಂ, ಸುಪ್ರೀಂ ಕೋರ್ಟ್ ತೀರ್ಪು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ನಾನು ಮೂರು ಜನ ಮಂತ್ರಿಗಳನ್ನು ಕಳಿಸಿದ್ದೆ. ಅವರು ಪ್ರತಿಭಟನಾಕಾರನ್ನು ಸಿಎಂ ಜೊತೆ ಮಾತಾಡಿಸ್ತೀವಿ ಎಂದು ಕರೆದರು. ಆದರೆ ಅವರು ಸಿಎಂ ಅಲ್ಲಿಗೇ ಬರಬೇಕು ಅಂತ ಪಟ್ಟು ಹಿಡಿದರು. ಸಿಎಂ ಎಲ್ಲ ಕಡೆಗೂ ಹೋಗೊಕೆ ಆಗತ್ತಾ? ಸುವರ್ಣ ಸೌಧಕ್ಕೆ ಬಂದು ಮಾತಾಡೋಣ ಬನ್ನಿ ಅಂತ ನಾನು ಕರೆದರೂ ಬರಲಿಲ್ಲ. ಸುವರ್ಣ ಸೌಧಕ್ಕೆ ನುಗ್ಗೋಕೆ ಯತ್ನ ಮಾಡಿದರು. ಕಲ್ಲು ತೂರಾಟ ಮಾಡಿದ್ರು, ಹೀಗಾಗಿ ಪೊಲೀಸರಿಗೆ ಗಾಯಗಳಾಗಿವೆ. ಆಗ ಏನು ಮಾಡಬೇಕು ನೀವೇ ಹೇಳಿ. ನಮ್ಮ ಬಳಿ ಪ್ರೂಫ್ ಇವೆ, ಫೋಟೋ ಬೇಕಾದ್ರೂ ತೋರಿಸ್ತೀನಿ ಎಂದರು.
ಸಿಎಂ ಲಿಂಗಾಯತ ವಿರೋಧಿ ಎಂಬ ಸ್ವಾಮೀಜಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ನಾನು ಸ್ವಾಮೀಜಿ ಬಗ್ಗೆ ಮಾತನಾಡಲ್ಲ. ಸ್ವಾಮೀಜಿ ಮಾತನಾಡಿರೋದರ ಬಗ್ಗೆ ಜನ ತೀರ್ಮಾನ ಮಾಡ್ತಾರೆ ಎಂದು ಹೇಳಿದರು.