ನಮ್ಮ ʼಗ್ಯಾರಂಟಿʼ ಯೋಜನೆಗಳು ದೇಶಕ್ಕೆ ದೊಡ್ಡ ಮಾದರಿ : ಡಿ.ಕೆ.ಶಿವಕುಮಾರ್
ವಿಜಯಪುರ : 2028ರಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತರಬೇಕು. ಆ ಮೂಲಕ ನಿಮ್ಮ ಸೇವೆಗೆ ಪಕ್ಷಕ್ಕೆ ಮತ್ತೊಮ್ಮೆ ಅವಕಾಶ ಮಾಡಿಕೊಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಮನವಿ ಮಾಡಿದ್ದಾರೆ.
ಸೋಮವಾರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಮುಂದಿನ 5 ವರ್ಷಗಳಲ್ಲಿ 1ಲಕ್ಷ ಕೋಟಿ ರೂ.ಮೊತ್ತದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದು ಅಭಿವೃದ್ಧಿ ಕಾರ್ಯವಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದರು.
ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ದೊಡ್ಡ ಮಾದರಿ. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ನಮ್ಮ ರಾಜ್ಯದ ಮಾದರಿ ಅನುಸರಿಸಲಾಗುತ್ತಿದೆ. ಜನರ ಆದಾಯ ಪಾತಾಳಕ್ಕೆ ಕುಸಿದು, ಬೆಲೆ ಏರಿಕೆಯ ಸಂದರ್ಭದಲ್ಲಿ ಬಡವರನ್ನು ರಕ್ಷಿಸಲು ನಾವು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ನಮ್ಮ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ತಿಂಗಳಿಗೆ 5ಸಾವಿರ ರೂ.ಉಳಿತಾಯವಾಗಲಿದೆ. ಇಂತಹ ಜನಪರ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಸರಕಾರ ಹೊರತಾಗಿ ಬೇರೆ ಯಾರೂ ನೀಡಲು ಸಾಧ್ಯವಿಲ್ಲ ಎಂದರು.
ನಮ್ಮ ಪಕ್ಷ 70ವರ್ಷ ದೇಶವನ್ನು ಆಳಿದೆ. ನಮ್ಮ ಪಕ್ಷ ನೀಡಿರುವ ಯೋಜನೆಗಳನ್ನು ಯಾರೂ ಬದಲಿಸಲು ಸಾಧ್ಯವಾಗಿಲ್ಲ. ಉಳುವವನಿಗೆ ಭೂಮಿ, ಪಂಚವಾರ್ಷಿಕ ಯೋಜನೆ, ಬಡವರಿಗೆ ನಿವೇಶನ, ಮನೆ, ಪಿಂಚಣಿ ಸೌಲಭ್ಯ, ಉದ್ಯೋಗ ಖಾತರಿ ಸೇರಿದಂತೆ ನಮ್ಮ ಯೋಜನೆಯನ್ನು ಯಾರಿಂದಲೂ ನಿಲ್ಲಿಸಲು ಆಗಲಿಲ್ಲ. ಅದೇ ರೀತಿ ಗ್ಯಾರಂಟಿ ಯೋಜನೆಗಳನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಸರಕಾರ ಉತ್ತಮ ಆಡಳಿತ ನೀಡುತ್ತಿದ್ದು, ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಬೇಕು ಎಂದು ಅವರು ಮನವಿ ಮಾಡಿದರು.
ವಿಜಯಪುರ ಜಿಲ್ಲೆಯಲ್ಲಿ ಒಂದು ಕ್ಷೇತ್ರ ಹೊರತಾಗಿ ಉಳಿದ ಎಲ್ಲ ಕಡೆ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿ, ಈ ಸರಕಾರ ಅಧಿಕಾರಕ್ಕೆ ಬರಲು ಕಾರಣರಾಗಿದ್ದೀರಿ. ಇಲ್ಲಿ ಬೆಳೆಯುವ ನಿಂಬೆಹಣ್ಣುನ್ನು ನಾವು ಪೂಜೆ, ದೃಷ್ಟಿ ತೆಗೆಯಲು, ಊಟಕ್ಕೆ ಬಳಸುತ್ತೇವೆ. ಈ ನಿಂಬೆಹಣ್ಣಿನ ನಾಡು ಈ ಇಂಡಿ ತಾಲೂಕು ಎಂದರು.
ಬೀದರ್ ಜಿಲ್ಲೆಯಲ್ಲಿ 2025 ಕೋಟಿ ರೂ.ವೆಚ್ಚದ ಯೋಜನೆಗೆ ಶಂಕುಸ್ಥಾಪನೆ, ಪಿರಿಯಾಪಟ್ಟಣದಲ್ಲಿ 500 ಕೋಟಿ ರೂ.ಯೋಜನೆ ಆರಂಭಿಸಲಾಗಿದೆ. ಡಾ.ಮಹದೇವಪ್ಪ ಇದೇ ತಿಂಗಳು 20-21ರಂದು 3,647 ಕೋಟಿ ರೂ.ಮೊತ್ತದ ಕಾಮಗಾರಿ ಆರಂಭಿಸಲಿದ್ದಾರೆ. ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆಯಲ್ಲಿ ಕ್ರಾಂತಿಕಾರಕ ಯೋಜನೆ ತರುತ್ತಿದ್ದಾರೆ. ಎಚ್.ಕೆ.ಪಾಟೀಲ್ ಪ್ರವಾಸೋದ್ಯಮ ಸಚಿವರಾಗಿ ಸವದತ್ತಿ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ಅನೇಕ ಪ್ರವಾಸಿ ತಾಣ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದರು.
ವಿಜಯಪುರ ಹಾಗೂ ಈ ಭಾಗದ 93 ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಒದಗಿಸಲು 3200 ಕೋಟಿ ರೂ. ಮೊತ್ತದ ಯೋಜನೆಗಳನ್ನು ರೂಪಿಸಲಾಗಿದೆ. ಸರಕಾರದಲ್ಲಿ ಹಣವಿಲ್ಲ, ಎಲ್ಲ ಹಣ ಗ್ಯಾರಂಟಿಗಳಿಗೆ ಹೋಗಿವೆ ಎಂದು ವಿಪಕ್ಷಗಳು ಟೀಕೆ ಮಾಡುತ್ತಿವೆ. ಆದರೆ, ಇಂದು ಸಾರಿಗೆ ಇಲಾಖೆ ಮೂಲಕ ಜಾರಿಗೆ ತಂದ ‘ಶಕ್ತಿ ಯೋಜನೆ’ಯಲ್ಲಿ ಇಂದಿನ ವರೆಗೆ ಒಟ್ಟು 500ಕೋಟಿ ಟ್ರಿಪ್‍ಗಳನ್ನು ಪೂರೈಸಿದೆ ಎಂದು ಅವರು ತಿಳಿಸಿದರು.