×
Ad

ಕಾರ್ಮಿಕ ವರ್ಗಕ್ಕೆ ಬಿಜೆಪಿ ಕೊಡುಗೆ ಏನು? : ಸಚಿವ ಸಂತೋಷ್ ಲಾಡ್

Update: 2025-07-23 18:59 IST

ವಿಜಯಪುರ : ರಾಜ್ಯದ ಆಡಳಿತರೂಢ ಕಾಂಗ್ರೆಸ್ ಸರಕಾರ ಅನುಷ್ಟಾನಕ್ಕೆ ತಂದಿರುವ ಐದು ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿರುವ ಬಿಜೆಪಿ, ಕಾರ್ಮಿಕ ವರ್ಗಕ್ಕೆ ಯಾವುದೇ ಯೋಜನೆ ರೂಪಿಸಿಲ್ಲ. ಆದರೆ, ಕಾಂಗ್ರೆಸ್ ಪಕ್ಷದ ನೇತೃತ್ವದ ಸರಕಾರ ಸದಾ ಕಾರ್ಮಿಕರ ಪರವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಹೇಳಿದ್ದಾರೆ.

ಬುಧವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಕಾರ್ಮಿಕ ಇಲಾಖೆ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರಾತಾ ಮಂಡಳಿ, ಸಾರಿಗೆ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿ ಅವರು ಮಾತನಾಡಿದರು.

ಇಲಾಖೆಯ ಹೊಸ ಯೋಜನೆಗಳನ್ನು ಎಲ್ಲ ರೀತಿಯ ಕಾರ್ಮಿಕರಿಗೆ ಮುಟ್ಟಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಇಲಾಖೆಯಡಿ ಸಾಂಸ್ಕೃತಿಕ ಕಾರ್ಮಿಕರ ಕಾಯ್ದೆ ಜಾರಿಗೆ ಉದ್ದೇಶಿಸಿದ್ದು, ಅದಕ್ಕಾಗಿ ನಿಯಮಗಳನ್ನು ಸಿದ್ಧಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸಂತೋಷ್ ಲಾಡ್ ನುಡಿದರು.

ಆಶಾದೀಪ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿರುದ್ಯೋಗಿ ಯುವಕರಿಗೆ ಸಂಸ್ಥೆಗಳು ಕೆಲಸ ನೀಡಿದಲ್ಲಿ ಅಥವಾ ಅಪ್ರೆಂಟೈಸರ್ ನೀಡದಲ್ಲಿ ತಿಂಗಳಿಗೆ ಒಬ್ಬ ಅಭ್ಯರ್ಥಿಗೆ ಸುಮಾರು 7ಸಾವಿರ ರೂ.ವರೆಗೆ ಮ್ಯಾನೇಜ್‍ಮೆಂಟಿಗೆ ರಿಅಂಬ್ರೈಸ್ ಮಾಡಲಾಗುವುದು ಎಂದು ಸಂತೋಷ್ ಲಾಡ್ ಮಾಹಿತಿ ನೀಡಿದರು.

ನಮ್ಮ ಸರಕಾರ ಅಧಿಕಾರಕ್ಕೆ ಬಂದಮೇಲೆ ಕಾರ್ಮಿಕರಿಗೆ ಎಲ್ಲ ರೀತಿಯಲ್ಲಿ ಅನುಕೂಲ ಕಲ್ಪಿಸಲೆಂದು ಹೊಸ ಹೊಸ ಯೋಜನೆಗಳನ್ನು ತರಲಾಗಿದೆ. ರಾಜ್ಯದಲ್ಲಿ ಪ್ರಸಕ್ತ 91 ವರ್ಗದ ಕಾರ್ಮಿಕರಿಗೆ ಸಹಾಯ ಮಾಡಲೆಂದು ಕಾರ್ಮಿಕರನ್ನು ಗುರುತಿಸಿ ಕಾರ್ಮಿಕರ ದತ್ತಾಂಶಗಳನ್ನು ಸಂಗ್ರಹಿಸುವ ಕೆಲಸ ಮಾಡಲಾಗುತ್ತಿದೆ. ಪ್ರಾರಂಭಿಕವಾಗಿ ಹೊಸ ಹೊಸ ಯೋಜನೆಗಳನ್ನು ಕಾರ್ಮಿಕರಿಗೆ ತರಲಾಗಿದ್ದು, ಮುಂದಿನ ದಿನಗಳಲ್ಲಿ ಇದು ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದರು.

ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಅಪಘಾತ ವಿಮೆ, ಆಸ್ಪತ್ರೆ ವೆಚ್ಚಕ್ಕೆ ಸಹಾಯ, ಅಪಘಾತ ಹಾಗೂ ಸಹಜ ಮರಣಕ್ಕೆ ಸಹಾಯ, ಮೃತ ಕಾರ್ಮಿಕ ಕುಟುಂಬಕ್ಕೆ ಸಹಾಯ ಮಾಡಲಾಗುತ್ತಿದೆ. ಸಾರಿಗೆ ಕಾಮಿಕರಿಗೆ ಯೋಜನೆ ಮತ್ತು ಮಂಡಳಿ ಜಾರಿಗೆ ತರಲಾಗಿದೆ. ಸುಮಾರು 25ಲಕ್ಷ ಮಂದಿ ಇದಕ್ಕೆ ಸಂಬಂಧಿಸಿದ ಕಾರ್ಮಿಕರಿದ್ದಾರೆ ಎಂದು ಗುರುತಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News