ಸರಕಾರಿ ವಾಹನಕ್ಕೆ ಪೆಟ್ರೋಲ್ ಹಾಕುವುದಕ್ಕೂ ರಾಜ್ಯ ಸರಕಾರದ ಬಳಿ ಹಣ ಇಲ್ಲ: ಸಂಸದ ರಮೇಶ ಜಿಗಜಿಣಗಿ
ವಿಜಯಪುರ: ಶಾಸಕರು ಸಂಚಾರ ಮಾಡಿ ರೈತರ ಸಮಸ್ಯೆ ಕೇಳಲು ಹೋಗಬೇಕಾದರೆ ಅವರ ಗಾಡಿಗೆ ಹಾಕಲು ಪೆಟ್ರೋಲ್ ಇಲ್ಲ. ಹೋಗಲು ಸರಿಯಾದ ರಸ್ತೆ ಇಲ್ಲ. ಇಂದು ಸರ್ಕಾರದ ವಾಹನಕ್ಕೆ ಪೆಟ್ರೋಲ್ ಹಾಕಲು ಹಣ ಇಲ್ಲದ ಕೆಟ್ಟ ಪರಿಸ್ಥಿತಿ ಬಂದಿದೆ. ರೈತರಿಗೆ ಪರಿಹಾರ ನೀಡಲೂ ಸರ್ಕಾರದ ಬಳಿ ಹಣ ಇಲ್ಲ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಜೀವನದ ಜೊತೆ ಆಟ ಆಡುತ್ತಿದೆ ಎಂದು ಸಂಸದ ರಮೇಶ ಜಿಗಜಿಣಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಇಂದು ರೈತರು ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಬಂದಿದೆ. ಬೆಳೆ ಅಷ್ಟೇ ಅಲ್ಲ ಮನೆ ನೀರು ಹೋಗಿ ಸಂಸಾರ ಹಾಳಾಗಿದೆ. ಆದರೂ ರಾಜ್ಯ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಹಲವಾರು ರೈತರು ನನ್ನ ಮನೆಗೆ ಬಂದು ಕಣ್ಣೀರು ಹಾಕುತ್ತಿದ್ದಾರೆ. ರೈತರ ಸಮಸ್ಯೆ ಬಗ್ಗೆ ಮಾತನಾಡಲು ಒತ್ತಾಯ ಮಾಡುತ್ತಿದ್ದಾರೆ. ನಾವು ಸಮಸ್ಯೆಗಳ ಬಗ್ಗೆ ಮಾತನಾಡಬೇಕೆಂದರೆ ಈವರೆಗೂ ಸರ್ಕಾರವು ಕೆ.ಡಿ.ಪಿ ಸಭೆ ಕರೆದಿಲ್ಲ. ಕೆ.ಡಿ.ಪಿ ಸಭೆಯಲ್ಲಿ ಈ ಬಗ್ಗೆ ಮಾತನಾಡಬಹುದು ಎಂದು ಆರೋಪಿಸಿದರು.
ಈ ಜಾತಿ ಸಮೀಕ್ಷೆ ಎಂಬುವುದು ಹೇಯ ಕೃತ್ಯ. ರಾಜ್ಯ ಸರ್ಕಾರ ನಿಜವಾಗಿ ಜನರ ಮೇಲೆ ಕಾಳಜಿ ಇದ್ದರೆ, ಜಾತಿ ಸಮೀಕ್ಷೆ ಕೈ ಬಿಟ್ಟು, ರೈತರ ಸಮಸ್ಯೆಗಳ, ಜನರ ಆರ್ಥಿಕ ವ್ಯವಸ್ಥೆ ಬಗ್ಗೆ ಸಮೀಕ್ಷೆ ಮಾಡಬೇಕಿತ್ತು. ರಾಜ್ಯ ಸರ್ಕಾರವು ಜಾತಿ ಸಮೀಕ್ಷೆ ಮಾಡಲು ಮುಂದಾಗಿ ನಗೆಪಾಟಲಿಗೀಡಾಗಿದೆ ಎಂದು ಕುಟುಕಿದರು.
ಇಂದು ರಾಜ್ಯದಲ್ಲಿ ಎಲ್ಲ ರಸ್ತೆಗಳೂ ಕೆಟ್ಟಿವೆ. ಇದರ ಬಗ್ಗೆ ಕೇಳಿದರೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಬೇಜವಾಬ್ದಾರಿಯ ಉತ್ತರ ಹೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಸರ್ಕಾರ ವೈದ್ಯಕೀಯ ಕಾಲೇಜು ಸ್ಥಾಪನೆ ಅವಶ್ಯಕತೆ ಇದೆ. ಪಿಪಿಪಿ, ಪಾಪಿಪಿ ವೈದ್ಯಕೀಯ ಕಾಲೇಜು ಸ್ಥಾಪನೆ ಯಾವುದೂ ಬೇಡ, ಸರ್ಕಾರದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒತ್ತಾಯ ಮಾಡುತ್ತೇನೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಅವರಿಗೂ ಭೇಟಿಯಾಗಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒತ್ತಾಯ ಮಾಡಿದ್ದೇನೆ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ. ಅರುಣ ಶಾಹಪುರ, ಮುಖಂಡ ಭೀಮಾಶಂಕರ ದನ್ನೂರ, ವಿಜಯ ಜೋಶಿ ಮುಂತಾದವರು ಇದ್ದರು.