×
Ad

ವಿಜಯಪುರ | ಶಾಸಕ​ ಯತ್ನಾಳ್​ ಕಾರಿಗೆ ಯುವಕರಿಂದ ಮುತ್ತಿಗೆ ಯತ್ನ, ಕಪ್ಪು ಬಟ್ಟೆ ಪ್ರದರ್ಶನ

ಮುಸ್ಲಿಂ ಸಮುದಾಯದ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ

Update: 2025-08-17 18:49 IST

ವಿಜಯಪುರ : ಇಲ್ಲಿನ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಮುಸ್ಲಿಂ ಯುವಕರು ಕಪ್ಪು ಬಟ್ಟೆ ಪ್ರದರ್ಶಿಸಿರುವ ಘಟನೆ ತಾಲೂಕಿನ ಆಲಮೇಲ ಪಟ್ಟಣದಲ್ಲಿ ನಡೆದಿದೆ.

ಇತ್ತೀಚೆಗೆ ಕೊಪ್ಪಳದಲ್ಲಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ʼಮುಸ್ಲಿಂ ಯುವತಿಯರನ್ನು ಮದುವೆಯಾಗುವ ಹಿಂದೂ ಯುವಕರಿಗೆ 5 ಲಕ್ಷ ರೂ. ನಗದು ಪ್ರೋತ್ಸಾಹ ನೀಡುತ್ತೇನೆʼ ಎಂದು ನೀಡಿದ್ದ ಹೇಳಿಕೆ ವಿರೋಧಿಸಿ ಆಲಮೇಲ ಪಟ್ಟಣದಲ್ಲಿ ಮುಸ್ಲಿಂ ಯುವಕರು ಕಪ್ಪು ಬಟ್ಟೆ ಪ್ರದರ್ಶಿಸಿದರು.

ಬ್ಯಾಂಕ್‌ವೊಂದರ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಯತ್ನಾಳ್‌ ಅವರು ಅಲಮೇಲ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಬರುತಿದ್ದಂತೆ ಕಾರು ಅಡ್ಡಗಟ್ಟಿದ ಎಂಟತ್ತು ಯುವಕರ ಗುಂಪು, ಕಪ್ಪು ಬಟ್ಟೆ ಪ್ರದರ್ಶಿಸಿ, ಯತ್ನಾಳ್‌ ವಿರುದ್ಧ ಘೋಷಣೆ ಕೂಗಿದರು.

ಸ್ಥಳದಲ್ಲಿದ್ದ ಪೊಲೀಸರು ಯುವಕರನ್ನು ವಶಕ್ಕೆ ಪಡೆದರು. ನಂತರ ಕಾರ್ಯಕ್ರಮ ನಡೆಯುತ್ತಿರುವ ಸ್ಥಳಕ್ಕೆ ಬಂದ ಕೆಲವು  ಮಹಿಳೆಯರು, ವಿವಾದಾತ್ಮಕ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ, ಯತ್ನಾಳ್‌ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಮಹಿಳೆಯರನ್ನು ಪೊಲೀಸರು ತಡೆದರು.

ಈ ವೇಳೆ ಪೊಲೀಸರೊಂದಿಗೆ ಮಹಿಳೆಯರು ವಾಗ್ವಾದ ನಡೆಸಿದರು. ಬಳಿಕ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದರು. ಘಟನೆಯ ಬಳಿಕ ಬಿಗಿ ಪೊಲೀಸ್ ಬಂದೂಬಸ್ತಿನಲ್ಲಿ ಶಾಸಕ ಬಸನಗೌಡ ಯತ್ನಾಳ್‌ ವಿಜಯಪುರಕ್ಕೆ ತೆರಳಿದರು.

ನಂತರ ಪಟ್ಟಣದ ಮುಸ್ಲಿಂ ಸಮುದಾಯದ ನೂರಾರು ಜನರು ಪೊಲೀಸ್ ಠಾಣೆ ಬಳ ಜಮಾಯಿಸಿ, ʼಮಹಿಳೆಯರನ್ನು ಠಾಣೆಗೆ ಯಾಕೆ ಕರೆ ತಂದಿದ್ದೀರಿ, ತಕ್ಷಣ ಅವರನ್ನು ಬಿಡುಗಡೆ ಮಾಡಿ' ಎಂದು ಒತ್ತಾಯಿಸಿದರು.

ಆಲಮೇಲ ಠಾಣೆ ಪಿಎಸ್‌ಐ ಅರವಿಂದ ಅಂಗಡಿ, ಸಿಪಿಐ ನಾನಗೌಡ ಪೊಲೀಸ್‌ ಪಾಟೀಲ ಅವರು ಮುಸ್ಲಿಂ ಮುಖಂಡರ ಜೊತೆ ಮಾತನಾಡಿ, ಬಳಿಕ ಮಹಿಳೆಯರನ್ನು ಬಿಟ್ಟು ಕಳುಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News